ಮೂಢನಂಬಿಕೆಗೆ ಜೀವಬಲಿ ಕೊನೆಗಾಣುವುದೆಂದು?

ಭೋಲೆ ಬಾಬಾ ಒಬ್ಬನ ಹಿಂದೆ ಹೋಗಿ ಮುಕ್ತಿ ಪಡೆಯುವ ಯತ್ನದಲ್ಲಿ ನೂರಿಪ್ಪತ್ತು ಮಂದಿ ಅಮಾಯಕರು ಬಲಿಯಾಗಿದ್ದಾರೆ. ಈ ಅವಘಡ ಕೆಲವು ದಿನ ಚರ್ಚೆಯಾಗುತ್ತದೆ. ಮತ್ತೆ ಮರೆತು ಹೋಗುತ್ತದೆ. ಇನ್ನೊಬ್ಬ ಬಾಬಾನೋ, ಗುರುವೋ ಇನ್ನೊಂದು ಹೆಸರಲ್ಲಿ, ಇನ್ನೊಂದು ವೇಷದಲ್ಲಿ, ಇನ್ನೊಂದು ಪ್ರದೇಶದಲ್ಲಿ ಬಂದು ತನ್ನ ವ್ಯಾಪಾರ ಶುರು ಮಾಡುತ್ತಾನೆ. ಆತನಿಗೆ ಇದಕ್ಕಿಂತಲೂ ಹೆಚ್ಚು ಭಕ್ತರೂ, ಅನುಯಾಯಿಗಳೂ, ಅಂಧಾಭಿಮಾನಿಗಳೂ ಸಿಗುತ್ತಾರೆ. ಆತ ಕೋಟಿ ಕೋಟಿ ದುಡ್ಡು ಬಾಚಿಕೊಳ್ಳುತ್ತಾನೆ. ಕೊನೆಗೆ ರಾಜಕೀಯವನ್ನೂ ಸರಕಾರವನ್ನೂ ನಿಯಂತ್ರಿಸುವಷ್ಟು ಪ್ರಭಾವಿಯೂ ಆಗುತ್ತಾನೆ. ಇದೆಲ್ಲ ಎಲ್ಲಿಯವರೆಗೆ ಹೀಗೇ ಮುಂದುವರಿಯುತ್ತದೆ? ಮೂಢನಂಬಿಕೆಗೆ ಕೊನೆಯೇ ಇಲ್ಲವೆ?

Update: 2024-07-09 06:36 GMT
Editor : Thouheed | Byline : ಆರ್.ಜೀವಿ

ಮೂಢನಂಬಿಕೆಗಳ ಹಿಂದೆ ಹೋಗಿ ನಮ್ಮ ದೇಶದಲ್ಲಿ ನಮ್ಮದೇ ರಾಜ್ಯದಲ್ಲಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ತಮ್ಮ, ತಮ್ಮವರ ಜೀವ, ಜೀವನೋಪಾಯ, ಕುಟುಂಬ ಎಲ್ಲವನ್ನೂ ಸರ್ವನಾಶ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಮೂಢನಂಬಿಕೆ ವಿರುದ್ಧ ಕಾನೂನು ತರಲು ಹೊರಟರೆ ನಂಬಿಕೆಯ ಹೆಸರಲ್ಲಿ ಅಂಥ ಸರಕಾರದ ವಿರುದ್ಧವೇ ಜನ ತಿರುಗಿಬೀಳುವಂತೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಏನಾಯಿತು ಎಂಬುದು ಗೊತ್ತೇ ಇದೆ. ಮೂಢನಂಬಿಕೆ ವಿರುದ್ಧದ ಹೋರಾಟಗಾರರನ್ನೇ ಧರ್ಮ ವಿರೋಧಿಗಳೆಂದು ಹಣೆಪಟ್ಟಿ ಹಚ್ಚಿ ಕೊಲೆಗೈಯುವುದು ಕೂಡ ನಮ್ಮ ದೇಶದಲ್ಲಿ ನಡೆಯುತ್ತದೆ. ಆದರೆ ಅದೇ ಮೂಢನಂಬಿಕೆ ಹೀಗೆ ನೋಡನೋಡುತ್ತಲೇ ನೂರಾರು ಅಮಾಯಕರನ್ನು ಬಲಿ ತೆಗೆದುಕೊಂಡುಬಿಡುವಾಗ ತೀವ್ರ ಸಂಕಟವಾಗುತ್ತದೆ.

ಹಾಥರಸ್‌ನಲ್ಲಿನ ಅವಘಡ ದಾರುಣವಾದದ್ದು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ನಡೆದುಹೋಗಿರುವ ದುರಂತಕ್ಕೆ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರೆಂದು ವರದಿಗಳು ಹೇಳಿವೆ.

ಭೋಲೆ ಬಾಬಾ ಎಂದೇ ಪರಿಚಿತನಾಗಿರುವ ನಾರಾಯಣ್ ಸಾಕಾರ್ ವಿಶ್ವ ಹರಿಗೆ ದೊಡ್ಡ ಸಂಖ್ಯೆಯ ಅನುಯಾಯಿಗಳಿದ್ದಾರೆ. ಈ ಹಿಂದೆ ಯುಪಿಯ ಗುಪ್ತಚರ ವಿಭಾಗದಲ್ಲಿ ಕಾನ್‌ಸ್ಟೇಬಲ್ ಆಗಿದ್ಧಾತನೇ ಈಗ ಅಮಾಯಕರ ಪಾಲಿನ ದೇವರಾಗಿಬಿಟ್ಟದ್ದು, ಆತನ ಪಾದಧೂಳಿಗಾಗಿ ಜನರು ಪ್ರಾಣ ಕಳೆದುಕೊಂಡದ್ದು ವಿಪರ್ಯಾಸ. ತನ್ನ ಪರವಾಗಿ ಕೆಲಸ ಮಾಡಲು ಈತ ಹಲವು ಏಜೆಂಟರನ್ನು ಹೊಂದಿದ್ದಾನೆ ಎನ್ನಲಾಗುತ್ತದೆ. ಈ ಏಜೆಂಟರು ಬಾಬಾ ಬೆರಳಲ್ಲಿ ದೈವಿಕ ಚಕ್ರ ಪ್ರತ್ಯಕ್ಷವಾಗುತ್ತದೆ ಎಂದೆಲ್ಲ ಸುಳ್ಳು ಪ್ರಚಾರ ಮಾಡುತ್ತ, ಮುಗ್ಧರನ್ನು ನಂಬಿಸುತ್ತಾರೆ ಎಂಬ ಮಾತುಗಳಿವೆ. ಈತ ಗ್ರಾಮವೊಂದರಲ್ಲಿ ಆಶ್ರಮ ನಿರ್ಮಿಸಿಕೊಂಡಿರುವ ಜಾಗ ಕೂಡ ಅತಿಕ್ರಮಣ ಮಾಡಿಕೊಂಡದ್ದು ಎಂಬ ಆರೋಪಗಳಿವೆ. ಕಾಯಿಲೆಗಳನ್ನು ಗುಣಪಡಿಸುವ ಮಾಂತ್ರಿಕ ಶಕ್ತಿ ಇದೆ ಎಂದು ಅಮಾಯಕರನ್ನು ಯಾಮಾರಿಸುತ್ತಲೇ ಬಂದವನು ಈತ. ಸತ್ತ ಹುಡುಗಿಯನ್ನು ಬದುಕಿಸುತ್ತೇನೆ ಎಂದು ಹೇಳಿ ಅವಾಂತರ ಸೃಷ್ಟಿಸಿದ್ದಕ್ಕಾಗಿ ಈ ಹಿಂದೆ ಬಂಧಿಸಲಾಗಿತ್ತು. ತನ್ನನ್ನು ನಂಬಿದವರನ್ನೆಲ್ಲ ವೈಯಕ್ತಿಕ ಲಾಭಕ್ಕೋಸ್ಕರ ಶೋಷಿಸುತ್ತಲೇ ಬಂದಿದ್ದಾನೆ ಈ ಬಾಬಾ. ಈತನ ಜೋಡಿ ಕಿ ಧೂಲ್ ಅಥವಾ ಆತ ನಡೆದುಹೋದಲ್ಲಿನ ಮಣ್ಣನ್ನು ಪಡೆಯಲು ಉಂಟಾದ ನೂಕುನುಗ್ಗಲಿಗೆ ಅಷ್ಟೊಂದು ಮಂದಿ ಬಲಿಯಾದರೆಂಬುದು ಮೌಢ್ಯದ ಪರಾಕಾಷ್ಠೆಯನ್ನು ಸೂಚಿಸುತ್ತದೆ.

ಆತನ ಅನುಯಾಯಿಗಳು ವಿವಿಧ ಹಿನ್ನೆಲೆಯಿಂದ ಬಂದವರು. ಅವರಲ್ಲಿ ಹೆಚ್ಚಿನವರು ದಮನಿತ ವರ್ಗದವರು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತಿತರ ಸಮುದಾಯಗಳಿಂದ ಬಂದವರಾಗಿದ್ದಾರೆ. ಆತನ ಪಾದದಡಿಯ ಧೂಳಿನಿಂದ ತಮ್ಮ ಬದುಕೇ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿ ಮುಗಿಬಿದ್ದವರು ಹೆಣವಾಗಿ ಹೋಗಿರುವುದು ದೊಡ್ಡ ದುರಂತ. ಇನ್ನೂ ಸಂಕಟದ ಸಂಗತಿಯೆಂದರೆ, ಕಾಲ್ತುಳಿತದಿಂದ ಸತ್ತವರು ತಮ್ಮ ಪ್ರಾಣವನ್ನು ದೇವರಿಗಾಗಿ ಅರ್ಪಿಸಿದರು ಎಂದು ಕೆಲವು ಭಕ್ತರು ಭಾವಿಸುತ್ತಾರೆ ಎಂಬುದು.

ನೂರಾರು ಜನರನ್ನು ಬಲಿ ತೆಗೆದುಕೊಂಡ ಹಾಥರಸ್ ದುರ್ಘಟನೆಯೇ ಮೂಢನಂಬಿಕೆ ಹೆಸರಲ್ಲಿ ದೇಶದಲ್ಲಿನ ಅವಘಡದ ಮೊದಲ ಉದಾಹರಣೆಯೇನೂ ಅಲ್ಲ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್‌ನಲ್ಲಿ ಪ್ರಕಟವಾದ 2013ರ ಅಧ್ಯಯನದ ಪ್ರಕಾರ, ಧಾರ್ಮಿಕ ಸಭೆಗಳು ಮತ್ತು ತೀರ್ಥಯಾತ್ರೆಗಳೇ ಭಾರತದಲ್ಲಿನ ಶೇ.79ರಷ್ಟು ಕಾಲ್ತುಳಿತ ಘಟನೆಗಳಿಗೆ ಕಾರಣವಾಗಿವೆ. ಅನೇಕ ಪ್ರಮುಖ ದೇವಾಲಯಗಳು ಬೆಟ್ಟ, ನದಿ ದಂಡೆ ಅಥವಾ ಇತರ ಇಳಿಜಾರು ಭೂಪ್ರದೇಶಗಳಲ್ಲಿ ಇರುವುದು ಇಂಥ ಘಟನೆಗಳ ಪರಿಣಾಮದ ತೀವ್ರತೆಯನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಘಟನೆಗಳಲ್ಲಿ ಕಾಣಿಸುವ ಸಾಮಾನ್ಯ ಅಂಶವೆಂದರೆ,

1.ಕಳಪೆ ಸೌಕರ್ಯ

2.ಹೊರಬರುವ ದಾರಿ ಕಿರಿದಾಗಿರುವುದು

3.ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೂಢನಂಬಿಕೆಯನ್ನು ಪ್ರಚೋದಿಸುವ ಹಿನ್ನೆಲೆಗಳು.

4.ಭಾರೀ ಪ್ರಮಾಣದಲ್ಲಿ ಜನ ಸೇರಿದಾಗ ನಿಭಾಯಿಸಬೇಕಾದ ರೀತಿಯ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 2014ರಲ್ಲಿ ಪ್ರಕಟಿಸಿದ ಶಿಫಾರಸುಗಳನ್ನು ಅನುಸರಿಸುವಲ್ಲಿ ಅಧಿಕಾರಿಗಳು ತೋರಿಸುವ ಅಜ್ಞಾನ ಮತ್ತು ನಿರ್ಲಕ್ಷ್ಯ ಕೂಡ ಇಂಥ ಅವಘಡಗಳ ವೇಳೆ ಸಾವುನೋವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತದೆ.

5.ಒಂದು ದುರಂತದಿಂದ ಪಾಠ ಕಲಿತು ಮುಂದೆ ಆಗದಂತೆ ತಡೆಯುವ ಕಾಳಜಿಯೂ ಇಲ್ಲವಾಗಿರುವುದು ಮತ್ತೊಂದು ಕಳವಳಕಾರಿ ಸಂಗತಿ.

ಹಾಥರಸ್ ದುರ್ಘಟನೆ ಈಗ ದೇಶದಲ್ಲಿ ರಾಷ್ಟ್ರೀಯ ಮೂಢನಂಬಿಕೆ ವಿರೋಧಿ ಕಾನೂನಿನ ಅಗತ್ಯದ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿರುವುದಂತೂ ನಿಜ. ಮೂಢನಂಬಿಕೆ ಆಚರಣೆ ನಿಷೇಧಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಇರುವಂಥದ್ದೇ ಕಾನೂನನ್ನು ರಾಷ್ಟ್ರೀಯ ಮಟ್ಟದಲ್ಲೂ ತರಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿನ ಇಂಥ ಕಾನೂನುಗಳು ನರಬಲಿ, ಮಾಟಮಂತ್ರ ಮತ್ತಿತರ ಅಮಾನವೀಯ ಆಚರಣೆಗಳ ವಿರುದ್ಧ ಇವೆ. ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ವಿರೋಧಿ ಹೋರಾಟಗಾರ ಡಾ. ನರೇಂದ್ರ ದಾಭೋಲ್ಕರ್ ಹತ್ಯೆಯ ನಂತರ ಕಾನೂನು ತರಲಾಯಿತು. ನರಬಲಿ ತಡೆ ಮತ್ತು ನಿರ್ಮೂಲನೆ ಅಲ್ಲದೆ, ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳು, ವಾಮಾಚಾರದ ವಿರುದ್ಧ 2013ರಲ್ಲಿ ಕಾಯ್ದೆ ಅಂಗೀಕರಿಸಲಾಯಿತು. ಈ ಕಾಯ್ದೆಯಡಿಯಲ್ಲಿ 6 ತಿಂಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5,000 ರೂ.ನಿಂದ 50,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.

ಕರ್ನಾಟಕದಲ್ಲಿ ಇಂಥ ಕಾನೂನು ಜಾರಿಗೆ ಬಂದಿರುವುದು 2020ರಲ್ಲಿ. ವಾಮಾಚಾರ ಮತ್ತು ಕೆಂಡ ಹಾಯುವುದು, ಸಿಡಿ ಆಚರಣೆಯಂಥ ಮೂಢನಂಬಿಕೆ ವಿರುದ್ಧದ ಈ ಕಾನೂನಿನಲ್ಲೂ 7 ವರ್ಷಗಳವರೆಗೆ ಜೈಲು ಮತ್ತು 50 ಸಾವಿರ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಇನ್ನು ವಾಮಾಚಾರ ಆರೋಪದ ಮೇಲೆ ಮಹಿಳೆಯರನ್ನು ಹಿಂಸಿಸಿ ಕೊಲ್ಲುವ ಘಟನೆಗಳನ್ನು ತಡೆಯಲು ಬಿಹಾರ, ಜಾರ್ಖಂಡ್, ಛತ್ತೀಸ್‌ಗಡ, ಒಡಿಶಾ, ರಾಜಸ್ಥಾನ, ಅಸ್ಸಾಂ ರಾಜ್ಯಗಳು ತಂದಿರುವ ಕಾನೂನು ಮತ್ತೊಂದು ಬಗೆಯದು.

ಆದರೆ ಹಾಥರಸ್ ದುರ್ಘಟನೆ ಬಳಿಕ ಚರ್ಚೆಯಾಗುತ್ತಿರುವುದು ರಾಷ್ಟ್ರಮಟ್ಟದಲ್ಲಿ ಕೂಡ ಇಂಥದೇ ಕಾನೂನು ಬೇಕಿದೆ ಎಂಬುದರ ಬಗ್ಗೆ.

ಮೂಢನಂಬಿಕೆಗೆ ಬಲಿಯಾಗುವವರು ಒಂದೆಡೆಯಾದರೆ, ಮಾಟಗಾರರ ಮಾತಿಗೆ ಮರುಳಾಗಿ ತಮ್ಮ ಮಕ್ಕಳನ್ನೇ ಬಲಿ ಕೊಡುವವರೂ ಇದ್ದಾರೆ.

1. ಮೊನ್ನೆ ಮೇ ತಿಂಗಳಲ್ಲಿ ರಾಜಸ್ಥಾನದ ದುಂಗಾರ್ಪುರ ಜಿಲ್ಲೆಯಲ್ಲಿ ಇಂಥದೇ ಘಟನೆ ನಡೆದಿದೆ.

ತಾಯಿಯ ಪಕ್ಕ ಮಲಗಿ ನಿದ್ರಿಸುತ್ತಿದ್ದ ಮೂರು ವರ್ಷದ ಕಂದನನ್ನು ಮಗುವಿನ ತಂದೆಯೇ ಕತ್ತು ಸೀಳಿ ಕೊಂದಿದ್ದಾನೆ. ಮೂಢನಂಬಿಕೆ ಹೆಸರಿನಲ್ಲಿ ಯಾರೋ ಒಡ್ಡಿದ ಆಮಿಷ ಅತ ತನ್ನ ಮಗುವನ್ನೇ ಬಲಿಯಾಗಿಸಲು ಹಚ್ಚಿತು ಎಂಬುದು ಕಳವಳ ಮೂಡಿಸುತ್ತದೆ.

2. ಇದೇ ಜೂನ್ 17ರಂದು ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ 38 ವರ್ಷದ ತನ್ನ ಮೊಮ್ಮಗನನ್ನೇ ಕೊಂದಿದ್ದಾನೆ. ಆತ ಹುಟ್ಟಿದ ಘಳಿಗೆ ಅಶುಭವೆಂಬುದೇ ಕೊಲೆಗೆ ಕಾರಣ. ಜ್ಯೋತಿಷಿಯೊಬ್ಬನ ಸಲಹೆ ಮೇರೆಗೆ ಕೊಲೆ ಮಾಡಿರುವುದಾಗಿ ಆತ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಗಿ ವರದಿಯಾಗಿದೆ.

3. ಮೂಢನಂಬಿಕೆಗೆ 12 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಹೌರಾದ ಉದಯನಾರಾಯಣಪುರದಲ್ಲಿ ಎಪ್ರಿಲ್‌ನಲ್ಲಿ ನಡೆದಿದೆ. ಜಠರದ ಸಮಸ್ಯೆಯಿಂದ ಬಳಲುತ್ತಿದ್ದ ಆತನನ್ನು ಕುಟುಂಬದವರ ಬಲವಂತದ ಕಾರಣದಿಂದ ಆಸ್ಪತ್ರೆಯವರು ಡಿಸ್ಚಾರ್ಜ್ ಮಾಡಬೇಕಾಗುತ್ತದೆ. ಮಾಂತ್ರಿಕರನ್ನೇ ನೆಚ್ಚಿದ್ದ ಕುಟುಂಬ, ಬಾಲಕನಿಗೆ ಸರಿಯಾದ ಚಿಕಿತ್ಸೆ ಕೊಡಿಸದೆ ಮೌಢ್ಯದ ಘೋರ ಪರಿಣಾಮವನ್ನು ಕಂಡಿದೆ.

4. ಇಂಥದೇ ಮೂಢನಂಬಿಕೆಗೆ ಹಸುಗೂಸು ಬಲಿಯಾದ ಘಟನೆ ಕರ್ನಾಟಕದ ತುಮಕೂರಿನಲ್ಲಿ ಕಳೆದ ವರ್ಷ ಜುಲೈನಲ್ಲಿ ನಡೆದಿತ್ತು. ಕಾಡುಗೊಲ್ಲ ಸಮುದಾಯದ ದಂಪತಿ ತಮ್ಮ ಅವಳಿ ಮಕ್ಕಳಲ್ಲಿ ಒಂದು ಮಗು ಹೆರಿಗೆ ಸಮಯದಲ್ಲಿ ಅಸುನೀಗಿದ ಬಳಿಕ, ಎನ್‌ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದ ಮತ್ತೊಂದು ಮಗುವನ್ನು ವೈದ್ಯರ ಸಲಹೆಯನ್ನೂ ನಿರಾಕರಿಸಿ ಗ್ರಾಮಕ್ಕೆ ಕರೆದೊಯ್ದಿದ್ದರು. ಬಾಣಂತಿ ಮತ್ತು ಮಗುವನ್ನು ಊರ ಹೊರಗಿನ ಗುಡಿಸಲಿನಲ್ಲಿ ಇಡುವುದು ಕಾಡುಗೊಲ್ಲರ ಸಂಪ್ರದಾಯ. ಇಲ್ಲದಿದ್ದರೆ ತಮ್ಮ ಕುಲದೇವರು ಮುನಿಸಿಕೊಳ್ಳುತ್ತಾರೆ ಎಂಬ ನಂಬಿಕೆ.

ಆ ತಾಯಿ ಮಗು ಚಳಿಮಳೆಯಿಂದ ರಕ್ಷಣೆಯಿರದ ಗುಡಿಸಲಿನಲ್ಲಿದ್ದರು. ಚಳಿ, ಮಳೆಯ ತೇವದ ವಾತಾವರಣಕ್ಕೆ ಒಡ್ಡಿಕೊಂಡ ಪರಿಣಾಮವಾಗಿ ಮಗು ಉಸಿರಾಟದ ತೊಂದರೆಗೆ ತುತ್ತಾಗಿ ಚಿಕಿತ್ಸೆಗೂ ಸ್ಪಂದಿಸದೆ ಪ್ರಾಣ ಕಳೆದುಕೊಂಡಿತ್ತು.

5. ಆಂಧ್ರದ ಚಿತ್ತೂರಿನಲ್ಲಿ 2021ರಲ್ಲಿ ನಡೆದಿದ್ದ ಘಟನೆಯಂತೂ ಮೈನಡುಗಿಸುವಂಥದ್ದು. ಸತ್ತ ಮೇಲೆ ಮತ್ತೆ ಹುಟ್ಟಿಬರುತ್ತಾರೆ ಎಂಬ ನಂಬಿಕೆಯಿಂದ ಪೋಷಕರೇ 20ರ ಆಸುಪಾಸಿನಲ್ಲಿದ್ದ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿದ್ದರು. ಅವರ ದೇಹದಲ್ಲಿ ದುಷ್ಟಶಕ್ತಿ ಇದೆಯೆಂದೂ, ಕೊಂದ ಬಳಿಕ ಶುದ್ಧವಾಗಿ ಮತ್ತೆ ಜೀವಂತವಾಗಿ ಬರುತ್ತೀರಿ ಎಂದೂ ನಂಬಿಸಿ ಮಕ್ಕಳಿಬ್ಬರನ್ನೂ ಕೊಲ್ಲಲಾಗಿತ್ತು. ಪ್ರಕರಣದಲ್ಲಿ ಪೋಷಕರನ್ನು ಬಂಧಿಸಲಾಗಿತ್ತು.

ಮೂಢನಂಬಿಕೆಗಳ ವಿರುದ್ಧ ಹೋರಾಟದಲ್ಲಿದ್ದವರನ್ನೇ ಕೊಲ್ಲಲಾಗುತ್ತದೆ ಈ ದೇಶದಲ್ಲಿ ಎಂಬುದು ನೋವಿನ ಸಂಗತಿ. ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು 2013ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಮಹಾರಾಷ್ಟ್ರ ಸರಕಾರ ಮೂಢನಂಬಿಕೆ ವಿರೋಧಿ ಮಸೂದೆ ಅಂಗೀಕರಿಸುವುದಕ್ಕೆ ಕಾರಣವಾದ ದೀರ್ಘಾವಧಿ ಆಂದೋಲನದ ಮುಂಚೂಣಿಯಲ್ಲಿದ್ದರು ದಾಭೋಲ್ಕರ್. ಅವರ ಅಭಿಯಾನ ಹಿಂದುತ್ವ ಗುಂಪುಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮೂಢನಂಬಿಕೆ ವಿರುದ್ಧದ ಕಾನೂನು ಬರುವುದರ ಹಿಂದೆ ದಾಭೋಲ್ಕರ್ ಬಲಿಯೇ ನಡೆದುಹೋಗಿತ್ತೆಂಬುದು ದುಃಖದ ಸಂಗತಿ.

ಹಾಥರಸ್‌ನಲ್ಲಿ ಆದಂಥ ದುರ್ಘಟನೆಗಳು ಹಿಂದೆಯೂ ನಡೆದಿದ್ದವು. ಮುಂದೆಯೂ ಮರುಕಳಿಸಿದರೆ ಆಶ್ಚರ್ಯಪಡಬೇಕಿಲ್ಲ. ಆದರೆ ಜೀವವನ್ನೇ ಬಲಿಪಡೆಯುವಂಥ ಅಂಧಶ್ರದ್ಧೆಯಿಂದ ನಾವು ಹೊರಬರುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರವೇ ಇಲ್ಲ. ಯಾಕೆಂದರೆ, ಯಾರೂ ಇಂಥದೊಂದು ಪ್ರಶ್ನೆಯನ್ನು ಕೇಳುವ ಮೂಲಕ ಇಂಥ ಅವಘಡಗಳಿಂದ ಪಾಠ ಕಲಿಯುವ ಮನಃಸ್ಥಿತಿಯಲ್ಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News