ಕನ್ನಡ ಚಿತ್ರರಂಗದ ಸಂಕಷ್ಟಕ್ಕೆ ಕಾರಣರು ಯಾರು?

ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ ಎಂಬ ಕಾರಣಕ್ಕಾಗಿ ಮತ್ತು ಕನ್ನಡ ಚಿತ್ರರಂಗದ ಉಳಿವಿಗಾಗಿ ಹೋಮ ಹವನ ನಡೆಸಲಾಗಿದೆ. ಕನ್ನಡ ಚಿತ್ರರಂಗದ ನಿಜವಾದ ಸಮಸ್ಯೆಗಳು ಹೋಮ ಹವನದಿಂದ ಬಗೆಹರಿಯುವಂಥವಲ್ಲ ಎಂಬ ಸತ್ಯವನ್ನು ಮರೆತುಬಿಡಲಾಗಿದೆ. ಚಿತ್ರರಂಗವನ್ನು ಈಗಿನ ಸಮಸ್ಯೆಗಳಿಂದ ಪಾರು ಮಾಡುವ ದಾರಿ ಹುಡುಕಬೇಕಿದೆಯೇ ಹೊರತು ಇನ್ನಾವುದೋ ಗೊಂದಲದಲ್ಲಿ ಮತ್ತೆ ಸಿಕ್ಕಿಹಾಕಿಕೊಳ್ಳುವುದಲ್ಲ. ಹಾಗಾದರೆ, ಕನ್ನಡ ಚಿತ್ರರಂಗದ ಎದುರಿನ ನಿಜವಾದ ಸಮಸ್ಯೆ, ಸವಾಲುಗಳೇನು? ಅವುಗಳನ್ನು ನಿವಾರಿಸಿಕೊಳ್ಳುವ ದಾರಿ ಯಾವುದು? ಕನ್ನಡಕ್ಕಿರುವ ಶಕ್ತಿಯನ್ನು ಗೆಲುವಿನ ಮಂತ್ರವಾಗಿ ಬದಲಿಸಿಕೊಳ್ಳುವ ಬಗೆ ಹೇಗೆ?

Update: 2024-08-20 07:07 GMT

ಇದು ಕನ್ನಡ ಚಿತ್ರರಂಗ ದೇವರ ಮೊರೆಹೋದ ಕಥೆ. ಈಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕುವುದು ಹೆಚ್ಚುತ್ತಿದೆ ಎಂಬ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಉಳಿವಿಗಾಗಿ ಹೋಮ ಹವನ ನಡೆಸಲಾಗಿದೆ. ಇಂಥದೊಂದು ಹೆಜ್ಜೆ ಕನ್ನಡ ಚಿತ್ರರಂಗಕ್ಕೆ ಬೇಕಿತ್ತೆ? ಸಮಸ್ಯೆಗಳಿಗೆ ಹೋಮ ಹವನಗಳು ಪರಿಹಾರವೇ? ಎಂಬ ನೂರೆಂಟು ಪ್ರಶ್ನೆಗಳು ಎದ್ದಿವೆ.

ಆಗಸ್ಟ್ 14ರಂದು ಕನ್ನಡ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ದೇವರ ಮೊರೆ ಹೋಗಿತ್ತು. ವಿಶೇಷ ಹೋಮ ಹವನ ನಡೆಸಲಾಯಿತು. ಹೋಮ ಹವನ ಏಕೆಂಬುದಕ್ಕೆ ಕೊಡಲಾಗಿದ್ದ ಕಾರಣಗಳು:

1. ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕಿದೆ.

2. ಹತ್ತಾರು ಸಿನೆಮಾಗಳು ತೆರೆಕಂಡರೂ ನಿರೀಕ್ಷಿತ ಮಟ್ಟದ ಯಶಸ್ಸು ಯಾವ ಚಿತ್ರಕ್ಕೂ ಸಿಗುತ್ತಿಲ್ಲ.

3. ಕೋವಿಡ್ ನಂತರ ಜನ ಚಿತ್ರಮಂದಿರಗಳಿಗೆ ಬರುವುದೇ ಕಡಿಮೆಯಾಗಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

4. ಕೋವಿಡ್ ನಂತರ ಕನ್ನಡ ಚಿತ್ರರಂಗದಲ್ಲಿ ಹಲವು ಸಾವು, ನೋವುಗಳು ಸಂಭವಿಸಿವೆ.

5. ಕನ್ನಡ ಚಿತ್ರರಂಗದ ಉಳಿವು ಮತ್ತು ಏಳಿಗೆಗಾಗಿ ಹೋಮ ಹವನ.

ಈ ಹೋಮ ಹವನವನ್ನು ಆಯೋಜಿಸಿದ್ದು ಕನ್ನಡ ಚಲನಚಿತ್ರ ಕಲಾವಿದರ ಸಂಘ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಹೋಮ ಹವನ ನಡೆಸಲಾಯಿತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಇದರ ನೇತೃತ್ವ ವಹಿಸಿದ್ದರು. ಎಂಟು ಮಂದಿ ಪುರೋಹಿತರ ತಂಡದಿಂದ ಪೂಜೆ ನಡೆಯಿತು. ದೊಡ್ಡಣ್ಣ ಹಾಗೂ ಅವರ ಪತ್ನಿ ವಿಶೇಷ ಪೂಜೆ ಮತ್ತು ಹವನವನ್ನು ಮುನ್ನಡೆಸಿದರು.

ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ನೇತೃತ್ವದಲ್ಲಿ ಹೋಮ ಹವನಗಳು ನಡೆದವು. ಗಣ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಹಾಗೂ ಸರ್ಪಶಾಂತಿ ಈ ಪೂಜಾ ಕಾರ್ಯಕ್ರಮದ ಭಾಗವಾಗಿದ್ದವು.

ಮೊದಲು ಗಣಪತಿ ಹೋಮ ನಡೆಯಿತು. ಹಿರಿಯ ನಟಿಯರಾದ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಮೊದಲಾದವರು ದೀಪ ಬೆಳಗಿ ಪೂಜೆಗೆ ಚಾಲನೆ ನೀಡಿದರು. ಬಳಿಕ ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಹೋಮ ನಡೆದವು. ಕನ್ನಡ ಚಿತ್ರರಂಗದ ತಂತ್ರಜ್ಞರು, ಕಲಾವಿದರು ಸೇರಿದಂತೆ ಒಟ್ಟು 600 ಜನರಿಗೆ ಈ ಪೂಜೆಗೆ ಆಹ್ವಾನ ನೀಡಲಾಗಿತ್ತು. ಶಿವರಾಜ್ ಕುಮಾರ್, ಸುದೀಪ್, ಪ್ರೇಮ್, ಅಭಿಷೇಕ್ ಅಂಬರೀಷ್ ಸೇರಿದಂತೆ ಎಲ್ಲಾ ಪ್ರಮುಖ ನಟರು ಭಾಗಿಯಾಗಿದ್ದರು.

ಚಿತ್ರರಂಗ ಚೈತನ್ಯ ಕಳೆದುಕೊಂಡಂತಾಗಿದೆ. ಅದಕ್ಕೆ ಮತ್ತೆ ಜೀವ ಚೈತನ್ಯ ಬರಲು ಆ ಉದ್ಯಮಕ್ಕೆ ಅಧಿದೇವತೆಯಾದ ನಾಗದೇವರ ಆರಾಧನೆ ಆಗಬೇಕು ಎಂಬ ಜ್ಯೋತಿಷಿಗಳ ಸೂಚನೆಯಂತೆ, ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಸರ್ಪ ಶಾಂತಿ ನಡೆದಿದೆ.

ರಾಹು ಹಾಗೂ ಕೇತುವಿನ ದೃಷ್ಟಿಯಿಂದ ಪಾರಾಗಲು ಈ ಪೂಜೆ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಹೋಮಗಳನ್ನು ನಡೆಸಲಾಗುತ್ತಿದೆ ಎಂಬುದು ಪ್ರಧಾನ ಪುರೋಹಿತರ ಅಭಿಪ್ರಾಯವಾಗಿತ್ತು. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಆಗದಿರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಕಲಾವಿದರ ಸಂಘದಿಂದ ಹೋಮ ಹವನ ನಡೆಯಲಿದೆ ಎಂಬ ವಿಚಾರ ಪ್ರಕಟವಾಗುತ್ತಲೇ ಒಂದು ಅನುಮಾನವೂ ತಲೆಯೆತ್ತಿತ್ತು. ಈ ಪೂಜೆಯನ್ನು ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ದರ್ಶನ್ ಬಿಡುಗಡೆಗಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಆ ಎಲ್ಲ ಆರೋಪಗಳಿಗೆ ನಿರ್ಮಾಪಕ ಮತ್ತು ಕಲಾವಿದರ ಸಂಘದ ಕಾರ್ಯದರ್ಶಿ ರಾರ್‌ಲೈನ್ ವೆಂಕಟೇಶ್ ಸ್ಪಷ್ಟನೆ ಕೊಟ್ಟಿದ್ದರು. ಚಿತ್ರರಂಗದ ಏಳಿಗೆಗೋಸ್ಕರ ಈ ಹೋಮ, ಪೂಜೆ.

‘‘ದರ್ಶನ್‌ಗಾಗಿ ಪೂಜೆ ಮಾಡಬೇಕು ಎಂದಿದ್ದರೆ 100 ದೇವಾಲಯಗಳಲ್ಲಿ ಮಾಡಿಸಬಹುದು. ಆದರೆ ಇದು ಅವರಿಗಾಗಿ ಅಲ್ಲ. ಚಿತ್ರರಂಗದ ಉಳಿವಿಗಾಗಿ ಮಾಡಲಾಗುತ್ತಿದೆ’’ ಎಂದು ಅವರು ಸ್ಪಷ್ಟಪಡಿಸಿದ್ದು ವರದಿಯಾಗಿತ್ತು.

ದರ್ಶನ್‌ಗೋಸ್ಕರ ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ನಟ ಜಗ್ಗೇಶ್ ಕೂಡ ಅದನ್ನು ನಿರಾಕರಿಸಿದ್ದರು. ‘‘ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್‌ಗಾಗಿ ಪೂಜೆ ಆಗಿದ್ದರೆ ನಾನು ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಕಲಾವಿದರ ಒಳಿತಿಗಾಗಿ ನಡೆದಿರುವ ಪೂಜೆ’’ ಎಂದು ಅವರೂ ಸ್ಪಷ್ಟಪಡಿಸಿದ್ದರು.

ಪೂಜೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಟಿ ಗಿರಿಜಾ ಲೋಕೇಶ್, ‘‘ಇಡೀ ಚಿತ್ರರಂಗದ ಒಳಿತಿಗಾಗಿ ನಾವೆಲ್ಲರೂ ಸೇರಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ. ಇಲ್ಲಿ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲರೂ ಸೇರಿದ್ದಾರೆ, ಯಾರೋ ಒಬ್ಬರ ಒಳಿತಿಗಾಗಿ ಮಾಡುತ್ತಿರುವುದಲ್ಲ’’ ಎಂದಿದ್ದರು.

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗಲು ಹೋಮ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದ್ದಕ್ಕೆ, ‘‘ದರ್ಶನ್ ಕೂಡ ನಮ್ಮ ಚಿತ್ರರಂಗ ಕುಟುಂಬದ ಭಾಗ, ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಕೂಡ ಸಾಕಷ್ಟಿದೆ. ಯಾವುದೋ ಕೆಟ್ಟ ಘಳಿಗೆಯಲ್ಲಿ ಕ್ರೂರ ಮನಸ್ಥಿತಿ ಅವರ ಕೈಯಲ್ಲಿ ಕೆಟ್ಟ ಕೆಲಸ ಮಾಡಿಸಿರಬಹುದು. ತಮ್ಮ ಸಂಕಷ್ಟದಿಂದ ಹೊರಬಂದು ದರ್ಶನ್ ಮುಂದೆ ಉತ್ತಮ ಜೀವನ ನಡೆಸಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಪೂಜೆಯಲ್ಲಿ ನಟ ದರ್ಶನ್‌ಗೂ ಒಳಿತಾಗಲಿ ಎಂದು ಬೇಡುವುದರಲ್ಲಿ ತಪ್ಪೇನಿದೆ?’’ ಎಂದು ಗಿರಿಜಾ ಲೋಕೇಶ್ ಕೇಳಿದ್ದರು.

ಹಿರಿಯ ನಟಿ ವನಿತಾ ವಾಸು ಮಾತನಾಡಿ, ‘‘ನಟ ದರ್ಶನ್ ಗೋಸ್ಕರ ಪೂಜೆ ಹೋಮ ಮಾಡುತ್ತಿರುವುದಲ್ಲ. ಇಡೀ ಚಿತ್ರರಂಗದ ಒಳಿತಿಗೆ, ದರ್ಶನ್ ಕೂಡ ಚಿತ್ರರಂಗದ ಭಾಗವಾಗಿರುವುದರಿಂದ ಅವರಿಗೆ ಕೂಡ ದೇವರು ಮುಂದಿನ ದಿನಗಳಲ್ಲಿ ಒಳಿತು ನೀಡಲಿ’’ ಎಂದು ಕೇಳಿಕೊಂಡಿದ್ದರು.

ಹೀಗೆ ಹೋಮ ಹವನದ ಹಿಂದೆ ಬೇರೆಯೇ ಕಾರಣ ಇದೆ ಎಂಬ ಅನುಮಾನಗಳಿಗೆ ಪೂಜೆಯ ಸಂದರ್ಭದಲ್ಲಿಯೇ ಸ್ಪಷ್ಟನೆ ನೀಡುವುದೂ ನಡೆದಿತ್ತು.

ಚಿತ್ರರಂಗದ ಉಳಿವಿಗಾಗಿ ಎಂದು ಹೋಮ ಹವನವೇನೋ ನಡೆದಿದೆ. ಈಗ ಇರುವ ಪ್ರಶ್ನೆಯೆಂದರೆ, ಕನ್ನಡ ಚಿತ್ರರಂಗದ ಸಮಸ್ಯೆಗಳು ಹೋಮ ಹವನದಿಂದ ಬಗೆಹರಿಯುವಂಥವೇ ಎಂಬುದು. ಈ ಹೋಮಹವನದ ನೇತೃತ್ವ ವಹಿಸಿದವರಿಗೂ ಗೊತ್ತಿರುವ ಹಾಗೆ, ಕನ್ನಡ ಚಿತ್ರರಂಗದ ಸಮಸ್ಯೆಗಳು ಹೋಮ ಹವನದಿಂದ ಬಗೆಹರಿಯುವಂಥವಲ್ಲ. ಹೋಮ ಹವನ ಎಂಬುದು ಅವರವರ ವೈಯಕ್ತಿಕ ನಂಬಿಕೆಗೆ ಸಂಬಂಧಿಸಿದ್ದು. ವೈಯಕ್ತಿಕ ನೆಲೆಯಲ್ಲಿ ಅದು ತಪ್ಪೇನೂ ಅಲ್ಲ. ಆದರೆ ಚಿತ್ರರಂಗಕ್ಕೆ ಬೇಕಿರುವುದು ಬೇರೆ.

ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳೇನು? ಇವತ್ತು ಅದರ ಎದುರು ಇರುವ ಸವಾಲುಗಳೇನು? ಹಿರಿಯ ಬರಹಗಾರ ಜೋಗಿ ಅವರು ಪಟ್ಟಿ ಮಾಡುವಂತೆ,

1. ಕನ್ನಡದ ಚಿತ್ರಗಳು ಗೆಲ್ಲುತ್ತಿಲ್ಲ

2. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ.

3. ಕೊರೋನದ ನಂತರ ಅವರ ಆಸಕ್ತಿಯೆಲ್ಲ ಒಟಿಟಿ ಕಡೆಗೆ ಹೋಗಿದೆ.

4. ಪ್ರೇಕ್ಷಕರಿಗೆ ಮನರಂಜನೆ ಬೇರೆ ಬೇರೆ ವೇದಿಕೆಗಳಲ್ಲಿ ಸಿಗುತ್ತಿದೆ.

5. ಚಿತ್ರಗಳು ಸತತ ಸೋಲನ್ನು ಕಂಡು ಚಿತ್ರರಂಗ ಕಂಗೆಟ್ಟು ಹೋಗಿದೆ.

6. ಚಿತ್ರಮಂದಿರಗಳು ಮುಚ್ಚುತ್ತಿರುವ ವೇಗ ಗಾಬರಿ ಹುಟ್ಟಿಸುವಂತಿದೆ.

ಇವತ್ತು ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಚಿತ್ರರಂಗದೊಳಗೇ ಆ ನಟನ ಅಭಿಮಾನಿಗಳು, ಈ ನಟನ ಅಭಿಮಾನಿಗಳು ಎಂದು ಕಾದಾಟಗಳು ನಡೆಯುತ್ತಿರುವುದನ್ನೂ ನೋಡುತ್ತಿದ್ದೇವೆ. ಚಿತ್ರರಂಗದಲ್ಲಿ ಸ್ಟಾರ್ ಅನ್ನಿಸಿಕೊಂಡವರೆಲ್ಲ ಏನಾಗುತ್ತಿದ್ದಾರೆ ಎಂಬುದಕ್ಕೂ ನಿದರ್ಶನಗಳು ಇವೆ.

ಇದೆಲ್ಲ ಒಂದು ಕಡೆಯಾದರೆ, ಚಿತ್ರರಂಗದ ಅಸ್ತಿತ್ವ ಇರುವುದು ಯಾವುದರ ಮೇಲೆ ಎಂಬುದು ಯೋಚಿಸಬೇಕಿರುವ ಇನ್ನೊಂದು ವಿಚಾರ. ಕಥೆಯೇ ಕನ್ನಡ ಚಿತ್ರಗಳ ಜೀವಾಳವಾಗಿರುತ್ತಿದ್ದ ಕಾಲವಿತ್ತು. ಸದಭಿರುಚಿಯ ಚಿತ್ರಗಳನ್ನು ಕೊಡುವುದಕ್ಕಾಗಿ ನಿರ್ದೇಶಕರು ಮಾತ್ರವಲ್ಲ, ನಿರ್ಮಾಪಕರೂ ಬದ್ಧವಾಗಿರುತ್ತಿದ್ದ ಕಾಲವಿತ್ತು. ಆದರೆ ಚಂದನವನದ ಚಿತ್ರಗಳು ಯಾವ ದೆಸೆ ಮುಟ್ಟಿವೆ? ಚಿತ್ರರಂಗ ಕುಸಿಯುತ್ತಿರುವುದಕ್ಕೆ ಇರುವ ಕಾರಣಗಳೇನು? ಅವನ್ನೆಲ್ಲ ಬಗೆಹರಿಸಿಕೊಳ್ಳಬೇಕಾದ ದಾರಿಯನ್ನು ಕಂಡುಕೊಳ್ಳಬೇಕಿರುವುದು ಹೇಗೆ?

ಈಗ ಕನ್ನಡ ಚಿತ್ರರಂಗದ ಉಳಿವಿಗಾಗಿ ಹೋಮ ಹವನ ಮಾಡಿಸಿದವರಿಗೇ ಗೊತ್ತಿದೆ, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅಂಥವರೆಲ್ಲ ಚಿತ್ರರಂಗದ ಎಲ್ಲರ ಕೈಹಿಡಿದು ನಡೆಸಬಲ್ಲವರಾಗಿದ್ದರು. ಈಗ ಅಂಥವರಿಲ್ಲದೆ ಚಿತ್ರರಂಗ ಅನಾಥವಾಗಿದೆ ಎಂಬುದನ್ನು ಹೋಮ ಹವನ ನಡೆಸಿರುವವರೂ ಒಪ್ಪುತ್ತಾರೆ. ಏಕೆ ಅವತ್ತು ಇದ್ದಂಥ ವಾತಾವರಣ ಕನ್ನಡ ಚಿತ್ರರಂಗದಲ್ಲಿ ಇಂದು ಇಲ್ಲವಾಗಿದೆ? ಯಾಕೆ ಎಲ್ಲರೂ ಒಂದೊಂದು ದ್ವೀಪವಾಗಿ ತಾನು, ತನ್ನದು ಎಂದು ನೋಡಿಕೊಳ್ಳುತ್ತಿದ್ದಾರೆ?

ಚಿತ್ರರಂಗದ ಜೀವಾಳವಾಗಿರುವ ಒಳ್ಳೆಯ ಕಲಾವಿದರು, ಚಿತ್ರ ಸಾಹಿತಿಗಳು, ಚಿತ್ರಕಥೆ, ಸಂಭಾಷಣೆಗಳ ಮೂಲಕ ಒಂದು ಚಿತ್ರವನ್ನು ಮನಮುಟ್ಟುವಂತೆ ಕಟ್ಟಬಲ್ಲವರು, ತಾಂತ್ರಿಕ ವಿಭಾಗದವರು ಹೀಗೆ ದುಡಿಯುವವರ ದೊಡ್ಡ ಸಾಲೇ ಇದೆ. ಅವರ ಹೊಟ್ಟೆ ತುಂಬದೇ ಹೋದರೆ ಚಿತ್ರರಂಗ ಸೊರಗದೇ ಇನ್ನೇನಾದೀತು? ಚಿತ್ರರಂಗದ ಉದ್ಧಾರವೆಂದರೆ ಚಿತ್ರರಂಗದ ಭಾಗವೇ ಆಗಿರುವ ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವುದರಲ್ಲಿ ಇದೆ. ದುಡ್ಡು ಹಾಕಬಲ್ಲವರು ಒಂದರ ಬೆನ್ನಿಗೆ ಒಂದು ಚಿತ್ರ ಮಾಡುತ್ತ ಹೋದರೆ ಹೇಗೆ ಯಶಸ್ಸು ಸಿಗಲು ಸಾಧ್ಯ? ಥಿಯೇಟರುಗಳೇ ಇಲ್ಲವಾಗುತ್ತಿರುವ ಕಾಲದಲ್ಲಿ, ಮನರಂಜನೆಯ ವ್ಯಾಖ್ಯೆ ಮತ್ತು ವೇದಿಕೆಗಳೆರಡೂ ವಿಸ್ತಾರವೂ ವಿಭಿನ್ನವೂ ಆಗಿರುವ ಕಾಲದಲ್ಲಿ ಅಲ್ಲೊಂದು ಪರ್ಯಾಯವನ್ನು ಯೋಚಿಸುವ ಕೆಲಸ ಆಗಬೇಕು. ಜನರು ಮೆಚ್ಚಬಲ್ಲಂಥ ಮತ್ತು ಸದಭಿರುಚಿಯ ಸಾಧ್ಯತೆಗಳನ್ನು ಹುಡುಕುವ ಕೆಲಸ ಆಗಬೇಕು. ಯಾಕೆಂದರೆ, ಚಿತ್ರರಂಗದ ಯಶಸ್ಸು ಎನ್ನುವುದು ಬಾಕ್ಸಾಫೀಸ್ ಯಶಸ್ಸು ಆಗುವ ಮೊದಲು ಅದು ಜನರ ಮನಸ್ಸನ್ನು ಗೆಲ್ಲಬೇಕು.ಮಸಾಲೆಗಳ ಮೂಲಕವೇ ಗೆಲ್ಲುತ್ತೇವೆ ಎಂಬ ಧೋರಣೆ ಬದಲಾಗಬೇಕು. ಇದು ಯಾರೋ ಕೆಲವರು ಅಂದುಕೊಂಡು ಹೋಮ ಹವನ ಮಾಡಿಸಿ ಊಟ ಹಾಕಿಸುವ ಹಾಗಲ್ಲ. ಚಿತ್ರರಂಗದ ಭಾಗವಾಗಿರುವ ಎಲ್ಲರೂ ಕಲೆತು ಚರ್ಚಿಸಬೇಕಿರುವ ವಿಚಾರ. ಮೊದಲೆಲ್ಲ ನಟರು, ಕಲಾವಿದರು, ತಂತ್ರಜ್ಞರು ಒಂದು ಕುಟುಂಬದಂತೆ ಕೆಲಸ ಮಾಡುತ್ತಿದ್ದುದಿತ್ತು. ಆದರೆ ಈಗ ನಟರು, ಕಲಾವಿದರ ಜಾಗವನ್ನು ಸ್ಟಾರ್‌ಗಿರಿ ಎಂಬುದು ಆಳುತ್ತಿದೆ. ಪ್ರತಿಭೆಯ ಜಾಗವನ್ನು ಮತ್ತಾವುದೋ ಆಕ್ರಮಿಸಿಕೊಂಡುಬಿಟ್ಟಿದೆ.

ವೈಯಕ್ತಿಕವಾಗಿ ಹೋಮ ಹವನ ಮಾಡಿಕೊಂಡರೆ ತಪ್ಪಲ್ಲ. ಆದರೆ ಸಂಸ್ಥೆಯಾಗಿ ಅದನ್ನು ಪರಿಹಾರದ ದಾರಿ ಎಂದುಕೊಳ್ಳುವುದರ ಬಗ್ಗೆ ವ್ಯಾಪಕ ಆಕ್ಷೇಪವಿದೆ. ತಮಿಳು ಚಿತ್ರಗಳು ಗೆಲ್ಲುತ್ತಿರುವಾಗ, ಮಲಯಾಳಂ ಸಿನೆಮಾಗಳು ಮಾದರಿಯನ್ನು ನಿರ್ಮಿಸಿರುವಾಗ ಕನ್ನಡ ಚಿತ್ರರಂಗ ಹೋಮ ಹವನ ಎನ್ನುತ್ತಿರುವುದರ ಬಗ್ಗೆ ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ. ಆ ಎಲ್ಲ ಭಾಷೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವ, ಎಲ್ಲರೂ ಒಟ್ಟಾಗಿ ಚರ್ಚಿಸುವ ಅಗತ್ಯವನ್ನು ಬರಹಗಾರ ಜೋಗಿ ಪ್ರಸ್ತಾಪಿಸುತ್ತಾರೆ.

ಹೊಸ ನಿರ್ಮಾಪಕರು ಒಂದರ ಬೆನ್ನಲ್ಲೊಂದು ಸಿನೆಮಾ ಮಾಡದಂತೆ ತಡೆಯುವುದು. ಪ್ರೇಕ್ಷಕರು ಬರಲು ಮನಸ್ಸು ಮಾಡುವಂತೆ ಚಿತ್ರಮಂದಿರಗಳ ಟಿಕೆಟ್ ದರ ಇಳಿಸುವುದು. ನಟರು, ಕಲಾವಿದರು, ನಿರ್ದೇಶಕರುಗಳಿಗೆ ತರಬೇತಿ ಕೊಡುವುದು. ಇಂಥ ಹಲವು ಉಪಾಯಗಳ ಬಗ್ಗೆ ಜೋಗಿ ಮಾಧ್ಯಮಗಳ ಜೊತೆ ಮಾತಾಡುತ್ತ ಹೇಳಿದ್ದಾರೆ.

ಸಮಾಜ, ಸಂಸ್ಕೃತಿ, ಸರಕಾರ ಇಂತಹ ವಿಚಾರಗಳ ಮಧ್ಯೆ ದೇವರನ್ನು ತರುವುದು ರಾಜಕೀಯವಾಗುತ್ತದೆಯೇ ಹೊರತು ಉಳಿಸುವ ಕಾಳಜಿಯಾಗುವುದಿಲ್ಲ. ಕನ್ನಡಕ್ಕೆ ತನ್ನದೇ ಆದ ಶಕ್ತಿಯಿದೆ. ಆ ಶಕ್ತಿಯನ್ನು ದುಡಿಸಿಕೊಂಡು, ಅದರಿಂದಲೇ ಕನ್ನಡ ಗೆಲ್ಲುವ ಸಾಧ್ಯತೆಯನ್ನು ಸೃಷ್ಟಿಸಬೇಕು. ಅಂಥ ಸಾಧ್ಯತೆಯ ಸೃಷ್ಟಿಯಲ್ಲಿ ಕನ್ನಡ ಚಿತ್ರರಂಗದ ಗೆಲುವು ಇದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News