ಏಕೆ ಹೆಸರು ಬದಲಾವಣೆ? ದೇಶ ರೂಪಿಸುವುದು ಯಾರ ಹೊಣೆ?

Update: 2023-09-12 06:21 GMT
Editor : Thouheed | By : ಆರ್. ಜೀವಿ

ಜಿ20ಔತಣಕೂಟಕ್ಕೆ ರಾಷ್ಟ್ರಪತಿ ಭವನದಿಂದ ಕಳಿಸಲಾಗಿರುವ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ. ಇದರೊಂದಿಗೆ, ದೇಶದ ಅಧಿಕೃತ ಹೆಸರು ಬದಲಿಸಲು ಕೇಂದ್ರ ಸರಕಾರ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಜೊತೆಗೇ, ‘ಭಾರತ್’ ಎಂದು ಮರುನಾಮಕರಣ ಮಾಡುವ ಪ್ರಸ್ತಾವವನ್ನು ಕೇಂದ್ರ ಸರಕಾರ ಸೆ.18ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷಾಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ಈ ವಿಚಾರವೀಗ ವಿವಾದವೆಬ್ಬಿಸಿದೆ. ಈ ಹೊತ್ತಲ್ಲಿ, ದೇಶಕ್ಕೆ ಮೊದಲಿದ್ದ ಹಲವು ಹೆಸರುಗಳು, ಸಂವಿಧಾನದಲ್ಲಿ ಅಧಿಕೃತವಾಗಿ ಉಳಿದ ಹೆಸರು, ನಿಜವಾಗಿಯೂ ಯಾವ ಹೆಸರಿನಿಂದ ದೇಶವನ್ನು ಕರೆಯಬೇಕೆಂಬುದರ ಕುರಿತು ಸುಪ್ರೀಂ ಕೋರ್ಟ್ ಏನು ಹೇಳಿದೆ ಮೊದಲಾದ ವಿಚಾರಗಳನ್ನು ಒಮ್ಮೆ ಗಮನಿಸಬೇಕು.

ಸಂವಿಧಾನದ 1ನೇ ವಿಧಿ ಹೇಳುವುದೇನು?

‘‘ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಂದು ಒಕ್ಕೂಟ’’ ಎಂದು ಸಂವಿಧಾನದ 1ನೇ ವಿಧಿಯಲ್ಲಿ ಹೇಳಲಾಗಿದೆ.

ದೇಶದ ಹೆಸರು ಇಂಗ್ಲಿಷಿನಲ್ಲಿ ‘ಇಂಡಿಯಾ’ ಎಂದೂ ಹಿಂದಿ ಮತ್ತಿತರ ಭಾಷೆಗಳಲ್ಲಿ ‘ಭಾರತ’ ಎಂದು ಹೇಳಲಾಗುವುದನ್ನೂ ಗಮನಿಸಬಹುದು. ಉದಾಹರಣೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂಬುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಎಂದೂ, ಇಂಡಿಯನ್ ರೈಲ್ವೆಯನ್ನು ಭಾರತೀಯ ರೈಲ್ವೆ ಎಂದೂ ರೂಪಾಂತರಿಸಿ ಹೇಳುವುದು ರೂಢಿಯಲ್ಲಿದೆ.

‘ಭಾರತ’ ಎಂಬ ಹೆಸರಿನ ಮೂಲ

ಭಾರತ್, ಭಾರತ ಅಥವಾ ಭರತವರ್ಷ ಎಂಬ ಹೆಸರಿನ ಮೂಲ ಸಿಗುವುದು ಪುರಾಣಗಳಲ್ಲಿ ಮತ್ತು ಮಹಾಭಾರತ ಮಹಾಕಾವ್ಯದಲ್ಲಿ. ಪುರಾಣಗಳು ಭಾರತವನ್ನು ದಕ್ಷಿಣದ ಸಮುದ್ರ ಮತ್ತು ಉತ್ತರದ ಹಿಮಾಲಯದ ನಡುವಿನ ಭೂಮಿ ಎಂದು ವಿವರಿಸುತ್ತವೆ.

ಭರತ ಎಂಬ ದೊರೆ ಆಳಿದ್ದರಿಂದ ಭಾರತ ಎಂಬ ಹೆಸರಾಯಿತು ಎಂಬುದು ಜನಜನಿತ ಕಥೆ. ಭರತ ಋಗ್ವೇದ ಬುಡಕಟ್ಟಿನ ಪೂರ್ವಜ ಮತ್ತು ಉಪಖಂಡದ ಎಲ್ಲಾ ಜನರ ಮೂಲಪುರುಷ ಎಂದು ಪುರಾಣಗಳಲ್ಲಿ ಉಲ್ಲೇಖವಿರುವುದರ ಬಗ್ಗೆ ಹೇಳಲಾಗುತ್ತದೆ.

ನೆಹರೂ ಹೇಳಿದ್ದೇನು?

1927ರ ಜನವರಿಯಲ್ಲಿ ಬರೆದ ಲೇಖನದಲ್ಲಿ ಜವಾಹರಲಾಲ್ ನೆಹರೂ ಹೇಳಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ. ಅದರಂತೆ, ‘‘ಬಹಳ ಪುರಾತನ ಕಾಲದಿಂದಲೇ ಇಂಡಿಯಾದ ಮೂಲಭೂತ ಏಕತೆಯನ್ನು ರೂಢಿಸಿಕೊಂಡು ಬರಲಾಗಿದೆ. ಅದೆಂದರೆ, ಒಂದು ಸಾಮಾನ್ಯ ನಂಬಿಕೆ ಮತ್ತು ಸಂಸ್ಕೃತಿಯ ಏಕತೆ. ಇಂಡಿಯಾ ಭಾರತವಾಗಿತ್ತು, ಹಿಂದೂ ತೀರ್ಥಯಾತ್ರೆಯ ಶ್ರದ್ಧಾ ಕೇಂದ್ರಗಳು ದೇಶದ ನಾಲ್ಕೂ ಮೂಲೆಗಳಲ್ಲಿ ಅಂದರೆ ದಕ್ಷಿಣದ ತುತ್ತ ತುದಿಗೆ ಸಿಲೋನ್, ಪಶ್ಚಿಮಕ್ಕೆ ಅರಬಿ ಸಮುದ್ರ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ಉತ್ತರದಲ್ಲಿ ಹಿಮಾಲಯಗಳ ನಡುವೆ ಇವೆ.’’

ಹಿಂದುಸ್ಥಾನ್ ಬಳಕೆ ಯಾವಾಗ ಇತ್ತು?

ಹಿಂದುಸ್ಥಾನ್ ಎಂಬ ಹೆಸರು ಸಂಸ್ಕೃತದ ಸಿಂಧೂ ಎಂಬುದರ ಪರ್ಷಿಯನ್ ರೂಪವಾದ ಹಿಂದೂ ಎಂಬುದರಿಂದ ಬಂದಿರಬೇಕು ಎನ್ನಲಾಗುತ್ತದೆ. ಉಪಖಂಡದ ವಾಯವ್ಯ ಭಾಗಗಳಾದ ಸಿಂಧೂ ಕಣಿವೆಯ ಮೇಲಿನ ಪರ್ಷಿಯನ್ ವಿಜಯದೊಂದಿಗೆ ಹಿಂದೂ ಎಂಬುದು ಬಳಕೆಗೆ ಬಂದಿತೆನ್ನಲಾಗುತ್ತದೆ. ಕೆಳಗಿನ ಸಿಂಧೂ ಜಲಾನಯನ ಪ್ರದೇಶವನ್ನು ಗುರುತಿಸಲು ಬಳಕೆಯಾಗುತ್ತಿದ್ದ ಹಿಂದೂ ಎಂಬುದಕ್ಕೆ ಸ್ಥಾನ್ ಎಂಬುದು ಸೇರಿ ಹಿಂದುಸ್ಥಾನ್ ಎಂಬುದು ರೂಢಿಗೆ ಬಂತು.

ಹಿಂದೂ ಎಂಬುದನ್ನು ಗ್ರೀಕರು ಇಂಡಸ್ ಎಂದರು. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಮೆಸಿಡೋನಿಯನ್ ರಾಜ ಅಲೆಕ್ಸಾಂಡರ್ ಭಾರತವನ್ನು ಆಕ್ರಮಿಸುವ ವೇಳೆಗೆ ಭಾರತ ಎಂಬುದು ಸಿಂಧೂ ನದಿಯ ಆಚೆಗಿನ ಪ್ರದೇಶದೊಂದಿಗೆ ಗುರುತಿಸಿಕೊಂಡಿತ್ತು.

16ನೇ ಶತಮಾನದಲ್ಲಿ ಮೊಗಲರ ಕಾಲದಲ್ಲಿ ಸಂಪೂರ್ಣ ಇಂಡೋ-ಗಂಗಾ ಬಯಲು ಪ್ರದೇಶವನ್ನು ಗುರುತಿಸಲು ಹಿಂದುಸ್ಥಾನ್ ಎಂಬ ಹೆಸರನ್ನು ಬಳಸಲಾಯಿತು.




 


ಇತಿಹಾಸಕಾರ ಇಯಾನ್ ಜೆ ಬ್ಯಾರೋ, 18ನೇ ಶತಮಾನದ ಮಧ್ಯದಿಂದ ಉತ್ತರಾರ್ಧದವರೆಗೆ, ದಕ್ಷಿಣ ಏಶ್ಯದ ಬಹುಭಾಗವನ್ನು ಒಳಗೊಂಡಿದ್ದ ಮೊಗಲರ ಆಳ್ವಿಕೆಯ ಪ್ರದೇಶಗಳನ್ನು ಹಿಂದುಸ್ಥಾನ್ ಎಂದು ಕರೆಯಲಾಗುತ್ತಿದ್ದುದರ ಬಗ್ಗೆ ಹೇಳಿದ್ದಾನೆ.

ಇಂಡಿಯಾ ಹೆಸರು ಬಳಕೆ ಎಂದಿನಿಂದ?

18ನೇ ಶತಮಾನದ ಉತ್ತರಾರ್ಧದಿಂದ, ಬ್ರಿಟಿಷ್ ನಕ್ಷೆಗಳಲ್ಲಿ ಇಂಡಿಯಾ ಎಂಬುದು ಹೆಚ್ಚಾಗಿ ಬಳಕೆಯಾಗತೊಡಗಿತು. ಆನಂತರ ಹಿಂದುಸ್ಥಾನ್ ಎಂಬುದರ ಬಳಕೆ ದಕ್ಷಿಣ ಏಶ್ಯದೆಲ್ಲೆಡೆ ಕ್ರಮೇಣ ಇಲ್ಲವಾಗುತ್ತ ಬಂತು. ಗ್ರೀಕೋ-ರೋಮನ್ ಸಂಬಂಧ, ಯುರೋಪ್‌ನಲ್ಲಿ ದೀರ್ಘ ಬಳಕೆಯ ಇತಿಹಾಸ ಮತ್ತು ಸರ್ವೇ ಆಫ್ ಇಂಡಿಯಾದಂತಹ ಸಂಸ್ಥೆಗಳಲ್ಲಿ ಅಳವಡಿಕೆಯಾಗಿರುವುದರ ಹಿನ್ನೆಲೆ ಇವೆಲ್ಲವನ್ನೂ ಇಂಡಿಯಾ ಪದ ಹೊಂದಿದೆ.

ನೆಹರೂ ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಇಂಡಿಯಾ, ಭಾರತ ಮತ್ತು ಹಿಂದೂಸ್ಥಾನ ಎಂದು ಉಲ್ಲೇಖಿಸಿದ್ದಾರೆ.

ಆದರೆ ಸಂವಿಧಾನದಲ್ಲಿ ದೇಶವನ್ನು ಹೆಸರಿಸುವ ಪ್ರಶ್ನೆ ಉದ್ಭವಿಸಿದಾಗ, ಹಿಂದೂಸ್ಥಾನ ಎಂಬುದನ್ನು ಕೈಬಿಡಲಾಯಿತು. ಭಾರತ ಮತ್ತು ಇಂಡಿಯಾ ಎರಡನ್ನೂ ಉಳಿಸಿಕೊಳ್ಳಲಾಯಿತು.

ಸಂವಿಧಾನ ಸಭೆಯ ಚರ್ಚೆಗಳ ಸಂದರ್ಭದಲ್ಲಿ 1949ರ ಸೆಪ್ಟಂಬರ್ 17ರಂದು ಒಕ್ಕೂಟದ ಹೆಸರು ಮತ್ತು ಪ್ರದೇಶ ಕುರಿತ ಚರ್ಚೆ ಎತ್ತಿಕೊಳ್ಳಲಾಯಿತು. ‘‘ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಂದು ಒಕ್ಕೂಟ’’ ಎಂಬ ಒಂದನೇ ವಿಧಿಯ ಉಲ್ಲೇಖದೊಂದಿಗೇ ಸದಸ್ಯರ ನಡುವೆ ಭಿನ್ನಾಭಿಪ್ರಾಯವೂ ಮೂಡಿತ್ತು. ಕೆಲವರು ವಸಾಹತು ಕಾಲದ ನೆನಪು ಎಂಬ ಕಾರಣಕ್ಕೆ ಇಂಡಿಯಾ ಎಂಬ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರು.

ಹರಿವಿಷ್ಣು ಕಾಮತ್ ಅವರು ಭಾರತ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ ಎಂದು ಉಲ್ಲೇಖಿಸುವಂತೆ ಸಲಹೆ ನೀಡಿದ್ದರು. ಮಧ್ಯಪ್ರಾಂತಗಳನ್ನು ಪ್ರತಿನಿಧಿಸಿದ್ದ ಸೇಠ್ ಗೋವಿಂದ್ ದಾಸ್ ಅವರಿಂದ, ‘‘ವಿದೇಶಗಳಲ್ಲಿ ಇಂಡಿಯಾ ಎಂದು ಕರೆಯಲಾಗುವ’’ ಎಂದು ಉಲ್ಲೇಖಿಸಬೇಕೆಂಬ ಸಲಹೆ ಬಂದಿತ್ತು. ಗುಡ್ಡಗಾಡು ಜಿಲ್ಲೆಗಳನ್ನು ಪ್ರತಿನಿಧಿಸಿದ್ದ ಹರಗೋವಿಂದ್ ಪಂತ್, ಉತ್ತರ ಭಾರತದ ಜನರ ಇಚ್ಛೆಯಾಗಿ ಭರತವರ್ಷ ಎಂಬ ಹೆಸರನ್ನು ಸಲಹೆ ಮಾಡಿದ್ದರು.

ಆದರೆ ಸಮಿತಿ ಆ ಯಾವುದೇ ಸಲಹೆಗಳನ್ನು ಒಪ್ಪದ ಹಿನ್ನೆಲೆಯಲ್ಲಿ, ಇಂಡಿಯಾ ಮತ್ತು ಭಾರತ ಎರಡೂ ಹೆಸರುಗಳು ಸಾಂವಿಧಾನಿಕವಾಗಿ ಸ್ವೀಕೃತವಾದ ಹೆಸರುಗಳಾಗಿ ಉಳಿದವು.

ಈಗ, ಕೇಂದ್ರ ಸರಕಾರ ಇಂಡಿಯಾ ಎಂಬ ಹೆಸರನ್ನು ಬಿಟ್ಟು ಭಾರತ ಎಂಬ ಹೆಸರನ್ನೇ ಅಧಿಕೃತಗೊಳಿಸುವುದಕ್ಕೆ ಮುಂದಾಗಿದೆ ಎನ್ನಲಾಗಿರುವ ಕಾರಣಕ್ಕೆ ವಿವಾದವೆದ್ದಿದೆ.

ಈ ಮೊದಲು ಕೂಡ ಅಧಿಕೃತ ಹೆಸರನ್ನು ಬದಲಿಸಿದ ಹಲವು ದೇಶಗಳಿವೆ.

ಶ್ರೀಲಂಕಾ ಎಂಬ ಹೆಸರನ್ನು 1972ರಲ್ಲಿ ಇಡಲಾಯಿತು. ಆದರೆ ಎಲ್ಲಾ ಸರಕಾರಿ ಬಳಕೆಯಿಂದ ಅದರ ಹಿಂದಿನ ಹೆಸರು ಸಿಲೋನ್ ಇಲ್ಲವಾಗುವುದಕ್ಕೆ ಒಂದೆರಡಲ್ಲ, ಸುಮಾರು 40 ವರ್ಷಗಳೇ ಬೇಕಾದವು.

ಬರ್ಮಾ ಮ್ಯಾನ್ಮಾರ್ ಆಗಿದ್ದು, ಟರ್ಕಿ ಬದಲಿಗೆ ತುರ್ಕಿಯೆ, ಹಾಲಂಡ್ ಬದಲಿಗೆ ನೆದರ್‌ಲ್ಯಾಂಡ್ಸ್, ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾ ಎಂಬುದು ಅಧಿಕೃತವಾಗಿ ರಿಪಬ್ಲಿಕ್ ಆಫ್ ನಾರ್ಥ್ ಮ್ಯಾಸಿಡೋನಿಯಾ ಆದದ್ದು, ಜೆಕ್ ಗಣರಾಜ್ಯದ ಹೆಸರು ಜೆಕಿಯಾ ಎಂದಾದದ್ದು ಇವೆಲ್ಲ ಅಂಥ ಉದಾಹರಣೆಗಳು.

2018ರಲ್ಲಿ ಸ್ವಾಜಿಲ್ಯಾಂಡ್ ಹೆಸರನ್ನು ಈಸ್ವತಿನಿ ಎಂದು ಬದಲಿಸಲಾಯಿತು. ಆಗ ದಕ್ಷಿಣ ಆಫ್ರಿಕಾ ಮೂಲದ ಬೌದ್ಧಿಕ ಆಸ್ತಿ ವಕೀಲ ಡ್ಯಾರೆನ್ ಒಲಿವಿಯರ್, ದೇಶದ ಹೆಸರು ಬದಲಿಸುವುದರ ವೆಚ್ಚ ಲೆಕ್ಕಾಚಾರ ಮಾಡುವ ವಿಧಾನವನ್ನು ಕಂಡುಕೊಂಡರು. ಅದನ್ನು ‘ಔಟ್‌ಲುಕ್’ ವರದಿ ಉಲ್ಲೇಖಿಸಿರುವ ಪ್ರಕಾರ,

ಮಾರುಕಟ್ಟೆ ವೆಚ್ಚ - ಒಟ್ಟು ಆದಾಯದ ಸುಮಾರು ಶೇ.6ರಷ್ಟು

ಮರುಬ್ರಾಂಡಿಂಗ್ ಕಸರತ್ತಿನ ವೆಚ್ಚ - ಒಟ್ಟಾರೆ ಮಾರ್ಕೆಟಿಂಗ್ ಬಜೆಟ್‌ನ ಶೇ.10ರಷ್ಟು

ಡ್ಯಾರೆನ್ ಒಲಿವಿಯರ್ ಸೂತ್ರದಂತೆ, ಇಂಡಿಯಾವನ್ನು ಭಾರತ್ ಎಂದು ಬದಲಾಯಿಸಲು ಅಂದಾಜು ವೆಚ್ಚ ಲೆಕ್ಕ ಹಾಕುವುದಾದರೆ,

ಇಂಡಿಯಾದ ಒಟ್ಟು ಆದಾಯ 2023ರ ಆರ್ಥಿಕ ವರ್ಷದಲ್ಲಿ - 23.84 ಲಕ್ಷ ಕೋಟಿ ರೂ.

ಭಾರತ್ ಎಂದು ಮರುಬ್ರಾಂಡಿಂಗ್ ಮಾಡಲು ಆಗುವ ವೆಚ್ಚ - 0.06 x 23.84 ಲಕ್ಷ ಕೋಟಿ ರೂ. = 14,304 ಕೋಟಿ ರೂ.

ಈಗ ಮೋದಿ ಸರಕಾರ ದೇಶದ ಹೆಸರನ್ನೇ ಬದಲಿಸಲು ಹೊರಟಿದೆಯೇ ಎಂಬುದರ ಊಹಾಪೋಹಗಳ ನಡುವೆಯೇ, ಜಿ20 ಆಹ್ವಾನ ಪತ್ರಿಕೆಯಲ್ಲಿ ಮಾತ್ರವಲ್ಲದೆ, ಇದಕ್ಕೂ ಮೊದಲೂ ‘ಭಾರತ್’ ಎಂಬ ಪದವನ್ನು ಬಳಸಿತ್ತು ಎಂಬುದು ಬಹಿರಂಗವಾಗಿದೆ.

‘ದಿ ವೈರ್’ ವರದಿ ಮಾಡಿರುವ ಪ್ರಕಾರ, ಕಳೆದ ತಿಂಗಳು ಪ್ರಧಾನಿ ಮೋದಿ ಗ್ರೀಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಎಲ್ಲಾ ಪ್ರೋಟೋಕಾಲ್ ಸರಕುಗಳಲ್ಲಿಯೂ ‘ಪ್ರೈಂ ಮಿನಿಸ್ಟರ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿರುವುದಾಗಿ ತಿಳಿದುಬಂದಿದೆ. ಸಿಬ್ಬಂದಿ ಹೇಳುವ ಪ್ರಕಾರ ಭಾರತ್ ಎಂದು ಬಳಸಲು ಮೌಖಿಕವಾಗಿ ಸೂಚಿಸಲಾಗಿತ್ತು.

ಮೋದಿ ಸರಕಾರದ ಇಂಥದೊಂದು ನಡೆಗೆ ವ್ಯಕ್ತವಾಗುತ್ತಿರುವ ರಾಜಕೀಯ ಟೀಕೆಗಳಲ್ಲಿ ವ್ಯಾಪಕವಾಗಿರುವುದು, ಪ್ರತಿಪಕ್ಷ ಮೈತ್ರಿಕೂಟಕ್ಕೆ INDIA ಎಂಬ ಹೆಸರಿಟ್ಟಿರುವುದರಿಂದ ಬಿಜೆಪಿ ಭಯಬಿದ್ದಿದೆ ಎಂಬ ವಿಚಾರ.

ಭಾರತವನ್ನು ಬದಲಿಸುವುದಾಗಿ ಹೇಳಿದ್ದ ಮೋದಿ ಸರಕಾರ ಒಂಭತ್ತು ವರ್ಷಗಳ ನಂತರ ಹೆಸರನ್ನಷ್ಟೇ ಬದಲಿಸಲು ಹೊರಟಿರುವುದನ್ನು ನೋಡುವಂತಾಗಿದೆ ಎಂದು ಪ್ರತಿಪಕ್ಷಗಳು ವ್ಯಂಗ್ಯವಾಡಿವೆ. ವಿಪಕ್ಷ ಮೈತ್ರಿಕೂಟಕ್ಕೆ ನಾಳೆ ಭಾರತ್ ಎಂದು ಹೆಸರಿಟ್ಟರೆ ಆ ಹೆಸರನ್ನೂ ಬದಲಿಸಲಾಗುವುದೆ ಎಂದು ಕೆಣಕಿವೆ. ಜನರನ್ನು ಇಬ್ಭಾಗಿಸುವ ಬಿಜೆಪಿಯ ವಿನಾಶಕಾರಿ ಮನಸ್ಸು ಎಂದೂ, ಇದು ತೀರಾ ಕೆಳಮಟ್ಟದ ರಾಜಕಾರಣ ಎಂದೂ ಟೀಕಿಸಲಾಗಿದೆ. ಬ್ರ್ಯಾಂಡ್ ಮೌಲ್ಯ ಹೊಂದಿರುವ ಇಂಡಿಯಾ ಎಂಬ ಹೆಸರನ್ನು ಸಂಪೂರ್ಣವಾಗಿ ಕೈಬಿಡುವುದು ಎಷ್ಟು ಮೂರ್ಖತನದ ನಿರ್ಧಾರವಾದೀತು ಎಂಬುದರ ಬಗ್ಗೆಯೂ ಎಚ್ಚರಿಸಲಾಗಿದೆ.

ಹೆಸರೊಂದನ್ನು ಬದಲಿಸುವುದೆಂದರೆ ಅದು ತೀರಾ ಸ್ಥಳೀಯ ಮಟ್ಟದಿಂದ ಹಿಡಿದು, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬದಲಾಗಬೇಕಾಗುತ್ತದೆ. ಅದು ಸಮಯ ತೆಗೆದುಕೊಳ್ಳುವ ಮತ್ತು ದುಬಾರಿ ವೆಚ್ಚದ ವ್ಯವಹಾರ. ಹೆಸರು ಬದಲಿಸಿದ ಮಾತ್ರಕ್ಕೇ ಎಲ್ಲ ಮುಗಿದುಬಿಡುವುದಿಲ್ಲ. ಅಲ್ಲಿಂದ ದೊಡ್ಡ ಕಸರತ್ತೇ ಶುರುವಾಗುಬೇಕಿರುತ್ತದೆ. ನಕ್ಷೆಗಳ ನವೀಕರಣ, ರಸ್ತೆ ಸಂಚಾರ ವ್ಯವಸ್ಥೆ, ಹೆದ್ದಾರಿ ಹೆಗ್ಗುರುತುಗಳು, ರಾಜ್ಯ ಮತ್ತು ನಾಗರಿಕ ಪ್ರಾಧಿಕಾರದ ಕಚೇರಿಗಳಲ್ಲಿ ಬಳಸುವ ಅಧಿಕೃತ ಸಾಮಗ್ರಿಗಳಲ್ಲಿನ ಬದಲಾವಣೆ ಇವೆಲ್ಲದಕ್ಕೆ ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಬೇಕಾಗುತ್ತದೆ. ಅಷ್ಟಾದ ಮೇಲೆಯೂ ಅದು ಜನರ ಬಾಯಲ್ಲಿ ಬದಲಾಗುವುದು ಸುಲಭವಲ್ಲ.

ಮತ್ತೊಂದು ಮುಖ್ಯ ವಿಚಾರವೆಂದರೆ, ಸಂವಿಧಾನ ತಜ್ಞರು ಹೇಳುವಂತೆ ಹೆಸರು ಬದಲಿಸುವುದರಿಂದ ಸಂವಿಧಾನದ ಮೂಲ ಸ್ವರೂಪ ಬದಲಾಗುವುದಿಲ್ಲ. ಹಾಗೆಯೇ, ಹೆಸರಿನ ಬದಲಾವಣೆ ದೇಶವನ್ನು ರೂಪಿಸುವುದಿಲ್ಲ. ದೇಶವನ್ನು ರೂಪಿಸುವುದು ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸೇವೆ.

ಆದರೆ, ಅಧಿಕಾರದ ಒಂಭತ್ತು ವರ್ಷಗಳುದ್ದಕ್ಕೂ ಸ್ಥಳಗಳ, ಸಂಸ್ಥೆಗಳ, ಯೋಜನೆಗಳ ಹೆಸರು ಬದಲಿಸುವ ಕೆಲಸವನ್ನೇ ಮಾಡಿಕೊಂಡು ಬಂದಿರುವ ಮೋದಿ ಸರಕಾರ ಈಗ ದೇಶದ ಹೆಸರನ್ನೇ ಬದಲಿಸಲು ಹೊರಟಂತಿದೆ. ದೇಶವನ್ನು ರೂಪಿಸುವ ಹೊಣೆಗಾರಿಕೆಯನ್ನು ಯಾವತ್ತೋ ಮರೆತಂತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News