ಹಂಪಿ ಕನ್ನಡ ವಿವಿಯ 1.05 ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯನ್ನು ಪಾವತಿ ಮಾಡಿದ ಸರಕಾರ
ವಿಜಯನಗರ(ಹೊಸಪೇಟೆ): ‘ವಿದ್ಯುತ್ ಬಿಲ್ ಪಾವತಿಸಲು ಪರದಾಡುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ?’ ಎಂಬ ತಲೆಬರಹದಡಿಯಲ್ಲಿ ಮಾ.2ರಂದು ವಾರ್ತಾಭಾರತಿ ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತುಕೊಂಡ ಉನ್ನತ ಶಿಕ್ಷಣ ಇಲಾಖೆಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಿಲ್ ಬಾಕಿ ಪಾವತಿಸಲು 1.05 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಆದೇಶಿಸಿದೆ.
2023-24ನೆ ಸಾಲಿಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ 2019ರ ಮಾರ್ಚ್ ನಿಂದ 2024ರ ಫೆಬ್ರವರಿ ವರೆಗಿನ ವಿದ್ಯುತ್ ಬಿಲ್ ಬಾಕಿ ಪಾವತಿಸಲು ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದ್ದು, ಈ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ನಿಯಮಾನುಸಾರ ವೆಚ್ಚ ಮಾಡಬೇಕು ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.
ಕೃತಜ್ಞತೆ ಸಲ್ಲಿಸಿದ ಕುಲಪತಿ: ಹಂಪಿ ಕನ್ನಡ ವಿವಿಯ ಕಷ್ಟವನ್ನು ವಾರ್ತಾಭಾರತಿ ಪತ್ರಿಕೆ ಪ್ರಕಟಿಸಿದ್ದರಿಂದ ನಮ್ಮ ಸಮಸ್ಯೆಯನ್ನು ಅರಿತುಕೊಂಡ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಖರ್ ಅವರು ತಕ್ಷಣ ಮಾಹಿತಿ ತರಿಸಿಕೊಂಡು ಕ್ರಮ ಕೈಗೊಂಡ ಪರಿಣಾಮ ಸರಕಾರದಿಂದ ನಮಗೆ ವಿದ್ಯುತ್ ಬಿಲ್ಲಿನ ಹಣ ಬಿಡುಗಡೆಯಾಗಿದೆ ಎಂದು ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ