‌ರೈತರಿಗೆ ಬೀಜ, ಗೊಬ್ಬರದ ಕೊರತೆ ಆದರೆ ಅಧಿಕಾರಿಗಳೇ ಹೊಣೆ : ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Update: 2024-06-21 09:26 GMT

ವಿಜಯನಗರ : ರೈತರಿಗೆ ಬೀಜ ಗೊಬ್ಬರದ ಕೊರತೆ ಆಗಬಾರದು. ಆದರೆ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ ಆಗಿರುವ ಮಳೆ ಮತ್ತು ಕೃಷಿ ಚಟುವಟಿಕೆಗಳ ಮಾಹಿತಿ ಪಡೆದರು. ಸಮಾಧಾನಕರವಾಗಿ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಇತ್ಯಾದಿ ಅಗತ್ಯಗಳ ಸಂಗ್ರಹದ ಪ್ರಮಾಣ ಎಷ್ಟಿದೆ ಎನ್ನುವ ಕುರಿತಂತೆ ಒಂದೊಂದಾಗಿ ಮಾಹಿತಿ ಪಡೆದರು. ಒಮ್ಮೆ ಕೊಟ್ಟ ಬೀಜ ಮೊಳಕೆಯೊಡೆಯದಿದ್ದರೆ ಎರಡನೇ ಸುತ್ತು ಬೀಜಗಳನ್ನು ಕಡ್ಡಾಯವಾಗಿ ರೈತರಿಗೆ ವಿತರಿಸಬೇಕು. ರೈತರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದು ಅಧಿಕಾರಿಗಳಿಗೆ ಸಿಎಂ ಎಚ್ಚರಿಸಿದರು.

ಬರ ಪರಿಹಾರ 130 ಕೋಟಿ ವಿತರಣೆಯಾಗಿದೆ :

ರಾಜ್ಯ ಸರ್ಕಾರದಿಂದ ನೀಡಿದ ಬರ ಪರಿಹಾರದ ಮೊತ್ತ 130 ಕೋಟಿ ರೂ. ಸಂಪೂರ್ಣವಾಗಿ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಯಾವ ಅರ್ಹ ರೈತರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಅಧಿಕಾರಿಗಳು ದಾಖಲೆ ಮುಂದಿಟ್ಟು ವಿವರಿಸಿದರು.

ಬೆಳೆ ಸಮೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಿ ಒಬ್ಬರಿಗೂ ಅನ್ಯಾಯ ಆಗದಂತೆ ಪ್ರತಿಯೊಬ್ಬ ರೈತರಿಗೂ ಡಿಬಿಟಿ ಮೂಲಕ ಒಬ್ಬರಿಗೂ ಬಾಕಿ ಉಳಿಯಂತೆ ಅವರ ಖಾತೆಗಳಿಗೆ ಹಣ ಜಮೆ ಆಗಿರುವುದನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಬೆಳೆ ವಿಮೆ ಸಮರ್ಪಕವಾಗಿ ದೊರಕಿಸಲಾಗಿದೆ :

ಅತಿ ಹೆಚ್ಚುಮಳೆಯಿಂದಾದ ಹಾನಿ, ನೋಂದಣಿ ಮಾಡಿಕೊಂಡ ಎಲ್ಲಾ ರೈತರಿಗೂ, ಬೆಳೆ ಕಟಾವು ಹೊತ್ತಲ್ಲೂ ಅಗತ್ಯಕ್ಕೆ ತಕ್ಕಂತೆ ಬೆಳೆ ವಿಮೆ ವಿತರಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿಳಂಬ- ತರಾಟೆ ತೆಗೆದುಕೊಂಡ ಸಿಎಂ:

2023-24 ರಲ್ಲಿ ಒಟ್ಟು 34 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಾಲಿನಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ, ಇವರಲ್ಲಿ ಪ್ರತಿಯೊಬ್ಬ ರೈತರ ಕುಟುಂಬಕ್ಕೆ ಪರಿಹಾರ ದೊರಕಿದೆಯೇ ಎಂದು ಪ್ರಶ್ನಿಸಿದರು. ಉಳಿದೆಲ್ಲರಿಗೂ ಸರಿಯಾದ ಸಮಯಕ್ಕೆ ಆತ್ಮಹತ್ಯೆ ಪರಿಹಾರದ 5 ಲಕ್ಷ ರೂ. ಮೊತ್ತ ಜಮೆ ಆಗಿದೆ. ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ?. ಎಫ್ಎಸ್ಎಲ್ ವರದಿ 29 ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡವಾಗಿದ್ದಕ್ಕೆ ಮುಖ್ಯಮಂತ್ರಿಗಳು ಗರಂ ಆಗಿ ತರಾಟೆಗೆ ತೆಗೆದುಕೊಂಡರು. 

ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಗವಿಯಪ್ಪ, ಕಂಪ್ಲಿ ಗಣೇಶ್, ಲತಾ ಎಂ.ಪಿ.ಪ್ರಕಾಶ್, ಶ್ರೀನಿವಾಸ್ ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News