ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಕೋಟ
ಮಲ್ಪೆ : ಕರಾವಳಿ ಜಿಲ್ಲೆಗಳ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಮಸ್ತ ಮೀನುಗಾರರ ಬೇಡಿಕೆ ಸಮಸ್ಯೆಗಳ ಬಗ್ಗೆ ಧ್ವನಿಯಾಗಿ ಕೇಂದ್ರ ಸರಕಾರದ ಮೂಲಕ ಪರಿಹಾರ ಕಲ್ಪಿಸಲು ಪ್ರಾಮಾ ಣಿಕ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಲ್ಪೆಮೀನುಗಾರ ಸಂಘದ ಸಭಾಭವನದಲ್ಲಿ ಮಲ್ಪೆಯ ಮೀನುಗಾರ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಅವರು ಮಾತನಾಡುತಿದ್ದರು. ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಸುಮಾರು 22 ಸಾವಿರ ಮಹಿಳಾ ಮೀನುಗಾರರ ಸಾಲ ಮನ್ನಾ, ಹಲವು ದಶಕಗಳ ಬೇಡಿಕೆಯಾಗಿದ್ದ ಹೆಜಮಾಡಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ 180 ಕೋಟಿ ರೂ. ಮಂಜೂರು ಹಾಗೂ ವಿವಿಧ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಮೀನುಗಾರ ಪ್ರಕೋಷ್ಟ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರವಿರಾಜ್ ಸುವರ್ಣ ಮಾತನಾಡಿದರು. ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.