ತುಂಗಭದ್ರಾ ಅಣೆಕಟ್ಟಿನ ಗೇಟ್ ಚೈನ್ ಲಿಂಕ್ ಕೊಚ್ಚಿ ಹೋದ ಪ್ರಕರಣ: ಪರಿಶೀಲನೆಗೆ ತಜ್ಞರ ತಂಡ
ಹೊಸಪೇಟೆ, ಆ.11: ತುಂಗಭದ್ರಾ ಅಣೆಕಟ್ಟಿನ ಗೇಟ್ ನಂ. 19 ರ ಚೈನ್ ಲಿಂಕ್ ಶನಿವಾರ ರಾತ್ರಿ 11:10ರ ಸುಮಾರಿಗೆಮುರಿದಿದ್ದು, ನದಿಗೆ 60 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.
ಗೇಟ್ ಚೈನ್ ಲಿಂಕ್ ಕೊಚ್ಚಿ ಹೋಗಿರುವುದರಿಂದ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಸಾರ್ವಜನಿಕರು ಮತ್ತು ನದಿ ಪಾತ್ರದ ಜನರು ಆತಂಕ ಪಡಬೇಕಾಗಿಲ್ಲ ತಜ್ಞರ ಸೂಚನೆಯಂತೆ ಹೆಚ್ಚಿನ ನೀರು ಬಿಡಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
15 ದಿನಗಳ ಹಿಂದೆ ಸುಮಾರು 1,80,000ಕ್ಕೂ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿತ್ತು. ಈ ವೇಳೆ ನದಿ ಪಾತ್ರದ ಜನರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ ಹಾಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಮುರಿದು ಬಿದ್ದಿರುವ ಗೇಟ್ ದುರಸ್ತಿ ಮಾಡುವ ಸಲುವಾಗಿ ತಜ್ಞರು ಪರಿಶೀಲಿಸಿ ಕೂಡಲೇ ಕ್ರಮ ವಹಿಸಲು ತಿಳಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್.ದಿವಾಕರ್ ತಿಳಿಸಿದ್ದಾರೆ.
ಈ ನಡುವೆ ಘಟನೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಜಿಲ್ಲಾಧಿಕಾರಿ ದಿವಾಕರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದು ಮುಂದಿನ ಕ್ರಮಗಳ ಬಗ್ಗೆ ಸೂಚನೆ ನೀಡುತ್ತಿದ್ದಾರೆ.