ವಿಜಯನಗರ: ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಲೋಕಾಯುಕ್ತ ಬಲೆಗೆ

Update: 2024-06-27 03:23 GMT

ಜಗದೀಶ್ ವಿ.ಎಸ್ | ಮಲ್ಲಿಕಾರ್ಜುನ

ಹೊಸಪೇಟೆ: ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಜಗದೀಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ಘಟಕದ ಕಂಡಕ್ಟರ್ ಕಮ್ ಡ್ರೈವರ್ ರವರ ಮೇಲಿದ್ದ ಪ್ರಕರಣ ಮುಕ್ತಾಯ ಮಾಡಲು ಬೇಡಿಕೆ ಇಟ್ಟಿದ್ದ 20,000/- ರೂ ಲಂಚದ ಹಣ ಸ್ವೀಕರಿಸುವಾಗ ಜಗದೀಶ್ ವಿ.ಎಸ್ ಮತ್ತು ಅವರ ಜೀಪ್ ಚಾಲಕ ಮಲ್ಲಿಕಾರ್ಜುನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜೂನ್ 26 ರಂದು ಕೆಎಸ್ಸಾರ್ಟಿಸಿ ಹರಪನಹಳ್ಳಿ ಘಟಕದ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಮಹಾಬಲೇಶ್ವರ ಭಾಗೃತ್ ರವರ ಮೇಲೆ 2021 ರಲ್ಲಿ ದಾಖಲಾದ ಪ್ರಕರಣದ ಮುಕ್ತಾಯಕ್ಕಾಗಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ವಿ.ಎಸ್. ರವರು ಜೂನ್ ತಿಂಗಳಲ್ಲಿ ವಿಚಾರಣೆ ನಡೆಸಿ ಅವರ ಮೇಲಿನ ದೋಷಾರೋಪವನ್ನು ಕಡಿಮೆ ಮಾಡಿ ಮುಕ್ತಾಯ ಮಾಡಲು 25000/- ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲಂಚದ ಹಣವನ್ನು ತಮ್ಮ ಜೀಪ್ ಚಾಲಕ ಮಲ್ಲಿಕಾರ್ಜುನ ರವರ ಬಳಿ ಕೊಡುವಂತೆ ಸೂಚಿಸಿದ್ದು ಈ ಸಂಬಂಧ ಮಹಾಬಲೇಶ್ವರ ರವರು ರೂ 5000/- ರೂಗಳನ್ನು ನೀಡಿದ್ದು ಬಾಕಿ ಲಂಚದ ಹಣವನ್ನು ಸ್ವಲ್ಪ ದಿನದಲ್ಲಿ ಕೊಡುತ್ತೇನೆ ಎಂದು ನೇರವಾಗಿ ಹೋಗಿ ಹೊಸಪೇಟೆ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಿಳಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿದ ಲೋಕಾಯುಕ್ತ ಠಾಣಾ ಪೊಲೀಸರು ದಾಳಿ ಮಾಡಿ, ಲಂಚದ ಹಣ ಸ್ವೀಕರಿಸುತ್ತಿದ್ದ ಜೀಪ್ ಚಾಲಕ ಮಲ್ಲಿಕಾರ್ಜುನ ಮತ್ತು ನಿಯಂತ್ರಣಾಧಿಕಾರಿ ಜಗದೀಶ್ ವಿ.ಎಸ್. ಅವರನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಠಾಣಾ ಪೊಲೀಸ್ ಉಪಾಧೀಕ್ಷಕರಾದ ಶೀಲವಂತ ಹೊಸಮನಿ, ಪೊಲೀಸ್ ನಿರೀಕ್ಷಕರಾದ ರಾಜೇಶ ಎಸ್. ಲಮಾಣಿ, ಸುರೇಶ ಬಾಬು ಆರ್.ಬಿ, ಸಿಬ್ಬಂದಿಯವರಾದ ಸುಭಾಷ, ಸುರೇಶ, ಶ್ರೀನಿವಾಸ, ರೇಣುಕಪ್ಪ, ಕುಮಾರ್ ನಾಯ್ಕ್, ಚನ್ನಬಸಪ್ಪ, ಮಾರುತಿ ಮತ್ತು ಕೃಷ್ಣ ಅವರು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News