ಡಿ.ಕೆ.ಶಿವಕುಮಾರ್-ವಿಜಯೇಂದ್ರ ಇಬ್ಬರದ್ದು ಹೊಂದಾಣಿಕೆ ಇದೆ : ಯತ್ನಾಳ್

Update: 2024-08-03 13:55 GMT

ವಿಜಯಪುರ : ‘ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದರೆ ಅದಕ್ಕೆ ಮಹತ್ವ ಇರುವುದಿಲ್ಲ. ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ಕಾರಣವೇ ವಿಜಯೇಂದ್ರ. ಡಿ.ಕೆ. ಶಿವಕುಮಾರ್ ಹಾಗೂ ವಿಜಯೇಂದ್ರ ಇಬ್ಬರದ್ದು ಹೊಂದಾಣಿಕೆ ಇದೆ’ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರರ ಕಡತಗಳು ಬಂದರೆ ಡಿಕೆಶಿ ತಕ್ಷಣವೇ ಸಹಿ ಮಾಡುತ್ತಾರೆ. ಇಬ್ಬರೂ ಭ್ರಷ್ಟರಿದ್ದಾರೆ. ಒಳಗೆ ಏನೋ ಹೊಂದಾಣಿಕೆ ಇದೆ. ಹೀಗಾಗಿಯೇ ಬೇಗನೇ ಸಹಿ ಹಾಕುತ್ತಿದ್ದಾರೆ. ಮೋದಿ ಅವರು ಸಹಿತ ಈ ವಿಚಾರವಾಗಿ ಗಮನ ಹರಿಸಲಿ. ಮೊದಲು ವಿಜಯೇಂದ್ರ ಭ್ರಷ್ಟಾಚಾರವನ್ನು ಖುದ್ದು ಬಿಜೆಪಿಯೇ ಹೊರಹಾಕಲಿ ಎಂದು ಸಲಹೆ ನೀಡಿದರು.

‘ಭ್ರಷ್ಟ ಕುಟುಂಬವನ್ನು ನಾನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಯಡಿಯೂರಪ್ಪನವರೇ ನಿಮಗೆ ನೈತಿಕತೆ ಇದ್ದರೆ ಯಾವುದೇ ವೇದಿಕೆ ಹತ್ತಬಾರದು. ನಿಮ್ಮ ಹಗರಣ ಎಷ್ಟಿದೆ ಮೊದಲು ನೋಡಿಕೊಳ್ಳಿ’ ಎಂದು ಟೀಕಿಸಿದ ಅವರು, ‘ಇದೇ ಸಿದ್ದರಾಮಯ್ಯ ಶಿಕಾರಿಪುರ ಕ್ಷೇತ್ರದಲ್ಲಿ ಹಾಲುಮತ ಸಮಾಜದ ವೀಕ್ ಕ್ಯಾಡಿಡೆಂಟ್ ಹಾಕಿ ವಿಜಯೇಂದ್ರ ಗೆಲ್ಲಿಸಲು ಸಹಾಯ ಮಾಡಿದರು ಎಂದು ಟೀಕಿಸಿದರು.

ಈ ಹಿಂದೆ, ಯಡಿಯೂರಪ್ಪ ಸರಕಾರ ಅಧಿಕಾರದಲ್ಲಿದ್ದಾಗ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ.ಭ್ರಷ್ಟಾಚಾರವಾಗಿದೆ. ಸಿದ್ದರಾಮಯ್ಯನವರಿಗೆ ತಾಕತ್ತು, ಧಮ್ ಇದ್ದರೆ ಕೋವಿಡ್‍ನಲ್ಲಿ ನಡೆದ ಭ್ರಷ್ಟಾಚಾರದ ತನಿಖೆಗೆ ಆದೇಶಿಸಲಿ’ ಎಂದು ಸವಾಲು ಹಾಕಿದ ಅವರು, ವಾಲ್ಮೀಕಿ ಹಗರಣ ಮುಖ್ಯಮಂತ್ರೀಗಳೇ ಒಪ್ಪಿಕೊಂಡಿದ್ದಾರೆ. ಈ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷರು ಇದ್ದಾರೆ, ರಾಹುಲ್ ಗಾಂಧಿ ಇದರ ಹಿಂದೆ ಇದ್ದಾರೆ ಎಂದು ದೂರಿದರು.

‘ಮುಡಾ’ ವಿಚಾರಕ್ಕೆ ಹೋರಾಟ ಮಾಡುತ್ತಿರುವ ಯಡಿಯೂರಪ್ಪ ಸಹೋದರಿಯ ಮಕ್ಕಳಿಗೆ ಎಷ್ಟು ನಿವೇಶನಗಳಿವೆ ಎಂಬುದುನ್ನು ಖುದ್ದು ಯಡಿಯೂರಪ್ಪನವರೇ ದಾಖಲೆ ಬಿಡುಗಡೆ ಮಾಡಲಿ’ ಎಂದು ಯತ್ನಾಳ್, ಬಿಜೆಪಿ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News