ವಕ್ಫ್ ಆಸ್ತಿ ವಿವಾದ: ಬಿಜೆಪಿಯ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್
ವಿಜಯಪುರ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಅನವಶ್ಯಕ ವಿವಾದ ಸೃಷ್ಠಿಸುತ್ತಿರುವ ಬಿಜೆಪಿಗೆ ಸರಣಿ ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್, ಈ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ರೈತರಿಗೆ ನೀಡಿದ ನೋಟಿಸ್ ಮತ್ತಿತರ ಮಹತ್ವದ ದಾಖಲೆಗಳನ್ನು ಬಿಡುಗಡೆಗೊಳಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿದ ಮಾಜಿ ಶಾಸಕ ರಾಜು ಆಲಗೂರ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ವಕ್ಫ್ ಗೆ ಪಡೆದ ಆಸ್ತಿ ಸಂಖ್ಯೆ ಎಷ್ಟು? ಬಿಜೆಪಿ ಆಡಳಿತಾವಧಿಯಲ್ಲಿ ನೀಡಿದ ನೊಟೀಸ್ ಎಷ್ಟು? ಗೆಜೆಟ್ ನೊಟಿಫಿಕೇಶನ್ ಪ್ರಮಾಣ ಎಷ್ಟು? ನಡೆಸಿದ ಸಭೆ ಎಷ್ಟು? ಎಂಬ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿದ ಆ ಬಳಿಕವೇ ಬಿಜೆಪಿ ಸಮಿತಿ ಅಹವಾಲು ಸ್ವೀಕರಿಸಬೇಕು. ಇಲ್ಲವಾದರೆ ಇದೊಂದು ನಾಟಕ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಆಗ್ರಹಿಸಿದರು.
ವಕ್ಫ್ ಎಂಬ ಸಂಸ್ಥೆ ಸ್ವತಂತ್ರ ಸ್ಥಾನಮಾನ ಹೊಂದಿದೆ. ಅದರಲ್ಲಿ ಯಾವುದೇ ಹಸ್ತ ಕ್ಷೇಪ ಮಾಡಲು ಸಾಧ್ಯವಿಲ್ಲ. ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸದಾನಂದಗೌಡ ಸಿಎಂ ಆಗಿದ್ದಾಗ ರಾಜ್ಯದಲ್ಲಿ ವ್ಯಾಪಕವಾಗಿ ರೈತರ ಜಮೀನು ಮರಳಿ ಪಡೆದು ಮ್ಯುಟೇಶನ್ ಮಾಡಿ ವಕ್ಫ್ ಎಂದು ಸೇರ್ಪಡೆ ಮಾಡಿದ್ದಾರೆ. ಇದೊಂದು ಐತಿಹಾಸಿಕ ದಾಖಲೆಯೇ ಆಗಲಿದೆ. ಇಷ್ಟೊಂದು ಅನ್ಯಾಯ ಯಾವುದೇ ಸರ್ಕಾರ ಮಾಡಿಲ್ಲ. ಕೇವಲ ಬೆರಳೆಣಿಕೆ ಪ್ರಕರಣವನ್ನಿಟ್ಟುಕೊಂಡು ರಾಜ್ಯಾದ್ಯಂತ ಗುಲ್ಲು ಎಬ್ಬಿಸುವ ಬಿಜೆಪಿಗೆ ವಕ್ಫ್ ಗೆ ಸಂಬಂಧಿಸಿದಂತೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, 14/9/2022 ರಿಂದ ನೊಟಿಸ್ ಪಡೆದವರೆಲ್ಲ ಹಿಂದುಗಳೇ. ಬಿಜೆಪಿ ಅವಧಿಯಲ್ಲಿ ನೊಟೀಸ್ ಪಡೆದವರೆಲ್ಲರೂ ಹಿಂದುಗಳೇ. ಹಾಗಾದರೆ ಇವರ ಆಡಳಿತಾವಧಿಯಲ್ಲಿ ರೈತರ ಸಂಕಷ್ಟ ಉದ್ಭವಿಸಲಿಲ್ಲವೇ? ಎಂದು ಪ್ರಶ್ನಿಸಿದರು.
ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಬಿಜೆಪಿಗರಿಗೆ ವಕ್ಫ್ ಬಗ್ಗೆ ಪರಿಪೂರ್ಣ ಜ್ಞಾನವೇ ಇಲ್ಲ. ಇವರಿಗೆ ಸಂವಿಧಾನದ ಬಗ್ಗೆ, ಕಾಯ್ದೆಗಳ ಬಗ್ಗೆ ಗೌರವವೇ ಇಲ್ಲ. ಇದ್ದಿದ್ದರೆ ಸಂವಿಧಾನ ಬದ್ಧ ವಕ್ಫ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿರಲಿಲ್ಲ ಎಂದರು.
ಯಾವ ರೀತಿ ಮುಜರಾಯಿ ಇಲಾಖೆ ಅಡಿ ಜಮೀನುಗಳಿವೆಯೋ ಅದೇ ರೀತಿ ವಕ್ಫ್ ಗೂ ಜಮೀನುಗಳಿದ್ದವು. ಬಳಿಕ ಊಳುವವನೇ ಭೂಮಿಯ ಒಡೆಯ ಕಾಯ್ದೆ ಬಂದ ಬಳಿಕ ಬಹುತೇಕ ಜಮೀನು ಅವರವರ ಹೆಸರಿಗೆ ಆಗಿವೆ. ಬಹಳ ವರ್ಷಗಳಿಂದ ವಕ್ಫ್ ದಾಖಲೆ ಸರಿಪಡಿಸಿರಲಿಲ್ಲ. ಇದೀಗ ಆ ಪ್ರಕ್ರಿಯೆ ನಡೆದಿದೆ.
ಇದರಿಂದ ರೈತರಿಗೆ ಒಳ್ಳೆಯದೇ ಆಗಲಿದೆ. ಗೆಜೆಟ್ ನಲ್ಲಿ ನಿಮ್ಮ ಆಸ್ತಿಯಲ್ಲಿ ವಕ್ಫ್ ಎಂದಿದ್ದು ಕೂಡಲೇ ನಿಮ್ಮ ಬಳಿಯ ದಾಖಲೆ ತಂದು ಸರಿಪಡಿಸಿಕೊಳ್ಳಿ ಎಂದಿದ್ದಾರೆ. ಹೀಗಾಗಿ ಗೊಂದಲ ಬೇಡ ಎಂದರು.
ಮುಸ್ಲಿಂರಿಗಾಗಿ ವಕ್ಫ್ ಟ್ರಿಬ್ಯುನಲ್ ಮಾಡಿದ್ದಾರೆ ಎಂಬ ವದಂತಿ ಹರಡುತ್ತಿದ್ದಾರೆ. ದೇಶದಲ್ಲಿ ಬಹಳಷ್ಟು ಟ್ರಿಬ್ಯುನಲ್ ಮಾಡಿದ್ದಾರೆ. ಅದೇ ರೀತಿ ವಕ್ಫ್ ಗೂ ಮಾಡಿದ್ದು ಆದಷ್ಟು ಬೇಗ ಪ್ರಕರಣಗಳು ಇತ್ಯರ್ಥವಾಗಲಿ ಎಂಬುದಷ್ಟೇ ಅದರ ಉದ್ದೇಶ ಎಂದರು.
ನೊಟೀಸ್ ನೀಡುವುದು ನಿರಂತರ ಪ್ರಕ್ರಿಯೆ. ನೊಟೀಸ್ ಬಂದರೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಳಿ ಹೋಗಬೇಕೋ ಬಸನಗೌಡ ಪಾಟೀಲ ಯತ್ನಾಳ, ತೇಜಸ್ವಿ ಸೂರ್ಯ ಬಳಿ ಹೋಗಬೇಕೋ? ಅನ್ಯಾಯ ಆಗಿದ್ದರೆ ಹೋಗಲಿ ಆದರೆ ಇಲ್ಲಿ ಯಾವುದೇ ರೀತಿ ಅನ್ಯಾಯ ಆಗಿಲ್ಲ ಮತ್ತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರು ಸ್ಪಷ್ಟನೆ ನೀಡಿದರೂ ತಂಡ ರಚಿಸಿ ರೈತರನ್ನು ಭೇಟಿ ಮಾಡುವುದರ ಹಿಂದಿನ ಉದ್ದೇಶವೇನು? ಎಂದರು.
ಇಂಡಿಯ ಶಿವಪುರ ಕೆಡಿಯಲ್ಲಿ ಶಿವಲಿಂಗೇಶ್ವರ ದೇವಸ್ಥಾನ ಇದ್ದು ಭೂ ಸುಧಾರಣೆ ಕಾಯ್ದೆ ಪ್ರಕಾರ ಅಲ್ಲಿನ ರೈತರಿಗೆ ಜಮೀನು ಹೋಗಿದೆ. ಅದಕ್ಕಾಗಿ ನೊಟೀಸ್ ಹೋಗಿವೆ. ನ್ಯಾಯಾಲಯದಲ್ಲಿ ಪ್ರಕರಣ ನಡೆದಿದೆ. ಅಲ್ಲಿನ ರೈತರ ಬಳಿ ಹೋಗಿ ಸಮಸ್ಯೆ ಆಲಿಸಬಾರದೇಕೆ? ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದು- ಮುಸ್ಲಿಂ ವಿವಾದ ಸೃಷ್ಠಿಸುವುದನ್ನು ನಿಲ್ಲಿಸಿ ಎಂದರು.
ಈಗಾಗಲೇ ರಾಜಕೀಯ ಲಾಭಕ್ಕಾಗಿ ಬಿಜೆಪಿಯಲ್ಲಿಯೇ ಒಳಜಗಳ ಆರಂಭಗೊಂಡಿದೆ. ಯತ್ನಾಳ ಹಾಗೂ ವಿಜಯೇಂದ್ರ ಬಣದ ನಡುವೆ ತಿಕ್ಕಾಟ ನಡೆದಿದೆ. ಇದರಿಂದಲೇ ಜನ ತಿಳಿದುಕೊಳ್ಳಬೇಕೆಂದರು.
ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ರೈತರ ವಿಷಯ ದಲ್ಲಿ ಜಾತಿ ಧರ್ಮ ತಂದು ರಾಜಕೀಯ ಮಾಡಬೇಡಿ ಎಂದರು.
ಡಾ.ಗಂಗಾಧರ ಸಂಬಣ್ಣಿ ಮತ್ತಿತರರಿದ್ದರು.