ಮೋದಿ ಆಡಳಿತದ ಅವಧಿಯಲ್ಲಿ ನಿತ್ಯವೂ ಸರಾಸರಿ 30 ರೈತರ ಆತ್ಮಹತ್ಯೆಗಳು

Update: 2023-12-22 04:57 GMT

‘‘ನಮ್ಮಲ್ಲಿ ಹಣವಿಲ್ಲ, ಆದರೆ ಲೇವಾದೇವಿಗಾರರು ಕಾಯಲು ತಯಾರಿಲ್ಲ. ನಾವು ಏನು ಮಾಡಬೇಕು? ಈರುಳ್ಳಿಯನ್ನು ಮಾರುಕಟ್ಟೆಗೆ ಒಯ್ಯಲು ನಮಗೆ ಸಾಧ್ಯವಾಗುತ್ತಿಲ್ಲ. ಮೋದಿ ಸಾಹೇಬ್ರೇ, ನೀವು ನಿಮ್ಮ ಬಗ್ಗೆ ಯೋಚಿಸುತ್ತಿದ್ದೀರಿ. ನೀವು ಉತ್ಪನ್ನಗಳಿಗೆ ಖಾತರಿಯ ಬೆಲೆ ಒದಗಿಸಬೇಕು. ಸಾಲಗಾರರು ಬೆದರಿಕೆ ಹಾಕುತ್ತಾರೆ. ಸಹಕಾರಿ ಸಂಘಗಳ ಅಧಿಕಾರಿಗಳು ನಿಂದಿಸುತ್ತಾರೆ. ನ್ಯಾಯಕ್ಕಾಗಿ ನಾವು ಯಾರ ಮೊರೆ ಹೋಗಬೇಕು? ನೀವು ತಟಸ್ಥವಾಗಿದ್ದೀರಿ. ಇಂದು ನಾನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಸಿಲುಕಿದ್ದೇನೆ.’’

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಶರಥ ಲಕ್ಷ್ಮಣ್ ಕೇದಾರಿ ಹೇಳಿದ್ದ ಮಾತುಗಳಿವು. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ ನರೇಂದ್ರ ಮೋದಿ ಆಡಳಿತದ ವರ್ಷಗಳಲ್ಲಿ (2014-2022) ಕೃಷಿ ವಲಯದಲ್ಲಿ ಆತ್ಮಹತ್ಯೆಗೆ ಶರಣಾದ 1,00,474 ಮಂದಿಯಲ್ಲಿ ಅವರೂ ಒಬ್ಬರು. ಈ ಒಂಭತ್ತು ವರ್ಷಗಳಲ್ಲಿ ದಿನಕ್ಕೆ ಸುಮಾರು 30 ಆತ್ಮಹತ್ಯೆಗಳು ಸಂಭವಿಸಿವೆ. ಆದರೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮೋದಿಯವರ ಆಡಳಿತದಲ್ಲಿ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ರೈತರ ಆತ್ಮಹತ್ಯೆಗಳ ಬಗ್ಗೆ ಪ್ರತಿಪಕ್ಷಗಳು ಒಂದೇ ಒಂದು ಚರ್ಚೆ ನಡೆಸಿವೆಯಾ? ಅದರರ್ಥ, ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ’’ ಎಂಬುದು ಅವರ ವಿಚಿತ್ರ ಹೇಳಿಕೆ.

ರೈತನ ಸಂಕಷ್ಟ ಸ್ಥಿತಿ ರಾಷ್ಟ್ರದ ನೈತಿಕ ನೆಲೆಯ ಮೇಲೆ ಪ್ರಭಾವ ಬೀರುವ ಭಾವನಾತ್ಮಕ ವಿಷಯಗಳಲ್ಲಿ ಒಂದಾಗಿದೆ. ಅನ್ನದಾತರ ಕುತ್ತಿಗೆಯ ಸುತ್ತಲಿನ ಕುಣಿಕೆಯು ಸಾಮಾನ್ಯವಾಗಿ ಹೃದಯ ಹಿಂಡುವಂಥ ವಿಚಾರವಾಗಿದೆ. ದುಃಖಕರ ಸಂಗತಿಯೆಂದರೆ ಪ್ರಸಕ್ತ ಎನ್‌ಸಿಆರ್‌ಬಿ ವರದಿ ಮಾಧ್ಯಮಗಳಲ್ಲಿ ಅಥವಾ ಪ್ರೈಮ್‌ಟೈಮ್ ಚರ್ಚೆಗಳಲ್ಲಿ ಅಂತಹ ಯಾವುದೇ ನೈತಿಕ ಆಕ್ರೋಶವನ್ನು ಹುಟ್ಟುಹಾಕಿದಂತೆ ಕಾಣಿಸುತ್ತಿಲ್ಲ. ಮೋದಿ ಸರಕಾರದ ಎರಡನೇ ಅವಧಿಯಲ್ಲಿ, ಒಟ್ಟು ರೈತರ ಆತ್ಮಹತ್ಯೆಗಳು 10,281ರಿಂದ 11,290ಕ್ಕೆ ಏರಿವೆ. ಇನ್ನು ಕೃಷಿ ಕಾರ್ಮಿಕರ ಆತ್ಮಹತ್ಯೆಗಳ ಸಂಖ್ಯೆಯಲ್ಲಿನ ಏರಿಕೆಯಂತೂ ಇನ್ನೂ ಹೆಚ್ಚಾಗಿದೆ. ಅದು 4,324ರಿಂದ 6,083ಕ್ಕೆ ಅಂದರೆ ಶೇ.41ರಷ್ಟು ಜಾಸ್ತಿಯಾಗಿದೆ. ವಿದರ್ಭ ಮತ್ತು ಮರಾಠವಾಡದಂಥ ದುರದೃಷ್ಟದ ಪ್ರದೇಶಗಳಲ್ಲಿ ಮತ್ತೊಮ್ಮೆ ಅತ್ಯಂತ ಕೆಟ್ಟ ಪರಿಸ್ಥಿತಿ ತಲೆದೋರಿದೆ.

ಕುಸಿಯುತ್ತಿರುವ ಸಾರ್ವಜನಿಕ ಹೂಡಿಕೆಗಳು, ಪ್ರಮುಖ ಕೈಗಾರಿಕೆಗಳ ಖಾಸಗೀಕರಣ, ರಾಜ್ಯ ಸಬ್ಸಿಡಿಗಳ ಕುಸಿತ ಮತ್ತು ಔಪಚಾರಿಕ ಕೃಷಿ ಸಾಲದ ಕುಗ್ಗುವಿಕೆ ಇವೆಲ್ಲವೂ ಭಾರತದ ರೈತರಿಗೆ ಕಷ್ಟಕರ ಸನ್ನಿವೇಶವನ್ನು ತಂದಿಟ್ಟಿವೆ. ಮೊನ್ಸಾಂಟೊದಂತಹ ಕೃಷಿ ವ್ಯಾಪಾರ ದೈತ್ಯ ಕಂಪೆನಿಗಳ ಏಕಸ್ವಾಮ್ಯ, ದುಬಾರಿಯಾಗಿರುವ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಎಲ್ಲವೂ ರೈತರ ಕೈಗೆ ನಿಲುಕದ ಮಟ್ಟದಲ್ಲಿವೆ. ಉದಾರೀಕರಣದ ನಂತರದ ಮೂರು ದಶಕಗಳಲ್ಲಿ ಕೃಷಿ ವಲಯದಲ್ಲಿ 3,50,000 ಆತ್ಮಹತ್ಯೆಗಳು ಸಂಭವಿಸಿರುವುದು ಈ ಬಿಕ್ಕಟ್ಟು ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ. ಮೋದಿ ಸರಕಾರ ಮಂಡಿಸಿದ ಕೃಷಿ ಮಸೂದೆಗಳ ವಿರುದ್ಧ ರೈತರ ಐತಿಹಾಸಿಕ ಆಂದೋಲನ, ವಾಸ್ತವವಾಗಿ ಒಂದು ಹತಾಶ ಹೋರಾಟವಾಗಿದೆ. ರೈತರನ್ನು ಕಾರ್ಪೊರೇಟ್ ಸಂಸ್ಥೆಗಳ ಹಿಡಿತಕ್ಕೆ ಒಯ್ಯುವಂತಿದ್ದ ಈ ಕಾಯ್ದೆಗಳಿಂದ ಕಡೆಗೂ ಸರಕಾರ ಹಿಮ್ಮೆಟ್ಟುವಂತಾಗಲು ಸುಮಾರು 750 ಸಾವುಗಳು ಸಂಭವಿಸಬೇಕಾಯಿತು. ವರ್ಷಗಟ್ಟಲೆ ಹೋರಾಡಬೇಕಾಯಿತು.

2014ರ ಚುನಾವಣಾ ಪ್ರಚಾರದಲ್ಲಿ ಮೋದಿ, ‘‘ನಮ್ಮ ರೈತರನ್ನು ನೇಣಿನ ಕುಣಿಕೆಗೆ ತಳ್ಳಬಾರದು, ನಮ್ಮ ರೈತರನ್ನು ಸಾಲಗಾರರನ್ನಾಗಿ ಮಾಡಬಾರದು, ಸಾಹುಕಾರನ ಬಾಗಿಲು ಬಡಿಯುವ ಸ್ಥಿತಿ ಅವರಿಗೆ ಬರಕೂಡದು. ರೈತರಿಗೆ ಸಾಲ ನೀಡುವುದು ಸರಕಾರ ಮತ್ತು ಬ್ಯಾಂಕ್‌ಗಳ ಜವಾಬ್ದಾರಿ. ರೈತರ ಪರಿಸ್ಥಿತಿ ಸುಧಾರಿಸಿದರೆ ಅದರಿಂದ, ಅನೇಕ ಕೃಷಿ ಕಾರ್ಮಿಕರಿಗೆ ಕೆಲಸ ಸಿಗುತ್ತದೆ’’ ಎಂದೆಲ್ಲ ಹೇಳಿದ್ದರು. ಆದರೆ, ರೈತರಲ್ಲಿ ಅದರಲ್ಲೂ ವಿಶೇಷವಾಗಿ ಕೃಷಿ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳು ಕೃಷಿ ವಲಯದಲ್ಲಿನ ಕಟು ವಾಸ್ತವ ಏನೆಂಬುದನ್ನೇ ಹೇಳುತ್ತವೆ. ರೈತರನ್ನು ಸಾಲಗಾರರನ್ನಾಗಿ ಮಾಡಬಾರದು ಎಂದಿದ್ದ ಮೋದಿ ಸರಕಾರದ ಅವಧಿಯಲ್ಲೇ ಸಾಲಬಾಧೆಯಿಂದ ಹೈರಾಣಾಗಿರುವ ರೈತರ ಶೇಕಡಾವಾರು ಪ್ರಮಾಣ ಹೆಚ್ಚಿದೆ. 2013ರಲ್ಲಿ ಶೇ.52 ಇದ್ದದ್ದು 2019ರ ವೇಳೆಗೆ ಶೇ.50.2ಕ್ಕೆ ತಗ್ಗಿದೆ ಎಂಬುದು ಸರಕಾರ ಕೊಡುವ ಲೆಕ್ಕ. ಆದರೆ ಇದೇ ಅವಧಿಯಲ್ಲಿ ರೈತರ ಸಾಲದ ಪ್ರಮಾಣ 9.02 ಕೋಟಿಯಿಂದ 9.30 ಕೋಟಿಗೆ ಏರಿರುವುದನ್ನು ನೋಡಬಹುದು. ಮಾತ್ರವಲ್ಲ, ಬಾಕಿ ಸಾಲದ ಸರಾಸರಿ ಮೊತ್ತವು 2013ಕ್ಕಿಂತ ಸುಮಾರು 1.6 ಪಟ್ಟು ಏರಿಕೆ ಕಂಡಿದೆ.

ದಶರಥ ಕೇದಾರಿಯಂತಹವರ ಡೆತ್ ನೋಟ್‌ಗಳು ಅಂತಹ ಆತ್ಮಹತ್ಯೆಗಳಿಗೆ ಈ ದೇಶದ ರಾಜಕಾರಣ ಎಷ್ಟರ ಮಟ್ಟಿಗೆ ಕಾರಣ ಎಂಬುದನ್ನೇ ಸ್ಪಷ್ಟವಾಗಿ ಹೇಳುತ್ತವೆ. ರೈತರ ಆತ್ಮಹತ್ಯೆಗಳು ಕೇವಲ ಬದುಕನ್ನು ಕೊನೆಗೊಳಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಏನನ್ನೋ ಮಾಡಲು ಉದ್ದೇಶಿಸುತ್ತವೆ. ಅವು ಹತಾಶೆ ಮತ್ತು ಪ್ರತಿಭಟನೆಯ ಸಂದೇಶವನ್ನು ಮುಟ್ಟಿಸುತ್ತವೆ ಮತ್ತು ಆ ಮೂಲಕ ರಾಜಕೀಯ ಸಂದೇಶವನ್ನು ನೀಡುತ್ತವೆ ಎನ್ನುತ್ತಾರೆ ಪರಿಣಿತರು. 2000ದ ದಶಕದಲ್ಲಿ ಸಾಯಿನಾಥ್ ಅವರು ಕೀಟನಾಶಕಗಳ ಕಾರಣದ ಆತ್ಮಹತ್ಯೆಗಳ ಬಗ್ಗೆ ವಿವರಿಸಿರುವುದರಲ್ಲಿಯೂ ಒಂದು ಸಂದೇಶ ಇರುವ ಹಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ರೈತರನ್ನು ದುಬಾರಿ ಬೆಲೆಯ ಕ್ರಿಮಿನಾಶಕಗಳೇ ಹೆಚ್ಚಾಗಿ ಸಾಲಗಾರರನ್ನಾಗಿ ಮಾಡುತ್ತವೆ.

ಆದರೆ ನವ ಉದಾರವಾದಿ ಆಡಳಿತ ರೈತರ ಆತ್ಮಹತ್ಯೆಗಳ ಹೊಣೆ ಹೊರಲು ತಯಾರಿಲ್ಲ. ಅದು ಕೃಷಿ ಸಮಸ್ಯೆಗಿಂತ ಬೇರೇನೋ ಕಾರಣಗಳು ರೈತರ ಆತ್ಮಹತ್ಯೆಗಳ ಹಿಂದೆ ಇವೆ ಬಿಂಬಿಸಲು ಯತ್ನಿಸುತ್ತದೆ. ಆರ್ಥಿಕ ಸಮಸ್ಯೆಗಿಂತ ಹೆಚ್ಚಾಗಿ ಮಾನಸಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆ ಎಂದು ಪ್ರತಿಪಾದಿಸುವ ಪ್ರಯತ್ನಗಳು ಆಗುತ್ತವೆ.

ಮೋದಿ ಆಡಳಿತದ ಅವಧಿಯಲ್ಲಿ ಹೇಗೆ ರೈತರ ಸ್ಥಿತಿ ಹದಗೆಡುತ್ತ ಸಾಗಿದೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ. ಒಟ್ಟಾರೆ ಬಜೆಟ್ ವೆಚ್ಚಕ್ಕೆ ಸಂಬಂಧಿಸಿದಂತೆ ಕೃಷಿಯ ಮೇಲಿನ ಸಾರ್ವಜನಿಕ ವೆಚ್ಚ ಮೋದಿ ಆಡಳಿತದ ಎರಡನೇ ಅವಧಿಯ ವರ್ಷಗಳಲ್ಲಿ ಹಂತ ಹಂತವಾಗಿ ಕುಸಿದಿದೆ ಮತ್ತು ರೈತರ ಕಲ್ಯಾಣಕ್ಕಾಗಿ ಹಂಚಿಕೆಯಾದ ಪಾಲು ಕೂಡ ಹೀಗೇ ಆಗಿದೆ. 2014-15 ಮತ್ತು 2021-22ರ ನಡುವಿನ ನೈಜ ವೇತನದ ಬೆಳವಣಿಗೆ ದರವನ್ನು ನೋಡುವ ಮೂಲಕ ಬಿಕ್ಕಟ್ಟನ್ನು ಅರಿತುಕೊಳ್ಳಬಹುದು. ಇದು ಕೃಷಿ ಕಾರ್ಮಿಕರನ್ನು ಒಳಗೊಂಡಂತೆ ಮಂಡಳಿಯಾದ್ಯಂತ ವರ್ಷಕ್ಕೆ ಶೇ.1ಕ್ಕಿಂತ ಕಡಿಮೆಯಾಗಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಜೀವನಾಡಿಯಾಗಿ ಕಾರ್ಯನಿರ್ವಹಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗಾಗಿನ ಹಂಚಿಕೆ ಕೂಡ ವರ್ಷಗಳಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದು 2014-15ರಲ್ಲಿ ಒಟ್ಟಾರೆ ಬಜೆಟ್‌ನ ಶೇ.1.85 ಇತ್ತು. ಆದರೆ 2023-24ರಲ್ಲಿ ಕೇವಲ ಶೇ.1.33ಕ್ಕೆ ಕುಸಿದಿದೆ. ಇದು ಕನಿಷ್ಠ ಪ್ರಮಾಣವಾಗಿದೆ. ಪ್ರಸಕ್ತ ರೂ. 60,000 ಕೋಟಿಯ ಹಂಚಿಕೆಯು ಹಿಂದಿನ ವರ್ಷಕ್ಕಿಂತ ಗಣನೀಯ ಶೇ.33 ಇಳಿಕೆಯನ್ನು ಸೂಚಿಸುತ್ತದೆ ಮತ್ತು ಇದು ಒಟ್ಟು ಜಿಡಿಪಿಯ ಶೇ.0.198 ಮಾತ್ರ. ಆಧಾರ್-ಆಧಾರಿತ ಪಾವತಿ ವ್ಯವಸ್ಥೆಗಳನ್ನು ಒಳಗೊಂಡಂತೆ ಹೊರಗಿಡುವ ಕ್ರಮಗಳು ಶೇ.57 ಕಾರ್ಮಿಕರ ಮೇಲೆ ಪರಿಣಾಮ ಬೀರಿವೆ ಮತ್ತು 100 ದಿನಗಳ ಉದ್ಯೋಗವನ್ನು ಒದಗಿಸುವ ಯೋಜನೆಯ ಗುರಿಯ ಹೊರತಾಗಿಯೂ, ಕೇವಲ ಶೇ.3ರಷ್ಟು ಮಂದಿಗೆ ಮಾತ್ರ ಕೆಲಸ ಸಿಗುತ್ತಿದೆ. ಈ ಸ್ಥಿತಿ ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಕಳವಳವನ್ನು ಮೂಡಿಸಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಮತ್ತು ಬೆಲೆ ಬೆಂಬಲ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಕೆಲವು ನಿರ್ಣಾಯಕ ಕೃಷಿ ಯೋಜನೆಗಳಲ್ಲಿನ ವಾಸ್ತವ ಏನು ಎಂಬುದನ್ನೂ ಪರಿಶೀಲಿಸಬೇಕಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಾಗಿ ಹಂಚಿಕೆಯು ಸತತವಾಗಿ ಹೆಚ್ಚುತ್ತಿದೆ. 2022-2023ರ ಇದು ಬಜೆಟ್ ಅಂದಾಜಿನಲ್ಲಿ 15,500 ಕೋಟಿ ರೂ.ಗಳಿಗೆ ಏರಿದೆ. 2023ರ ನವೆಂಬರ್ 30ರ ಅಂಕಿಅಂಶದ ಪ್ರಕಾರ, ರೈತರ ಅರ್ಜಿಗಳಲ್ಲಿ ಗಣನೀಯ ಏರಿಕೆಯಾಗಿದೆ. ಆದರೂ, ಯೋಜನೆಯ ಪರಿಣಾಮ ಪ್ರಶ್ನಾರ್ಹವಾಗಿದೆ. ಕಡಿಮೆ ಸಂಖ್ಯೆಯ ಪಾವತಿಯಾಗಿರುವುದು ಬಹಿರಂಗವಾಗಿದೆ. 2022-23ರಲ್ಲಿ ಪಾವತಿಯಾಗಿರುವುದು ಕೇವಲ 7.8 ಲಕ್ಷ ರೈತರಿಗೆ ಕೇವಲ 3,878 ಕೋಟಿ ರೂ. ಇದು ಹೆಚ್ಚಿನ ಅರ್ಜಿದಾರರಿಗೆ ಅರ್ಥಪೂರ್ಣ ಬೆಂಬಲವನ್ನು ಒದಗಿಸುವ ಕಾರ್ಯಕ್ರಮದ ಸಾಮರ್ಥ್ಯದ ಬಗ್ಗೆ ಆತಂಕವನ್ನು ಉಂಟುಮಾಡುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು 2022-2023ರ ಬಜೆಟ್ ಅಂದಾಜಿನಲ್ಲಿ 68,000 ಕೋಟಿ ರೂ.ಗೆ ಗಣನೀಯ ಏರಿಕೆ ಕಂಡಿದ್ದರೂ, ಯೋಜನೆಯು ಪ್ರಾಥಮಿಕವಾಗಿ ಭೂಮಾಲಕ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಭೂರಹಿತ ಕೃಷಿ ಕಾರ್ಮಿಕರ ಅಗತ್ಯಗಳನ್ನು ಕಡೆಗಣಿಸುತ್ತದೆ. 2019ರಿಂದ ಭೂರಹಿತ ಕೃಷಿ ಕಾರ್ಮಿಕರ ಸಾವಿನ ಸಂಖ್ಯೆ ಹೆಚ್ಚಿರುವುದು ಎನ್‌ಸಿಆರ್‌ಬಿ ವರದಿಯಲ್ಲಿ ಸ್ಪಷ್ಟವಿದೆ.

ಅದೇ ರೀತಿ, 2022-2023ರಲ್ಲಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಮತ್ತು ಬೆಲೆ ಬೆಂಬಲ ಯೋಜನೆಗಾಗಿ 1,500 ಕೋಟಿ ರೂ.ಗಳ ಕಡಿತದ ಬಜೆಟ್ ಅಂದಾಜು, ಮಾರುಕಟ್ಟೆ ಬೆಲೆಯ ಅಸಮಾನತೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿಲ್ಲವೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ವರ್ಷದ ಆರಂಭದಲ್ಲಿ, ಜೂನ್‌ನಲ್ಲಿ, ಸರಕಾರವು ಭತ್ತ, ಬೇಳೆಕಾಳುಗಳ, ಕಡಲೆಕಾಯಿ ಮತ್ತು ಸೋಯಾಬೀನ್ ಮತ್ತು ಹತ್ತಿ ಸೇರಿದಂತೆ 17 ‘ಖಾರಿಫ್’ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿತು. ಆದರೂ, ವಿವಿಧ ರೈತ ಗುಂಪುಗಳು ಹೇಳಿರುವ ಪ್ರಕಾರ, ಘೋಷಿತ ಎಂಎಸ್‌ಪಿಯು ಸಾಕಷ್ಟಿಲ್ಲ. ಏರುತ್ತಿರುವ ಹಣದುಬ್ಬರಕ್ಕೆ ಸೂಚ್ಯಂಕವಾಗಿ ಹೇಳುವುದಾದರೆ, ಸಾಲಬಾಧೆಯಿಂದ ಸಣ್ಣ ರೈತರನ್ನು ರಕ್ಷಿಸುವಲ್ಲಿ ಎಂಎಸ್‌ಪಿ ಸ್ಪಷ್ಟವಾಗಿ ವಿಫಲವಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳೊಂದಿಗೆ ಎಂಎಸ್‌ಪಿಯನ್ನು ಹೊಂದಿಸುವ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ 2014ರ ಚುನಾವಣಾ ಭರವಸೆಯನ್ನು ಸರಕಾರ ಬಹುಶಃ ಮರೆತೇ ಬಿಟ್ಟಿದೆ.

ಬರೀ ಮಾತುಗಳು, ವಿಫಲ ಯೋಜನೆಗಳು ಮತ್ತು ಅಸಮರ್ಪಕ ಹಂಚಿಕೆಗಳು ದೇಶದ ಅನ್ನದಾತರನ್ನು ಆಳವಾದ ಹತಾಶೆಗೆ ತಳ್ಳುತ್ತಿವೆ. ಈ ಸರಕಾರದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚುತ್ತಲೇ ಇರುವುದು ವ್ಯವಸ್ಥಿತ ನಿರ್ಲಕ್ಷ್ಯವನ್ನೇ ಸೂಚಿಸುತ್ತದೆ. ಉಲ್ಬಣಗೊಂಡಿರುವ ಹವಾಮಾನ ಬಿಕ್ಕಟ್ಟು, ತಾಪಮಾನ, ಕಡಿಮೆ ಇಳುವರಿ ಮತ್ತು ವಿನಾಶಕಾರಿ ಹವಾಮಾನ ವೈಪರೀತ್ಯಗಳಿಂದ ಬೆಳೆ ವೈಫಲ್ಯವನ್ನು ಎದುರಿಸುತ್ತಿರುವ ರೈತರ ಸಂಕಷ್ಟ ಮುಗಿಯುವುದೇ ಇಲ್ಲ. ಸಾಲದ ಹೊರೆ, ವಿವಿಧ ಬಗೆಯ ಅನಿಶ್ಚಿತತೆಗಳು, ಏರುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ನಿರಂತರ ಹೋರಾಟ ಕಡೆಗೆ ಅವರನ್ನು ಸಾವಿನ ಕುಣಿಕೆಗೆ ತಳ್ಳುತ್ತಿದೆ. ಇದನ್ನು ಸರಿಪಡಿಸಬೇಕಾದರೆ, ನೀತಿಗಳಲ್ಲಿಯೇ ಮೂಲಭೂತ ಬದಲಾವಣೆಗಳು ಬರಬೇಕಿದೆ.

(ಕೃಪೆ:thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಅನಿರ್ಬನ್ ಭಟ್ಟಾಚಾರ್ಯ, ಪ್ರಣಯ್ ರಾಜ್, ನ್ಯಾನ್ಸಿ ಪಾಠಕ್

contributor

Similar News