ಹಡಿಲು ಭೂಮಿಯಲ್ಲಿ ಭತ್ತ ಕೃಷಿ ಮಾಡಿದ ಉದ್ಯಮಿ

Update: 2023-11-13 09:17 GMT

ಕುಂದಾಪುರ, ನ.12: ಕುಂದಾಪುರ ಭಾಗದಲ್ಲಿ ಆಚರಿಸುವ ಹೊಸ್ತು ಹಬ್ಬದ ಸಂದರ್ಭ ಭತ್ತದ ಕದಿರು ಸಿಗದ ಕಾರಣಕ್ಕಾಗಿ ಉದ್ಯಮಿಯೊಬ್ಬರು, ಅದರಿಂದ ಪ್ರೇರಣೆಯಾಗಿ ಸುಮನಾರು ಎಂಟು ಎಕರೆ ಹಡಿಲು ಭೂಮಿಯನ್ನು ಗೇಣಿ ಪಡೆದು ಯಶಸ್ವಿಯಾಗಿ ಭತ್ತ ಕೃಷಿ ಮಾಡಿದ್ದಾರೆ.

ಕುಂದಾಪುರ ತಾಲೂಕಿನ ಸಿದ್ದಾಪುರ ಬಾಳೆಬೇರು ನಿವಾಸಿ ದೇವಿಪ್ರಸಾದ್ ಶೆಟ್ಟಿ ಉದ್ಯಮಿಯಾಗಿ ಕೃಷಿ ಕಾಯಕ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಾಯಿ ಮನೆ ಜಾಗ ಸಹಿತ, ಸ್ವತಃ ಖರೀದಿಸಿದ ಏಳೆಂಟು ಎಕ್ರೆ ಭೂಮಿಯಲ್ಲಿ ತೋಟ ನಿರ್ಮಿಸಿ ಯುವಕರಿಗೆ ಮಾದರಿಯಾಗಿದ್ದಾರೆ.

ಪೋಷಕರ ಕಾಲದಿಂದ ನಡೆದು ಬಂದ ಕೃಷಿ ಬಗ್ಗೆ ನೆಚ್ಚಿ ತಾನು ಸಾಗುವಳಿ ದಾರನಾಗಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಯಡಮೊಗೆಯ ವಡ್ನಾಳಿ ಎಂಬಲ್ಲಿ 8 ಎಕರೆ ಕೃಷಿಭೂಮಿ ಪಡೆದು ಭತ್ತ ಕೃಷಿ ಮಾಡಿದ್ದಾರೆ.

ಬಾಳೆಬೇರು ಎಂಬಲ್ಲಿನ ತಮ್ಮ ತಾಯಿ ಮನೆ ಜಾಗದಲ್ಲಿ 1,700 ಅಡಿಕೆ, ತೆಂಗು, ಶುಂಠಿ, ಬಾಳೆ, ಫೈನಾಪಲ್, ಲಿಂಬು, ಕಬ್ಬು, ತರಕಾರಿ ಬೆಳೆದಿದ್ದು ಹೈನುಗಾರಿಕೆ ಜೊತೆಗೆ ಕೋಳಿ ಸಾಕಣೆ ಕೂಡ ಮಾಡುತ್ತಿದ್ದಾರೆ. ಹೊಸಬಾಳು ಎಂಬಲ್ಲಿ 4 ಎಕರೆ ಜಾಗ ಖರೀದಿಸಿ 300 ತೆಂಗು, ಅಡಿಕೆ, ಫೈನಾಪಲ್, ಮಾವು ಮೊದಲಾದ ತೋಟ ನಿರ್ಮಿಸಿದ್ದಾರೆ. ರಾಂಪೈಜೆಡ್ಡು ಎಂಬಲ್ಲಿ 3 ಎಕರೆ ಪ್ರದೇಶಲ್ಲಿ 1,800 ಅಡಿಕೆ ತೋಟ ಮಾಡಿದ್ದಾರೆ.

ಇವರ ತೋಟವಿರುವುದು ಮಲೆನಾಡು ತಪ್ಪಲು ಪ್ರದೇಶವಾದರೂ ನೀರಿಗೆ ತಾತ್ವಾರ ಬರಬಾರದು ಎಂಬ ಕಾರಣಕ್ಕೆ ಬೋರ್‌ವೆಲ್ ತೋಡಿಸಲಾಗಿದೆ. ಮೊಲ, ಕಡವೆ, ಜಿಂಕೆ, ನವಿಲು, ಇಲಿ, ಹಂದಿ ಕಾಟದ ನಡುವೆ ಸಾಗುವಳಿಯಲ್ಲಿ ಖುಷಿಯಿದೆ. ಪ್ರಾಣಿ ಪಕ್ಷಿ ತಿಂದುಳಿದ್ದದ್ದು ರೈತನಿಗೆ ಸಿಗುವುದು ಎಂದು ನಂಬಿಕೊಂಡು ಕೃಷಿ, ತೋಟಗಾರಿಕೆ ನಡೆಸುತ್ತಿದ್ದು ತೃಪ್ತಿ ಇದೆ ಎನ್ನುತ್ತಾರೆ ದೇವಿಪ್ರಸಾದ್ ಶೆಟ್ಟಿ.

ತಂದೆ-ತಾಯಿಯವರದ್ದು ಕೃಷಿಕ ಕುಟುಂಬ. ಕದಿರು (ಹೊಸ್ತು) ಹಬ್ಬಕ್ಕೆ ಭತ್ತದ ಕದಿರು ಸಿಗದಿದ್ದು ದೂರದೂರದಿಂದ ಕದಿರು ತರಬೇಕಾ ಯಿತು. ಇದರಿಂದ ಹಡಿಲು ಭೂಮಿ ಪಡೆದು 8 ಎಕರೆಯಲ್ಲಿ ಯಾಂತ್ರೀಕೃತವಾಗಿ ಹಾಗೂ ಜನರನ್ನು ಬಳಸಿಕೊಂಡು 1.80 ಲಕ್ಷ ಖರ್ಚಿನಲ್ಲಿ ಭತ್ತ ಬೆಳೆಸಿದೆ. ಮಳೆ ಸಮಸ್ಯೆ ಎದುರಾದರೂ 70 ಕ್ವಿಂಟಾಲ್ ಭತ್ತ ಸಿಕ್ಕಿದೆ. ಪ್ರಾಣಿ, ಪಕ್ಷಿಗಳ ಸಮಸ್ಯೆ ಹೆಚ್ಚಿದ್ದರಿಂದ ಸಾಗುವಳಿ ಮಾಡುವುದು ಬಿಡಲಾಗುತ್ತಿದೆ. ಹಕ್ಕುಪತ್ರ ಸಮಸ್ಯೆ ಇದ್ದ ಕಾರಣ ತೋಟಗಾರಿಕೆ, ಕೃಷಿ ಮಾಡಲು ಜನರಿಗೆ ಪೂರಕ ವಾತಾವರಣವಿಲ್ಲ. ಯುವ ಜನಾಂಗ ಕೃಷಿಯತ್ತ ಒಲವು ತೋರಿಸಲು ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

| ದೇವಿಪ್ರಸಾದ್ ಶೆಟ್ಟಿ, ಕೃಷಿ ಉತ್ಸಾಹಿ

ಜನರು ಕೃಷಿಯಿಂದ ವಿಮುಖರಾಗು ತ್ತಿರುವ ವೇಳೆ ಕೃಷಿ ಬಗ್ಗೆ ಜ್ಞಾನ, ಉತ್ಸಾಹದಿಂದ ಭತ್ತ ಕೃಷಿ, ತೋಟಗಾರಿಕೆ, ಹೈನುಗಾರಿಕೆ ನಡೆಸುತ್ತಿರುವ ದೇವಿ ಪ್ರಸಾದ್ ಶೆಟ್ಟಿಯವರ ಕಾರ್ಯ ಯುವಪೀಳಿಗೆಗೆ ಮಾದರಿ. ತಮ್ಮ ಉದ್ಯಮಗಳ ಒತ್ತಡದ ನಡುವೆಯೂ ಕೃಷಿ ಕೆಲಸಕ್ಕೆ ಸಮಯ ನಿಗದಿ ಮಾಡುತ್ತಾರೆ. ತೋಟಗಾರಿಕೆಯಲ್ಲಿಯೂ ಇವರ ವೈಜ್ಞಾನಿಕ ನಡೆ ಎಲ್ಲರಿಗೂ ಮಾದರಿ.

| ಆನಂದ ಕಾರೂರು, ದಸಂಸ ಮುಖಂಡರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೀಶ್ ಕುಂಭಾಸಿ

contributor

Similar News