ಅಭಿವೃದ್ಧಿ: ಜನಪ್ರಿಯ ನಿರೂಪಣೆಯ ಅಪಾಯಗಳು

ಮೆಗಾ ಪ್ರಾಜೆಕ್ಟ್‌ಗಳ ಅಭಿವೃದ್ಧಿಯು ಪರಿಸರ ವಿಪತ್ತುಗಳಿಗೆ ಕಾರಣವಾಗುತ್ತದೆ. ಇಂತಹ ವಿಪತ್ತುಗಳು ಒಂದೇ ಬಾರಿ ಹೆಚ್ಚಳವಾದವುಗಳಲ್ಲ. ಒಂದು ಕಡೆ ಕಳೆದ ಕೆಲವು ದಶಕಗಳಿಂದ ರಾಜ್ಯ ವ್ಯವಸ್ಥೆಯು ಆಯ್ಕೆ ಮಾಡಿದ ಅಭಿವೃದ್ಧಿ ನೀತಿಯ ಅಪರಿಮಿತ ಉತ್ಪಾದಕ ಮತ್ತು ಅತಿಯಾದ ಅನುಭೋಗ ಮಾರ್ಗವು ಎಲ್ಲಾ ರೀತಿಯ ವಿಪತ್ತುಗಳ ಸುರುಳಿಯನ್ನು ಸುತ್ತುತ್ತಿದೆ. ಮತ್ತೊಂದು ಕಡೆ ಹಣಕಾಸಿನ ಹೊರೆ ನಿರಂತರವಾಗಿ ಹೆಚ್ಚಳವಾಗುತ್ತಿದೆ.

Update: 2023-12-01 06:30 GMT

Photo: twitter.com/IndexKarnataka

ಅಭಿವೃದ್ಧಿಯನ್ನು ಮತದಾರರಿಗೆ ಆಕರ್ಷಕವಾಗುವಂತೆ ಮಾಡಲು ಇರುವ ಸುಲಭವಾದ ಮಾರ್ಗವೆಂದರೆ, ಅದನ್ನು ಗೋಚರಿಸುವ ಭೌತಿಕ ಮೂಲಸೌಕರ್ಯಗಳ ನೆಲೆಯಲ್ಲಿ ಸಂಕುಚಿತವಾಗಿ ವ್ಯಾಖ್ಯಾನಿಸುವುದು. ಅಂತಹ ಕಿರಿದಾದ ವ್ಯಾಖ್ಯಾನದ ಪ್ರಯೋಜನವೆಂದರೆ ಅವುಗಳನ್ನು ಸುಲಭವಾಗಿ ಪ್ರದರ್ಶಿಸಬಹುದು ಮತ್ತು ಅವುಗಳ ಸಾಧನೆಗಳನ್ನು ಪ್ರಮಾಣೀಕರಿಸಬಹುದು. ಭೌತಿಕ ಮೂಲಸೌಕರ್ಯ ಸೃಷ್ಟಿಯ ಪ್ರಮಾಣವು ಅಧಿಕವಾಗಿದ್ದರೆ ಅದು ಅಧಿಕಾರದಲ್ಲಿರುವ ಸರಕಾರಗಳಿಗೆ ಪ್ರಯೋಜನವನ್ನು ತರುತ್ತದೆ. ಜೊತೆಗೆ ಆಧಿಕಾರದಲ್ಲಿ ಇರುವವರಿಗೆ ಕಿಕ್‌ಬ್ಯಾಕ್ ಪಡೆಯಲು ಅನುಕೂಲವೂ ಆಗಿದೆ. ಈ ಪ್ರಕ್ರಿಯೆಗಳು ರಾಜಕೀಯ ಪಕ್ಷಗಳ ಮುಂದೆ ಮೂರು ಆಯ್ಕೆಗಳು ಇಡುತ್ತವೆ. ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಪ್ರಮಾಣದ ಮೆಗಾ ಪ್ರಾಜೆಕ್ಟ್‌ಗಳ ಸೃಷ್ಟಿಯ ಭರವಸೆ ನೀಡಲು; ಈಗಾಗಲೇ ರಚಿಸಲಾದ ಮೂಲಸೌಕರ್ಯದ ಅಸಮರ್ಪಕತೆಯನ್ನು ಎತ್ತಿ ತೋರಿಸುವುದು; ಅಭಿವೃದ್ಧಿಯಿಂದ ಹೊರಗುಳಿದ ಜನರನ್ನು ಒಳಗೊಳ್ಳಲು ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯಗಳ ನವೀಕರಣವನ್ನು ಜನಪ್ರಿಯತೆಯ ನೆಲೆಯಲ್ಲಿ ಹೆಚ್ಚಿಸಿಕೊಳ್ಳುವುದು.

ಈ ರೀತಿ ಗೋಚರಿಸುವ ದೊಡ್ಡ ಪ್ರಮಾಣದ(ಮೆಗಾ ಪ್ರಾಜೆಕ್ಟ್ಸ್) ಮೂಲಸೌಕರ್ಯಕ್ಕೆ ಅಭಿವೃದ್ಧಿಯನ್ನು ಸಮೀಕರಿಸುವುದು, ಕಾಲಾನಂತರದಲ್ಲಿ ಎರಡು ಕಾರಣಗಳಿಂದ ಅಪಾಯಕಾರಿಯಾಗಬಹುದು. ಮೊದಲನೆಯದಾಗಿ, ಮೆಗಾ ಪ್ರಾಜೆಕ್ಟ್‌ಗಳು ವಾಸ್ತವಿಕವಾಗಿ ನಿರ್ದಿಷ್ಟವಾದ ಭೌಗೋಳಿಕ ಪರಿಸರದ ಮೇಲೆ ದೀರ್ಘಕಾಲೀನ ಪರಿಸರಾತ್ಮಕ ಬಿಕ್ಕಟ್ಟುಗಳನ್ನು ಉಂಟುಮಾಡುತ್ತವೆ. ದೊಡ್ಡ ಯೋಜನೆಗಳ ಪರಿಣಾಮಗಳು ಸಮಕಾಲೀನ ಜನ ಸಮುದಾಯ ಮತ್ತು ಮುಂದಿನ ತಲೆಮಾರಿನ/ಪೀಳಿಗೆಯ ಜೀವನೋಪಾಯ ಮೇಲೆ ಉಂಟುಮಾಡುವ ಗಂಭೀರವಾದ ಪರಿಣಾಮಗಳನ್ನು ಮೌಲೀಕರಿಸದೆ ಯೋಜನೆಯ ಮಹತ್ವವನ್ನು ಜನಪ್ರಿಯತೆಯ ನೆಲೆಯಲ್ಲಿ ನೋಡುವುದು. ಎರಡನೆಯದಾಗಿ, ಮೆಗಾ-ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ಕಾರ್ಯವಿಧಾನಗಳು ಸಾಮಾನ್ಯವಾಗಿ ಗುಣಾಕಾರ ಪರಿಣಾಮಗಳಿಂದ ಉತ್ಪ್ರೇಕ್ಷಿತ ಆದಾಯದ ಊಹೆಯ ಮೇಲೆ ಪ್ರತಿಪಾದಿಸಲಾಗುತ್ತದೆ. ಇವುಗಳ ವೆಚ್ಚ ಪೂರ್ಣ ಪ್ರಮಾಣದ ಅನುಷ್ಠಾನದ ವೇಳೆಗೆ ಯಾವುದೇ ನೆಲೆಯಿಂದ ನೋಡಿದರೂ ಮಿತಿಮೀರಿದ ವೆಚ್ಚಗಳಾಗಿರುತ್ತವೆ. ಇಂತಹ ಹಣಕಾಸು ನೀತಿಗಳಿಂದ ಹಣಕಾಸಿನ ಹೊರೆಯು ಮಧ್ಯಮ ಅವಧಿಯಲ್ಲಿ ಹೊರಹೊಮ್ಮಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯನ್ನು ಪರಿಹರಿಸಲು ಹೆಚ್ಚುವರಿ ವೆಚ್ಚಗಳನ್ನು ವಿಧಿಸಲಾಗುತ್ತದೆ.

ಮೂರು ಉದಾಹರಣೆಗಳ ಮೂಲಕ ಮೇಲಿನದನ್ನು ಸ್ಪಷ್ಟಪಡಿಸಲು ಪ್ರಯತ್ನ ಮಾಡಲಾಗಿದೆ. ಮೊದಲನೆಯದಾಗಿ, ಜೂನ್ 24ರಿಂದ ಜುಲೈ 10, 2023ರ ಅವಧಿಯಲ್ಲಿ ನಿರಂತರ ಮಳೆಯ ಹಿಮಾಚಲ ಪ್ರದೇಶದಲ್ಲಿ 41 ಭೂಕುಸಿತಗಳು, 29 ಹಠಾತ್ ಪ್ರವಾಹಗಳು ಮತ್ತು ಒಂದು ಮೋಡದ ಸ್ಫೋಟವು ಸಂಭವಿಸಿದೆ. ಜೋಶಿಮಠದಲ್ಲಿ ಭೂಕುಸಿತ, ಹಿಮಾಚಲ ಪ್ರದೇಶದ ಮಂಡಿಯಲ್ಲಿ ಭಾರೀ ಮಳೆ, ಮಡಿಕೇರಿಯಲ್ಲಿ ಭಾರೀ ಮಳೆ, ಭೂಕುಸಿತ, ಬಿಯಾಸ್ ನದಿಯಲ್ಲಿ ಪ್ರವಾಹ. ಇವುಗಳನ್ನು ಪರಿಸರಾತ್ಮಕ ಬಿಕ್ಕಟ್ಟುಗಳು ಎಂದು ಕರೆಯಬಹುದು. ಆದರೆ ಹಿಮಾಚಲ ಪ್ರದೇಶವು ವಿವಿಧ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುವ ಹಲವಾರು ಹೆದ್ದಾರಿ ರಸ್ತೆಗಳ ನಿರ್ಮಾಣದ ಮೂಲಕ ‘ಅಭಿವೃದ್ಧಿ’ಯ ಓಟದಲ್ಲಿ ಸರಕಾರಗಳು ಸಕ್ರಿಯವಾಗಿರುವುದು. ಇದರಿಂದಾಗಿ ಪರ್ವತ ಪ್ರದೇಶಗಳ ಭೌಗೋಳಿಕತೆಯು ದುರ್ಬಲಗೊಳ್ಳುವುದು ಮತ್ತು ಯೋಜಿತವಲ್ಲದ ನಗರೀಕರಣ ಪ್ರಕ್ರಿಯೆಗಳು ಹೊರಹೊಮ್ಮುತ್ತಿರುವುದು. ಎರಡನೆಯದು, ಉತ್ತರಾಖಂಡವು 2013ರಲ್ಲಿ ದೊಡ್ಡ ವಿಪತ್ತನ್ನು ಎದುರಿಸಿತು. ಸರಕಾರವು ಅದರಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ‘ಪುನರ್ ನಿರ್ಮಾಣ’ ಮಾಡಿತು. ಇಲ್ಲಿನ ಅನೇಕ ಹೆದ್ದಾರಿ ಯೋಜನೆಗಳೊಂದಿಗೆ ರಾಜ್ಯವನ್ನು ಮರುನಾಮಕರಣ ಮಾಡಿತು. ಚಾರ್ ಧಾಮ್ ಯಾತ್ರೆಯನ್ನು ರಸ್ತೆ ಸಂಪರ್ಕ ಎಂದು ಪ್ರಚಾರ ಮಾಡಲಾಯಿತು. ಇದು ಲಕ್ಷಾಂತರ ಜನರನ್ನು ಧಾರ್ಮಿಕ ಪ್ರವಾಸಿಗರಂತೆ ಕರೆತರುತ್ತದೆ. ಆದರೆ ಇಲ್ಲಿನ ಬಹುತೇಕ ಸ್ಥಳಗಳು ಕೆಲವು ಸಾವಿರ ಜನರಿಗೆ ಮಾತ್ರ ಮೂಲಸೌಕರ್ಯವನ್ನು ಹೊಂದಿವೆ.

ಮೂರನೆಯದು, ಕರ್ನಾಟಕದಲ್ಲಿ 2022ರ ಆಗಸ್ಟ್ ಕೊನೆವಾರದಲ್ಲಿ ಬಿದ್ದ ಮಳೆಯ ಪರಿಣಾಮ ಪ್ರವಾಹವನ್ನು ಎದುರಿಸಲಾಯಿತು. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಉಂಟಾದ ಪ್ರವಾಹದ ಪರಿಸ್ಥಿತಿ ನಿರ್ವಹಣೆಗೆ ಒಂದೇ ಕಂತಿನಲ್ಲಿ 300 ಕೋ. ರೂ. ಕರ್ನಾಟಕ ಸರಕಾರ ಬಿಡುಗಡೆ ಮಾಡಿತು. ಬೆಂಗಳೂರಿನಲ್ಲಿ ಮೇ 20 ಮತ್ತು 21, 2023ರಂದು ಸುರಿದ ಮಳೆಯ ಪರಿಣಾಮವಾಗಿ ಬಹುತೇಕ ಅಂಡರ್‌ಪಾಸ್ ರಸ್ತೆಗಳಲ್ಲಿ, ಕೆಲವು ರಸ್ತೆಗಳಲ್ಲಿ ದಿನಗಟ್ಟಲೆ ನೀರು ನಿಂತಿದ್ದು, ಕೆಲವು ವಸತಿ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ವರದಿಯಾಯಿತು. ಈ ಕುರಿತು 2022ರಲ್ಲಿ ಆಡಳಿತ ಪಕ್ಷವಾಗಿರುವವರು ಮತ್ತು ವಿರೋಧ ಪಕ್ಷದಲ್ಲಿ ಇದ್ದವರು, 2023ರಲ್ಲಿ ಅಧಿಕಾರ ಪಡೆದು ಆಡಳಿತ ಪಕ್ಷವಾಗಿರುವವರು ಮತ್ತು ವಿರೋಧ ಪಕ್ಷದಲ್ಲಿ ಇರುವವರು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಮುಂದುವರಿದಿದೆ. ಇದಕ್ಕೆ ಸಾರ್ವಜನಿಕ ಹಣ ಮಾತ್ರ ಪ್ರವಾಹಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವೆಚ್ಚವಾಗುತ್ತಿದೆ. ಇವು ಇತ್ತೀಚಿನ ಮೆಗಾ ಅಭಿವೃದ್ಧಿ ಪ್ರಾಜೆಕ್ಟ್‌ಗಳ ಪರಿಣಾಮಗಳನ್ನು ಸಂಕೇತಿಸುವ ಹಲವು ಉದಾಹರಣೆಗಳಲ್ಲಿ ಕೆಲವಷ್ಟೆ.

ಮೆಗಾ ಪ್ರಾಜೆಕ್ಟ್‌ಗಳ ಅಭಿವೃದ್ಧಿಯು ಪರಿಸರ ವಿಪತ್ತುಗಳಿಗೆ ಕಾರಣವಾಗುತ್ತದೆ. ಇಂತಹ ವಿಪತ್ತುಗಳು ಒಂದೇ ಬಾರಿ ಹೆಚ್ಚಳವಾದವುಗಳಲ್ಲ. ಒಂದು ಕಡೆ ಕಳೆದ ಕೆಲವು ದಶಕಗಳಿಂದ ರಾಜ್ಯ ವ್ಯವಸ್ಥೆಯು ಆಯ್ಕೆ ಮಾಡಿದ ಅಭಿವೃದ್ಧಿ ನೀತಿಯ ಅಪರಿಮಿತ ಉತ್ಪಾದಕ ಮತ್ತು ಅತಿಯಾದ ಅನುಭೋಗ ಮಾರ್ಗವು ಎಲ್ಲಾ ರೀತಿಯ ವಿಪತ್ತುಗಳ ಸುರುಳಿಯನ್ನು ಸುತ್ತುತ್ತಿದೆ. ಮತ್ತೊಂದು ಕಡೆ ಹಣಕಾಸಿನ ಹೊರೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಹಣಕಾಸಿನ ಹೊರೆಯನ್ನು ನಿರ್ವಹಿಸುವಲ್ಲಿ, ದೇಶದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯ ಉನ್ನತ ಸಂಸ್ಥೆಯಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂಡಿಯಾ(ಎನ್‌ಎಚ್‌ಎಐ) ಕಥೆಗಳು, ನಿರ್ವಹಿಸುತ್ತಿರುವ ಪ್ರಾಜೆಕ್ಟ್‌ಗಳು ಹೇಗೆ ಆರ್ಥಿಕ ಹೊರೆಯಾಗುತ್ತಿವೆ ಎನ್ನುವುದನ್ನು ಬಹಿರಂಗಪಡಿಸುತ್ತವೆ. ಇತ್ತೀಚೆಗೆ ಕರ್ನಾಟಕದಲ್ಲಿ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯನ್ನು ನಿರ್ಮಾಣ ಮಾಡಲಾಗಿದೆ. ಈ ಎಕ್ಸ್ ಪ್ರೆಸ್ ಹೈವೇಯ ನಿರ್ಮಾಣಕ್ಕೆ ತಗಲಿರುವ ಅಂದಾಜು ವೆಚ್ಚ ಸುಮಾರು ರೂ. 8,480 ಕೋಟಿಗಳು. ಇದರಿಂದ 118 ಕಿ.ಮೀ. ಕ್ರಮಿಸಲು ತಗಲುತ್ತಿದ್ದ 3 ಗಂಟೆಗಳು 90 ನಿಮಿಷಗಳಿಗೆ ಇಳಿಯುತ್ತದೆ ಎಂದು ಯೋಜನೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ/ಹೇಳಲಾಗುತ್ತಿದೆ. ಈ ಎಕ್ಸ್‌ಪ್ರೆಸ್ ಹೈವೇಯನ್ನು ಸಾರ್ವಜನಿಕ ಪ್ರಯಾಣಕ್ಕೆ ಮಾರ್ಚ್ 2023ರಲ್ಲಿ ಉದ್ಘಾಟನೆ ಮಾಡಲಾಯಿತು. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆ ಪ್ರಯಾಣಕ್ಕೆ ಹೆಚ್ಚು ಸುರಕ್ಷಿತವಾಗಿಲ್ಲ. ಅಪಘಾತಗಳು ಹೆಚ್ಚಳವಾಗುತ್ತಿವೆ ಎನ್ನುವ ಆರೋಪಗಳು ಮತ್ತು ವಸ್ತುನಿಷ್ಠ ವರದಿಗಳು ಹೆಚ್ಚಾದವು.

ಈ ಹಿನ್ನೆಲೆಯಲ್ಲಿ ಎನ್‌ಎಚ್‌ಎಐಯು ಈ ಹೆದ್ದಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಇದು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ, ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ವೇಗವಾಗಿ ರೂಪಾಂತರಗೊಳ್ಳುತ್ತಿರುವ ರಸ್ತೆ ಮೂಲಸೌಲಭ್ಯಗಳು ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ರಚಿಸುವಲ್ಲಿ ಎನ್‌ಎಚ್‌ಎಐಯ ಬದ್ಧತೆಗೆ ಈ ಎಕ್ಸ್ ಪ್ರೆಸ್ ಹೈವೇ ಸಾಕ್ಷಿಯಾಗಿದೆ ಎಂದು ರಸ್ತೆ ಮತ್ತು ಸಾರಿಗೆ ಸಚಿವಾಲಯವು ಜುಲೈ 18, 2023ರ ರಸ್ತೆ ಪ್ರಕಟಣೆೆಯಲ್ಲಿ ತಿಳಿಸಿತ್ತು. ಜೊತೆಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು-ಮೈಸೂರು ಹೆದ್ದಾರಿಯ ಸುರಕ್ಷತಾ ತಪಾಸಣೆಯನ್ನು ಕೈಗೊಳ್ಳಲು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ರಸ್ತೆ ಸುರಕ್ಷತಾ ತಜ್ಞರ ಸಮಿತಿಯನ್ನು ರಚಿಸಿತು. ಈ ಸಮಿತಿಯು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯನ್ನು ಪರಿಶೀಲಿಸಿ, ತಮ್ಮ ಅಧ್ಯಯನವನ್ನು ಮುಕ್ತಾಯಗೊಳಿಸಿ ಹತ್ತು ದಿನಗಳಲ್ಲಿ ವರದಿಯನ್ನು ಸಲ್ಲಿಸಿತು. ಈ ರಸ್ತೆಯಲ್ಲಿ ಉಂಟಾಗುತ್ತಿರುವ ಶೇ. 30 ರಷ್ಟು ಅಪಘಾತಗಳಿಗೆ ದ್ವಿಚಕ್ರವಾಹನಗಳು, ಆಟೋ ಮತ್ತು ಟ್ರಾಕ್ಟರ್‌ಗಳು ಕಾರಣವಾಗಿವೆ ಎನ್ನುವ ಕಾರಣ ನೀಡಿತು. ಜುಲೈ 31, 2023 ರಂದು ಕರ್ನಾಟಕದ ಮುಖ್ಯಮಂತ್ರಿಗಳು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಸುರಕ್ಷತೆಯನ್ನು ಇನ್ನಷ್ಟು ಉತ್ತಮೀಕರಿಸಲು ಮತ್ತು ಇಲ್ಲಿ ನಡೆಯುತ್ತಿರುವ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ರೂ.158.81 ಕೋಟಿಗಳನ್ನು ವೆಚ್ಚ ಮಾಡಲಾಗುವುದು ಎಂದು ತಿಳಿಸಿದ್ದರು. ಅಪಘಾತಗಳಿಗೆ ಕಾರಣವಾಗಿವೆ ಎಂದು ದ್ವಿಚಕ್ರವಾಹನಗಳು, ಆಟೋ ಮತ್ತು ಟ್ರಾಕ್ಟರ್‌ಗಳ ಪ್ರವೇಶವನ್ನು ಆಗಸ್ಟ್ 1, 2023 ರಿಂದ ನಿಷೇಧಿಸಲಾಗಿದೆ. ಇಲ್ಲಿ ನಮಗೆ ಎದುರಾಗುವ ಪ್ರಶ್ನೆ ಇಷ್ಟು ದೊಡ್ಡಮಟ್ಟದ ಮೆಗಾ-ಪ್ರಾಜೆಕ್ಟ್ಸ್/ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ ರಸ್ತೆ ಸುರಕ್ಷತೆಯನ್ನು ವೈಜ್ಞಾನಿಕ ರೀತಿಯಲ್ಲಿ ಯಾಕೆ ತರಲು ಸಾಧ್ಯವಾಗಲಿಲ್ಲ? ಸ್ಥಳೀಯ ದುಡಿಯುವ ಜನರು, ಅದರಲ್ಲಿಯೂ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವವರು ತಮ್ಮ ಓಡಾಟಕ್ಕೆ ಬಳಸುವ ದ್ವಿಚಕ್ರವಾಹನಗಳು, ಆಟೋ ಮತ್ತು ಟ್ರಾಕ್ಟರ್‌ಗಳ ಪ್ರವೇಶವನ್ನು ನಿಷೇಧಿಸುವುದರಿಂದ, ಈ ರಸ್ತೆ ಬಡ ದುಡಿಮೆ ಗಾರರ ಸಾಮಾಜಿಕ ಆರ್ಥಿಕ ಬದುಕಿಗೆ ಬೆಂಬಲವಾಗಲು ಹೇಗೆ ಸಾಧ್ಯ? ಸ್ಥಳೀಯ ಜನರಿಗೆ ಈ ರಸ್ತೆಯನ್ನು ಮುಕ್ತವಾಗಿ ಪ್ರವೇಶ ಮಾಡುವ ಮತ್ತು ಬಳಸುವ ಅವಕಾಶವಿಲ್ಲದಿರುವುದು ಸ್ಥಳೀಯ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬೆಂಬಲವಾಗಲು ಸಾಧ್ಯವೇ? ಹೀಗಾಗಿ ಅಭಿವೃದ್ಧಿ ಎನ್ನುವುದು ಎಲ್ಲರನ್ನೂ ಒಳಗೊಳ್ಳದ ಜನಪ್ರಿಯ ರೂಪಕವಾಗಿ ಮಾತ್ರ ಕಾಣುತ್ತದೆ.

ಇಂತಹ ಮೆಗಾ ಯೋಜನೆಗಳನ್ನು ನಿರ್ವಹಿಸುವ ಎನ್‌ಎಚ್‌ಎಐಯ ಹಣಕಾಸಿನ ಪರಿಸ್ಥಿತಿಯನ್ನು ಸ್ವಲ್ಪ ನೋಡುವುದಾದರೆ, ಅದರ ಒಟ್ಟು ಸಾಲವು 2014ರಲ್ಲಿ ರೂ. 23,797 ಕೋಟಿಗಳಷ್ಟಿತ್ತು. ಮಾರ್ಚ್, 2023ರ ಹೊತ್ತಿಗೆ ರೂ. 3,42,801 ಕೋಟಿಗಳಷ್ಟಾಗಿದೆ. ಸಾಲದ ಬಹುಪಾಲು 2017-18 ಮತ್ತು 2021-22ರ ನಡುವೆ ಮಾಡಿಕೊಂಡ ಯೋಜನೆಗಳ ಒಪ್ಪಂದಗಳದ್ದಾಗಿದೆ. ಬಾಂಡ್‌ಗಳ ಮೂಲಕ 112 ಭಾಗಗಳಲ್ಲಿ ಹಣವನ್ನು ಸಂಗ್ರಹಿಸಿದ್ದರಿಂದ ಎನ್‌ಎಚ್‌ಎಐಯ ಸಾಲ ಸೇವಾ ವೆಚ್ಚವು ನಿರಂತರವಾಗಿ ಹೆಚ್ಚಾಗುತ್ತಿದೆ. ಸಾಲದ ಹೊರತಾಗಿ, ಎನ್‌ಎಚ್‌ಎಐ, ಅನಿಶ್ಚಿತ ಹೊಣೆಗಾರಿಕೆಗಳನ್ನು ಸಹ ಹೊಂದಿದೆ. ಈ ರೀತಿ ಹಣಕಾಸು ಪರಿಣಾಮಗಳು ಅಭಿವೃದ್ಧಿಯ ವ್ಯವಸ್ಥೆಯಲ್ಲಿ ದೀರ್ಘಾವಧಿಯ ನಿರ್ಬಂಧಗಳನ್ನು ಹೇರುತ್ತವೆ. ಈ ಉದಾಹರಣೆಗಳು ಮೆಗಾ-ಮೂಲಸೌಕರ್ಯವನ್ನು ಅಭಿವೃದ್ಧಿಯ ಐಕಾನ್‌ಗಳಾಗಿ ಸಂಕೇತಿಸುವ ಗೀಳಿನ ಅಪಾಯಗಳನ್ನು ಎತ್ತಿ ತೋರಿಸುತ್ತವೆ.

ಜನಪರವಾದಕ್ಕೆ ಜಾಗವಿಲ್ಲ

ಜನಪ್ರಿಯತೆ ಎರಡು ಆಯಾಮಗಳನ್ನು ಹೊಂದಿದೆ - ಒಂದು ರಾಜಕೀಯ ಆಯಾಮ. ಮತ್ತೊಂದು ಆರ್ಥಿಕ ಆಯಾಮ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹೆಸರಾಂತ ರಾಜಕೀಯ ಅರ್ಥಶಾಸ್ತ್ರಜ್ಞ ಡ್ಯಾನಿ ರೋಡ್ರಿಕ್ ಪ್ರಕಾರ, ಜನಪ್ರಿಯತೆಯ ವಿಶಿಷ್ಟ ಲಕ್ಷಣವೆಂದರೆ ಅದು ‘ಜನರನ್ನು’ ಪ್ರತಿನಿಧಿಸುತ್ತದೆ. ಇದು ಸಾಮಾನ್ಯ ಹಿತಾಸಕ್ತಿಯಿಂದ ಏಕೀಕರಿಸಲ್ಪಟ್ಟಿದೆ. ಈ ಸಾಮಾನ್ಯ ಹಿತಾಸಕ್ತಿ, ಜನಪ್ರಿಯ ಇಚ್ಛೆಗೆ ಬದಲಾಗಿ ಜನರ ಶತ್ರುಗಳಾಗಿ ನಿರೂಪಿಸಲಾಗಿದೆ. ಅಲ್ಪಸಂಖ್ಯಾತರು ಮತ್ತು ವಿದೇಶಿಯರು (ಬಲಪಂಥೀಯ ಜನಪ್ರಿಯತೆಯ ಸಂದರ್ಭದಲ್ಲಿ) ಅಥವಾ ಆರ್ಥಿಕ ಗಣ್ಯರ (ಎಡಪಂಥೀಯ ಜನಪರವಾದಿಗಳ ಸಂದರ್ಭದಲ್ಲಿ) ವಿರುದ್ಧ ಹೊಂದಿಸಲಾಗಿದೆ. ‘ಜನರನ್ನು’ ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಮೂಲಕ, ಜನಸಾಮಾನ್ಯರ ರಾಜಕೀಯ ಕಾರ್ಯಾಂಗದ ಮೇಲೆ ಇಟ್ಟಿರುವ ನಂಬಿಕೆಗಳನ್ನು ಅಪಹಾಸ್ಯ ಮಾಡಲಾಗುತ್ತಿದೆ. ಆಡಳಿತ ನಡೆಸುವವರು ತಮ್ಮ ಅಧಿಕಾರವನ್ನು ಚಲಾಯಿಸುವಾಗ ಜನಪ್ರಿಯ ಇಚ್ಛೆಯನ್ನು ಹಾಳುಮಾಡುವಂತೆ ಬಳಸುತ್ತಾರೆ. ಮುಂದುವರಿದು ಬಹುಸಂಖ್ಯಾತರಿಗೆ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡುವ ರಾಜಕೀಯ ಜನಪ್ರಿಯತೆಯ ವಿಶಿಷ್ಟ ಲಕ್ಷಣವಾಗಿದೆ. ಆರ್ಥಿಕ ನೀತಿಯ ನಡವಳಿಕೆಯ ಮೇಲಿನ ನಿರ್ಬಂಧಗಳಲ್ಲಿ ಸಾಮಾನ್ಯವಾಗಿ ಅಭಿವೃದ್ಧಿ ನೀತಿ ಆಯ್ಕೆಗಳನ್ನು ಜನಪ್ರಿಯವಾಗಿಸಿ ಸಂಕುಚಿತಗೊಳಿಸುತ್ತವೆ. ಆದರೂ, ಆರ್ಥಿಕ ನೀತಿಯ ಪರಿಸರ ನಿಯಮಗಳು ಮತ್ತು ನಿರ್ಬಂಧಗಳಿಗೆ ಆದ್ಯತೆ ನೀಡುತ್ತದೆ. ಏಕೆಂದರೆ ಆರ್ಥಿಕ ನೀತಿಗಳು ಹೆಚ್ಚಾಗಿ ರಾಜಕೀಯ ಪರಿಗಣನೆಗಳಿಂದ ರೂಪುಗೊಂಡಾಗ ಅಲ್ಪಾವಧಿಯ ಹಿತಾಸಕ್ತಿಗಳು ಮೇಲುಗೈ ಸಾಧಿಸುತ್ತವೆ. ಆರ್ಥಿಕ ನಿಯಮಗಳು ಮತ್ತು ನಿರ್ಬಂಧಗಳು ಅಧಿಕಾರದಲ್ಲಿರುವವರನ್ನು ದೂರದೃಷ್ಟಿಯ ನೀತಿಗಳನ್ನು ಅನುಸರಿಸದಂತೆ ತಡೆಯುವ ಸಾಧ್ಯತೆಗಳು ಇವೆ. ಆದರೆ, ಕೆಲವೊಮ್ಮೆ ನಿಯಮಗಳು ಮತ್ತು ನಿರ್ಬಂಧಗಳಿಗೆ ಅಚಲವಾದ ಬದ್ಧತೆಯು ಸಣ್ಣ ಗುಂಪುಗಳ ಹಿತಾಸಕ್ತಿಗಳನ್ನು ಮುನ್ನಡೆಸಲು ಸಹಾಯ ಮಾಡುವ ಜೊತೆಗೆ, ದೀರ್ಘಾವಧಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ತಾತ್ಕಾಲಿಕ ಪ್ರಯೋಜನವನ್ನು ಭದ್ರಪಡಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ರಾಜಕೀಯ ಜನಪ್ರಿಯತೆಯ ಅನಿಯಂತ್ರಿತ ಬೆಳವಣಿಗೆಯನ್ನು ಪರಿಶೀಲಿಸುವಲ್ಲಿ ನಿಯಮಗಳು ಮತ್ತು ನಿರ್ಬಂಧಗಳು ಪ್ರಮುಖವಾಗಿದ್ದರೂ, ಆರ್ಥಿಕ ಜನಪ್ರಿಯತೆಯ ವಿಸ್ತರಣೆಯನ್ನು ಮೊಟಕುಗೊಳಿಸಲು ದೂರದೃಷ್ಟಿಯ ವಿವೇಚನೆಯೊಂದಿಗೆ ಕಠಿಣ ನಿಯಮಗಳ ಮಿಶ್ರಣದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ.

ಆರ್ಥಿಕ ಬೆಳವಣಿಗೆಯ ಸಾಂಪ್ರದಾಯಿಕ ಮಾದರಿಗಳು ವಿತರಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿಲ್ಲ. ಏಕೆಂದರೆ ಇದು ಬೆಳವಣಿಗೆಯ ಅಂತರ್ಗತ ಪರಿಣಾಮವಾಗಿದೆ ಎಂದು ಸಂಪ್ರದಾಯ ಅಭಿವೃದ್ಧಿ ಮಾದರಿಯಲ್ಲಿ ಹೇಳಲಾಗಿದೆ. ಬೆಳವಣಿಗೆಯ ಪ್ರಯೋಜನಗಳು ‘ಟ್ರಿಕಲ್-ಡೌನ್ ಎಫೆಕ್ಟ್’ ಮೂಲಕ ಎಲ್ಲರಿಗೂ ಜಿನುಗುತ್ತದೆ ಎಂದು ಈ ಮಾದರಿಗಳು ಊಹಿಸಿವೆ. ಅಂದರೆ, ಬೆಳವಣಿಗೆಯು ‘ಎಲ್ಲ ದೋಣಿಗಳನ್ನು ಎತ್ತುವ ಎತ್ತರದ ಅಲೆ’ ಎಂದು ಸಾಂಪ್ರದಾಯಿಕ ಮಾದರಿಯಲ್ಲಿ ನಿರೂಪಿಸಲಾಗಿದೆ. ಈ ವಿಷಯಗಳ ಯೋಜನೆಯಲ್ಲಿ, ಜನಪ್ರಿಯ ಮರು-ಹಂಚಿಕೆ ನೀತಿಗಳು ಸ್ಥಾನ ಪಡೆಯುವುದಿಲ್ಲ. ಆದಾಗ್ಯೂ, ಆರ್ಥಿಕ ಬೆಳವಣಿಗೆಯ ಅನುಭವವು ಬೆಳವಣಿಗೆಯ ಪ್ರಯೋಜನಗಳ ಜನಪ್ರಿಯತೆ ಅಷ್ಟು ಸುಲಭವಾಗಿ ಕಡಿಮೆಯಾಗುವುದಿಲ್ಲ. ಆರ್ಥಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಒಟ್ಟು ಜನಸಂಖ್ಯೆಯ ಕೆಲವು ಜನರು ‘ಹೊರಗಿನವರು’ ಆಗುತ್ತಾರೆ. ಕೆಲವೇ ಕೆಲವರು ಅತಿ ಹೆಚ್ಚು ಆಸ್ತಿ, ಸಂಪತ್ತು ಮತ್ತು ಭೂಮಿಯನ್ನು ಗಳಿಸಿದರೆ, ಹೆಚ್ಚಿನವರು ಭೂಮಿಯಿಂದ ಮತ್ತು ಅಗತ್ಯ ಜೀವನೋಪಾಯಗಳಿಂದ ವಂಚಿತರಾಗುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಎಚ್.ಡಿ. ಪ್ರಶಾಂತ್

contributor

Similar News