ಆಡಳಿತಾಧಿಕಾರಿಯನ್ನೇ ಕೊಲ್ಲಿಸಿದ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ !
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಸುಳ್ಯ ಮತ್ತೆ ಸುದ್ದಿಯಲ್ಲಿದೆ. ಅಲ್ಲಿನ ಪ್ರತಿಷ್ಠಿತ ಮನೆತನದ ಡಾ.ರೇಣುಕಾ ಪ್ರಸಾದ್ ಅವರಿಗೆ ಜೀವಾವಧಿ ಶಿಕ್ಷೆ ಆಗುವ ಮೂಲಕ 12 ವರ್ಷಗಳ ಹಿಂದಿನ ಒಂದು ಭೀಕರ ಕೊಲೆ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ.
ಒಂದು ಪುಟ್ಟ ಊರು, ಅದರಲ್ಲೂ ರೋಗ ರುಜಿನಗಳಿಗಾಗಿ ಕುಖ್ಯಾತವಾಗಿದ್ದ ಊರು ಒಬ್ಬ ವ್ಯಕ್ತಿಯ ದೂರದೃಷ್ಟಿ, ದೃಢ ಸಂಕಲ್ಪ ಹಾಗು ಕಠಿಣ ಪರಿಶ್ರಮದಿಂದ ಹೇಗೆ ಜಾಗತಿಕವಾಗಿ ಗುರುತಿಸಲ್ಪಟ್ಟಿತು ? ಹೇಗೆ ಅಲ್ಲೊಂದು ದೊಡ್ಡ ಶಿಕ್ಷಣ ಸಮೂಹವೇ ಬೆಳೆದು ನಿಂತಿತು ? ಆಮೇಲೆ ತಂದೆ ಕಟ್ಟಿ ನಿಲ್ಲಿಸಿದ ಅದೇ ಬೃಹತ್ ಶಿಕ್ಷಣ ಸಾಮ್ರಾಜ್ಯದ ಮೇಲೆ ನಿಯಂತ್ರಣಕ್ಕಾಗಿ ಅಲ್ಲೊಂದು ಕೊಲೆಯೇ ಆಗಿ ಹೋಯಿತು ಎಂಬ ದುರಂತ ಕತೆ ಇದು.
ಮಲೆನಾಡ ಮಗ್ಗಲು ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನದ ಜ್ಯೋತಿ ಬೆಳಗಿಸಿದವರು ಕುರುಂಜಿ ವೆಂಕಟರಮಣ ಗೌಡರು. ಸುಳ್ಯವನ್ನು ಪ್ರಪಂಚದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದವರು ಅವರು. ಸುಳ್ಯದ ಅಮರಶಿಲ್ಪಿ ಎಂದೇ ಡಾ. ಕುರುಂಜಿ ವೆಂಕಟ್ರಮಣ ಗೌಡರನ್ನು ಸ್ಮರಿಸಲಾಗುತ್ತದೆ. ಕೃಷಿಕ ಕುಟುಂಬದಿಂದ ಬಂದಿದ್ದ ಗೌಡರು ಜೀವನೋಪಾಯಕ್ಕೆ ಸಣ್ಣ ಗೂಡಂಗಡಿ ಇಟ್ಟುಕೊಂಡಿದ್ದವರು. ಆದರೆ ಅವರ ದೂರದೃಷ್ಟಿ, ದೃಢ ಸಂಕಲ್ಪ ಛಲದಿಂದ ಸುಳ್ಯದಲ್ಲಿ 1976ರಲ್ಲಿ ಅಲ್ಲಿನ ಮುಳ್ಳಗಂಟಿ ಪ್ರದೇಶದಲ್ಲಿ ಅವರು ಪ್ರಾರಂಭಿಸಿದ ಒಂದು ವಿದ್ಯಾಸಂಸ್ಥೆ ಸುಳ್ಯ, ಬೆಂಗಳೂರು, ಮಡಿಕೇರಿ ಸಹಿತ ವಿವಿಧೆಡೆ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಬೃಹತ್ ಸಾಮ್ರಾಜ್ಯವೇ ಆಗಿ ಬೆಳೆಯಿತು. ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್, ನರ್ಸಿಂಗ್, ಪಾಲಿಟೆಕ್ಣಿಕ್, ಕಾನೂನು ಸಹಿತ ಅಲ್ಲಿ ಸಿಗದ ಶಿಕ್ಷಣವೇ ಇಲ್ಲ ಎಂಬಷ್ಟು ದೊಡ್ಡ ಶಿಕ್ಷಣ ಸಮೂಹವಾಯಿತು.
ಆ ಕುರುಂಜಿ ವೆಂಕಟರಮಣ ಗೌಡರ ಹಿರಿಮಗ ಡಾ. ಚಿದಾನಂದ ಕೆ.ವಿ , ಕಿರಿಯ ಮಗ ರೇಣುಕಾಪ್ರಸಾದ್ ಕೆ.ವಿ , ಮಗಳು ಗೋವರ್ಧಿನಿ. ಡಾ. ಚಿದಾನಂದ ಕೆ.ವಿ ಅಧ್ಯಕ್ಷರಾಗಿ, ರೇಣುಕಾಪ್ರಸಾದ್ ಕೆ.ವಿ ಪ್ರಧಾನ ಕಾರ್ಯದರ್ಶಿಯಾಗಿ ಕುರುಂಜಿಯವರ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ನಡೆಸಿಕೊಂಡು ಬಂದಿದ್ದರು. ಜೊತೆಗೆ ಸೊಸೆಯಂದಿರು ಹಾಗು ಪುತ್ರಿ ಕೂಡ ಸಾಥ್ ನೀಡಿದ್ದರು.
ಆದರೆ ಅಲ್ಲಿಂದಲೇ ಸಮಸ್ಯೆಯೂ ಪ್ರಾರಂಭವಾಯಿತು. ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಕುರುಂಜಿಯವರು ಹಿರಿಯ ಪುತ್ರ ಕೆ.ವಿ.ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್‌ರಿಗೆ ವಿಭಜನೆ ಮಾಡಿಕೊಟ್ಟಿದ್ದರು.
ಈ ವೇಳೆ ಪ್ರೊ.ಎ.ಎಸ್.ರಾಮಕೃಷ್ಣ ಎಂಬವರು ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುಳ್ಯದ ಅಜ್ಜಾವರದ ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ಸ್ನಿಕ್ ನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದವರು. ಬಳಿಕ ಅದೇ ಕಾಲೇಜಿನ ಪ್ರಾಂಶುಪಾಲರಾದರು. ಅವರ ಕಾರ್ಯವೈಖರಿಯನ್ನು ಮೆಚ್ಚಿ ಕುರುಂಜಿಯವರು ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದರು.
ತಂದೆ ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣರ ಸಲಹೆ ಮೇರೆಗೆ ಮಾಡಿದ್ದಾರೆ ಎಂದು ಕಿರಿಯ ಪುತ್ರ ಡಾ. ರೇಣುಕಾ ಪ್ರಸಾದ್ ಭಾವಿಸಿದ್ದರು. ಅಲ್ಲದೆ ಚಿದಾನಂದರ ಪರವಾಗಿ ಕೆವಿಜಿ ಮೆಡಿಕಲ್ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣ ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್ ಇದರಿಂದ ತೀವ್ರ ಅಸಮಾಧಾನಗೊಂಡಿದ್ದರು.
ಆದರೆ ಇದೇ ಸಂಶಯ, ಅಸಹನೆಗಳು ಒಬ್ಬ ಪ್ರಾಧ್ಯಾಪಕ ಹಾಗು ಆಡಳಿತಾಧಿಕಾರಿಯ ಕೊಲೆವರೆಗೆ ಹೋಗಿ ತಲುಪಬಹುದು ಎಂದು ಯಾರೂ ಊಹಿಸಿರಲೇ ಇಲ್ಲ. 2011 ಏಪ್ರಿಲ್ 28ರಂದು ಸಂಜೆ 7.45 ರ ವೇಳೆಗೆ ಸುಳ್ಯದ ಅಂಬಟೆಡ್ಕ ಬಳಿಯ ಶ್ರೀ ಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಚ್ಚಿ ಬರ್ಬರವಾಗಿ ಕೊಲೆ ನಡೆಸಿದ್ದರು.
ಸುಳ್ಯವೇ ಬೆಚ್ಚಿ ಬಿದ್ದಿತು. ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ವ್ಯಕ್ತಿ, ಕಾಲೇಜಿನ ಆಡಳಿತಾಧಿಕಾರಿಯಾಗಿದ್ದವರು ಈ ರೀತಿ ಬರ್ಬರವಾಗಿ ಕೊಲೆಯಾಗಿದ್ದು ಸುಳ್ಯದ ಜನರಿಗೆ ಆಘಾತ ತಂದಿತ್ತು. ಆದರೆ ಕೊಲೆಯ ತನಿಖೆ ಪ್ರಾರಂಭವಾಗುತ್ತಿದ್ದಂತೆ ಇನ್ನಷ್ಟು ಆಘಾತಕಾರಿ ವಿವರಗಳು ಒಂದೊಂದಾಗಿ ಬಯಲಿಗೆ ಬಂದವು. ದ್ವೇಷ ಹಾಗು ಅಸಹನೆಯಿಂದ ಕುರುಂಜಿಯವರ ಕಿರಿಯ ಪುತ್ರ ಹಾಗು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಅವರೇ ರಾಮಕೃಷ್ಣರ ಕೊಲೆಗೆ ಸುಪಾರಿ ನೀಡಿದ್ದರು ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಅವರ ಬಂಧನವಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಡಾ. ರೇಣುಕಾ ಪ್ರಸಾದ್ ಮೊದಲ ಆರೋಪಿಯಾದರು. ಅವರ ಸಹಿತ ಒಟ್ಟು ಏಳು ಆರೋಪಿಗಳಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಅಕ್ಟೋಬರ್ 21ರಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸರಕಾರ 2017ರಲ್ಲಿ ಹೈಕೋರ್ಟಿಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು.
ಇದೀಗ ರೇಣುಕಾಪ್ರಸಾದ್ ಹಾಗೂ ಇತರ ಐವರು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕಳೆದ ವಾರ ರದ್ದುಗೊಳಿಸಿ ಎಲ್ಲರನ್ನೂ ಕೊಲೆ ಮತ್ತು ಅಪರಾಧ ಒಳಸಂಚಿನ ಕೃತ್ಯದಲ್ಲಿ ದೋಷಿ ಎಂದು ಘೋಷಿಸಿತ್ತು. ಏಳನೇ ಆರೋಪಿಯಾಗಿದ್ದ ಹೆಚ್.ಯು.ನಾಗೇಶ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಡಾ.ರೇಣುಕಾಪ್ರಸಾದ್, ಮನೋಜ್ ರೈ, ಎಚ್.ಆರ್. ನಾಗೇಶ್, ವಾಮನ್ ಪೂಜಾರಿ ಹಾಗು ಭವಾನಿಶಂಕರ್ ಗೆ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಒಬ್ಬ ಆರೋಪಿ ಶರಣ್ ಕೋರ್ಟ್ ಗೆ ಹಾಜರಾಗಿರಲಿಲ್ಲ. ಆತನಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿಲ್ಲ.
ಈಗ ಡಾ ರೇಣುಕಾ ಪ್ರಸಾದ್ ಗೆ ಜೀವಾವಧಿ ಶಿಕ್ಷೆಯಾದ ಬೆನ್ನಿಗೇ ಮತ್ತೆ ಸುಳ್ಯದಲ್ಲಿ ಚಟುವಟಿಕೆ ಗರಿಗೆದರಿದೆ. ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಗಳಿಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಪದಾಧಿಕಾರಿಗಳು ಹೋಗಿ ಸಂಸ್ಥೆಯ ಲೆಕ್ಕಪತ್ರ ಹಾಗು ದಾಖಲೆಗಳನ್ನು ಕೇಳಿದ್ದಾರೆ. ಆದರೆ ಅವರ ಉಸ್ತುವಾರಿಯಲ್ಲಿದ್ದ ಶಿಕ್ಷಣ ಸಂಸ್ಥೆಗಳನ್ನು ಯಾವುದೇ ಸಮಸ್ಯೆ ಇಲ್ಲದಂತೆ ಮುಂದುವರಿಸಿಕೊಂಡು ಹೋಗಲು ನಾವು ಸಮರ್ಥರಿದ್ದೇವೆ ಎಂದು ರೇಣುಕಾ ಪ್ರಸಾದ್ ಅವರ ಪತ್ನಿ ಡಾ.ಜ್ಯೋತಿ ಆರ್ ಪ್ರಸಾದ್ ಸುದ್ದಿ ಗೋಷ್ಠಿ ಮಾಡಿ ಹೇಳಿದ್ದಾರೆ.
ಅದೇ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಅಧೀನದಲ್ಲಿರುವ ಕೆವಿಜಿ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಆಸ್ತಿ. ಇದರ ಹಿತದೃಷ್ಠಿಯಿಂದ ಸೂಕ್ತ, ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೆವಿಜಿ ಪಾಲಿಟಕ್ನಿಕ್ ಕಾಲೇಜಿಗೆ ಆಡಳಿತ ಮಂಡಳಿ ಸದಸ್ಯರು ಭೇಟಿ ನೀಡಿದ್ದಾರೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‍ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ತಿಳಿಸಿದ್ದಾರೆ. ಸುಳ್ಯದ ಪಾಲಿಗೆ ಹೆಮ್ಮೆಯ ಸಂಕೇತವಾಗಿದ್ದ ಕುರುಂಜಿ ಶಿಕ್ಷಣ ಸಂಸ್ಥೆಗಳ ಮೇಲಿನ ಹಿಡಿತಕ್ಕಾಗಿ ಸುಶಿಕ್ಷಿತರೇ ಕೊಲೆ ಮಾಡಿಸುವವರೆಗೆ ಹೋಗಿದ್ದು ಒಂದು ದೊಡ್ಡ ದುರಂತ.