ಅಸ್ಸಾಂ ನಲ್ಲಿ ಮುಸ್ಲಿಮರ ಜನಸಂಖ್ಯೆ ಭಾರೀ ಹೆಚ್ಚಳವಾಗಿದ್ದು ನಿಜವೇ?

Update: 2024-07-20 13:52 GMT

ಸಾಂದರ್ಭಿಕ ಚಿತ್ರ

ಅಸ್ಸಾಮ್ ನಲ್ಲಿ ಮುಸ್ಲಿಮ್ ಜನಸಂಖ್ಯೆ ಈಗ 40 ಶೇಕಡವನ್ನು ತಲುಪಿದ್ದು, ‘‘ಬದಲಾಗುತ್ತಿರುವ ಜನಸಂಖ್ಯಾ ಸ್ವರೂಪ’’ವೇ ನನಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ಎಲ್ಲಾ ಮಿತಿಗಳನ್ನು ಮೀರಿ ನಾಚಿಕೆಯಿಲ್ಲದೆ ಹಸಿ ಸುಳ್ಳು ಹೇಳುವವರ ಪಟ್ಟಿಯಲ್ಲಿ ಮೊದಲು ಬರಬೇಕಾದ ಹೆಸರು ಹಿಮಂತ ಬಿಸ್ವಾ ಶರ್ಮ ಅವರದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದವರು ತಮ್ಮ ಹೊಸ ಮಾಲಕರನ್ನ ಖುಷಿಪಡಿಸಲು ಅವರಿಗಿಂತ ಹೆಚ್ಚು ಪ್ರಖರವಾಗಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವುದು ರೂಢಿಯಾಗಿ ಬಿಟ್ಟಿದೆ. ಈ ರಾಜಕಾರಣಿಗಳಲ್ಲಿ ತುಂಬಿರುವ ಮುಸಲ್ಮಾನರ ವಿರುದ್ಧದ ದ್ವೇಷವನ್ನು ತೆಗೆದು ಹಾಕಿದ್ರೆ ಅವರ ರಾಜಕೀಯ ವೃತ್ತಿ ಜೀವನದಲ್ಲಿ ಏನೂ ಉಳಿಯಲ್ಲ. ಮುಸಲ್ಮಾನರ ವಿರುದ್ಧ ಅವರು ಹರಡುತ್ತಿರುವ ದ್ವೇಷ ಮತ್ತು ಸುಳ್ಳಿನ ಬಲದಲ್ಲೇ ಅವರ ಇಡೀ ರಾಜಕೀಯ ಜೀವನ ನಿಂತಿದೆ. ಅದೊಂದೇ ಅವರ ಬಂಡವಾಳ ಎಂದು ಅಸ್ಸಾಂ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

ಹಿಮಂತ ಬಿಸ್ವಾ ಸರ್ಮ ಮುಸಲ್ಮಾನರ ವಿರುದ್ಧ ದ್ವೇಷ ಹರಡುವುದು ಇದು ಮೊದಲ ಬಾರಿಯಲ್ಲ. ಆದರೆ ಈ ಬಾರಿಯಂತೂ ಎಲ್ಲಾ ಮಿತಿಗಳನ್ನು ಮೀರಿ ತನ್ನ ಮತಾಂಧತೆ ಜೊತೆ ತನ್ನ ಮೂರ್ಖತನವನ್ನೂ ಜಗತ್ತಿನೆದುರು ಇಟ್ಟು ಬಿಟ್ಟಿದ್ದಾರೆ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅಸ್ಸಾಮಿನಲ್ಲಿ 1951 ರಲ್ಲಿ 12 ಶೇಕಡವಿದ್ದ ಮುಸಲ್ಮಾನರ ಜನಸಂಖ್ಯೆ 2024ರಲ್ಲಿ 40 ಶೇಕಡವಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಹೇಳಿದ್ದಾರೆ. ಇದು ಬಹಳ ಗಂಭೀರ ವಿಷಯ. ಇದು ನನಗೆ ರಾಜಕೀಯದ ಪ್ರಶ್ನೆ ಅಲ್ಲ, ಇದು ನನಗೆ ಬದುಕುವ ಮತ್ತು ಸಾಯುವ ವಿಷಯ ಎಂದೂ ಅವರು ಹೇಳಿದ್ದಾರೆ. ಅಸ್ಸಾಂ 2041 ರಲ್ಲಿ ಮುಸ್ಲಿಂ ಬಾಹುಳ್ಯ ರಾಜ್ಯವಾಗಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂಟರ್ನೆಟ್ ನಲ್ಲಿ ಜನಸಾಮಾನ್ಯರೂ ಅಂಕಿ ಅಂಶಗಳನ್ನು, ಮಾಹಿತಿಗಳನ್ನು ಪರಿಶೀಲಿಸಿ ಕೆಲವೇ ನಿಮಿಷಗಳಲ್ಲಿ ಖಾತರಿಪಡಿಸಿಕೊಳ್ಳಬಹುದಾದ ಕಾಲದಲ್ಲಿ ಇಷ್ಟು ಹಸಿ ಸುಳ್ಳು ಹೇಳಲು ಹಿಮಂತ ಶರ್ಮ ಅವರಿಗೆ ಅದೆಲ್ಲಿಂದ ಇಷ್ಟು ಧೈರ್ಯ ಬಂತು? ತಾನು ಒಂದು ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿರುವವನು ಎಂಬ ಕನಿಷ್ಠ ಜ್ಞಾನವಾದರೂ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಹಿಮಂತ ಶರ್ಮ ಹೇಳಿಕೆ ನೂರಕ್ಕೆ ನೂರು ಶೇಕಡ ಹಸಿ ಸುಳ್ಳು.

ಸತ್ಯಾಂಶವೇನು?:

ದೇಶದಲ್ಲಿ ಕಳೆದ 13 ವರ್ಷಗಳಿಂದ ಜನಗಣತಿ ನಡೆದೇ ಇಲ್ಲ. ನಡೆಸಬೇಕಾದದ್ದು ಮೋದಿ ಸರಕಾರ. ಆದರೆ ಅದು ಜನಗಣತಿ ನಡೆಸಿಯೇ ಇಲ್ಲ. 1881 ರ ಬಳಿಕ ಇದೇ ಮೊದಲ ಬಾರಿ ನಿಯಮಿತವಾಗಿ ದೇಶದ ಜನಗಣತಿ ನಡೆದಿಲ್ಲ. ಆದ್ದರಿಂದ ಈಗ ಇರೋದು 2011 ರಲ್ಲಿ ನಡೆದಿರುವ ಜನಗಣತಿಯ ಅಂಕಿ ಅಂಶಗಳು ಮಾತ್ರ.

1951 ರಲ್ಲಿ ಅಸಾಮಿನ ಮುಸ್ಲಿಂ ಜನಸಂಖ್ಯೆ 12 ಶೇಕಡವಿತ್ತು ಎಂದು ಹಿಮಂತ ಹೇಳಿದ್ದಾರೆ. ನಂತರ ಎಕ್ಸ್ ಪೋಸ್ಟ್ ಒಂದರಲ್ಲಿ 14 ಶೇಕಡ ಎಂದು ಹೇಳಿದರು.

ಇದು ನಿಜವೇ ? ಇಲ್ಲ. ಇದು ಹಸಿ ಸುಳ್ಳು. 1951 ರಲ್ಲಿ ಸ್ವಾತಂತ್ರ್ಯದ ನಂತರ ಭಾರತದಲ್ಲಿ ನಡೆಸಿದ ಮೊದಲ ಜನಗಣತಿ ಪ್ರಕಾರ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ 24.68% ಇತ್ತು. ಅಸ್ಸಾಂ ಮುಖ್ಯಮಂತ್ರಿ ಹೇಳಿಕೊಂಡಂತೆ 12% ಅಥವಾ 14% ಅಲ್ಲ. ಅವರದ್ದೇ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿಯೂ ಈ ಡೇಟಾ ಲಭ್ಯವಿದೆ.

ಅಸ್ಸಾಮಿನ ಮುಸ್ಲಿಮರ ಜನಸಂಖ್ಯೆ 40 ಶೇಕಡ ಹೌದೇ ?

ಇಲ್ಲ. ಇದು ಕೂಡ ಹಸಿ ಸುಳ್ಳು. 2011 ರ ಜನಗಣತಿಯ ಪ್ರಕಾರ, ಅಸ್ಸಾಂ ನಲ್ಲಿ 34.22 ಶೇಕಡಾ ಅಂದ್ರೆ ಒಟ್ಟು 1, ಕೋಟಿ 6 ಲಕ್ಷ 79,345 ಮುಸ್ಲಿಂ ಜನಸಂಖ್ಯೆ ಇದೆ.

ಹಾಗಾದರೆ 1951 ರಿಂದ 2011 ರ ನಡುವೆ ಅಸ್ಸಾಮಿನ ಮುಸ್ಲಿಂ ಜನಸಂಖ್ಯೆ ಹತ್ತು ಶೇಕಡ ಹೆಚ್ಚಾಗಿದೆ. ಇನ್ನು 1951ರ ಜನಗಣತಿಯಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರು ಹೆಸರು ನಮೂದಿಸುವಲ್ಲಿ ವಿಫಲರಾಗಿದ್ದರು ಎಂಬ ಮಾತು ಬೇರೆನೇ ಇದೆ. ಹಾಗೆ ಆಗಿದ್ದಲ್ಲಿ ಅಸ್ಸಾಮಿನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದ ಶೇಕಡ ಹತ್ತು ಶೇಕಡಾಕ್ಕಿಂತಲೂ ಕಡಿಮೆ.

ವಾಸ್ತವ ಹೀಗಿರುವಾಗ ಹಿಮಂತ ಶರ್ಮ ಅಸ್ಸಾಮಿನಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ 28 ಶೇಕಡಾ ಹೆಚ್ಚಳವಾಗಿದೆ ಎಂದಿದ್ದು ದೊಡ್ಡ ಸುಳ್ಳು.

ಸಾವಿರಾರು ಕೋಟಿ ಬಂಡವಾಳ ಹೂಡಿ, ನೂರಾರು ಜನ ಕೆಲಸ ಮಾಡುವ ಈ ಮೀಡಿಯಾಗಳು ಹಿಮಂತಾ ಅವರ ಸುಳ್ಳನ್ನು ಬಯಲು ಮಾಡುವುದರ ಬದಲು ಹಿಮಂತಾ ಹೇಳಿದ ಹಸಿ ಸುಳ್ಳನ್ನೇ ನಿಜ ಎಂಬಂತೆ ಪ್ರಚಾರ ಮಾಡಿವೆ.

ಇನ್ನು ಮುಸ್ಲಿಂ ಜನಸಂಖ್ಯೆ ಬಗ್ಗೆ ಹೀಗೆ ಹಸಿ ಹಸಿ ಸುಳ್ಳು ಹೇಳಲು ಹಿಮಂತಾ ಸರ್ಮಾ ಅವರಿಗೆ ಅನೇಕ ಅನಿವಾರ್ಯತೆಗಳೂ ಇವೆ. ಲೋಕಸಭಾ ಚುನಾವಣೆಯಲ್ಲಿ ಅಸ್ಸಾಂ ನಲ್ಲಿ ಈ ಬಾರಿ ಬಿಜೆಪಿ ಒಂಬತ್ತು ಕಾಂಗ್ರೆಸ್ ಮೂರು ಸೀಟು ಗೆದ್ದಿದ್ದರೂ ಕಾಂಗ್ರೆಸ್ ಅಲ್ಲಿ ಸಾಕಷ್ಟು ಚೇತರಿಸಿಕೊಂಡಿದೆ. ಒಂದು ಸೀಟಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕೀಬುಲ್ ಹಸನ್ ಹತ್ತು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನೊಂದು ಸೀಟಲ್ಲಿ ಹಿಮಂತ ಸರ್ಮಾ ಸಹಿತ ಇಡೀ ಅಸ್ಸಾಂ ಸರಕಾರ ಪ್ರಚಾರ ಮಾಡಿದ್ರೂ ಮಾಜಿ ಸಿಎಂ ತರುಣ್ ಗೊಗೋಯಿ ಪುತ್ರ ಗೌರವ್ ಗೊಗೋಯಿ ಗೆದ್ದು ಬಂದಿದ್ದಾರೆ.

2026 ರಲ್ಲಿ ವಿಧಾನಸಭಾ ಚುನಾವಣೆಗೆ ಗೌರವ್ ಗೊಗೋಯಿ ಅವರೇ ಕಾಂಗ್ರೆಸ್ ಅನ್ನು ಮುನ್ನಡೆಸುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆ , ನಿರುದ್ಯೋಗದಂತಹ ಸಮಸ್ಯೆಗಳು ಅಸ್ಸಾಂ ಜನರನ್ನು ಕಾಡುತ್ತಿವೆ. ಆ ಸಮಸ್ಯೆಗಳಿಗೆ ಉತ್ತರ ಹಿಮಂತಾ ಶರ್ಮಾ ಬಳಿ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News