22 ಇಲಾಖೆಗಳಲ್ಲಿ ಅರ್ಧ ವರ್ಷ ಕಳೆದರೂ 32,250.02 ಕೋಟಿ ರೂ. ಖರ್ಚು ಮಾಡದೇ ಬಾಕಿ

Update: 2024-10-05 11:06 GMT

Photo : indiatvnews

ಬೆಂಗಳೂರು, ಅ.4: ಇಲಾಖೆಗಳಲ್ಲಿ ವಿಲೇವಾರಿ ಆಗದೇ ಇರುವ ಕಡತಗಳ ಸಂಖ್ಯೆ ಬೆಟ್ಟದಷ್ಟು ಬೆಳೆದು ನಿಂತಿದ್ದರೆ ಇತ್ತ ಬಿಡುಗಡೆ ಮಾಡಿದ್ದ ಅನುದಾನದ ಪೈಕಿ 22 ಇಲಾಖೆಗಳು ಅರ್ಥಿಕ ಸಾಲಿನ ಅರ್ಧ ವರ್ಷ ಕಳೆದರೂ 32,250.02 ಕೋಟಿ ರೂಪಾಯಿಯಷ್ಟು ಖರ್ಚು ಮಾಡದೆ ಹಾಗೇ ಇಟ್ಟಿವೆ.

ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2024ರ ಅಕ್ಟೋಬರ್ 1ರಂದು ನಡೆದಿದ್ದ ಸರಕಾರದ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ 32,250.02 ಕೋಟಿ ರೂ. ಖರ್ಚಾಗದೇ ಬಾಕಿ ಇರುವ ಸಂಗತಿ ಕುರಿತು ಚರ್ಚೆಯಾಗಿದೆ.

ಈ ಸಭೆಗೆ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳ ದಾಖಲೆಗಳು "the-file.in"ಗೆ ಲಭ್ಯವಾಗಿದೆ. ಕಡತಗಳನ್ನು ಬಾಕಿ ಉಳಿಸಿಕೊಳ್ಳುವುದರಲ್ಲಿ ಪೈಪೋಟಿ ಒಡ್ಡಿರುವ ಇಲಾಖೆಗಳು, ಅನುದಾನವನ್ನು ಖರ್ಚು ಮಾಡುವುದರಲ್ಲಿ ಮಾತ್ರ ಹಿಂದೆ ಬಿದ್ದಿವೆ. 22 ಇಲಾಖೆಗಳ ಪೈಕಿ ಒಂದು ಇಲಾಖೆಯೂ ಶೇ.50ರ ಗಡಿಯನ್ನೂ ದಾಟಿಲ್ಲ.

ಸಚಿವ ಝಮೀರ್ ಅಹ್ಮದ್ ಖಾನ್, ಭೋಸರಾಜು, ಡಾ.ಶರಣ ಪ್ರಕಾಶ್ ಪಾಟೀಲ್, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ಸಂತೋಷ್ ಲಾಡ್, ಎಂ.ಬಿ.ಪಾಟೀಲ್, ಕೆ.ವೆಂಕಟೇಶ್ ಅವರು ಸಚಿವರಾಗಿರುವ ಇಲಾಖೆಗಳೇ ಅತಿ ಹೆಚ್ಚಿನ ಮೊತ್ತವನ್ನು ಉಳಿಸಿಕೊಂಡಿವೆ.

ಸಣ್ಣ ನೀರಾವರಿ, ತೋಟಗಾರಿಕೆ, ಪಶು ಸಂಗೋಪನೆ, ಕರ್ನಾಟಕ ವಿಧಾನಸಭೆ, ಪರಿಷತ್, ವೈದ್ಯಕೀಯ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ, ಆಹಾರ, ಯುವ ಸಬಲೀಕರಣ, ಪ್ರವಾಸೋದ್ಯಮ, ರೇಷ್ಮೆ, ಮೀನುಗಾರಿಕೆ, ವಾರ್ತಾ, ವಾಣಿಜ್ಯ ಕೈಗಾರಿಕೆ, ಮೂಲಭೂತ ಸೌಕರ್ಯ, ಪರಿಶಿಷ್ಟ ಪಂಗಡ, ಇಂಧನ, ಕನ್ನಡ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಕಾರ್ಮಿಕ ಇಲಾಖೆಯಲ್ಲಿ 2024ರ ಸೆ.21ರ ಅಂತ್ಯಕ್ಕೆ ಒಟ್ಟು 32,250.02 ಕೋಟಿ ರೂ. ಖರ್ಚಾಗದೆ ಹಾಗೇ ಉಳಿದುಕೊಂಡಿರುವುದು ಗೊತ್ತಾಗಿದೆ.

2024-25ನೇ ಸಾಲಿನಲ್ಲಿ ಒಟ್ಟು 3.28 ಲಕ್ಷ ಕೋಟಿ ರೂ. ಅನುದಾನವನ್ನು ಬಜೆಟ್ನಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಸೆ.21ರ ಅಂತ್ಯಕ್ಕೆ 1.26 ಲಕ್ಷ ಕೋಟಿ ರೂ. ಬಿಡುಗಡೆ ಆಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ. 40.67ರಷ್ಟಿತ್ತು ಈ ಪೈಕಿ 1.11 ಲಕ್ಷ ಕೋಟಿ ರೂ. ಒಟ್ಟು ವೆಚ್ಚವಾಗಿದೆ. ಇದು ಸಹ ಒಟ್ಟು ಅನುದಾನಕ್ಕೆ ಶೇ.34ರಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ ಶೇ.27.37ರಷ್ಟು ಮಾತ್ರ ವೆಚ್ಚವಾಗಿದೆ ಎಂದು ತಿಳಿದು ಬಂದಿದೆ.

ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 2,388.49 ಕೋಟಿ ರೂ. ಅನುದಾನದ ಪೈಕಿ 1,003.54 ಕೋಟಿ ರೂ. (ಶೇ.42.02) ಬಿಡುಗಡೆಯಾಗಿದೆ. ಇದರಲ್ಲಿ ಸೆ.21ರ ಅಂತ್ಯಕ್ಕೆ 761.92 ಕೋಟಿ ರೂ. ಮಾತ್ರ ಖರ್ಚಾಗಿದೆ. ಖರ್ಚುಮಾಡಲು ಇನ್ನೂ 241.63 ಕೋಟಿ ರೂ. ಬಾಕಿ ಇರುವುದು ಗೊತ್ತಾಗಿದೆ.

ತೋಟಗಾರಿಕೆ ಇಲಾಖೆಯಲ್ಲಿ 221.35 ಕೋಟಿ ರೂ., ಪಶು ಸಂಗೋಪನೆಯಲ್ಲಿ 162.16 ಕೋಟಿ ರೂ., ಕರ್ನಾಟಕ ವಿಧಾನಸಭೆ, ಪರಿಷತ್ 159.69 ಕೋಟಿ ರೂ., ವೈದ್ಯಕೀಯ ಶಿಕ್ಷಣದಲ್ಲಿ 140.07 ಕೋಟಿ ರೂ., ವಾಣಿಜ್ಯ ಕೈಗಾರಿಕೆ (ಬೃಹತ್) 134.70 ಕೋಟಿ ರೂ., ಅಲ್ಪಸಂಖ್ಯಾತರ ಕಲ್ಯಾಣದಲ್ಲಿ 133.05 ಕೋಟಿ ರೂ., ಆಹಾರ ಇಲಾಖೆ 94.82 ಕೋಟಿ ರೂ., ವಾಣಿಜ್ಯ ಕೈಗಾರಿಕೆ (ಸಣ್ಣ, ಜವಳಿ, ಗಣಿ) 82.86 ಕೋಟಿ ರೂ., ಕಾರ್ಮಿಕ ಇಲಾಖೆ 76.25 ಕೋಟಿ ರೂ. ಬಾಕಿ ಇದೆ.

ಯುವ ಸಬಲೀಕರಣದಲ್ಲಿ 72.78 ಕೋಟಿ, ಮೂಲಭೂತ ಸೌಕರ್ಯ 58.07 ಕೋಟಿ, ಪ್ರವಾಸೋದ್ಯಮ 45.12 ಕೋಟಿ, ಪರಿಶಿಷ್ಟ ಪಂಗಡಗಳು 33.01 ಕೋಟಿ ರೂ., ರೇಷ್ಮೆ 30.49 ಕೋಟಿ ರೂ., ಇಂಧನ 23.26 ಕೋಟಿ ರೂ., ಮೀನುಗಾರಿಕೆ 20.30 ಕೋಟಿ ರೂ., ಇ-ಆಡಳಿತ 16.04 ಕೋಟಿ ರೂ., ಸಿಬ್ಬಂದಿ ಆಡಳಿತ ಸುಧಾರಣೆ (ಆಡಳಿತ ಸುಧಾರಣೆ) 13.24 ಕೋಟಿ ರೂ., ಕನ್ನಡ ಸಂಸ್ಕೃತಿ 11.78 ಕೋಟಿ ರೂ., ವಾರ್ತಾ 9.12 ಕೋಟಿ ರೂ., ಮಾಹಿತಿ ತಂತ್ರಜ್ಞಾನ 1.46 ಕೋಟಿ ರೂ. ಖರ್ಚಾಗದೇ ಬಾಕಿ ಇರುವುದು ತಿಳಿದು ಬಂದಿದೆ.

2023-24ನೇ ಸಾಲಿಗೆ ಹೋಲಿಸಿದರೆ ಸೆಪ್ಟಂಬರ್ ಅಂತ್ಯಕ್ಕೆ ಶೇ. 31ರಷ್ಟು ಅನುದಾನ ಖರ್ಚು ಮಾಡಿತ್ತು. 2024-25ನೇ ಸಾಲಿನ ಸೆಪ್ಟಂಬರ್ ಅಂತ್ಯಕ್ಕೆ ಶೇ.34.96ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ ಶೇ.3ರಷ್ಟು ಮಾತ್ರ ಖರ್ಚಾಗಿರುವುದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - -ಜಿ.ಮಹಾಂತೇಶ್

contributor

Similar News