ಹಲವು ಕಾಯಿಲೆಗಳಿಗೆ ದಿವ್ಯೌಷಧ ಚಕ್ಕೋತ
ಹೊಸಕೋಟೆ: ಚಕ್ಕೋತ ಅನೇಕ ರೋಗಗಳಿಗೆ ರಾಮಬಾಣ ಎಂದು ಹೇಳಲಾಗುತ್ತದೆ. ಹಲವು ವರ್ಷಗಳ ಹಿಂದೆ ಈ ಹಣ್ಣನ್ನು ತಾವರೆಕೆರೆ ಗ್ರಾಮ ಪಂಚಾಯತ್ನ ಕಾಳಪ್ಪನಹಳ್ಳಿ ಗ್ರಾಮದಲ್ಲಿ ಬೆಳೆದು ತಾವರೆಕೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು.
ಸುಲಿದ ಕೆಂಪಾದ ಹಣ್ಣನ್ನು ಕಂಡ ತಕ್ಷಣ ಜನರ ಬಾಯಲ್ಲಿ ನೀರು ಬರುತ್ತಿತ್ತು. ಬೆಳೆದ ಬೆಳೆಗಾರರು ನೇರವಾಗಿ ಹಣ್ಣು ಕಿತ್ತು ತಂದು ಸ್ವತಃ ಅವರೇ ಮಾರಾಟ ಮಾಡುತ್ತಿದ್ದರು. ಕಾಲ ಕ್ರಮೇಣ ಮಾರುಕಟ್ಟೆ ಸಮಸ್ಯೆಯಿಂದ ಹೆಚ್ಚಿನ ರೈತರು ಈ ಹಣ್ಣನ್ನು ಬೆಳೆಯುವುದನ್ನು ಕೈ ಬಿಟ್ಟರು.
ಚಕ್ಕೋತ ಹಣ್ಣು ಕ್ಯಾನ್ಸರ್ ವಿರುದ್ಧ ಹೋರಾಡಿ ರಕ್ತ ಪರಿಚಲನೆ ಸರಿಪಡಿಸುವ ಔಷಧೀಯ ಗುಣವಿದೆ. ಹೃದಯದ ಸ್ನಾಯುಗಳಿಗೆ ಬಲ ನೀಡುವ ಶಕ್ತಿಯಿದೆ. ಗ್ಯಾಸ್ಟ್ರಬಲ್ ಕಾಯಿಲೆಗೆ ಇದು ಉತ್ತಮ. ಈ ಹಣ್ಣು ಸಿಹಿಯ ಜೊತೆಗೆ ಹುಳಿ ಹೊಂದಿರುವ ಕಾರಣ ಹಣ್ಣು ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದಿನ ನಿತ್ಯ ತಿನ್ನುವುದರಿಂದ ಮೂತ್ರನಾಳದ ಸೋಂಕನ್ನು ತಡೆಯಬಹುದು. ಇದರಲ್ಲಿ ವಿಟಮಿನ್ ‘ಸಿ’ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಪ್ರಸಕ್ತ ದಿನಗಳಲ್ಲಿ ಕಾಳಪ್ಪನಹಳ್ಳಿ ಗ್ರಾಮದ ರೈತರು ಚಕ್ಕೋತ ಬೆಳೆದಿದ್ದು, ಇದರಲ್ಲಿ ಅಪರೂಪಕ್ಕೆ ಫಸಲು ಕಂಡು ಬರುತ್ತದೆ. ಹಣ್ಣಿನ ಬೆಳೆ ಬಹುತೇಕ ಅಳಿವಿನಂಚಿಗೆ ಸರಿದಿದೆ.
ಚಕ್ಕೋತ ಹಣ್ಣಿಗೆ ಬೇಡಿಕೆಯಿದ್ದರೂ ಸೂಕ್ತ ಮಾರುಕಟ್ಟೆಯ ಕೊರತೆ ಇದೆ. ಸರಕಾರದ ಅಧಿಕಾರಿಗಳು ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸರಕಾರದಿಂದ ಬೆಳೆಗೆ ಪೋತ್ಸಾಹ ಸಿಗುವಂತೆ ಮಾಡಿದರೆ ಅಳಿವಿನಂಚಿನ ಲ್ಲಿರುವ ಚಿಕ್ಕೋತ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ ಎಂದು ರೈತ ಕಾಳಪ್ಪನಹಳ್ಳಿ ಮಾರ್ಕಂಡಪ್ಪ ಹೇಳುತ್ತಾರೆ.
ನರೇಗಾದಲ್ಲಿ ಉತ್ತೇಜಿಸಿ
ಚಕ್ಕೋತ ಬೆಳೆಯಲು ಸರಕಾರ ನರೇಗಾದಲ್ಲಿ ಉತ್ತೇಜನ ನೀಡಬೇಕು. ರೈತರು ಅವರವರ ತೋಟದ ಬದುಗಳ ಪಕ್ಕದಲ್ಲಿ ಮರಗಳನ್ನು ನೆಟ್ಟು ಬೆಳೆಸಲು ಆಯಾ ಗ್ರಾಪಂ ಅಧಿಕಾರಿಗಳು ಪ್ರೋತ್ಸಾಹ ನೀಡಿ ಅಳಿವಿನಂಚಿನಲ್ಲಿರುವ ಚಕ್ಕೋತ ಮರಗಳು ಬೆಳೆಯಲು ಅನುಕೂಲ ಮಾಡಿಕೊಡಬೇಕೆಂದು ಗ್ರಾಹಕ ಮುನೇಂದ್ರ ಹೇಳುತ್ತಾರೆ.