ಮಾನವ ಸಮಾಜಕ್ಕೆ ಆದರ್ಶ ಮಾನವನ ಉಡುಗೊರೆಗಳು

Update: 2024-09-16 04:01 GMT

ಜನರಿಗೆ ಧರ್ಮವನ್ನು ಉಪದೇಶಿಸುತ್ತಿದ್ದ ತಮ್ಮ ಸಂಗಾತಿಗಳಿಗೆ ಪ್ರವಾದಿ ಮುಹಮ್ಮದ್ (ಸ) ನೀಡಿದ ಒಂದು ಉಪದೇಶ ಹೀಗಿತ್ತು:

‘‘ಸುಲಭಗೊಳಿಸಿ, ಕ್ಲಿಷ್ಟಗೊಳಿಸಬೇಡಿ. ಜನರಿಗೆ ಸಾಂತ್ವನ ನೀಡಿ, ಅವರಲ್ಲಿ ಜಿಗುಪ್ಸೆ ಬೆಳೆಸಬೇಡಿ’’. (ಬುಖಾರಿ - 6125) ಒಮ್ಮೆ ಪ್ರವಾದಿ (ಸ) ಹೇಳಿದರು:

‘‘ಖಂಡಿತವಾಗಿಯೂ ಧರ್ಮವು ಸರಳವಾಗಿದೆ. ತನ್ನ ಪಾಲಿಗೆ ಧರ್ಮವನ್ನು ಕಠಿಣವಾಗಿಸಿಕೊಂಡವನು ಖಂಡಿತ ಸೋಲುಣ್ಣುತ್ತಾನೆ’’..... (ಬುಖಾರಿ - 39)

ಸತ್ಯದಲ್ಲಿ ಆಸಕ್ತಿ ಅಥವಾ ಜಿಜ್ಞಾಸೆ ಉಳ್ಳವರಿಗೆ ಪ್ರವಾದಿ ಮುಹಮ್ಮದ್ (ಸ) ಮಾಡಿದ ಅತಿದೊಡ್ಡ ಉಪಕಾರವೇನೆಂದರೆ ಯಾವುದೇ ಗೊಂದಲಕ್ಕೆ ಎಡೆ ಇಲ್ಲದಷ್ಟು, ಸುಲಭವಾಗಿ ತಿರುಚಲಿಕ್ಕೂ ಸಾಧ್ಯವಾಗದಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ಸತ್ಯವನ್ನು ಪರಿಚಯಿಸಿದ್ದು.

ಈ ಜಗತ್ತು, ಇಲ್ಲಿರುವ ಜೀವಜಾಲ ಮತ್ತು ಚರಾಚರಗಳ ಹಿನ್ನೆಲೆ ಏನು? ಅವು ಅಸ್ತಿತ್ವಕ್ಕೆ ಬಂದದ್ದು ಹೇಗೆ? ಏಕೆ? ಈ ಲೋಕದಲ್ಲಿ ಮಾನವ ಬದುಕಿನ ಸ್ವರೂಪವೇನು? ಇಲ್ಲಿ ಮಾನವನ ಸ್ಥಾನ ಏನು? ಅವನ ಆದಿ, ಅಂತ್ಯಗಳೇನು? ಅವನಿಗೊಬ್ಬ ಸೃಷ್ಟಿಕರ್ತನಿದ್ದಾನೆಯೇ? ಆ ಸೃಷ್ಟಿಕರ್ತ ಯಾರು? ಎಂಥವನು? ಈ ಲೋಕದ ಆಚೆಗೆ ಇನ್ನೊಂದು ಲೋಕ ಇದೆಯೇ? ಆ ಲೋಕದ ಸ್ವರೂಪವೇನು? - ಇವೆಲ್ಲ ಎಷ್ಟು ಪ್ರಾಚೀನವೋ ಅಷ್ಟೇ ಆಧುನಿಕ ಪ್ರಶ್ನೆಗಳು. ಇವು ತುಂಬಾ ಆಳವಾದ ಸಂಶೋಧನೆಗೆ ಅರ್ಹವಾದ ವಿಷಯಗಳೆಂಬ ಬಗ್ಗೆ ಸಂದೇಹವಿಲ್ಲ. ಹಾಗೆಯೇ ಇವೆಲ್ಲಾ, ಆಸಕ್ತಿ ಮತ್ತು ಪುರುಸೊತ್ತು ಎರಡೂ ಉಳ್ಳ ಜಿಜ್ಞಾಸುಗಳು ಪರಿಶೋಧನೆಗೆ ಇಳಿದು ತಾವಿಚ್ಛಿಸುವಷ್ಟು ಅಥವಾ ತಮಗೆ ಸಾಧ್ಯವಿರುವಷ್ಟು ದೂರ, ಆಳ ಮತ್ತು ಅಗಲಗಳಿಗೆ ತಲುಪಲು ಅವಕಾಶವಿರುವ ಕ್ಷೇತ್ರಗಳೆಂಬ ಬಗ್ಗೆಯೂ ಸಂಶಯವಿಲ್ಲ. ಪ್ರವಾದಿ ಮುಹಮ್ಮದರು (ಸ) ಪರಿಚಯಿಸಿದ ಧರ್ಮದಲ್ಲಿ ಅಂತಹ ಅನ್ವೇಷಣೆ, ಸಂಶೋಧನೆಗಳಿಗೆ ಧಾರಾಳ ಅವಕಾಶವಿದೆ, ಮಾತ್ರವಲ್ಲ, ಪ್ರೋತ್ಸಾಹ ಕೂಡಾ ಇದೆ. ಆದರೆ ವಿವಿಧ ವಿಷಯಗಳಲ್ಲಿ ಅವರು ಸತ್ಯವನ್ನು ಪರಿಚಯಿಸಿದ ವಿಧಾನ ಹೇಗಿತ್ತೆಂದರೆ ಜಗತ್ತಿನ ಯಾವುದೇ ಭಾಗದ, ಯಾವುದೇ ಕಾಲದ, ಶೈಕ್ಷಣಿಕವಾಗಿ ಯಾವುದೇ ಮಟ್ಟದಲ್ಲಿರುವ, ಸಾಮಾನ್ಯ ಬುದ್ಧಿಯ ಮಾನವನಿಗೂ ಆ ಸತ್ಯಗಳನ್ನು ಅವುಗಳ ಪ್ರಾಥಮಿಕ ರೂಪದಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಆ ಸತ್ಯಗಳನ್ನು ಅರಿಯುವುದಕ್ಕೆ ಯಾವುದೇ ಪಂಡಿತ ಅಥವಾ ಪುರೋಹಿತರ ಅನುಮತಿ, ಆಶೀರ್ವಾದಗಳ ಅಗತ್ಯವಿಲ್ಲ. ಹಲವಾರು ವರ್ಷಗಳ ಧ್ಯಾನ, ನೂರಾರು ಗ್ರಂಥಗಳ ಅಧ್ಯಯನ, ತಜ್ಞರು, ತತ್ವಶಾಸ್ತ್ರಜ್ಞರು, ಪಂಡಿತರು, ಸಾಧಕರು ಮುಂತಾದವರ ಚಾಕರಿ ಅಥವಾ ಭಾರೀ ಗಂಭೀರ ಹಾಗೂ ಸಂಕೀರ್ಣ ಚರ್ಚೆ-ವಾಗ್ವಾದ ಇತ್ಯಾದಿ ಯಾವುದನ್ನೂ ಅವಲಂಬಿಸಿ ಕೂತಿರಬೇಕಾಗಿಲ್ಲ. ಅವೆಲ್ಲಾ ಅಷ್ಟೊಂದು ನೇರ, ಸರಳ ಹಾಗೂ ಸ್ವತಂತ್ರ ಸತ್ಯಗಳು. ಸತ್ಯ ಅಷ್ಟು ಸರಳವಾಗಿ ಬಿಟ್ಟಾಗ ಆ ರಂಗದಲ್ಲಿ ಏಕಸ್ವಾಮ್ಯ, ಅಕ್ರಮ ದಾಸ್ತಾನು ಮತ್ತು ಶೋಷಣೆ, ವಂಚನೆಗಳಿಗೆ ಅವಕಾಶವಿರುವುದಿಲ್ಲ.

ಹೆಚ್ಚಿನೆಲ್ಲಾ ವಿಷಯಗಳಲ್ಲಿ ಮುಹಮ್ಮದರು (ಸ) ಮುಂದಿಟ್ಟ ಸತ್ಯಗಳ ಮೂಲ, ದೇವರ ಕಡೆಯಿಂದ ಅವರಿಗೆ ಅನಾವರಣಗೊಂಡಿದ್ದ ‘ಕುರ್ಆನ್’ ಎಂಬ ಗ್ರಂಥವಾಗಿತ್ತು. ಸಾಕ್ಷಾತ್ ಕುರ್ಆನ್ ಗ್ರಂಥ ಕೂಡಾ ತನ್ನನ್ನು ಪರಿಚಯಿಸುವಾಗ ತನ್ನ ಒಂದು ವಿಶೇಷತೆಯನ್ನು ಈರೀತಿ ವರ್ಣಿಸುತ್ತದೆ:

‘‘ನಾವು ಉಪದೇಶಕ್ಕಾಗಿ ಕುರ್ಆನನ್ನು ಸರಳಗೊಳಿಸಿರುವೆವು......’’ (ಕುರ್ ಆನ್ - 54:17)

ಸ್ವತಃ ಮುಹಮ್ಮದರೇ ಪದೇ ಪದೇ ಒತ್ತಿ ಹೇಳಿರುವಂತೆ, ಅವರು ಮುಂದಿಟ್ಟ ಯಾವ ಸತ್ಯವೂ ಅವರ ಸ್ವಂತ ಆವಿಷ್ಕಾರವಾಗಿರಲಿಲ್ಲ. ಹಾಗೆಯೇ, ಅವು ತೀರಾ ಹೊಸದೂ ಆಗಿರಲಿಲ್ಲ. ಅವು ಕೇವಲ ಯಾವುದಾದರೂ ಒಂದು ಕಾಲ ಅಥವಾ ಒಂದು ದೇಶಕ್ಕೆ ಮಾತ್ರ ಅನ್ವಯಿಸುವ ಸೀಮಿತ ವಾಸ್ತವಗಳಾಗಿರಲಿಲ್ಲ. ಅವು ಎಲ್ಲ ಕಾಲಗಳಲ್ಲೂ ಎಲ್ಲ ಪ್ರದೇಶಗಳಲ್ಲೂ ಜನರಿಗೆ ಪರಿಚಿತವಾಗಿದ್ದ, ವಿಶ್ವ ಮಾನ್ಯ ಸತ್ಯಗಳಾಗಿದ್ದವು. ಜಗತ್ತಿನ ವಿವಿಧೆಡೆಗಳಲ್ಲಿ ಬಂದ ದೇವದೂತರು, ಸಜ್ಜನ ದಾರ್ಶನಿಕರು ಮತ್ತು ಗತಕಾಲದ ಬೇರೆ ಬೇರೆ ದಿವ್ಯ ಗ್ರಂಥಗಳು ಈ ಸತ್ಯಗಳನ್ನೇ ಪ್ರತಿಪಾದಿಸುತ್ತಾ ಬಂದಿದ್ದವು. ಜನರ ಅಜ್ಞಾನ ಹಾಗೂ ಗೊಂದಲಗಳನ್ನೇ ತಮ್ಮ ಬಂಡವಾಳವಾಗಿಸಿಕೊಂಡಿರುವ ಮತ್ತು ಶೋಷಣೆಯನ್ನೇ ಜೀವನೋಪಾಯವಾಗಿಸಿಕೊಂಡಿರುವ ಸ್ಥಾಪಿತ ಹಿತಾಸಕ್ತಿಗಳು, ಸ್ವಾರ್ಥಿಗಳು ಇವರೆಲ್ಲಾ ಸತ್ಯವನ್ನು ಬಚ್ಚಿಡುವುದಕ್ಕೆ ಸಾಕಷ್ಟು ಹುನ್ನಾರಗಳನ್ನು ನಡೆಸಿದ್ದಾರೆ. ತಮ್ಮ ಅನುಕೂಲಕ್ಕನುಗುಣವಾಗಿ ಸತ್ಯವನ್ನೇ ತಿರುಚಿ ಬಿಡುವವರು ಸತ್ಯವನ್ನು ಬೇಕಾಬಿಟ್ಟಿ ವಿಕೃತಿಗೊಳಿಸಿದ್ದಾರೆ. ಹೀಗೆ ವಿವಿಧ ಕಾರಣಗಳಿಂದ ವಿಕ್ಷಿಪ್ತ, ವಿಸ್ಮತ ಅಥವಾ ಲುಪ್ತವಾಗಿಬಿಟ್ಟಿದ್ದ ಸತ್ಯಗಳನ್ನು ಮತ್ತೆ ಪರಿಚಯಿಸುವ ಕೆಲಸವನ್ನಷ್ಟೇ ಮುಹಮ್ಮದ್ (ಸ) ಮಾಡಿದ್ದರು. ಅವರ ಈ ಪಾತ್ರವನ್ನು ಕುರ್ ಆನ್ ನಲ್ಲಿ ಈ ರೀತಿ ಪರಿಚಯಿಸಲಾಗಿದೆ:

‘‘ಹೇಳಿರಿ; ನಾನು ಕೇವಲ ನಿಮ್ಮಂತಹ ಒಬ್ಬ ಮಾನವ. ಏಕ ಮಾತ್ರ ದೇವರೇ ನಿಮ್ಮ ದೇವರೆಂದು ನನಗೆ ದಿವ್ಯವಾಣಿಯನ್ನು ಕಳಿಸಲಾಗಿದೆ. ನೀವು ಸ್ಥಿರವಾಗಿ ಅವನಿಗೆ ನಿಷ್ಠರಾಗಿರಿ ಮತ್ತು ಅವನಲ್ಲಿ ಕ್ಷಮೆಯಾಚಿಸಿರಿ......’’ (ಕುರ್ಆನ್ - 41:6)

‘‘ಹೇಳಿರಿ; ನಾನೊಬ್ಬ ಹೊಸ ಬಗೆಯ ದೂತನೇನೂ ಅಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗೆ ತಿಳಿಯದು. ನಾನಂತು ನನಗೆ ಇಳಿಸಿ ಕೊಡಲಾಗಿರುವ ಸಂದೇಶವನ್ನಷ್ಟೇ ಅನುಸರಿಸುತ್ತೇನೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ’’. (ಕುರ್ಆನ್ - 46:9)

ನಾವು, ನಮ್ಮ ಅಕ್ಕಪಕ್ಕದಲ್ಲಿ ಧರ್ಮ, ಅಧ್ಯಾತ್ಮ, ಪರಮಾರ್ಥ, ನೀತಿಸಂಹಿತೆ ಇತ್ಯಾದಿಗಳ ಕುರಿತಾಗಿ ಕಂಡು ಬರುವ ಹಲವು ಬಗೆಯ ನಂಬಿಕೆ, ಕಲ್ಪನೆ, ತರ್ಕ, ಊಹೆ ಇತ್ಯಾದಿಗಳ ಹಿನ್ನೆಲೆಯಲ್ಲಿ, ಮುಹಮ್ಮದ್ (ಸ) ಮುಂದಿಟ್ಟ ಕೆಲವು ಸತ್ಯಗಳನ್ನು ಪರಾಮರ್ಶಿಸಿ ನೋಡಿದರೆ ಅವುಗಳಲ್ಲಿ ಹಲವು ಅಸಾಮಾನ್ಯ ವಿಶೇಷತೆಗಳನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ. ಉದಾ:

ಮನುಷ್ಯನ ಕುರಿತು:

► ಅತ್ಯಧಿಕ ಪ್ರತಿಭೆ, ಸಾಮರ್ಥ್ಯ ಮತ್ತು ಸೃಜನಶೀಲತೆ ಇರುವ ಜೀವಿಯಾದ್ದರಿಂದ ಜೀವಿಗಳ ಪೈಕಿ ಮನುಷ್ಯನೇ ಸರ್ವಶ್ರೇಷ್ಠ. ಈ ಶ್ರೇಷ್ಠತೆ ಯಾವುದಾದರೂ ದೇಶ, ಭಾಷೆ, ಜನಾಂಗ ಅಥವಾ ಧರ್ಮದವರಿಗೆ ಸೀಮಿತವಲ್ಲ. ಎಲ್ಲ ಕಾಲ ಮತ್ತು ಎಲ್ಲ ಪ್ರದೇಶಗಳ ಎಲ್ಲ ಸ್ತ್ರೀ - ಪುರುಷರಿಗೆ ಅನ್ವಯವಾಗುವ ಶ್ರೇಷ್ಠತೆ ಅದು:

‘‘ನಾವು ಆದಮರ ಸಂತತಿಯನ್ನು ಗೌರವಾನ್ವಿತ ಗೊಳಿಸಿರುವೆವು......’’ (ಕುರ್ಆನ್ - 17:70)

► ಜನ್ಮನಃ ಎಲ್ಲ ಮಾನವರು ಪರಿಶುದ್ಧರು ಹಾಗೂ ಪಾವನರು. ಯಾರೂ ಜನ್ಮನಃ ಪಾಪಿಗಳಲ್ಲ. ಈ ಜಗತ್ತಿನಲ್ಲಿ ಯಾವ ಮನುಷ್ಯನೂ ಯಾವುದೇ ಬಗೆಯ ಪಾಪದ ಹೊರೆಯನ್ನು ಹೊತ್ತು ಜನಿಸಿರುವುದಿಲ್ಲ. ಭೂಮಿಯಲ್ಲಿ ಹುಟ್ಟುವ ಯಾರ ಮೇಲೂ ಯಾವುದೇ ‘ಪೂರ್ವ ಜನ್ಮದ ಕರ್ಮ’ಗಳ ಹೊರೆ ಇಲ್ಲ. ಒಬ್ಬರು ಮಾಡಿದ ತಪ್ಪಿಗೆ ಇನ್ನೊಬ್ಬರು ಹೊಣೆಯಲ್ಲ. ಒಬ್ಬರ ಪಾಪದ ಹೊರೆಯನ್ನು ಇನ್ನೊಬ್ಬರು ಹೊರುವಂತಿಲ್ಲ, ಅದನ್ನು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ. ಒಬ್ಬ ವ್ಯಕ್ತಿಯ ತಪ್ಪಿಗೆ ಅವನ ಸಂತತಿಗಳಾಗಲಿ ಅವನ ಸಮುದಾಯ ಅಥವಾ ಜನಾಂಗವಾಗಲಿ ಹೊಣೆಯಲ್ಲ. ದೇಶ, ಭಾಷೆ, ಜಾತಿ, ಧರ್ಮ, ಜನಾಂಗ ಇತ್ಯಾದಿ ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೆ ಅನ್ವಯಿಸುವ ಸತ್ಯ ಇದು.

ಮಾನವ ಕುಲದ ಮಾರ್ಗದರ್ಶಿಯಾಗಿದ್ದ ಮುಹಮ್ಮದ್ (ಸ) ಅವರ ಪ್ರಕಾರ, ಸ್ವರ್ಗದಲ್ಲಿ ಪ್ರಥಮ ಮಾನವ ಆದಮ್ (ಂಜಚಿm) ಅವರಿಂದ ಒಂದು ತಪ್ಪುಸಂಭವಿಸಿತ್ತು. ಆದರೆ ಆ ಕಾರಣಕ್ಕಾಗಿ ಅವರ ಸಂತತಿಗಳು ತಪ್ಪಿತಸ್ಥರಾಗುವುದಿಲ್ಲ. ಸ್ವತಃ ಆದಮ್ ತಮ್ಮ ತಪ್ಪಿಗಾಗಿ ದೇವರ ಬಳಿ ಕ್ಷಮೆ ಯಾಚಿಸಿದ್ದರು ಮತ್ತು ಅವರಿಗೆ ಕ್ಷಮೆ ನೀಡಲಾಗಿತ್ತು. ಆದ್ದರಿಂದ ಆದಮ್ರ ತಪ್ಪಿನ ಹೆಸರಲ್ಲಿ ಅಥವಾ ಪೂರ್ವ ಜನ್ಮದ ಪಾಪದ ಹೆಸರಲ್ಲಿ ಯಾವ ಮಾನವನೂ ಪಾಪಪ್ರಜ್ಞೆಯಿಂದ ಬಳಲಬೇಕಾದ ಅಗತ್ಯವೇ ಇಲ್ಲ.

► ಯಾವುದೇ ಪಾಪದ ಕಳಂಕವಿಲ್ಲದೆ ಹುಟ್ಟುವ ಮಾನವರು ಹುಟ್ಟಿದ ಬಳಿಕ ಕೂಡಾ ತಮ್ಮಿಂದ ಸಂಭವಿಸಿದ ಪಾಪಗಳ ಕಳಂಕದಲ್ಲಿ ಸದಾ ನರಳುತ್ತಿರಬೇಕಾಗಿಲ್ಲ. ದೇವರ ಆದೇಶಗಳನ್ನು ಉಲ್ಲಂಘಿಸಿದವನು ಅಥವಾ ದೇವರಿಗೆ ಸಂಬಂಧಿಸಿದ ಬಾಧ್ಯತೆಗಳನ್ನು ಈಡೇರಿಸುವಲ್ಲಿ ವಿಫಲನಾದವನು ತನ್ನ ವೈಫಲ್ಯಕ್ಕಾಗಿ ಪಶ್ಚಾತ್ತಾಪ ಪಟ್ಟು ದೇವರ ಬಳಿ ಕ್ಷಮೆ ಬೇಡಿ, ತನ್ನನ್ನು ತಿದ್ದಿಕೊಂಡರೆ ದೇವರು ಕ್ಷಮಿಸುತ್ತಾನೆ ಮತ್ತು ಈ ರೀತಿ ಪಾಪಿಯು ಪಾಪಮುಕ್ತನಾಗುತ್ತಾನೆ. ಹಾಗೆಯೇ, ಮಾನವರಿಗೆ ಅನ್ಯಾಯ ಅಥವಾ ಹಕ್ಕುಚ್ಯುತಿ ಮಾಡುವ ಮೂಲಕ ಪಾಪವೆಸಗಿದವನು ಆ ಸಂತ್ರಸ್ತ ಮಾನವರಿಗೆ ಪರಿಹಾರ ಸಲ್ಲಿಸಿ, ಅವರನ್ನು ಓಲೈಸಿ ಅವರಿಂದ ಕ್ಷಮೆ ಪಡೆದು, ಆಬಳಿಕ ದೇವರಲ್ಲಿ ಕ್ಷಮೆ ಕೇಳಿದರೆ ಆಗಲೂ ದೇವರು ಕ್ಷಮಿಸುತ್ತಾನೆ. ಆದ್ದರಿಂದ ಜೀವನದಲ್ಲಿ ಪಾಪಮಾಡಿದವರೆಲ್ಲಾ ಪಾಪಿಗಳಾಗಿಯೇ ದೇವರ ಬಳಿಗೆ ತೆರಳಬೇಕಾಗಿಲ್ಲ. ತಮ್ಮ ಜೀವಿತಾವಧಿಯಲ್ಲೇ ತಮ್ಮ ಪಾಪಗಳ ಕಳಂಕವನ್ನು ತಾವೇ ತೊಳೆದುಕೊಂಡು ನಿರ್ಮಲ ಸ್ಥಿತಿಯಲ್ಲಿ ದೇವರ ಬಳಿಗೆ ತೆರಳಬಹುದು. ಪಾಪಪರಿಹಾರದ ಈ ಪ್ರಕ್ರಿಯೆಯಲ್ಲಿ ಯಾರದೇ ಮಧ್ಯಸ್ಥಿಕೆಯ ಅಗತ್ಯವಿಲ್ಲ. ಇಲ್ಲಿ ಪುರೋಹಿತರಿಗೆ ಯಾವುದೇ ಪಾತ್ರವಿಲ್ಲ.

ಯಾರಾದರೂ ಒಂದು ಪಾಪಕೃತ್ಯವನ್ನು ಮಾಡಿ ಅಥವಾ ತನ್ನ ಮೇಲೆ ಅಕ್ರಮವೆಸಗಿಕೊಂಡು ಆ ಬಳಿಕ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿದರೆ ಅವನು ಅಲ್ಲಾಹನನ್ನು ಕ್ಷಮಾಶೀಲನಾಗಿಯೂ ಕರುಣಾಮಯಿಯಾಗಿಯೂ ಕಾಣುವನು. (ಕುರ್ಆನ್- 4:110)

‘‘ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ (ಅಲ್ಲಾಹನ) ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ’’. (ಕುರ್ಆನ್ - 39:53)

ಮುಹಮ್ಮದರು (ಸ) ಹೇಳಿದರು:

‘‘ಪಾಪವೆಸಗಿದ ಬಳಿಕ ಆಕುರಿತು ಪಶ್ಚಾತ್ತಾಪ ಪಟ್ಟವನು ಪಾಪವನ್ನೇ ಮಾಡಿಲ್ಲದವರಂತಿರುತ್ತಾನೆ’’. (ಸುನನ್ ಇಬ್ನು ಮಾಜ - 4250)

‘‘ಮರುಭೂಮಿಯಲ್ಲಿ ತನ್ನ ಒಂಟೆಯನ್ನು ಕಳೆದುಕೊಂಡವನು ಅದನ್ನು ಮರಳಿ ಪಡೆದಾಗ ಎಷ್ಟು ಸಂತುಷ್ಟನಾಗುವನೋ, ಒಬ್ಬ ದಾಸನು ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿದಾಗ, ಅಲ್ಲಾಹನು ಅದಕ್ಕಿಂತ ಹೆಚ್ಚು ಸಂತುಷ್ಟನಾಗುತ್ತಾನೆ’’. (ಬುಖಾರಿ - 6309)

► ಸಾಮಾನ್ಯವಾಗಿ ಶೋಷಕರು, ಬಾಬಾಗಳು, ಪುರೋಹಿತರು ಇವರೆಲ್ಲಾ ಜನರೊಳಗೆ ಅನಗತ್ಯವಾಗಿ ಪಾಪಪ್ರಜ್ಞೆಯನ್ನು ಬೆಳೆಸಿ, ಆ ಬಳಿಕ ಆ ಪಾಪವನ್ನು ನಿವಾರಿಸುವ ಹೆಸರಲ್ಲಿ ಅವರನ್ನು ದೋಚುತ್ತಾರೆ. ಪ್ರವಾದಿ ಮುಹಮ್ಮದ್ (ಸ) ಶೋಷಣೆಯ ಈ ಬಾಗಿಲನ್ನು ಮುಚ್ಚಿ ಬಿಟ್ಟರು.

ಎಲ್ಲ ಮನುಷ್ಯರ ಆರ್ಥಿಕ, ಸಾಮಾಜಿಕ, ಕೌಟುಂಬಿಕ, ನೈತಿಕ ಮತ್ತು ಆಧ್ಯಾತ್ಮಿಕ ಹೊಣೆಗಾರಿಕೆಗಳು ಅವರವರ ಸಾಮರ್ಥ್ಯಕ್ಕನುಸಾರವಾಗಿರುತ್ತವೆ. ಯಾವ ಸನ್ನಿವೇಶದಲ್ಲೂ ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಗಾರಿಕೆ ಇಲ್ಲ. ಒಂದು ಕಾರ್ಯದ ಮಹಿಮೆ ಎಷ್ಟೇ ಇರಲಿ, ಅದು ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಮೀರಿದ್ದರೆ ಅದು ಆತನ ಕರ್ತವ್ಯವಲ್ಲ.

‘‘ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ.....’’ (ಕುರ್ಆನ್ - 2:286)

‘‘ನಾವಂತು ಯಾವ ಜೀವದ ಮೇಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊಣೆಯನ್ನು ಹೊರಿಸುವುದಿಲ್ಲ.....’’ (ಕುರ್ಆನ್ - 23:62)

ಯಾವುದೇ ವ್ಯಕ್ತಿ ತನ್ನ ಸಾಮರ್ಥ್ಯಕ್ಕೆ ಮೀರಿದ ಯಾವುದಾದರೂ ಕಾರ್ಯದ ಕುರಿತು, ಅದನ್ನು ಮಾಡಲು ತನಗೆ ಸಾಧ್ಯವಾಗಲಿಲ್ಲ ಎಂಬ ಅಪರಾಧಪ್ರಜ್ಞೆಯಿಂದ ನರಳಬೇಕಾಗಿಲ್ಲ ಎಂಬುದನ್ನು ಮನವರಿಕೆ ಮಾಡಿಸಲಿಕ್ಕಾಗಿಯೇ ಈ ನಿಯಮವನ್ನು ಪದೇಪದೇ ನೆನಪಿಸಲಾಗಿದೆ. ಉದಾ: ಅನಾರೋಗ್ಯದ ಕಾರಣ ಉಪವಾಸ ಆಚರಿಸಲಿಕ್ಕಾಗದವನು, ಆರ್ಥಿಕ ಇತಿಮಿತಿಗಳ ಕಾರಣ ಝಕಾತ್ ಪಾವತಿಸದವನು ಅಥವಾ ಹಜ್ ಮಾಡದವನು ಆ ಮೂಲಕ ತಾನು ಪಾಪ ಮಾಡಿದ್ದೇನೆಂಬ ಪ್ರಜ್ಞೆಯಿಂದ ಬಳಲುವ ಅಗತ್ಯವಿಲ್ಲ.

ಬದುಕಿನ ಸ್ವರೂಪದ ಕುರಿತು:

► ಭೂಮಿಯಲ್ಲಿ ಮಾನವನಿಗೆ ಸಿಕ್ಕಿರುವ ಬದುಕು ಬಹುಮಾನವೂ ಅಲ್ಲ, ಶಿಕ್ಷೆಯೂ ಅಲ್ಲ. ಬದುಕು ತೀರಾ ಸಂಕ್ಷಿಪ್ತವಾದ ಒಂದು ಪರೀಕ್ಷಾವಧಿ. ಬದುಕಿನಲ್ಲಿ ಎದುರಾಗುವ ಸುಖ-ಸಂಕಷ್ಟ, ಸಂಪನ್ನತೆ-ದಾರಿದ್ರ್ಯ, ಆರೋಗ್ಯ-ಅನಾರೋಗ್ಯ ಇತ್ಯಾದಿ ಎಲ್ಲವೂ ಪರೀಕ್ಷೆಯ ಭಾಗಗಳು.

‘‘ನಿಮ್ಮಲ್ಲಿ ಯಾರು ಸತ್ಕರ್ಮಗಳನ್ನು ಮಾಡುವರೆಂದು ಪರೀಕ್ಷಿಸಲು, ಅವನು (ಅಲ್ಲಾಹನು) ಮರಣ ಮತ್ತು ಜೀವನವನ್ನು ಸೃಷ್ಟಿಸಿರುವನು.....’’ (ಕುರ್ಆನ್ - 67:2)

ಜನನ ಮತ್ತು ಮರಣದ ನಡುವೆ ತನಗೆದುರಾಗುವ ವಿಭಿನ್ನ ಸನ್ನಿವೇಶಗಳನ್ನು ಮನುಷ್ಯನು ಯಾವ ರೀತಿಯಲ್ಲಿ ಎದುರಿಸುತ್ತಾನೆಂಬುದನ್ನು ಪರೀಕ್ಷಿಸುವ ಅವಧಿಯೇ ಬದುಕು. ಬದುಕನ್ನು ಕೊಟ್ಟವನೇ, ಬದುಕನ್ನು ಹೇಗೆ ಸಾಗಿಸಬೇಕು ಎಂಬುದನ್ನೂ ಕಲಿಸಿದ್ದಾನೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿವರಿಸಿದ್ದಾನೆ. ದೇವದತ್ತ ಮಾರ್ಗದರ್ಶನ ಮತ್ತು ದಿವ್ಯ ಸಂಹಿತೆಯ ಪ್ರಕಾರ ಬದುಕುವುದೇ ಯಶಸ್ಸಿನ ಹಾದಿ. ಎಲ್ಲ ಸನ್ನಿವೇಶಗಳಲ್ಲೂ ಮನುಷ್ಯನ ನಿರ್ಧಾರಗಳು ಸತ್ಯ, ನ್ಯಾಯ ಮತ್ತು ಸದಾಚಾರದ ಪರವಾಗಿರಬೇಕು. ನೈತಿಕ ಮತ್ತು ಮಾನವೀಯ ಮೌಲ್ಯಗಳೇ ಎಲ್ಲ ಸಂದರ್ಭಗಳಲ್ಲೂ ಮನುಷ್ಯನ ಮಾರ್ಗದರ್ಶಿಗಳಾಗಿರಬೇಕು. ತೀರಾ ತಾತ್ಕಾಲಿಕವಾಗಿರುವ, ಸೀಮಿತ ಅವಧಿಯ ಈ ಲೋಕದ ಜೀವನವನ್ನು ಜವಾಬ್ದಾರಿಯುತವಾಗಿ ಕಳೆದರೆ ಮರಣಾನಂತರ ಮತ್ತು ಲೋಕಾಂತ್ಯದ ಬಳಿಕ ಆರಂಭವಾಗುವ ಶಾಶ್ವತ ಬದುಕಿನಲ್ಲಿ ಅತ್ಯುತ್ತಮ ಫಲಿತಾಂಶಗಳ ಯುಗ ಆರಂಭವಾಗುತ್ತದೆ.

‘‘..... ನಿಜವಾಗಿ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಬದುಕು ತೀರಾ ಕ್ಷುಲ್ಲಕ’’. (ಕುರ್ಆನ್ - 9:38)

‘‘ಇಹಲೋಕದ ಈ ಬದುಕು ಕೇವಲ ಆಟೋಟ ಹಾಗೂ ಮನರಂಜನೆ ಮಾತ್ರವಾಗಿದೆ. ಖಂಡಿತವಾಗಿಯೂ ಪರಲೋಕದ ನೆಲೆಯೇ ನಿಜವಾದ ಬದುಕು.....’’ (ಕುರ್ಆನ್ - 29:64)

‘‘ಸಂಪತ್ತು, ಸಂತಾನಗಳೆಲ್ಲಾ ಕೇವಲ ಈ ಲೋಕದ ಮೆರುಗುಗಳಾಗಿವೆ. ನಿಜವಾಗಿ ಬಹುಕಾಲ ಉಳಿಯುವ ಸತ್ಕರ್ಮಗಳು ಮಾತ್ರವೇ ಬಹುಮಾನದ ದೃಷ್ಟಿಯಿಂದಲೂ ನಿರೀಕ್ಷೆಯ ದೃಷ್ಟಿಯಿಂದಲೂ ನಿಮ್ಮ ಒಡೆಯನ ಬಳಿ ಶ್ರೇಷ್ಠವಾಗಿವೆ’’. (ಕುರ್ಆನ್ - 18:46)

‘‘.... ಹಿತವನ್ನು ಮಾಡಿದವರಿಗೆ ಈ ಲೋಕದಲ್ಲೂ ಹಿತವಿದೆ. ಇನ್ನು ಪರಲೋಕದ ನೆಲೆಯೇ ಅತ್ಯುತ್ತಮವಾಗಿದೆ ......’’ (ಕುರ್ಆನ್ - 16:30)

‘‘ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು’’. (ಕುರ್ಆನ್ - 99: 7 ಮತ್ತು 8)

ಈ ದೃಷ್ಟಿಯಿಂದ ಈ ಲೋಕದ ಬದುಕು ಒಂದು ಸವಾಲು ಮತ್ತು ಒಂದು ಅಮೂಲ್ಯ ಅವಕಾಶವಾಗಿದೆ. ಪರೀಕ್ಷಾರ್ಥವಾದ ಈ ಅವಕಾಶವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವ ಮೂಲಕ ಮನುಷ್ಯನು, ಫಲಿತಾಂಶಗಳ ಜಗತ್ತಿನಲ್ಲಿ ತಾನು ಎಂತಹ ಸ್ಥಾನಮಾನಕ್ಕೆ ಅರ್ಹನೆಂಬುದನ್ನು ಸಾಬೀತು ಪಡಿಸಬಹುದು. ಆದ್ದರಿಂದಲೇ ಇಹಲೋಕದ ಜೀವನವನ್ನು ಶಾಪವೆಂದು ಪರಿಗಣಿಸುವ, ಲೌಕಿಕ ವ್ಯವಹಾರಗಳನ್ನು ತಾತ್ಸಾರದಿಂದ ಕಾಣುವ, ಸುಖತ್ಯಾಗ, ಸಂಸಾರ ತ್ಯಾಗ ಮುಂತಾದ ಹೆಸರುಗಳಲ್ಲಿ ಸಾಮಾಜಿಕ ಹೊಣೆಗಾರಿಕೆಗಳಿಂದ ದೂರ ಓಡುವ ಪ್ರವೃತ್ತಿಯನ್ನು ಪ್ರವಾದಿವರ್ಯರು (ಸ) ವಿರೋಧಿಸಿದರು.

ಸಾಮಾನ್ಯವಾಗಿ ಹೆಚ್ಚಿನ ಸಮಾಜಗಳಲ್ಲಿ ಕೆಲವು ನಿರ್ದಿಷ್ಟ ಪೂಜೆ, ಆರಾಧನೆ ಮತ್ತು ಆಚರಣೆ, ತೀರ್ಥ ಯಾತ್ರೆ ಇತ್ಯಾದಿಗಳನ್ನು ಮಾತ್ರ ಧಾರ್ಮಿಕ ಚಟುವಟಿಕೆಗಳೆಂದು ಪರಿಗಣಿಸಲಾಗುತ್ತದೆ. ಉಳಿದೆಲ್ಲ ಚಟುವಟಿಕೆಗಳನ್ನು ಸಾಂಸಾರಿಕ ಅಥವಾ ಲೌಕಿಕ ಚಟುವಟಿಕೆಗಳೆಂದು ಕರೆಯಲಾಗುತ್ತದೆ. ಪ್ರಸ್ತುತ ಲೌಕಿಕ ಚಟುವಟಿಕೆಗಳಿಗೆ ದೇವರು, ಧರ್ಮ ಅಥವಾ ಅಧ್ಯಾತ್ಮದ ಜೊತೆ ಯಾವ ನಂಟೂ ಇಲ್ಲವೆಂದು ನಂಬಲಾಗುತ್ತದೆ. ಆದರೆ ಈ ವಿಷಯದಲ್ಲಿ ಪ್ರವಾದಿ ಮುಹಮ್ಮದರು (ಸ) ಪಾಲಿಸಿದ ಧೋರಣೆ ತೀರಾ ಭಿನ್ನವಾಗಿತ್ತು. ಅವರು ಕಲಿಸಿದ ಪ್ರಕಾರ, ಧರ್ಮದ ಚೌಕಟ್ಟು ತುಂಬಾ ವಿಶಾಲವಾಗಿದೆ. ಆ ವಿಶಾಲ ಚೌಕಟ್ಟಿನೊಳಗೆ ಇದ್ದುಕೊಂಡು, ಸತ್ಯ, ನ್ಯಾಯ, ಮಾನವೀಯತೆ ಮತ್ತು ನೈತಿಕತೆಯ ಮೌಲ್ಯಗಳನ್ನು ಪಾಲಿಸುತ್ತಾ ನಡೆಸುವ ಎಲ್ಲ ಚಟುವಟಿಕೆಗಳೂ ಪುಣ್ಯದಾಯಕವಾದ ಧಾರ್ಮಿಕ ಚಟುವಟಿಕೆಗಳಾಗಿವೆ. ನಿಯಮಾನುಸಾರ ನಡೆಸುವ ವ್ಯಾಪಾರ, ವಾಣಿಜ್ಯ, ನೌಕರಿ, ಕೌಟುಂಬಿಕ ವ್ಯವಹಾರ, ಮಕ್ಕಳ ಪೋಷಣೆ, ರಾಜಕೀಯ ಚಟುವಟಿಕೆ, ಸಾಮಾಜಿಕ ಜಾಗೃತಿ ಅಭಿಯಾನಗಳು, ಶಿಕ್ಷಣ, ಕ್ರೀಡೆ, ಮನರಂಜನೆ ಸಮಾಜಸೇವೆ, ಇವೆಲ್ಲವೂ ಪುಣ್ಯದಾಯಕ ಸತ್ಕಾರ್ಯಗಳಾಗಿವೆ. ಇವೆಲ್ಲವನ್ನೂ ಪುಣ್ಯದಾಯಕ ಧಾರ್ಮಿಕ ಚಟುವಟಿಕೆಗಳೆಂದೇ ಪರಿಗಣಿಸಲಾಗುತ್ತದೆ. ಧಾರ್ಮಿಕತೆ ಅಥವಾ ಆಧ್ಯಾತ್ಮಿಕತೆಯ ಹೆಸರಲ್ಲಿ ಅಥವಾ ದೇವರ ಪ್ರಸನ್ನತೆ ಪ್ರಾಪ್ತಿ ಮಾಡುವುದಕ್ಕಾಗಿ ಯಾರೂ ಸಂಸಾರತ್ಯಾಗ ಮಾಡಬೇಕಾಗಿಲ್ಲ. ಯಾರೂ ವಾಣಿಜ್ಯ ವ್ಯವಹಾರಗಳನ್ನು ಬಿಟ್ಟುಬಿಡಬೇಕಾಗಿಲ್ಲ. ಆ ಕುರಿತು ಕೀಳರಿಮೆ ಅಥವಾ ಪಾಪಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿಲ್ಲ. ಸಮಾಜದಿಂದ ಪಲಾಯನ ಮಾಡಬೇಕಾಗಿಲ್ಲ. ಕುಟುಂಬ ಮತ್ತು ಸಮಾಜಕ್ಕೆ ಸಂಬಂಧಿಸಿದ ಬಾಧ್ಯತೆಗಳನ್ನು ಈಡೇರಿಸುವುದೇ ನಿಜವಾಗಿ ಆಧ್ಯಾತ್ಮಿಕ ಯಶಸ್ಸಿಗಿರುವ ದಾರಿಯಾಗಿದೆ.

ಮಾನವೀಯ ಸಂಬಂಧಗಳ ಕುರಿತು:

ಎಲ್ಲ ಕಾಲ ಮತ್ತು ಎಲ್ಲ ದೇಶಗಳ ಎಲ್ಲ ಮಾನವರು ಒಬ್ಬನೇ ಒಬ್ಬ ದೇವರ ಸೃಷ್ಟಿಗಳು ಮತ್ತು ಎಲ್ಲ ಮಾನವರೂ ಮೂಲತಃ ಆದಮ್ ಎಂಬ ಪ್ರಥಮ ಮಾನವನ ಸಂತತಿಗಳು. ಆ ನೆಲೆಯಲ್ಲಿ ಎಲ್ಲ ಮಾನವರೂ ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಪರಸ್ಪರ ಬಂಧುಗಳು. ದೇಶ, ಭಾಷೆ, ಜಾತಿ, ಧರ್ಮ ಇತ್ಯಾದಿಗಳ ಆಧಾರದಲ್ಲಿ ಯಾರೂ ಇನ್ನೊಬ್ಬರಿಗಿಂತ ಶ್ರೇಷ್ಠರಾಗಲಿ, ಕೀಳಾಗಲಿ ಅಲ್ಲ.

► ಪ್ರವಾದಿ ಮುಹಮ್ಮದ್ (ಸ) ಹೇಳಿದರು: ‘‘ನಿಮ್ಮ ಪೈಕಿ ಯಾರು ಜನರ ಪಾಲಿಗೆ ಅತ್ಯಧಿಕ ಉಪಯುಕ್ತರಾಗಿರುವರೋ ಅವರೇ ಅಲ್ಲಾಹನಿಗೆ ಅತ್ಯಧಿಕ ಪ್ರಿಯರು’’..... (ಅಲ್ ಮುಅಜಮ್ ಅಲ್ ಔಸತ್ - ತಬರಾನಿ - 6026)

ಪ್ರವಾದಿ ಮುಹಮ್ಮದರು (ಸ) ಕಲಿಸಿದ ಪ್ರಾರ್ಥನೆಗಳ ಪೈಕಿ ಒಂದು ಹೀಗಿದೆ:

‘‘ಓ ಅಲ್ಲಾಹ್, ನಮ್ಮ ಮನಸ್ಸುಗಳನ್ನು ಪರಸ್ಪರ ಬೆಸೆದು ಬಿಡು, ನಮ್ಮ ನಡುವಣ ಬಾಂಧವ್ಯಗಳನ್ನು ಬಲಪಡಿಸು ಮತ್ತು ನಮ್ಮನ್ನು ಕತ್ತಲೆಯಿಂದ ರಕ್ಷಿಸಿ ಬೆಳಕಿಗೆ ತಲುಪಿಸು’’.

ಪ್ರವಾದಿ ಮುಹಮ್ಮದ್ (ಸ) ಅವರ ಓರ್ವ ನಿಕಟ ಸಂಗಾತಿ ಅಬ್ದುಲ್ಲಾಹ್ ಬಿನ್ ಉಮರ್ (ರ) ಹೇಳುತ್ತಾರೆ:

‘‘ನಾವು ನಿತ್ಯ ಮುಂಜಾನೆ ಜನರಿಗೆ ಶಾಂತಿಯನ್ನು ಹಾರೈಸುವುದಕ್ಕಾಗಿಯೇ ಮನೆಯಿಂದ ಹೊರಗೆ ಹೋಗುತ್ತಿದ್ದೆವು. ನಮಗೆ ಎದುರಾಗುವ ಪ್ರತಿಯೊಬ್ಬರಿಗೂ ನಾವು ‘ಸಲಾಮ್’ ಎಂದು ಶಾಂತಿಯನ್ನು ಹಾರೈಸುತ್ತಿದ್ದೆವು’’. (ಮೂವತ್ತಾ - 1793)

ಪ್ರವಾದಿ ಮುಹಮ್ಮದ್ (ಸ) ಮಕ್ಕಾದಿಂದ ವಲಸೆ ಹೋಗಿ ಮದೀನಾ ಪಟ್ಟಣವನ್ನು ಪ್ರವೇಶಿಸಿದಾಗ ಅಲ್ಲಿ ಅವರನ್ನು ಸ್ವಾಗತಿಸಲು ಭಾರೀ ಜನಸ್ತೋಮ ಸೇರಿತ್ತು. ಜನರು ಅವರನ್ನು ಕಾಣಲು ಹಾತೊರೆಯುತ್ತಿದ್ದರು. ಆ ಸಂದರ್ಭದಲ್ಲಿ ಎಲ್ಲರನ್ನುದ್ದೇಶಿಸಿ ಪ್ರವಾದಿ (ಸ) ಹೇಳಿದ ಮೊದಲ ಮಾತು ಹೀಗಿತ್ತು:

‘‘ಮಾನವರೇ, ‘ಸಲಾಮ್’ ಅನ್ನು (ಶಾಂತಿಯನ್ನು, ಶಾಂತಿ ಹಾರೈಸುವುದನ್ನು) ಸಾರ್ವತ್ರಿಕವಾಗಿಸಿರಿ, ಜನರಿಗೆ ಉಣಿಸಿರಿ ಮತ್ತು ಜನರೆಲ್ಲಾ ನಿದ್ರಿಸುತ್ತಿರುವಾಗ ನೀವು ನಿಂತು ನಮಾಝ್ ಮಾಡಿರಿ - ನೀವು ಶಾಂತಿಯೊಂದಿಗೆ ಸ್ವರ್ಗ ಪ್ರವೇಶಿಸುವಿರಿ’’. (ಸುನನ್ ಇಬ್ನು ಮಾಜ - 1334)

ಒಮ್ಮೆ ಪ್ರವಾದಿ (ಸ) ಹೇಳಿದರು: ‘‘ಉಪವಾಸ, ನಮಾಝ್ ಮತ್ತು ದಾನಕ್ಕಿಂತ ಶ್ರೇಷ್ಠವಾದ ಕಾರ್ಯವನ್ನು ನಾನು ನಿಮಗೆ ತಿಳಿಸಲೇ? ಪರಸ್ಪರ ವೈಮನಸ್ಯ ಇರುವಲ್ಲಿ ಸಂಧಾನವನ್ನು ಏರ್ಪಡಿಸಿರಿ. ವೈಮನಸ್ಯವು ಹರಿತವಾದ ಕತ್ತಿಯಂತಿರುತ್ತದೆ. ಅದು ಕೂದಲನ್ನುಕತ್ತರಿಸುತ್ತದೆಂದು ನಾನು ಹೇಳುತ್ತಿಲ್ಲ. ಅದು ಧರ್ಮವನ್ನು ಬೋಳಿಸಿ ಬಿಡುತ್ತದೆ’’. (ಸುನನ್ ಅಲ್ ತಿರ್ಮಿಝಿ - 2509)

ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿವರ್ಯರೊಡನೆ, ‘‘ಇಸ್ಲಾಮಿನ ಅತ್ಯುತ್ತಮ ರೂಪ ಯಾವುದು?’’ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರವಾದಿ (ಸ) ನೀಡಿದ ಉತ್ತರ: ‘‘ಹಸಿದವರಿಗೆ ಉಣಿಸುವುದು ಮತ್ತು ಪರಿಚಿತರು ಹಾಗೂ ಅಪರಿಚಿತರೆಲ್ಲರಿಗೂ ‘ಸಲಾಮ್’ ಹೇಳುವ ಮೂಲಕ ಅವರಿಗೆ ಶಾಂತಿಯನ್ನು ಹಾರೈಸುವುದು’’. (ಸಹೀಹ್ ಬುಖಾರಿ - 28)

ಪ್ರವಾದಿ ಮುಹಮ್ಮದರು (ಸ) ತಮ್ಮ ಬದುಕಿನ ಕೊನೆಯ ವರ್ಷ ಮಾಡಿದ ಪ್ರಖ್ಯಾತ ‘ವಿದಾಯ ಭಾಷಣ’ದಲ್ಲಿ ಹೇಳಿದ ಕೆಲವು ಮಾತುಗಳು ತುಂಬಾ ಗಮನಾರ್ಹವಾಗಿವೆ:

‘‘ಜನರೇ, ನೆನಪಿರಲಿ, ನಿಮ್ಮ ಒಡೆಯನು ಒಬ್ಬನು. ಎಲ್ಲ ಮನುಷ್ಯರು ಆದಮ್ ಮತ್ತು ಹವ್ವಾ ಅವರ ಸಂತತಿಗಳು. ಅರಬ್ ನಾಡಿನ ಯಾವುದೇ ವ್ಯಕ್ತಿ ಬೇರಾವುದೇ ನಾಡಿನವನಿಗಿಂತ ಶ್ರೇಷ್ಠನಲ್ಲ. ಬೇರೆ ನಾಡಿನ ಯಾವುದೇ ವ್ಯಕ್ತಿ ಅರಬ್ ನಾಡಿನವ

ನಿಗಿಂತ ಶ್ರೇಷ್ಠನಲ್ಲ. ಬಿಳಿಯರು ಕರಿಯರಿಗಿಂತ ಶ್ರೇಷ್ಠರಲ್ಲ. ಕರಿಯರು ಬಿಳಿಯರಿಗಿಂತ ಶ್ರೇಷ್ಠರಲ್ಲ - ಸತ್ಯನಿಷ್ಠೆಯ ಹೊರತು. ನಿಮ್ಮಲ್ಲಿ ಯಾರು ಅತ್ಯಧಿಕ ಸತ್ಯನಿಷ್ಠನೋ ಅವನೇ ಅತ್ಯಂತ ಶ್ರೇಷ್ಠನು’’.

ಒಮ್ಮೆ ಮುಹಮ್ಮದರು (ಸ) ಹೇಳಿದರು:

‘‘ಮಾರುವಾಗ, ಖರೀದಿಸುವಾಗ ಮತ್ತು ತಾನು ಕೊಟ್ಟ ಸಾಲವನ್ನು ಮರಳಿ ಪಡೆಯುವಾಗ ಔದಾರ್ಯದ ನೀತಿಯನ್ನು ಪಾಲಿಸುವವನ ಮೇಲೆ ಅಲ್ಲಾಹನು ಕರುಣೆ ತೋರಲಿ’’. (ಬುಖಾರಿ)

‘‘ಉತ್ತಮವಾದುದನ್ನು ತಿನ್ನಿರಿ, ಕುಡಿಯಿರಿ ಮತ್ತು ಧರಿಸಿರಿ. ಆದರೆ ಅಪವ್ಯಯ ಮಾಡಬೇಡಿ ಮತ್ತು ಆಡಂಬರ ಮೆರೆಯಬೇಡಿ’’. (ಬುಖಾರಿ)

ಪ್ರವಾದಿ ಮುಹಮ್ಮದರ (ಸ) ಪ್ರಕಾರ ನಾಲ್ಕು ಮಹಾಪಾಪಗಳು ಹೀಗಿವೆ:

‘‘ಅಲ್ಲಾಹನ ಜೊತೆ ಅನ್ಯರನ್ನು ಪಾಲುದಾರರಾಗಿಸುವುದು, ಹೆತ್ತವರ ಮಾತನ್ನು ಪಾಲಿಸದೇ ಇರುವುದು, ನಿರಪರಾಧಿಯನ್ನು ಕೊಲ್ಲುವುದು ಮತ್ತು ಸುಳ್ಳು ಸಾಕ್ಷಿ ಹೇಳುವುದು’’. (ಬುಖಾರಿ)

ಒಂದು ಸಂದರ್ಭದಲ್ಲಿ ಮುಹಮ್ಮದ್ (ಸ) ಮನುಷ್ಯನನ್ನು ನರಕಕ್ಕೆ ತಲುಪಿಸುವ ಏಳು ಮಹಾಪಾಪಗಳನ್ನು ಪರಿಚಯಿಸುತ್ತಾ ಹೀಗೆಂದರು:

‘‘ಅಲ್ಲಾಹನ ಜೊತೆ ಅನ್ಯರನ್ನು ಪಾಲುಗೊಳಿಸುವುದು, ಮಾಟ-ಮಂತ್ರ, ನಿರಪರಾಧಿಯ ಹತ್ಯೆ, ಅನಾಥರಿಗೆ ಸಲ್ಲಬೇಕಾದ ಸೊತ್ತನ್ನು ಕಬಳಿಸುವುದು, ಬಡ್ಡಿಯ ಆದಾಯವನ್ನು ಬಳಸುವುದು, ಯುದ್ಧರಂಗದಿಂದ ಪಲಾಯನ ಮಾಡುವುದು, ಮುಗ್ಧ ಮಹಿಳೆಯರ ಚಾರಿತ್ರ್ಯದ ಬಗ್ಗೆ ಸುಳ್ಳಾರೋಪ ಹೊರಿಸುವುದು’’. (ಬುಖಾರಿ ಮತ್ತು ಮುಸ್ಲಿಮ್)

ದೇವರ ಕುರಿತು:

ಮುಹಮ್ಮದರು (ಸ) ಕಲಿಸಿದ ಪ್ರಕಾರ, ಯಾರು ಅಖಿಲ ವಿಶ್ವದ ಸೃಷ್ಟಿಕರ್ತನೋ ಅವನೇ ಎಲ್ಲ ಸೃಷ್ಟಿಗಳ ದೇವರು. ಸೃಷ್ಟಿಕ್ರಿಯೆಯಲ್ಲಿ ಅವನೊಬ್ಬನ ಹೊರತು ಬೇರೆ ಯಾರಿಗೂ ಯಾವ ಪಾಲೂ ಇಲ್ಲ. ವಿಶ್ವದ ರಕ್ಷಕ ಮತ್ತು ಪರಿಪಾಲಕ ಕೂಡಾ ಅವನೊಬ್ಬನೇ. ಪೂಜೆ, ಆರಾಧನೆಗಳಿಗೆ ಅರ್ಹನೂ ಅವನೊಬ್ಬನೇ. ಅವನು ಸರ್ವ ಶಕ್ತ, ಸರ್ವ ಸಮರ್ಥ. ಅವನು ನಿರಾಕಾರ. ಅವನಿಗೆ ಆಕಾರವನ್ನು ಆರೋಪಿಸಬಾರದು. ಅವನನ್ನು ಗುಣಗಳಿಂದ ಗುರುತಿಸಬೇಕು. ಅವನು ಅನಾದಿ, ಅನಂತ, ಸರ್ವಜ್ಞ. ಅವನು ಸಕಲ ದೌರ್ಬಲ್ಯ ಮತ್ತು ಇತಿಮಿತಿಗಳಿಂದ ಮುಕ್ತ. ಅವನ ಮೇಲೆ ಯಾವುದೇ ದೌರ್ಬಲ್ಯವನ್ನು ಆರೋಪಿಸಬಾರದು. ಅವನು ಅನುಪಮ. ಅವನನ್ನು ಬೇರಾರಿಗೂ ಹೋಲಿಸಬಾರದು. ಅವನ ಗುಣಗಳನ್ನು ಅವನ ಸೃಷ್ಟಿಗಳಿಗೆ ಆರೋಪಿಸಬಾರದು. ಸೃಷ್ಟಿಗಳ ದೌರ್ಬಲ್ಯ ಮತ್ತು ಇತಿಮಿತಿಗಳನ್ನು ದೇವರ ಮೇಲೆ ಆರೋಪಿಸಬಾರದು. ಯಾರೂ ‘ದೇವರಂತೆ’ ಅಲ್ಲ. ಯಾರನ್ನೂ ದೇವರಿಗೆ ಹೋಲಿಸಬಾರದು. ಹಾಗೆಯೇ ದೇವರನ್ನೂ ಅನ್ಯರಿಗೆ ಹೋಲಿಸಬಾರದು. ಪ್ರಾರ್ಥನೆ ಅವನಿಗೆ ಮಾತ್ರ ಸಲ್ಲಬೇಕು. ಅವನ ಹೊರತು ಬೇರೆ ಯಾರ ಮುಂದೆಯೂ ಪ್ರಾರ್ಥನೆ ಸಲ್ಲದು. ಯಾವಕಾರಣಕ್ಕೂ ಅವನಲ್ಲದೆ ಬೇರೆ ಯಾರ ಮುಂದೆಯೂ ತಲೆಬಾಗಬಾರದು, ಸಾಷ್ಟಾಂಗವೆರಗಬಾರದು.

‘‘ಜನರೇ, ನಿಮ್ಮನ್ನು ಮತ್ತು ನಿಮ್ಮ ಹಿಂದಿನವರನ್ನು ಸೃಷ್ಟಿಸಿದ ನಿಮ್ಮ ಒಡೆಯನನ್ನೇ ಪೂಜಿಸಿರಿ - ನೀವು ಸುರಕ್ಷಿತರಾಗಬಹುದು’’. (ಕುರ್ಆನ್ - 2:21)

ಜಲ, ನೆಲ, ವಾಯು, ಆಗಸ, ಸೂರ್ಯ, ಚಂದ್ರ ಇವು ಯಾವುದೂ ಪೂಜಾರ್ಹ ಅಲ್ಲ. ಪೂಜೆಯು ಅವೆಲ್ಲವುಗಳ ಸೃಷ್ಟಿಕರ್ತನಿಗೆ ಮಾತ್ರ ಸಲ್ಲಬೇಕು.

‘‘ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ (ಇವೆಲ್ಲಾ) ಅವನ (ಅಲ್ಲಾಹನ) ಪುರಾವೆಗಳ ಸಾಲಿಗೆ ಸೇರಿವೆ. ನೀವು ನಿಜಕ್ಕೂ ಅವನನ್ನೇ ಪೂಜಿಸುವವರಾಗಿದ್ದರೆ, ಸೂರ್ಯನಿಗಾಗಲಿ ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಮಾತ್ರ ಸಾಷ್ಟಾಂಗವೆರಗಿರಿ’’. (ಕುರ್ಆನ್- 41:37)

‘‘ಅಲ್ಲಾಹ್ - ಅವನ ಹೊರತು ಪೂಜೆಗೆ ಅರ್ಹರು ಬೇರಾರೂ ಇಲ್ಲ. ಅವನು ಸದಾ ಜೀವಂತನು, ಎಲ್ಲರ ನಿಯಂತ್ರಕನು. ತೂಕಡಿಕೆಯಾಗಲಿ ನಿದ್ದೆಯಾಗಲಿ ಅವನನ್ನು ಬಾಧಿಸುವುದಿಲ್ಲ. ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಎಲ್ಲವೂ ಅವನದೇ’’. (ಕುರ್ಆನ್ - 2:255)

‘‘ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು) ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು. ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ. ಯಾರೂ

ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ’’. (ಕುರ್ಆನ್- 112:1 ರಿಂದ 4)

ಮಧ್ಯಮ ನಿಲುವಿಗೆ ಬೆಂಬಲ - ಉತ್ಪ್ರೇಕ್ಷೆಗೆ ವಿರೋಧ

ಒಂದು ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಸ) ಹೇಳಿದರು:

‘‘ಧರ್ಮದ ವಿಷಯದಲ್ಲಿ ಉತ್ಪ್ರೇಕ್ಷೆಯ ನಿಲುವಿನಿಂದ ಸದಾ ದೂರ ಉಳಿಯಿರಿ. ನಿಮಗಿಂತ ಹಿಂದಿನವರು ಧರ್ಮದ ವಿಷಯದಲ್ಲಿ ಉತ್ಪ್ರೇಕ್ಷೆ ಮಾಡಿದ್ದರಿಂದಲೇ ನಾಶವಾದರು’’. (ಸುನನ್ ನಸಾಈ - 3057)

ಪ್ರವಾದಿ ಮುಹಮ್ಮದ್ (ಸ) ಅವರ ಒಬ್ಬ ನಿಕಟ ಸಂಗಾತಿ ಅಬ್ದುಲ್ಲಾಹ್ ಬಿನ್ ಅಮ್ರ್ ಬಿನ್ ಆಸ್ (ರ) ವರದಿ ಮಾಡಿರುವ ಒಂದು ಸಂಭಾಷಣೆಯನ್ನು ಗಮನಿಸಿ:

ಒಮ್ಮೆ ಪ್ರವಾದಿವರ್ಯರು (ಸ) ನನ್ನನ್ನು ಕರೆದು, ‘‘ಓ ಅಬ್ದುಲ್ಲಾಹ್, ನೀವು ಹಗಲೆಲ್ಲಾ ಉಪವಾಸ ಆಚರಿಸುತ್ತೀರಿ ಮತ್ತು ಸಂಪೂರ್ಣ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆಯುತ್ತೀರಿ ಎಂದು ಕೇಳಿದ್ದೇನೆ ಇದು ನಿಜವೇ?’’ ಎಂದು ವಿಚಾರಿಸಿದರು.

‘‘ಹೌದು, ಅಲ್ಲಾಹನ ದೂತರೇ’’ ಎಂದು ನಾನು ಉತ್ತರಿಸಿದೆ.

ಅದಕ್ಕೆ ಅವರು ಹೇಳಿದರು: ‘‘ಹಾಗೆಲ್ಲಾ ಮಾಡಬೇಡಿ. ಕೆಲವೊಮ್ಮೆ ಉಪವಾಸ ಆಚರಿಸಿ. ಕೆಲವೊಮ್ಮೆ ಆಚರಿಸಬೇಡಿ. ರಾತ್ರಿ ನಮಾಝ್ ಮಾಡಿ. ಹಾಗೆಯೇ ನಿದ್ದೆಯನ್ನೂ ಮಾಡಿ. ನಿಮಗೆ ನಿಮ್ಮ ಶರೀರಕ್ಕೆ ಸಂಬಂಧಿಸಿದ ಬಾಧ್ಯತೆಗಳಿವೆ. ನಿಮಗೆ ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ಬಾಧ್ಯತೆಗಳಿವೆ. ನಿಮಗೆ ನಿಮ್ಮ ಪತ್ನಿಗೆ ಸಂಬಂಧಿಸಿದ ಬಾಧ್ಯತೆಗಳಿವೆ’’. (ಬುಖಾರಿ - 5199)

ಪ್ರವಾದಿ ಮುಹಮ್ಮದ್ (ಸ) ತಮ್ಮ ಅನುಯಾಯಿಗಳಿಗೆ ಹೀಗೊಂದು ಎಚ್ಚರಿಕೆ ನೀಡಿರುವರು:

‘‘ಕ್ರೈಸ್ತ ಸಮುದಾಯದವರು ಮರ್ಯಮ್ ಅವರ ಪುತ್ರ ಈಸಾ (ಅ) ರನ್ನು ಹೊಗಳುತ್ತಾ ಉತ್ಪ್ರೇಕ್ಷೆ ಮಾಡಿದಂತೆ ನೀವು ನನ್ನನ್ನು ಹೊಗಳುತ್ತಾ ಉತ್ಪ್ರೇಕ್ಷೆ ಮಾಡಬೇಡಿ. ನಾನು ಅಲ್ಲಾಹನ ದಾಸ ಮಾತ್ರ. ನನ್ನನ್ನು ಅಲ್ಲಾಹನ ದಾಸ ಮತ್ತು ಅವನ ದೂತ ಎಂದು ಕರೆಯಿರಿ’’. (ಬುಖಾರಿ - 3445)

ಒಂದು ಸಭೆಯಲ್ಲಿ ಪ್ರವಾದಿ ಮುಹಮ್ಮದ್ (ಸ) ‘‘ತೀವ್ರವಾದಿ ನಿಲುವನ್ನು ಅನುಸರಿಸಿದವರು ನಾಶವಾಗುತ್ತಾರೆ’’ ಎಂದು ಹೇಳಿದರು ಮತ್ತು ಅವರು ತಮ್ಮ ಈ ಮಾತನ್ನು ಮೂರು ಬಾರಿ ಪುನರಾವರ್ತಿಸಿದರು. (ಮುಸ್ಲಿಮ್ - 2670)

ಧಾರ್ಮಿಕ ಹಾಗೂ ಆಧ್ಯಾತ್ಮಿಕ ಒಲವು ಉಳ್ಳವರು ಪತ್ನಿ, ಮಕ್ಕಳು ಕುಟುಂಬ, ಸಂಸಾರ ಇತ್ಯಾದಿಗಳಿಂದ ದೂರ ಉಳಿದಿರಬೇಕು ಎಂಬ ನಂಬಿಕೆ ಕೆಲವು ಸಮಾಜಗಳಲ್ಲಿ ಕಂಡು ಬರುತ್ತದೆ. ಮಕ್ಕಳ ಜೊತೆ ವಾತ್ಸಲ್ಯವನ್ನು ಅವರು ಒಂದು

ದೌರ್ಬಲ್ಯ ಎಂದು ಪರಿಗಣಿಸುತ್ತಾರೆ. ಇದರ ಒಂದು ಉದಾಹರಣೆ ಇಲ್ಲಿದೆ:

ಒಮ್ಮೆ ಗ್ರಾಮೀಣ ಬುಡಕಟ್ಟುಗಳ ಕೆಲವು ಮಂದಿ ಪ್ರವಾದಿ ಮುಹಮ್ಮದ್ (ಸ) ಅವರ ಬಳಿಗೆ ಬಂದರು. ಅವರು ಪ್ರವಾದಿಯನ್ನುದ್ದೇಶಿಸಿ ‘‘ನೀವು ನಿಮ್ಮ ಮಕ್ಕಳನ್ನು ಚುಂಬಿಸುತ್ತೀರಾ?’’ ಎಂದು ಪ್ರಶ್ನಿಸಿದರು.

ಅದಕ್ಕುತ್ತರವಾಗಿ ಪ್ರವಾದಿ (ಸ) ‘‘ಹೌದು’’ ಎಂದರು.

ಆಗ ಆ ಮಂದಿ ‘‘ಅಲ್ಲಾಹನಾಣೆ, ನಾವಂತೂ ನಮ್ಮ ಮಕ್ಕಳನ್ನು ಎಂದೂ ಚುಂಬಿಸಿಲ್ಲ’’ ಎಂದರು.

ಅದಕ್ಕೆ ಪ್ರವಾದಿವರ್ಯರ ಪ್ರತಿಕ್ರಿಯೆ ಹೀಗಿತ್ತು: ‘‘ಅಲ್ಲಾಹನು ನಿಮ್ಮ ಮನಸ್ಸುಗಳಿಂದ ವಾತ್ಸಲ್ಯವನ್ನು ಕಿತ್ತುಕೊಂಡಿದ್ದರೆ ನಾನೇನು ಮಾಡಲು ಸಾಧ್ಯ?’’ (ಇಬ್ನು ಮಾಜ - 3665)

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಯೂಸುಫ್ ಶುಕೂರ್, ಬೋಳಾರ

contributor

Similar News