ಬಿಜೆಪಿಗೆ ಬಲ | ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಬಹುಮತ
ಹೊಸದಿಲ್ಲಿ : ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಬಹುಮತ ಗಳಿಸುತ್ತಿದೆ. ಎಕ್ಸಿಟ್ ಪೋಲ್‌ನಲ್ಲಿ ಇಲ್ಲೂ ತಪ್ಪು ಸಾಬೀತಾಗಿದೆ. ಇಲ್ಲಿ ಬಹುತೇಕ ಎಕ್ಸಿಟ್ ಪೋಲ್ ಗಳು ಮಹಾಯುತಿ ಗೆಲ್ಲುವುದಾಗಿ ಹೇಳಿದ್ದರೂ ಇಷ್ಟು ದೊಡ್ಡ ಪ್ರಮಾಣದ ಗೆಲವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಬಿಜೆಪಿ ಕೂಡ ನಿರೀಕ್ಷಿಸಿರಲಿಲ್ಲ.
ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ವಿಪಕ್ಷವೇ ಇಲ್ಲವಾಗುವ ಹಾಗೆ ಬಿಜೆಪಿ ಮೈತ್ರಿಕೂಟ ಮಹಾಯುತಿ ವಿಜಯದ ಕಡೆ ಸಾಗುತ್ತಿದೆ.
288 ಶಾಸಕರ ಸಂಖ್ಯಾ ಬಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು ಮುನ್ನಡೆ ಸಾಧಿಸಿ , 220 ಸೀಟುಗಳನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.
ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟ ಸುಮಾರು 55 ಸೀಟ್ ಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟದ ಭವಿಷ್ಯದ ಬಗ್ಗೆಯೇ ಚರ್ಚೆ ಶುರುವಾಗಿದೆ. ಅಷ್ಟು ಹೀನಾಯವಾಗಿ ಸೋಲನುಭವಿಸುವ ಹಾದಿಯಲ್ಲಿದೆ ಎಂವಿಎ ಅಥವಾ ಇಂಡಿಯಾ ಮೈತ್ರಿಕೂಟ .
ಮಹಾಯುತಿಯ ಪ್ರಚಂಡ ಪ್ರದರ್ಶನಕ್ಕೆ ಹಲವಾರು ಅಂಶಗಳು ಕೊಡುಗೆ ನೀಡಿರುವುದಾಗಿ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಮಹಿಳೆಯರಿಗೆ ನೇರ ಹಣಕಾಸು ವರ್ಗಾವಣೆಯನ್ನು ಒಳಗೊಂಡ "ಲಾಡ್ಕಿ ಬಹಿನಾ" ಯೋಜನೆಯು ಮಹಿಳಾ ಮತದಾರರನ್ನು ಮಹಾಯುತಿ ಕಡೆಗೆ ಎಳೆದು ತಂದಿರುವ ಹಾಗೆ ಕಾಣುತ್ತಿದೆ. ಮೂರು ತಿಂಗಳ 7,500 ರೂ. ಹಣ ಖಾತೆಗೆ ಬಂದದ್ದು, ಪತಿಯರ ದುಡ್ಡನ್ನು ಅವಲಂಬಿಸದೆ ಜೀವನ ನಡೆಸುವ ಭರವಸೆಯನ್ನು ಮಹಿಳೆಯರಿಗೆ ಆ ಯೋಜನೆ ನೀಡಿರಬಹುದು. ಹೆಚ್ಚುವರಿಯಾಗಿ, ಮೀಸಲಾತಿ ವಿವಾದದ ಹೊರತಾಗಿಯೂ ಮರಾಠ ಮತಗಳು ಮಹಾಯುತಿಯ ಕಡೆಗೆ ಬರುವುದರ ಜೊತೆಜೊತೆಗೇ ಹಿಂದೂ ಮತ ಕ್ರೋಡಿಕರಣವು ಪ್ರಮುಖ ಪಾತ್ರವನ್ನು ವಹಿಸಿದಂತೆ ಕಾಣುತ್ತಿದೆ. ಶಿಂಧೆ ನೇತೃತ್ವದ ಶಿವಸೇನೆ ಮತ್ತು ಎನ್ಸಿಪಿಯ ಅಜಿತ್ ಪವಾರ್ ಬಣಗಳು ತಮ್ಮ ಪ್ರತಿಸ್ಪರ್ಧಿ ಬಣಗಳನ್ನು ಮೀರಿಸಿವೆ.
ನಿಜವಾದ ಎನ್ಸಿಪಿ ಹಾಗು ಶಿವಸೇನೆ ಯಾವುದು ಎಂಬುದಕ್ಕೆ ಕಳೆದ ಲೋಕಸಭಾ ಚುನಾವಣೆ ವೇಳೆ ಉತ್ತರ ಸಿಕ್ಕಿರಲಿಲ್ಲ ಎಂಬ ಸಂದೇಶವನ್ನು ಇದೀಗ ಶಿಂಧೆ ಸೇನೆ ಮತ್ತು ಅಜಿತ್ ಪವಾರ್ ಅವರ ಎನ್ ಸಿ ಪಿ ಗಳ ಪ್ರದರ್ಶನ ನೀಡುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ತಳಮಟ್ಟದ ಸಂಘಟನೆಯ ಕೊರತೆಯೊಂದಿಗೆ ಕಾಂಗ್ರೆಸ್‌ನ ದೌರ್ಬಲ್ಯಗಳು ಸ್ಪಷ್ಟವಾಗಿ ಎದ್ದು ಕಂಡಿವೆ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ನಂಬರ್ ಒನ್ ಪಕ್ಷವಾಗಿ ಮೂಡಿಬಂದಿದ್ದ ಕಾಂಗ್ರೆಸ್ ಈಗ ಹೀನಾಯವಾಗಿ ಸೋತಿದೆ
ಕೇವಲ ಎಂಟು ರ್ಯಾಲಿಗಳೊಂದಿಗೆ ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿಯವರ ಸೀಮಿತ ಪ್ರಚಾರವು ಪಕ್ಷಕ್ಕೆ ಸಾಕಾಗಿಲ್ಲ ಎಂಬುದು ಸ್ಫಷ್ಟ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದ ಇಂಡಿಯಾ ಮೈತ್ರಿಕೂಟ ತನ್ನ ಯಶಸ್ಸನ್ನು ಈ ಬಾರಿ ಪುನರಾವರ್ತಿಸುವುದರಲ್ಲಿ ದೊಡ್ಡ ವೈಫಲ್ಯ ಕಂಡಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ 63 ವಿಧಾನ ಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಈಗ 19 ಕ್ಕೆ ಕುಸಿದಿದೆ. ಲೋಕಸಭಾ ಚುನಾವಣೆಯಲ್ಲಿ 79 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದ ಬಿಜೆಪಿ 126 ಕ್ಕೆ ಏರಿದೆ. ಲೋಕಸಭಾ ಚುನಾವಣೆಯಲ್ಲಿ 57 ವಿಧಾನ ಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಉದ್ಧವ್ ಸೇನೆ 19 ಕ್ಕೆ ಕುಸಿದಿದೆ. ಲೋಕಸಭಾ ಚುನಾವಣೆಯಲ್ಲಿ 40 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದ ಶಿಂಧೆ ಶಿವ ಸೇನೆ 54 ಕ್ಕೆ ಏರಿದೆ. ಲೋಕಸಭಾ ಚುನಾವಣೆಯಲ್ಲಿ 33 ವಿಧಾನ ಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಶರದ್ ಪವಾರ್ ಎನ್ ಸಿ ಪಿ 13 ಕ್ಕೆ ಕುಸಿದಿದೆ. ಲೋಕಸಭಾ ಚುನಾವಣೆಯಲ್ಲಿ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದ ಅಜಿತ್ ಪವಾರ್ ಎನ್ ಸಿ ಪಿ 38 ಕ್ಕೆ ಏರಿದೆ.
ಈ ಅಂಕಿ ಅಂಶಗಳು ಲೋಕಸಭಾ ಚುನಾವಣೆ ಹಾಗು ವಿಧಾನ ಸಭೆ ಚುನಾವಣೆಯ ಫಲಿತಾಂಶದ ಅಂತರ ಎಷ್ಟು ದೊಡ್ಡದಿದೆ ಎಂಬುದನ್ನು ತೋರಿಸುತ್ತಿವೆ. ಲೋಕಸಭಾ ಗೆಲುವಿನ ನಂತರ ಮೂರು ತಿಂಗಳ ಕಾಲ ಇಂಡಿಯಾ ಮೈತ್ರಿಕೂಟ ಏನೂ ಮಾಡಿಲ್ಲ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಮಹಾಯುತಿ ತನ್ನ ಮುನ್ನಡೆಯನ್ನು ಭದ್ರಪಡಿಸಿಕೊಂಡರೆ, ದೇವೇಂದ್ರ ಫಡ್ನವೀಸ್ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ. ಈ ನಡುವೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಅದಾನಿ ಹಣವನ್ನು ಬಳಸಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಶಿವಸೇನೆ ಉದ್ಧವ್ ಬಣ ಆರೋಪಿಸಿದೆ. ಶಿವಸೇನೆಯ ಎಲ್ಲ ಶಾಸಕರು ಗೆಲ್ಲುವುದು ಹೇಗೆ? ಏನೋ ತಪ್ಪಾಗಿದೆ, ಈ ಫಲಿತಾಂಶಗಳು ಜನರ ಆದೇಶವಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಕಾಂಗ್ರೆಸ್ ಕಡೆಯಿಂದ ಈ ವರೆಗೂ ಈ ರೀತಿಯ ಯಾವುದೇ ಆರೋಪ ಕೇಳಿಬಂದಿಲ್ಲ. ಈಗ ಬಂದಿರುವ ಮುನ್ನಡೆ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಇದು MVA ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಗಮನಾರ್ಹ ಹಿನ್ನಡೆಯನ್ನು ಸೂಚಿಸುತ್ತದೆ. ಮೈತ್ರಿಕೂಟದ ಕಾರ್ಯತಂತ್ರ ಮತ್ತು ಏಕತೆಯ ಬಗ್ಗೆಯೇ ಪ್ರಶ್ನೆಗಳನ್ನು ಎತ್ತುತ್ತದೆ. 2024 ರ ಲೋಕಸಭಾ ಚುನಾವಣೆಯ ಹಿನ್ನಡೆಯ ಬಳಿಕ ಬಿಜೆಪಿಗೆ ಮಹಾರಾಷ್ಟ್ರದ ಈ ಫಲಿತಾಂಶ ಬಹಳ ದೊಡ್ಡ ನೈತಿಕ ಬಲ ನೀಡಲಿರುವುದು ಖಚಿತ.