ಉಡುಪಿಯ 25 ಸರಕಾರಿ ಶಾಲೆಗಳಲ್ಲಿ ಸೌರಶಕ್ತಿ ಸದ್ಬಳಕೆಗೆ ಯೋಜನೆ

Update: 2024-09-16 10:47 GMT

ಉಡುಪಿ: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳಲ್ಲಿ ಸೌರಶಕ್ತಿಯ ಸದ್ಬಳಕೆಗೆ ಯೋಜನೆ ರೂಪಿಸ ಲಾಗಿದೆ. ಆ ಮೂಲಕ ಜಿಲ್ಲೆಯ 25 ಸರಕಾರಿ ಶಾಲೆಗಳಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಮಹತ್ತರ ಹೆಜ್ಜೆ ಇಡಲಾಗಿದೆ.

ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರ ದೊಂದಿಗೆ ಸೆಲ್ಕೋ ಸೋಲಾರ್ ಫೌಂಡೇಶನ್ ನೇತೃತ್ವದಲ್ಲಿ ಬೆಂಗಳೂರು ಮೂಲದ ಕ್ಯಾನ್ಫಿನ್ ಹೋಮ್ಸ್ ಸಂಸ್ಥೆಯ ಸಹಯೋಗದಲ್ಲಿ ಹಕ್ಲಾಡಿ ಸರಕಾರಿ ಪ್ರೌಢಶಾಲೆ ಹಾಗೂ ಕಕ್ಕುಂಜೆ ಸರಕಾರಿ ಶಾಲೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ, ಈಗಾಗಲೇ ಸಂಪೂರ್ಣ ಸೋಲಾರ್ ಸ್ವಾವಲಂಬಿಯನ್ನಾಗಿ ಮಾಡಲಾಗಿದೆ.

ಅದೇ ರೀತಿ ಈ ವರ್ಷ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ 25 ಸರಕಾರಿ ಶಾಲೆಗಳಲ್ಲಿ ಸಂಪೂರ್ಣ ಸೌರಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಈ ಮೊದಲು ಇದೇ ಯೋಜನೆಯನ್ನು ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು.

ಬ್ರಹ್ಮಾವರ ವಲಯದ ಹಾಲಾಡಿ ಸಮೀಪದ ಕಕ್ಕುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಯಾನ್ಫಿನ್ ಹೋಮ್ಸ್ ಸಂಸ್ಥೆಯ ಸಿಎಸ್ಆರ್ ಅನುದಾನದಡಿ ಸೆಲ್ಕೋ ಸಂಸ್ಥೆಯ ಸಹಕಾರದಲ್ಲಿ 5.16 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಶಕ್ತಿಯನ್ನು ಅನುಷ್ಠಾನಗೊಳಿಸಲಾಗಿದೆ. 200 ಎಎಚ್ನ 8 ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, 6 ಕೆವಿ ಸೌರಶಕ್ತಿ ಸೌಲಭ್ಯ ಇದರಿಂದ ಲಭ್ಯವಾಗುತ್ತಿದೆ.

ಈ ಸೌರಶಕ್ತಿಯನ್ನು ಶಾಲೆಗಳ ಫ್ಯಾನ್, ಬೆಳಕಿನ ವ್ಯವಸ್ಥೆ, ಬಿಸಿಯೂಟ ತಯಾರಿಗೆ ಮಿಕ್ಸಿ ಬಳಕೆ, ಮೋಟರ್ ಪಂಪ್ ಬಳಕೆ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಲ್ಯಾಬ್ಗಳಿಗೆ ಬಳಸಲಾಗುತ್ತದೆ. ಈ ಶಾಲೆಗೆ ಪ್ರಸಕ್ತ ಮಾಸಿಕ 3 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದು, ಸೋಲಾರ್ ಅಳವಡಿಕೆಯಿಂದ ಆ ಹಣ ಉಳಿತಾಯವಾಗಲಿದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿನ ಪ್ರಮುಖ ಸಮಸ್ಯೆಯಾಗಿರುವ ವಿದ್ಯುತ್ ವ್ಯತ್ಯಯಕ್ಕೂ ಪರಿಹಾರ ದೊರೆತಂತಾಗಿದೆ. 110 ಮಕ್ಕಳಿರುವ ಕಕ್ಕುಂಜೆ ಸರಕಾರಿ ಶಾಲೆಗೆ ಈ ಸೋಲಾರ್ ಯೋಜನೆ ವರದಾನವಾಗಿ ಪರಿಣಮಿಸಿದೆ.

ಗ್ರಾಮಾಂತರ ಪ್ರದೇಶದ ಬಹುತೇಕ ಸರಕಾರಿ ಶಾಲೆಗಳಲ್ಲಿ ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಲ್ಯಾಬ್ಗಳಿರುತ್ತವೆ. ಬಿಸಿಯೂಟ, ನೀರಿನ ಪಂಪ್ಸೆಟ್ ಬಳಕೆಗೆ ವಿದ್ಯುತ್ ಅವಶ್ಯಕವಾಗಿದೆ. ಆದರೆ ಮಳೆಗಾಲದಲ್ಲಿ ವಿದ್ಯುತ್ ಕೈಕೊಡುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅದನ್ನು ಮನಗಂಡು ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವೊಂದು ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಸೌರಶಕ್ತಿ ಅನುಷ್ಠಾನಕ್ಕೆ ಮುಂದಾಗಿದೆ ಎನ್ನುತ್ತಾರೆ ಸೆಲ್ಕೋ ಫೌಂಡೇಶನ್ನ ಪ್ರಾದೇಶಿಕ ವ್ಯವಸ್ಥಾಪಕ ಶೇಖರ್ ಶೆಟ್ಟಿ.

ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳೆಲ್ಲ ಸೇರಿ ದಂತೆ ಉಡುಪಿ ಜಿಲ್ಲೆಯಲ್ಲಿ 1,098 ಹಾಗೂ ದ.ಕ. ಜಿಲ್ಲೆಯಲ್ಲಿ 1,782 ಶಾಲೆಗಳಿವೆ. ಈ ಪೈಕಿ ಉಡುಪಿಯ ಹಕ್ಲಾಡಿ ಹಾಗೂ ಕಕ್ಕುಂಜೆ ಶಾಲೆಗಳು ಸಂಪೂರ್ಣ ಸೋಲಾರ್ ಶಕ್ತಿಯನ್ನು ಬಳಸುತ್ತಿವೆ. ಉಡುಪಿ ಜಿಲ್ಲೆಯ 25 ಶಾಲೆಗಳಲ್ಲಿ ಈ ಯೋಜನೆ ಗುರಿ ಹೊಂದಲಾಗಿದೆ.

ಈಗಗಾಲೇ ಜಿಲ್ಲೆಯ ಎರಡು ಶಾಲೆಗಳಲ್ಲಿ ಈ ಯೋಜನೆಯ ಅನುಷ್ಠಾನ ಪೂರ್ಣಗೊಂಡಿದ್ದು, ಈ ತಿಂಗಳೊಳಗೆ ಇನ್ನು 2-3 ಶಾಲೆಗಳಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗುವುದು. ಈ ಶೈಕ್ಷಣಿಕ ವರ್ಷದೊಳಗೆ ಉಡುಪಿ ಜಿಲ್ಲೆಯ 25 ಶಾಲೆಗಳನ್ನು ಸೋಲಾರ್ ಸ್ವಾವಲಂಬಿಯಾಗಿಸುವ ಗುರಿಯನ್ನು

ಹೊಂದಲಾಗಿದೆ.

-ಶೇಖರ್ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರು, ಸೆಲ್ಕೋ ಫೌಂಡೇಶನ್


ಸೌರಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಇದೊಂದು ಉತ್ತಮ ಕಾರ್ಯಕ್ರಮ ಆಗಿದೆ. ಇದರಿಂದ ಶಾಲೆಗಳಲ್ಲಿ ಸಾಕಷ್ಟು ವಿದ್ಯುತ್ ಉಳಿತಾಯವಾಗಲಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಶಾಲೆಗಳಿಗೆ ಇದು ಅನುಕೂಲಕರವಾಗಲಿದೆ. ಈಗಾಗಲೇ ಜಿಲ್ಲೆಯ ಎರಡು ಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾ

ಗಿದ್ದು, ಜಿಲ್ಲೆಯ ಇನ್ನಷ್ಟು ಶಾಲೆಗಳಲ್ಲಿ ಸೋಲಾರ್ ಅಳವಡಿಕೆಗೆ ಉತ್ತೇಜನ ನೀಡಲಾಗುವುದು.

-ಕೆ.ಗಣಪತಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಉಡುಪಿ


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News