ಈ.ಡಿ. ಏಕೆ ಸುಪ್ರೀಂ ಕೋರ್ಟ್‌ನಿಂದ ಮತ್ತೆ ಮತ್ತೆ ಛೀಮಾರಿಗೊಳಗಾಗುತ್ತಿದೆ?

Update: 2024-08-30 06:44 GMT

ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಈ.ಡಿ. ನಿಷ್ಪಕ್ಷಪಾತದ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸಂಶಯ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಸಂಜಯ್ ಸಿಂಗ್, ಮನೀಶ್ ಸಿಸೋಡಿಯಾ ಮತ್ತು ಈಗ ಕೆ. ಕವಿತಾ ಅವರಿಗೆ ಜಾಮೀನು ನೀಡುವಾಗ ಈ.ಡಿ. ಬಗ್ಗೆ ಸುಪ್ರೀಂ ಕೋರ್ಟ್ ಹೇಳಿರುವುದು ಈ ತನಿಖಾ ಏಜೆನ್ಸಿಯ ವಿಶ್ವಾಸಾರ್ಹತೆ ಕುರಿತಂತೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಕೋರ್ಟ್ ಮಾಡಿರುವ ಟಿಪ್ಪಣಿಗಳು ಈ.ಡಿ.ಗೆ ಮಾತ್ರವೇ ಸೀಮಿತವಾಗಿಲ್ಲ. ಈ ವಿಚಾರದಲ್ಲಿನ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ತೀರ್ಪುಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಕಿಡಿ ಕಾರಿದೆ. ಹೈಕೋರ್ಟ್ಗೆ ನ್ಯಾಯಸಿದ್ಧಾಂತದ ಪಾಠವನ್ನು ಸುಪ್ರೀಂ ಕೋರ್ಟ್ ಹೇಳಬೇಕಾಗಿ ಬಂದಿದೆ.

ಮಾರ್ಚ್ನಲ್ಲಿ ಕೆ. ಕವಿತಾ ಅವರನ್ನು ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅದು ಲೋಕಸಭೆ ಚುನಾವಣೆ ನಡೆಯುತ್ತಿದ್ದ ಸಮಯವಾಗಿತ್ತು. 5 ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಆಗಸ್ಟ್ 27ರಂದು ಅವರಿಗೆ ಜಾಮೀನು ಸಿಕ್ಕಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ‘ಭಾರತ್ ರಾಷ್ಟ್ರ ಸಮಿತಿ’ ನಾಯಕಿ ಕೆ. ಕವಿತಾ ಅವರ ಮೇಲೆ ಈ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಹಾಗೂ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಕವಿತಾ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ.ಡಿ. ಮತ್ತು ಸಿಬಿಐ ನಿಷ್ಪಕ್ಷಪಾತದ ಬಗ್ಗೆ ಪೀಠ ಪ್ರಶ್ನೆಗಳನ್ನು ಎತ್ತಿತ್ತಲ್ಲದೆ, ತನಿಖಾ ಸಂಸ್ಥೆಗಳು ನಿಷ್ಪಕ್ಷವಾಗಿರುವುದು ಅಗತ್ಯ ಎಂದಿತು.

ಹಗರಣದಲ್ಲಿ ಕವಿತಾ ಪಾತ್ರವಿದೆ ಎಂದು ದೃಢಪಡಿಸಲು ನಿಮ್ಮ ಬಳಿ ಏನು ಸಾಕ್ಷ್ಯಗಳಿವೆ ಎಂದು ಸುಪ್ರೀಂ ಕೋರ್ಟ್ ಪೀಠ ತನಿಖಾ ಏಜನ್ಸಿಗಳನ್ನು ಪ್ರಶ್ನಿಸಿತು. ತನಿಖೆ ಎಷ್ಟು ನ್ಯಾಯೋಚಿತವಾಗಿದೆ ಎಂದು ತನಿಖಾ ಸಂಸ್ಥೆಗಳಿಗೆ ಪ್ರಶ್ನಿಸಿದ ಪೀಠ, ನಿರ್ದಿಷ್ಟವಾಗಿ ಕೆಲವರನ್ನು ಗುರುತಿಸಿ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದಿತು.

ಸಂಜಯ್ ಸಿಂಗ್ ಜಾಮೀನು ಅರ್ಜಿ ವಿಚಾರಣೆ ವೇಳೆಯೂ ಅವರ ವಕೀಲ ಮನು ಸಿಂಘ್ವಿ ಒಂದು ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಯಾರು ಸಂಜಯ್ ಸಿಂಗ್ ಹೆಸರನ್ನು ಹೇಳಿದ್ದರೋ ಆ ದಿನೇಶ್ ಅರೋರಾ ಎಂಬ ವ್ಯಕ್ತಿ ಮೊದಲ ಒಂಭತ್ತು ಹೇಳಿಕೆಗಳಲ್ಲಿ ಸಂಜಯ್ ಸಿಂಗ್ ಹೆಸರನ್ನೇ ಹೇಳಿರಲಿಲ್ಲ. ಸಂಜಯ್ ಸಿಂಗ್ ಮೇಲಿನ ಆರೋಪ ಕೂಡ ಸಾಬೀತಾಗಲಿಲ್ಲ. ತನ್ನ ಹೇಳಿಕೆಯಲ್ಲಿ ಸಂಜಯ್ ಸಿಂಗ್ ಹೆಸರು ಹೇಳಿದ ಮೇಲೆ ದಿನೇಶ್ ಅರೋರಾಗೆ ಜಾಮೀನು ಸಿಕ್ಕಿತ್ತು.

ಹಿಂದೆ ಶರತ್ ರೆಡ್ಡಿಗೆ ಕೂಡ ಅಪ್ರೂವರ್ ಆದ ಬಳಿಕ ಜಾಮೀನು ನೀಡಲಾಗಿತ್ತು. ಆತನ ಕಂಪೆನಿ ಬಿಜೆಪಿಗೆ 55 ಕೋಟಿ ದೇಣಿಗೆಯನ್ನು ನೀಡಿತ್ತು. ‘‘ಭ್ರಷ್ಟಾಚಾರಿಗಳನ್ನು ಬಿಡುವ ಮಾತೇ ಇಲ್ಲ’’ ಎಂಬ ಮೋದಿ ಮಾತನ್ನು ಸಂಜಯ್ ಸಿಂಗ್ ತಮ್ಮ ಬಿಡುಗಡೆ ಬಳಿಕ ಲೇವಡಿ ಮಾಡಿದ್ದರು. ‘‘ಮೋದಿ ಭ್ರಷ್ಟಾಚಾರಿಗಳನ್ನು ಬಿಡುವುದಿಲ್ಲ. ಎಲ್ಲರನ್ನೂ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ’’ ಎಂದಿದ್ದರು.

ಸಂಜಯ್ ಸಿಂಗ್, ಮನೀಶ್ ಸಿಸೋಡಿಯಾ ಮತ್ತು ಕೆ. ಕವಿತಾ ಅವರಿಗೆ ಜಾಮೀನು ನೀಡುವಾಗ ಕೋರ್ಟ್ ಹೇಳಿರುವ ಮಾತುಗಳಲ್ಲಿ ಸಾಮ್ಯತೆ ಇದೆ.

ತನಿಖೆ ಪೂರ್ಣಗೊಂಡಿದ್ದು ಆರೋಪಪಟ್ಟಿ ಸಲ್ಲಿಸಲಾಗಿದೆ. ಕವಿತಾ ಅವರನ್ನು ಕಸ್ಟಡಿಯಲ್ಲಿರಿಸಿಕೊಳ್ಳುವ ಅಗತ್ಯವಿಲ್ಲ, ಅವರು 5 ತಿಂಗಳ ಕಾಲ ಜೈಲಿನಲ್ಲಿದ್ದಾರೆ. ಶೀಘ್ರವೇ ವಿಚಾರಣೆ ಮುಕ್ತಾಯಗೊಳ್ಳುವ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಪೀಠ ಹೇಳಿದೆ. ಈ ಕುರಿತು ವಿವಿಧ ತೀರ್ಪುಗಳಲ್ಲಿ ಹೇಳಿರುವಂತೆ, ವಿಚಾರಣಾಧೀನತೆ ಎಂಬುದು ಶಿಕ್ಷೆಯಾಗಿ ಬದಲಾಗಬಾರದು ಎಂದು ನ್ಯಾಯಾಲಯ ವಿವರಿಸಿದೆ.

ಯಾಕೆ ಟ್ರಯಲ್ ಕೋರ್ಟ್ ಅಥವಾ ಹೈಕೋರ್ಟ್ಗಳಲ್ಲಿ ಜಾಮೀನು ಸಿಗುವುದಿಲ್ಲ? ಮತ್ತೆ ಮತ್ತೆ ಸುಪ್ರೀಂ ಕೋರ್ಟ್ಗೆ ಏಕೆ ಬರಬೇಕಾಗಿದೆ? ಎಂಬ ಪ್ರಶ್ನೆಗಳು ಕಾಡದೇ ಇರುವುದಿಲ್ಲ.

ಜಾಮೀನು ನೀಡುವ ವಿಚಾರದಲ್ಲಿ ಕೆಳ ನ್ಯಾಯಾಲಯಗಳು ಸೇಫ್ ಆಟವಾಡುತ್ತಿವೆ, ಜಾಮೀನು ನೀಡುವುದಕ್ಕಿರುವ ಕಾನೂನಿನ ಪಾಲನೆ ಆಗುತ್ತಿಲ್ಲ ಎಂದು ಸಂಜಯ್ ಸಿಂಗ್ ಅವರಿಗೆ ಜಾಮೀನು ನೀಡುವ ವೇಳೆ ಸುಪ್ರೀಂ ಕೋರ್ಟ್ ಪೀಠ ಹೇಳಿದ ಮಾತಿನಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿದೆ.

ಜಾಮೀನು ಎಂಬುದು ನಿಯಮವಾಗಿದೆ ಮತ್ತು ಜೈಲು ಅಪವಾದ ಎಂಬುದನ್ನು ಕೆಳ ನ್ಯಾಯಾಲಯಗಳು ತಿಳಿಯಬೇಕಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು. ಕವಿತಾ ಅವರಿಗೆ ಜಾಮೀನು ನೀಡುವಾಗಲೂ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಬಗ್ಗೆ ಟಿಪ್ಪಣಿ ಮಾಡಿತು.

ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದೂ ಸುಪ್ರೀಂ ಕೋರ್ಟ್ ಪೀಠ ಹೇಳಿತು. ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 45ರಲ್ಲಿನ ನಿಬಂಧನೆಗಳನ್ನು ಉಲ್ಲೇಖಿಸಿ, ಮಹಿಳೆಯರು ಸೇರಿದಂತೆ ಕೆಲ ವರ್ಗದ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಕಾನೂನು ಅನುಮತಿ ನೀಡುತ್ತದೆ ಎಂದು ಹೇಳಿತು.

ಇದೇ ವೇಳೆ ವಿದ್ಯಾವಂತ ಮಹಿಳೆ ಎಂಬ ಕಾರಣಕ್ಕೆ ಕವಿತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ದಿಲ್ಲಿ ಹೈಕೋರ್ಟ್ ನಡೆಗೂ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಜುಲೈನಲ್ಲಿ ಕವಿತಾ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿದ್ದ ದಿಲ್ಲಿ ಹೈಕೋರ್ಟ್, ಮಹಿಳೆಯರು ಜಾಮೀನಿನ ಮೇಲೆ ಬಿಡುಗಡೆಯಾಗುವುದು ಸಾಮಾನ್ಯ ಅಭ್ಯಾಸ ಎಂಬ ವಾದದ ಹೊರತಾಗಿಯೂ, ಅವರು ವಿದ್ಯಾವಂತೆ ಮತ್ತು ಮಾಜಿ ಸಂಸದೆ ಎಂದು ಪರಿಗಣಿಸಿದಾಗ ಆಕೆ ದುರ್ಬಲ ಮಹಿಳೆಯಲ್ಲ ಎಂದಿತ್ತು.

ಹೈಕೋರ್ಟ್ ಕಾನೂನಿನ ಸಂಬಂಧಿತ ಸೆಕ್ಷನನ್ನು ಸಂಪೂರ್ಣವಾಗಿ ತಪ್ಪಾಗಿ ಅನ್ವಯಿಸಿದೆ ಎಂದ ಸುಪ್ರೀಂ ಕೋರ್ಟ್, ‘‘ನ್ಯಾಯಾಲಯ ಗಳು ಇಂಥ ವಿಷಯಗಳಲ್ಲಿ ನ್ಯಾಯಾಂಗದ ವಿವೇಚನೆಯನ್ನು ಚಲಾಯಿಸಬೇಕು’’ ಎಂದು ಕಿವಿಮಾತು ಹೇಳಿತು. ಮಹಿಳೆ ಉನ್ನತ ಶಿಕ್ಷಣ ಪಡೆದಿದ್ದಾಳೆ ಅಥವಾ ಶಾಸಕಿ ಮೊದಲಾದ ಕಾರಣ ನೀಡಿ ಜಾಮೀನು ನಿರಾಕರಿಸುವಂತಿಲ್ಲ. ಬಂಧಿತ ಪ್ರತಿಯೊಬ್ಬ ಮಹಿಳೆಗೂ ಜಾಮೀನು ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿತು.

ಹೈಕೋರ್ಟ್ನಲ್ಲಿಯೂ ಹೇಗೆ ತಪ್ಪಾಗಿ ತೀರ್ಪು ಬರುತ್ತಿದೆ ಎಂಬು ದರ ಕುರಿತ ಸುಪ್ರೀಂ ಕೋರ್ಟ್ನ ಈ ಟಿಪ್ಪಣಿ ಸಾಧಾರಣವಾದುದಲ್ಲ.

ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಆಕೆಯ ವಿರುದ್ಧದ ತನಿಖೆಯನ್ನು ಈಗಾಗಲೇ ಎರಡೂ ಸಂಸ್ಥೆಗಳು ಪೂರ್ಣಗೊಳಿಸಿವೆ ಎಂದರು. ಎರಡೂ ಪ್ರಕರಣಗಳಲ್ಲಿ ಸಹ ಆರೋಪಿಯಾಗಿರುವ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದರು. ತನಿಖಾ ಸಂಸ್ಥೆಗಳ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ‘‘ಕವಿತಾ ಅವರು ತಮ್ಮ ಮೊಬೈಲ್ ಫೋನ್ ಅನ್ನು ನಾಶಪಡಿಸಿದ್ದಾರೆ ಅಥವಾ ಫಾರ್ಮ್ಯಾಟ್ ಮಾಡಿದ್ದಾರೆ. ಅವರ ನಡವಳಿಕೆ ಸಾಕ್ಷ್ಯವನ್ನು ತಿರುಚುವಂತಿದೆ’’ ಎಂದು ವಾದಿಸಿದರು. ಆದರೆ ಈ ಆರೋಪವನ್ನು ಬೋಗಸ್ ಎಂದು ರೋಹಟಗಿ ಅಲ್ಲಗಳೆದರು.

ಫೋನ್ ಎಂಬುದು ಖಾಸಗಿ ವಿಷಯ. ಆಗಾಗ ಮೆಸೇಜ್ಗಳನ್ನು ಡಿಲಿಟ್ ಮಾಡುವುದು ಸಾಮಾನ್ಯ ಎಂದು ಪೀಠ ಅಭಿಪ್ರಾಯಪಟ್ಟಿತು.

ಈ ಎಲ್ಲವನ್ನು ಗಮನಿಸುವಾಗ ಈ.ಡಿ. ಆಲೋಚನೆ ಮೋದಿ ಸರಕಾರದ ಆಲೋಚನೆಯೇ ಆಗಿದೆ ಎಂಬುದು ಸ್ಪಷ್ಟ. ಈ.ಡಿ. ಸ್ವತಂತ್ರ ಎಂದು ಅದೆಷ್ಟು ಬಾರಿ ಮೋದಿ ಈ.ಡಿ.ಯನ್ನು ರಕ್ಷಿಸುವ ಕೆಲಸ ಮಾಡಿದ ಬಳಿಕವೂ, ಈ.ಡಿ. ಬಳಕೆಯಾಗುವ ರೀತಿಯ ಬಗ್ಗೆ ನ್ಯಾಯಾಲಯ ಟಿಪ್ಪಣಿ ಮಾಡಬೇಕಾಗಿದೆಯೆಂದರೆ ವಾಸ್ತವವೇನು ಎಂಬುದನ್ನು ಸುಲಭವಾಗಿ ಗ್ರಹಿಸಬಹುದು.

ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮೂವರೂ ಪ್ರಕರಣದಲ್ಲಿ ಏನೂ ಪಾಲಿಲ್ಲದಿದ್ದರೂ ಹಲವು ತಿಂಗಳುಗಳನ್ನು ಜೈಲಿನಲ್ಲಿ ಕಳೆಯುವ ಹಾಗಾಯಿತು. ಸುಪ್ರೀಂ ಕೋರ್ಟ್ ಹೇಳಿರುವಂತೆಯೆ ಜಾಮೀನು ನಿಯಮ. ಜೈಲು ಅಪವಾದ. ಆದರೆ ಇದೇ ಮಾನದಂಡ ದಿಲ್ಲಿ ಗಲಭೆ ಹೆಸರಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವ ಸಾಮಾಜಿಕ ಕಾರ್ಯಕರ್ತರಿಗೆ ಯಾಕೆ ಅನ್ವಯಿಸುವುದಿಲ್ಲ?

ದಿಲ್ಲಿ ಗಲಭೆ ಆರೋಪದಲ್ಲಿ ಗುಲ್ಫೀಶಾ ಫಾತಿಮಾ, ಮೀರಾನ್ ಹೈದರ್, ಅಬ್ದುಲ್ ಖಾಲಿದ್ ಸೈಫಿ, ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಮುಹಮ್ಮದ್ ಸಲೀಮ್ ಖಾನ್, ಸಲೀಮ್ ಮಲಿಕ್, ಶಿಫಾ ಉರ್ ರೆಹಮಾನ್, ಶಾದಾಬ್ ಅಹಮದ್, ಅತಹರ್ ಖಾನ್ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಇವೆಲ್ಲದರ ನಡುವೆ, ಈ.ಡಿ. ಕ್ರಮದ ಬಗ್ಗೆಯೇ ಸಂಶಯಗಳು ಏಳುತ್ತಿವೆ. ಸಂಸತ್ತಿನಲ್ಲೂ ಈ ಬಗ್ಗೆ ಚರ್ಚೆಯಾಗಬೇಕು, ಜನರ ನಡುವೆಯೂ ಚರ್ಚೆಯಾಗಬೇಕು. ಈ.ಡಿ. ಕಾರಣಕ್ಕೆ ಅಮಾಯಕರ ಬದುಕು ಬರ್ಬಾದ್ ಆಗಬಾರದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಎನ್. ಕೇಶವ್

contributor

Similar News