ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು ನಮ್ಮ ಗುರಿ: ಮಧು ಬಂಗಾರಪ್ಪ
ವಾರ್ತಾಭಾರತಿ: ಬಿಜೆಪಿಯ ಭ್ರಷ್ಟಾಚಾರವನ್ನು ವಿರೋಧಿಸಿ ನೀವು ಅಧಿಕಾರ ಪಡೆದುಕೊಂಡಿದ್ದೀರಿ. ಅಧಿಕಾರಕ್ಕೆ ಬಂದ ಮೇಲೆ ಕೆಲವು ಆಯೋಗ, ಸಮಿತಿಗಳನ್ನು ಮಾಡಿದ್ದು ಬಿಟ್ಟರೆ ಯಾವುದಕ್ಕೂ ಸಮಯ ನಿಗದಿಪಡಿಸಿಲ್ಲ. ಈಗ ಬೋವಿ ನಿಗಮ, ಪರಶುರಾಮ ಪ್ರತಿಮೆ ಬಗ್ಗೆ ಈಗ ಮುಡಾ ಸುದ್ದಿ ಹೊತ್ತಲ್ಲಿ ಮಾತಾಡುತ್ತಿದ್ದೀರಿ. ಇದು ಒಂದು ರೀತಿಯ ಹೊಂದಾಣಿಕೆಯೇ? ಮಧು ಬಂಗಾರಪ್ಪ: 12 ವರ್ಷಗಳ ಹಿಂದಿನ ವಿಚಾರ ಮುಂದಿರಿಸಿ ಈಗ ತನಿಖೆ ಆಗಬೇಕು ಅನ್ನುತ್ತಿದ್ದಾರೆ. ಹಾಗಾಗಿ ಬೋವಿ ನಿಗಮ, ಪರಶುರಾಮ ಪ್ರತಿಮೆ ಪ್ರಕರಣದ ತನಿಖೆಗೆ ಸ್ವಲ್ಪ ಸಮಯಾವಕಾಶ ಬೇಕು. ಕುಮಾರಸ್ವಾಮಿ ಪ್ರಕರಣವೂ ಅಷ್ಟೇ. ಆದರೆ, ಯಾವುದೇ ತನಿಖೆ ಆಗಬೇಕಾ ದರೂ ಯಾರು ಈಗ ಫೈಲ್ ಮೇಲೆ ಕುಳಿತುಕೊಂಡಿದ್ದಾರೆ ಅವರು ಮುಂದೆ ಬರಬೇಕಲ್ಲವೇ. ಅಬ್ರಹಾಂ ಈ ಹಿಂದೆ ಸುಪ್ರೀಂನಿಂದ ಛೀಮಾರಿ ಹಾಕಿಸಿಕೊಂಡವರು. ಅವರಿಗೆ ಪ್ರಾಮುಖ್ಯತೆ ಕೊಡು ವಂತಿಲ್ಲ. ಯಾರೋ ಆತನನ್ನು ಮುಂದಿಟ್ಟು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದನಿ ಸುತ್ತದೆ. ಆದರೆ, ಸಿದ್ದರಾಮಯ್ಯರ ಸರಕಾರದಲ್ಲಿ ಅಂತಹ ಬ್ಲ್ಯಾಕ್ ಮೇಲ್, ಕಮಿಷನ್ ಏನೂ ನಡೆಯುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆಗಳೆಲ್ಲ ಎದುರಾಗು ವುದು ಸಹಜ. ಹಿಟ್ ಆ್ಯಂಡ್ ರನ್ ಮಾಡುವವರು ಯಾರೆಂದು ನಿಮಗೆ ಬೇಗ ತಿಳಿಯಲಿದೆ.
ಬೆಂಗಳೂರು, ಆ.30: ಸೊರಬ ವಿಧಾನ ಸಭಾ ಕ್ಷೇತ್ರದ ಶಾಸಕ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ಅವರು ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದ ಆಯ್ದ ಭಾಗ ಇದಾಗಿದೆ.
ವಾರ್ತಾಭಾರತಿ: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಗೆ ವಿರೋಧ ವ್ಯಕ್ತಪಡಿಸಿರುವ ಸಚಿವ ಸಂಪುಟ, ವಿಪಕ್ಷದ ನಾಯಕರ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಸಲಹೆ ಕೊಡುವ ಬಗ್ಗೆ ನಿರ್ಧರಿಸಿದೆ. ಇದು ದ್ವೇಷರಾಜಕಾರಣ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿದೆ. ಈ ಬಗ್ಗೆ ಏನು ಹೇಳುತ್ತೀರಿ?.
ಮಧು ಬಂಗಾರಪ್ಪ: ಮಾಡಿರುವ ತಪ್ಪನ್ನು ವಿಚಾರಣೆಗೆ ಒಳಪಡಿಸುವುದು ದ್ವೇಷವಲ್ಲ. ಅದು ಸರಕಾರದ ಕರ್ತವ್ಯ. ಮುಡಾ, ನಿಗಮ ಮಂಡಳಿಯ ವಿಚಾರದಲ್ಲೂ ತಪ್ಪಾಗಿದೆ, ಸರಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ. ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ವಿಪಕ್ಷಕ್ಕೆ ಇವತ್ತಿನ ವಾತಾವರಣ ನೋಡಿದಾಗ ಹೊಟ್ಟೆಕಿಚ್ಚು.
ಅಧಿಕಾರದ ದಾಹಕ್ಕೆ ಯಾವ ಹಂತಕ್ಕೂ ಅವರು ಹೋಗುತ್ತಾರೆ. ಮುಡಾ ಸೇರಿದಂತೆ ಇತರ ಪ್ರಕರಣಗಳ ತನಿಖೆ ಆಗಲಿದೆ. ರಾಜ್ಯಕ್ಕೆ ಬರ ಪರಿಹಾರ ತರಲು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು. ಸುಪ್ರೀಂ ಕೋರ್ಟ್ಗೆ ಹೋಗಬೇಕಾಗಿ ಬಂತು. ನಮ್ಮ ರಾಜ್ಯದಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ರಾಜ್ಯದ ಜನರಿಗೆ ಕೇಂದ್ರ ಸರಕಾರ ಸಮಾನವಾಗಿ ಹಂಚದಿರುವುದು ದುರುದ್ದೇಶದ ರಾಜಕಾರಣವಲ್ಲವೇ?
ವಾರ್ತಾಭಾರತಿ: ವಿಪಕ್ಷ ಮುಡಾ ಪಾದಯಾತ್ರೆ ಹಮ್ಮಿಕೊಂಡಾಗ ಒಂದೆಡೆ ಮಳೆ ಹಾನಿ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಇತ್ಯಾದಿ ಕೆಲಸಗಳು ಮಾಡಬೇಕಾದ ಆಡಳಿತ ಪಕ್ಷಕ್ಕೆ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಏನಿತ್ತು?
ಮಧು ಬಂಗಾರಪ್ಪ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಟ್ಟು ಉಳಿದವರೆಲ್ಲರೂ ಅವರವರಿಗೆ ನೀಡಿದ ಸಮಯಕ್ಕೆ ಬಂದು, ಆಡಳಿತ ಪಕ್ಷಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಮತ್ತೆ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ.
ವಾರ್ತಾಭಾರತಿ: ಮುಡಾ ಪ್ರಕರಣದಲ್ಲಿ ಬಿಜೆಪಿ ಹೋರಾಟ ಆರಂಭಿಸಿದ್ದರೂ ಅದನ್ನು ಹೈಜಾಕ್ ಮಾಡಿದ್ದು, ಅದರಲ್ಲಿ ನೇರವಾಗಿ ಭಾಗಿಯಾದದ್ದು ಎಚ್.ಡಿ. ಕುಮಾರಸ್ವಾಮಿ. ಈಗಂತೂ ಕುಮಾರ ಸ್ವಾಮಿ ವರ್ಸಸ್ ಕಾಂಗ್ರೆಸ್, ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ಎಂಬಂತಾ ಗಿದೆ. ಯಾಕೆ ಹೀಗಾಗುತ್ತಿದೆ?
ಮಧು ಬಂಗಾರಪ್ಪ: ಇಲ್ಲಿ ಪ್ರಶ್ನೆ ಕುಮಾರಸ್ವಾಮಿ ಮಾತಾಡುತ್ತಿದ್ದಾರೆ ಅನ್ನುವುದಲ್ಲ. ಆರೋಪದಲ್ಲಿ ಹುರುಳಿದೆಯೇ ಇಲ್ಲವೇ ಎಂಬುದು ಪ್ರಶ್ನೆ. ಕುಮಾರಸ್ವಾಮಿ ಜೊತೆ ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಈ ಆರೋಪದಲ್ಲಿ ಶೇ.100ರಷ್ಟು ಹುರುಳಿಲ್ಲ. ಸಿದ್ದರಾಮಯ್ಯರಿಂದ ಎಲ್ಲಿ ಅಧಿಕಾರ ದುರುಪಯೋಗ ಆಗಿದೆ ಎಂದು ಹೇಳಲಿ. ದಾಖಲೆಗಳು ಪೋರ್ಜರಿ ಆಗಿದ್ದರೆ ತನಿಖೆ ನಡೆಯಲಿ. ವೈಟ್ನರ್ ಹಾಕಿದ್ದರೆ ಅದು ಅಪರಾಧವೇ? ರಾಜ್ಯದಲ್ಲಿ ಯಾವ ದಾಖಲೆಗಳಿಗೂ ವೈಟ್ನರ್ ಹಾಕಲೇ ಇಲ್ಲವೇ? ವೈಟ್ನರ್ ಬಗ್ಗೆ ಮಾತಾಡುವವರು ಛೋಟಾ ಸಿಗ್ನೇಚರ್ ಬಗ್ಗೆ ಯಾಕೆ ಮಾತಾಡುವುದಿಲ್ಲ. ಮೈತುಂಬಾ ಬೇಕಾದಷ್ಟು ಕೇಸು, ಹಗರಣಗಳನ್ನು ಇಟ್ಟುಕೊಂಡು ಜಾಮೀನಿನಲ್ಲಿದ್ದುಕೊಂಡು ಈ ರೀತಿ ಮಾತಾಡುತ್ತಾರೆ.
ವಾರ್ತಾಭಾರತಿ: 46 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿವೆ. ಅದರಲ್ಲಿ ಸುಮಾರು 53 ಸಾವಿರ ಶಿಕ್ಷಕರ ಕೊರತೆ ಇದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ 2,228 ಶಾಲೆಗಳಲ್ಲಿ ಸುಮಾರು 3 ಸಾವಿರ ಶಿಕ್ಷಕರ ಕೊರತೆ ಇದೆ. ನಿಮ್ಮ ಪ್ರತಿಕ್ರಿಯೆ ಏನು?
ಮಧು ಬಂಗಾರಪ್ಪ: ಇದು ಬಹಳ ಮುಖ್ಯ ವಿಚಾರ. ಹಿಂದಿನ ಸರಕಾರ ಮೂರುವರೆ ವರ್ಷಕ್ಕೆ ಮಾಡಿದ ನೇಮಕಾತಿ ಕೇವಲ 4,500. ನಾನು ಅಧಿಕಾರವಹಿಸಿಕೊಂಡ ನಂತರ ಕೇವಲ 9 ತಿಂಗಳಲ್ಲಿ 12,500 ಶಿಕ್ಷಕರನ್ನು ನೇಮಕಾತಿ ಮಾಡಿದ್ದೇನೆ. ಹಲವು ಸಮಸ್ಯೆಗಳಿಗೆ ಹಿಂದಿನ ಸರಕಾರದ ಮೇಲೆ ಆರೋಪ ಮಾಡಬಹುದು ಆದರೆ, ನಾನು ಮಾಡುವುದಿಲ್ಲ. ದ್ವಿತೀಯ ಪಿಯುಸಿಯಲ್ಲಿ 900ರಲ್ಲಿ 800 ಶಿಕ್ಷಕರ ನೇಮಕಾತಿ ಆಗಿದೆ. 9 ವರ್ಷಗಳಿಂದ ನೇಮಕಾತಿ ಆಗದ ಅನುದಾನಿತ ಶಾಲೆಗಳಿಗೆ ಐದು ವರ್ಷಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡುವ ಕೆಲಸ ಮಾಡಿದ್ದೇವೆ. ಇದು ಸಾಧನೆ ಅಲ್ಲವೇ?
ವಾರ್ತಾಭಾರತಿ: ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಖಾಸಗಿ ಶಾಲೆಗಳು ಕಾರಣ ಎಂಬ ಅಭಿಪ್ರಾಯ ಇದೆ. ಏನಂತೀರಿ ?
ಮಧು ಬಂಗಾರಪ್ಪ: ಸರಕಾರಿ ಶಾಲೆಗಳಲ್ಲಿರುವಂತಹ ಅಧ್ಯಾಪಕರು ಬಹಳ ಉತ್ತಮ ಅಧ್ಯಾಪಕರು. ಅವರೆಲ್ಲರೂ ಮೆರಿಟ್ ಮೇಲೆ ಬಂದಿರುತ್ತಾರೆ. ರಾಜ್ಯದ ಜನರು ತಮ್ಮ ಮಕ್ಕಳನ್ನು ದಯವಿಟ್ಟು ಸರಕಾರಿ ಶಾಲೆಗೆ ಕಳುಹಿಸಬೇಕೆಂಬುದು ನನ್ನ ಮನವಿ. ಸರಕಾರಿ ಶಾಲೆಗಳಲ್ಲಿರವ ಕೊರತೆಗಳನ್ನು ನೀಗಿಸಿ ಉತ್ತಮ ದರ್ಜೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಸರಕಾರಿ ನರ್ಸರಿ ಶಾಲೆ ಆರಂಭಿಸಿದಾಗ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಾವಿರಾರು ಮಕ್ಕಳ ದಾಖಲಾತಿ ಆಗಿದೆ. ನಮ್ಮ ಸರಕಾರದ ಮೇಲೆ ವಿಶ್ವಾಸ ಇಟ್ಟು ಅಝೀಮ್ ಪ್ರೇಮ್ ಜಿ ಅಂತವರು ಸರಕಾರಿ ಶಾಲೆಗಳಿಗೆ ನೆರವು ನೀಡಿದ್ದಾರೆ.
ವಾರ್ತಾಭಾರತಿ: ಈ ಸವಲತ್ತುಗಳನ್ನೆಲ್ಲಾ ಮಕ್ಕಳಿಗೆ ತಲುಪಿಸುವಲ್ಲಿ ನಿಮ್ಮ ಮತ್ತು ಸರಕಾರದ ಒಳ್ಳೆಯ ಉದ್ದೇಶ, ಶ್ರಮ ಇದೆ. ಆದರೆ ತಳಮಟ್ಟದವರೆಗೂ ತಲುಪುವಲ್ಲಿ ಸಮಸ್ಯೆ ಎದುರಾಗಹುದೇ?
ಮಧು ಬಂಗಾರಪ್ಪ: ಈ ವಿಷಯದಲ್ಲಿ ಯಾವುದೇ ಗೊಂದಲಪಡಬೇಕಾಗಿಲ್ಲ. ಮಕ್ಕಳಿಗೆ ಕೊಡುವ ಸರಕಾರದ ಹಣ ನೇರವಾಗಿ ಹೋಗುವುದು ಶಾಲಾಭಿವೃದ್ಧಿ ಸಮಿತಿಯ ಕೈಗೆ. ಅಂದರೆ ಯಾರು ಕಲಿಯುತ್ತಿದ್ದಾರೋ ಆ ಮಕ್ಕಳ ಪೋಷಕರ ಕೈಗೆ. ಅವರು ಯಾವತ್ತೂ ಅವರ ಮಕ್ಕಳಿಗೆ ಮೋಸ ಮಾಡುವುದಿಲ್ಲ ಎಂಬುದು ನಿಸ್ಸಂಶಯ.
ವಾರ್ತಾಭಾರತಿ: ಜಾತಿಗಣತಿ ಬಿಡುಗಡೆ ವಿಚಾರವಾಗಿ ಏನು ಹೇಳುತ್ತೀರಿ?
ಮಧು ಬಂಗಾರಪ್ಪ: ಖಂಡಿತವಾಗಿ ಅದು ಬಿಡುಗಡೆಯಾಗಲೇಬೇಕು. ಈ ಬಗ್ಗೆ ಚರ್ಚೆ ನಡೆಯಬೇಕಿದೆ.