ಏನಿದು ಲೆಬನಾನ್ ಮೇಲೆ ಇಸ್ರೇಲ್ ಬಳಸಿದ ʼಪೇಜರ್ʼ ಅಸ್ತ್ರ?

Update: 2024-09-18 11:22 GMT

PC : indianexpress.com

ಪೇಜರ್ ಗಳ ಲೊಕೇಷನ್ ಟ್ರ್ಯಾಕಿಂಗ್ ಸಾಧ್ಯವೇ ಇಲ್ಲ ಎಂಬ ಈವರೆಗಿನ ನಂಬಿಕೆ ಹುಸಿಯಾಗಿದೆ. ಇಸ್ರೇಲ್ ನ ಹ್ಯಾಕಿಂಗ್ ನಿಂದಾಗಿಯೇ ಲೆಬನಾನ್ ನ ​ಹಿಝ್ಬುಲ್ಲಾ ಗುಂಪು ಪೇಜರ್ ಗಳನ್ನು ಬಳಸುತ್ತಿತ್ತು. ಆದರೆ ಇಸ್ರೇಲ್ ಈಗ ಹಿಜ್ಬುಲ್ಲಾ ಬಳಸುತ್ತಿದ್ದ ಪೇಜರ್ ಗಳ ರೇಡಿಯೋ ತರಂಗಗಳನ್ನೇ ಹ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

​ಹಿಝ್ಬುಲ್ಲಾ ಗುಂಪು ಬಳಸುತ್ತಿದ್ದ ಸಾವಿರಾರು ಪೇಜರ್ ಗಳು ಸ್ಫೋಟಗೊಂಡ ಬಳಿಕ ಇದು ಬಯಲಾಗಿದೆ.

ಲೆಬನಾನ್‌ನಲ್ಲಿ ​ಹಿಝ್ಬುಲ್ಲಾ ಗುಂಪಿನ ಸದಸ್ಯರು ಬಳಸುತ್ತಿದ್ದ ಸಾವಿರಾರು ಪೇಜರ್ ಗಳು ಏಕಕಾಲಕ್ಕೆ ಸ್ಫೋಟಗೊಂಡು ಕನಿಷ್ಠ 9 ಜನರು ಸಾವನ್ನಪ್ಪಿದ್ದು, 3,000 ಜನರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಈ ದಾಳಿಯ ಹಿಂದೆ ಇಸ್ರೇಲ್ ಕೈವಾಡ ಇದೆಯೆಂದು ಲೆಬನಾನಿನ ಭದ್ರತಾ ಮೂಲಗಳು ಆರೋಪಿಸಿವೆ. ತಿಂಗಳುಗಳ ಹಿಂದಷ್ಟೇ ತರಿಸಿಕೊಳ್ಳಲಾದ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ ಇಸ್ರೇಲ್‌ನ ಮೊಸ್ಸಾದ್ ಬೇಹುಗಾರಿಕಾ ಸಂಸ್ಥೆಯೇ ಸ್ಫೋಟಕಗಳನ್ನು ಅಳವಡಿಸಿತ್ತು ಎಂಬುದು ​ಹಿಝ್ಬುಲ್ಲಾ ಆರೋಪವಾಗಿದೆ. ಆದರೆ, ಬಳಕೆಯಿಂದ ಪೂರ್ತಿ ಕಣ್ಮರೆಯಾಗಿರುವ ಪೇಜರ್ ಗಳನ್ನು ​ಹಿಝ್ಬುಲ್ಲಾ ಮಾತ್ರ ಇನ್ನೂ ಏಕೆ ಬಳಸುತ್ತಿದೆ ಎಂಬುದು ಅಚ್ಚರಿ ಹುಟ್ಟಿಸುತ್ತದೆ.

ಪೇಜರ್ಸ್ ಎಂದರೇನು?

ಪೇಜರ್ ಅಥವಾ ಬೀಪರ್ ಒಂದು ಸಣ್ಣ ವೈರ್ಲೆಸ್ ಸಂವಹನ ಸಾಧನ. ಸೆಲ್ ಫೋನ್‌ಗಳು ಜನಪ್ರಿಯವಾಗುವ ಮೊದಲು ಪೇಜರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಮೊಬೈಲ್ ಫೋನ್ ಗಳಿಗಿಂತ ಭಿನ್ನವಾಗಿ, ಇಂಟರ್ನೆಟ್ ಬದಲಿಗೆ ಪೇಜರ್ ಗಳು ರೇಡಿಯೊ ತರಂಗಗಳನ್ನು ಆಧರಿಸಿ ಕೆಲಸ ಮಾಡುತ್ತವೆ. ರೇಡಿಯೊ ಫ್ರೀಕ್ವೆನ್ಸಿ ಮೂಲಕ ಸಾಮಾನ್ಯವಾಗಿ ಆಲ್ಫಾನ್ಯೂಮರಿಕ್ ಸಂದೇಶಗಳನ್ನು ಅದು ಸ್ವೀಕರಿಸುತ್ತದೆ. ರೇಡಿಯೋ ತರಂಗಗಳ ಮೂಲಕ ಸಂದೇಶ ಕಳುಹಿಸಿದಾಗ ಪೇಜರ್ ವಿಶಿಷ್ಟ ರೀತಿಯಲ್ಲಿ ಬೀಪ್ ಮಾಡಿ ಬಳಕೆದಾರರನ್ನು ಎಚ್ಚರಿಸುತ್ತದೆ. ಸಂದೇಶ ಪಡೆದವರು ಅದಕ್ಕೆ ಪ್ರತಿಕ್ರಿಯಿಸಲು ಫೋನ್ ಅನ್ನೇ ಅವಲಂಬಿಸಬೇಕಾಗುತ್ತದೆ.

1949ರಲ್ಲಿ ಸಂಶೋಧಕ ಆಲ್ಫ್ರೆಡ್ ಗ್ರಾಸ್ ಅಮೆರಿಕದಲ್ಲಿ ಮೊದಲ ಪೇಜರ್ ಪೇಟೆಂಟ್ ಪಡೆದ. ಪೇಜರ್ ಎಂಬ ಪದವನ್ನು ಅಧಿಕೃತವಾಗಿ 1959ರಲ್ಲಿ ಮೊಟೊರೊಲಾ ಕಂಪನಿ ನೋಂದಾಯಿಸಿತು. ಮೊಟೊರೊಲಾದ ಮೊದಲ ಪೇಜರ್ 1964ರಲ್ಲಿ ಬಂತು. ಪೇಜ್‌ಬಾಯ್ 1 ಎಂಬುದು ಅದರ ಹೆಸರಾಗಿತ್ತು.

ಮೊದಲು, ಕೇಳಿಸಿಕೊಳ್ಳಬಲ್ಲ ಸಂದೇಶವನ್ನು ಮಾತ್ರ ದೂರವಾಣಿ ಮೂಲಕ ಕಳುಹಿಸಲು ಸಾಧ್ಯವಿತ್ತು.

80ರ ದಶಕದಿಂದ ಲಿಖಿತ ಸಂದೇಶಗಳನ್ನು ಕಳುಹಿಸುವ ವ್ಯವಸ್ಥೆ ಅಳವಡಿಕೆಯಾಯಿತು. ಹೊಸ ಮಾದರಿಗಳು ಸಣ್ಣ ಸ್ಕ್ರೀನ್ ಹೊಂದಿದ್ದು, ಅದರಲ್ಲಿ ಕಿರು ಸಂದೇಶಗಳು ಕಾಣಿಸುತ್ತವೆ. 1994ರಲ್ಲಿ ವಿಶ್ವದಾದ್ಯಂತ 6.1 ಕೋಟಿ ಪೇಜರ್‌ಗಳು ಚಲಾವಣೆಯಲ್ಲಿದ್ದವು ಎಂದು ವರದಿಯೊಂದು ಹೇಳುತ್ತದೆ.

1990ರ ಹೊತ್ತಿಗೆ ಪೇಜರ್ ಜಾಗದಲ್ಲಿ ಮೊಬೈಲ್ ಫೋನ್ ಗಳು ಬರತೊಡಗಿದವು. ಪೇಜರ್ ಗಳಿಗೆ ಬೇಡಿಕೆ ಕಡಿಮೆಯಾಯಿತು. 1990ರ ದಶಕದ ಕೊನೆಯ ಹೊತ್ತಿಗೆ ಸಾರ್ವಜನಿಕ ಬಳಕೆಯಿಂದ ಅವು ಹೆಚ್ಚು ಕಡಿಮೆ ಪೂರ್ತಿಯಾಗಿ ಕಣ್ಮರೆಯಾದವು.

​ಹಿಝ್ಬುಲ್ಲಾ ಗುಂಪು ಈ ಆಧುನಿಕ ಕಾಲದಲ್ಲೂ ಪೇಜರ್‌ಗಳನ್ನೇ ಏಕೆ ನೆಚ್ಚಿಕೊಂಡಿದೆ ಎಂದು ಕುತೂಹಲ ಮೂಡುತ್ತದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಈಗಲೂ ಪೇಜರ್ ಗಳನ್ನೇ ನೆಚ್ಚಿರುವುದಕ್ಕೆ ಮುಖ್ಯ ಕಾರಣ ಹ್ಯಾಕಿಂಗ್ ಕುರಿತ ಭೀತಿ.

ಇಸ್ರೇಲ್ ನ ಲೊಕೇಷನ್ ಟ್ರ್ಯಾಕಿಂಗ್ ನಿಂದ ತಪ್ಪಿಸಿಕೊಳ್ಳುವುದಕ್ಕೆ ಅದು ಪೇಜರ್ ಗಳನ್ನು ಬಳಸುತ್ತಿತ್ತು. ಪೇಜರ್‌ಗಳು ಸರಳ ತಂತ್ರಜ್ಞಾನ ಮತ್ತು ಸರಳ ಹಾರ್ಡ್‌ವೇರ್ ವ್ಯವಸ್ಥೆ ಹೊಂದಿದ್ದು, ಅವುಗಳನ್ನು ಟ್ರ್ಯಾಕ್ ಮಾಡುವುದು ಕಷ್ಟಕರ. ರೇಡಿಯೋ ತರಂಗಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಅಲ್ಲಿ ನಡೆಯುವ ಸಂವಹನವನ್ನು ಸಾಮಾನ್ಯ ತಂತ್ರಜ್ಞಾನಗಳಿಂದ ಟ್ರ್ಯಾಕ್ ಮಾಡಿ ಓದಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚು ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಇಸ್ರೇಲ್ ತಂತ್ರಜ್ಞರು ​ಹಿಝ್ಬುಲ್ಲಾ ಬಳಸುತ್ತಿದ್ದ ರೇಡಿಯೋ ತರಂಗಗಳನ್ನೇ ಹ್ಯಾಕ್ ಮಾಡಿದ್ದಾರೆ.

ಈಗ ಸ್ಫೋಟಗೊಂಡಿರುವ ಪೇಜರ್ ಗಳಲ್ಲಿ ಇಸ್ರೇಲ್ ಅವುಗಳ ಪೂರೈಕೆ ಹಂತದಲ್ಲಿಯೇ ಸ್ಫೋಟಕ ಅಳವಡಿಸಿತ್ತು ಎಂಬುದು ​ಹಿಝ್ಬುಲ್ಲಾ ಆರೋಪ. ಲೆಬನಾನ್‌ನಾದ್ಯಂತ ಸಂಭವಿಸಿರುವ ಪೇಜರ್‌ಗಳ ಸ್ಫೋಟ ಸಂಬಂಧ ಇಸ್ರೇಲ್ ವಿರುದ್ಧ ಕಿಡಿಕಾರಿರುವ ​ಹಿಝ್ಬುಲ್ಲಾ, ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲಿ ಸೇನೆ ನಿರಾಕರಿಸಿರುವುದಾಗಿ ವರದಿಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News