ಇದು ಕರ್ನಾಟಕಕ್ಕೂ ಮಹತ್ವದ ಪಾಠ?

ಇಂಥದ್ದೊಂದು ಸುತ್ತೋಲೆ ಹೊರಡಿಸಿದ ಕಾಲೇಜಿನ ಕ್ರಮವನ್ನು ತೀವ್ರವಾಗಿ ಖಂಡಿಸಿದ ಪೀಠ, ಕಾಲೇಜು ಆವರಣವನ್ನು ರಾಜಕೀಯ ಹಾಗೂ ಧಾರ್ಮಿಕ ಕಾರ್ಯಾಚರಣೆಯ ಮೈದಾನವಾಗಿಸಲು ಯಾರಿಗೂ ಅವಕಾಶ ನೀಡಬಾರದು ಎಂದಿದೆ.

Update: 2024-08-11 03:49 GMT

ಮೊನ್ನೆ ದೇಶದ ಸರ್ವೋಚ್ಚ ನ್ಯಾಯಾಲಯ ಇಡೀ ದೇಶಕ್ಕೆ ಮಹತ್ವದ ಸಂದೇಶ ರವಾನಿಸಿದೆ. ಹಿಜಾಬ್, ಬುರ್ಖಾ, ನಖಾಬ್, ಬ್ಯಾಡ್ಜ್, ಕ್ಯಾಪ್ ಧರಿಸುವುದಕ್ಕೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾಗಶಃ ತಡೆನೀಡಿದೆ.

‘‘ಹುಡುಗಿಯರು ಬಿಂದಿ ಅಥವಾ ತಿಲಕ ಧರಿಸುವುದನ್ನೂ ನೀವು ನಿಷೇಧಿಸುತ್ತೀರಾ’’ ಎಂದೂ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಕಾಲೇಜನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿನ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿನಿಯರು, ತಮ್ಮ ಆಯ್ಕೆಯ ವಸ್ತ್ರ ತೊಡಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ.ವಿ. ಸಂಜಯ್ ಕುಮಾರ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ. ಕಾಲೇಜು ಹೊರಡಿಸಿದ್ದ ಸುತ್ತೋಲೆಗೆ ಭಾಗಶಃ ತಡೆ ನೀಡಿರುವ ನ್ಯಾಯಾಲಯ, ಕಾಲೇಜಿನ ಈ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದೆ. ವಿದ್ಯಾರ್ಥಿಗಳು ತಮಗೆ ಬೇಕಾದುದನ್ನು ಧರಿಸಲು ಅವಕಾಶ ನೀಡಬೇಕು ಎಂದು ಹೇಳಿದೆ.

ಇಂಥದ್ದೊಂದು ಸುತ್ತೋಲೆ ಹೊರಡಿಸಿದ ಕಾಲೇಜಿನ ಕ್ರಮವನ್ನು ತೀವ್ರವಾಗಿ ಖಂಡಿಸಿದ ಪೀಠ, ಕಾಲೇಜು ಆವರಣವನ್ನು ರಾಜಕೀಯ ಹಾಗೂ ಧಾರ್ಮಿಕ ಕಾರ್ಯಾಚರಣೆಯ ಮೈದಾನವಾಗಿಸಲು ಯಾರಿಗೂ ಅವಕಾಶ ನೀಡಬಾರದು ಎಂದಿದೆ.

ಕಾಲೇಜಿನ ನಿರ್ಧಾರ ಮಹಿಳೆಯರ ಸಬಲೀಕರಣದ ವಿರುದ್ಧವಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.

‘‘ಮಹಿಳೆಯರಿಗೆ ಏನು ಧರಿಸಬೇಕೆಂದು ಹೇಳುವ ಮೂಲಕ ನೀವು ಅವರನ್ನು ಯಾವ ರೀತಿ ಸಬಲೀಕರಣ ಮಾಡುತ್ತಿರುವಿರಿ?’’ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

‘‘ಹೇಳುವುದನ್ನು ಕಡಿಮೆ ಮಾಡಿದರೆ ಉತ್ತಮ. ಮಹಿಳೆಗೆ ಆಯ್ಕೆ ಎಲ್ಲಿದೆ? ಅವರು ಹಿಜಾಬ್ ಧರಿಸುತ್ತಾರೆ ಎಂಬ ವಿಚಾರಕ್ಕೆ ನೀವು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಿ. ಸ್ವಾತಂತ್ರ್ಯ ಬಂದು ಎಷ್ಟೋ ವರ್ಷಗಳಾದ ನಂತರ ಇದನ್ನೆಲ್ಲಾ ಹೇಳುತ್ತಿರುವುದು ದುರದೃಷ್ಟಕರ’’ ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದ್ದಾರೆ.

‘‘ಹೀಗೊಂದು ಸುತ್ತೋಲೆ ಹೊರಡಿಸಬೇಕೆಂದು ಕಾಲೇಜಿಗೆ ಈಗ ಏಕೆ ಅನ್ನಿಸಿತು? ಏಕಾಏಕಿ ಹೊರಡಿಸಿರುವ ಸುತ್ತೋಲೆ ಎಲ್ಲಾ ಧರ್ಮದವರನ್ನು ಒಳಗೊಳ್ಳದ ಸುತ್ತೋಲೆಯಾಗಿರುವುದೇಕೆ?’’ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ವಿದ್ಯಾರ್ಥಿಗಳ ಧರ್ಮವನ್ನು ಬಹಿರಂಗಪಡಿಸುವುದು ಇಷ್ಟವಿಲ್ಲ ಎಂಬ ಕಾಲೇಜಿನ ನಿಲುವಿನ ಕುರಿತು ಆಕ್ಷೇಪಿಸಿದ ನ್ಯಾ. ಖನ್ನಾ, ‘‘ಧರ್ಮವನ್ನು ಸೂಚಿಸುವ ಯಾವುದೇ ಉಡುಪು ಧರಿಸಬಾರದು ಎನ್ನುವುದಾದರೆ, ವಿದ್ಯಾರ್ಥಿಗಳ ಹೆಸರು ಗಮನಿಸಿದರೆ ಅವರು ಯಾವ ಧರ್ಮದವರು ಎಂದು ತಿಳಿಯುತ್ತದೆಯಲ್ಲವೆ? ಹಾಗಾಗಿ, ಅಂಥ ನಿಯಮ ಹೇರಬೇಡಿ’’ ಎಂದು ಎಚ್ಚರಿಕೆ ನೀಡಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗದಂತೆ ತಡೆಯಲಾಗಿದ್ದು ಹಾಜರಾತಿ ನೀಡುತ್ತಿಲ್ಲ ಎಂದು ಹೇಳಿದ್ದರು.

ಆದರೆ ಕಾಲೇಜು ಆಡಳಿತ ಮಂಡಳಿ ಪರ ವಾದ ಮಂಡಿಸಿದ ವಕೀಲೆ ಮಾಧವಿ ದಿವಾನ್ ಈ ನಿಷೇಧವನ್ನು ಸಮರ್ಥಿಸಿಕೊಂಡಿದ್ದರು.

‘‘ಕಾಲೇಜಿನಲ್ಲಿ ೪೪೧ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರಿದ್ದು, ಮೂವರಿಗೆ ಮಾತ್ರ ಇದು ಸಮಸ್ಯೆ ಎನ್ನಿಸಿದೆ. ಅವರು ಮಾತ್ರ ಹಿಜಾಬ್ ಧರಿಸಲು ಬಯಸುತ್ತಿದ್ದಾರೆ’’ ಎಂದರು.

ಆದರೆ ಈ ವಾದವನ್ನು ಒಪ್ಪದ ನ್ಯಾಯಾಲಯ ಕಾಲೇಜು ಆಡಳಿತ ಮಂಡಳಿ ಇದಕ್ಕಿದ್ದಂತೆ ಈ ನಿರ್ಧಾರಕ್ಕೆ ಬಂದದ್ದು ಏಕೆ? ಎಂದು ಪ್ರಶ್ನಿಸಿತು.

‘‘ಇದು ನಿಜಕ್ಕೂ ಬೇಸರದ ಸಂಗತಿ. ತಮ್ಮಿಷ್ಟದ ವಸ್ತ್ರದ ಆಯ್ಕೆ ಬಾಲಕಿಯರ ಇಚ್ಛೆಯಲ್ಲವೆ?’’ ಎಂದು ವಿಷಾದ ವ್ಯಕ್ತಪಡಿಸಿ, ಕಾಲೇಜಿನ ಸುತ್ತೋಲೆಗೆ ತಡೆ ನೀಡಿತು.

ಕಾಲೇಜುಗಳು ಇಂತಹ ನಿಯಮ ರೂಪಿಸುವುದನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ ೧೮ಕ್ಕೆ ಮುಂದೂಡಿತು.

ಸುಪ್ರೀಂ ಕೋರ್ಟ್ನ ಈ ಆದೇಶದಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಬರುವ ಸಾಧ್ಯತೆ ಇದೆ ಎಂದು ಕಾಲೇಜು ಪರ ವಾದಿಸಿದ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಈ ಆದೇಶವನ್ನು ಯಾರೂ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದೆ.

ಅಲ್ಲದೆ, ಹಾಗೇನಾದರೂ ನಡೆದಲ್ಲಿ ಕೋರ್ಟ್ ಕದ ತಟ್ಟಬಹುದು ಎಂದು ಕಾಲೇಜಿಗೆ ಪೀಠ ಹೇಳಿತು.

ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜು ಉದ್ದೇಶಿಸಿದ್ದವು. ಇದನ್ನು ಪ್ರಶ್ನಿಸಿ ಈ ಎರಡೂ ಕಾಲೇಜುಗಳ ೯ ವಿದ್ಯಾರ್ಥಿನಿಯರು ಮುಂಬೈ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಜೂನ್ ೨೬ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು.

ಕಾಲೇಜು ಆಡಳಿತ ಮಂಡಳಿಯ ನಿರ್ದೇಶನ ವಿದ್ಯಾರ್ಥಿಯ ಧರ್ಮ ಬಹಿರಂಗಪಡಿಸುವುದನ್ನು ತಡೆಯುವ ಗುರಿ ಹೊಂದಿದ್ದು, ಅವರು ತಮ್ಮ ಶಿಕ್ಷಣದ ಮೇಲೆ ಗಮನಹರಿಸಲು ಅನುವು ಮಾಡಿಕೊಡುತ್ತದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರಿದ್ದ ಪೀಠ ತಿಳಿಸಿತ್ತು.

ವಿದ್ಯಾರ್ಥಿಗಳ ಉಡುಗೆ ಅವರ ಧರ್ಮವನ್ನು ಬಹಿರಂಗಪಡಿಸಬಾರದು ಎಂಬುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿದೆ. ಇದು ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಆಸಕ್ತಿಯನ್ನು ಜ್ಞಾನಾರ್ಜನೆಯತ್ತ ನೆಡುವ ನಿಟ್ಟಿನಲ್ಲಿ ಇರಿಸಿದ ಹೆಜ್ಜೆಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

ಕಾಲೇಜಿನ ಇಂಥ ನಿರ್ದೇಶನಗಳಿಂದ ವಿದ್ಯಾರ್ಥಿಗಳ ಆಯ್ಕೆ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದು ಎಂದು ಹೈಕೋರ್ಟ್ ಪೀಠ ಹೇಳಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇನ್ನೊಂದೆಡೆ, ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದಂತೆ ನಿಷೇಧಿಸಲು ರಾಜ್ಯದ ಸರಕಾರಿ ಕಾಲೇಜುಗಳಿಗೆ ಅಧಿಕಾರ ನೀಡಿ ೨೦೨೨ರಲ್ಲಿ ಕರ್ನಾಟಕ ಸರಕಾರ ಹೊರಡಿಸಿದ್ದ ಆದೇಶದ ಸಿಂಧುತ್ವ ಕುರಿತು ಸುಪ್ರೀಂ ಕೋರ್ಟ್ ಇನ್ನಷ್ಟೇ ಅಂತಿಮ ತೀರ್ಪು ನೀಡಬೇಕಿದೆ.

ಹಿಜಾಬ್ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ ೨೦೨೨ರಲ್ಲಿ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠ ಅಕ್ಟೋಬರ್ ೨೦೨೨ರಲ್ಲಿ ಭಿನ್ನತೀರ್ಪು ನೀಡಿತ್ತು. ಹೀಗಾಗಿ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ವರ್ಗಾ ಯಿಸಲಾಗಿತ್ತು. ಪ್ರಕರಣ ಸದ್ಯ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ.

ಆದರೆ, ಮುಂಬೈ ಕಾಲೇಜಿನ ಸುತ್ತೋಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತಡೆ ಮಹತ್ವದ ಆದೇಶವಾಗಿದೆ.

ಕರ್ನಾಟಕದಲ್ಲೂ ಹಿಜಾಬ್ ಹೆಸರಲ್ಲಿ ವಿದ್ಯಾರ್ಥಿನಿಯರನ್ನು ಬೀದಿಪಾಲು ಮಾಡಿದ್ದವರು ಈ ಆದೇಶದಿಂದ ಕಲಿಯಬೇಕಾದದ್ದು ಏನೆಂಬುದು ಸ್ಪಷ್ಟವಾಗಿದೆ.

ಸಮವಸ್ತ್ರದ ಹೆಸರಲ್ಲೇ ಉಡುಪಿಯಲ್ಲಿ ಹಿಜಾಬ್ ನಿರ್ಬಂಧ ಶುರು ಮಾಡಲಾಗಿತ್ತು. ಆಗಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕಿನ ಪರವಾಗಿ ನಿಲ್ಲುವ ಬದಲು ಸಂಘ ಪರಿವಾರದ ಅಜೆಂಡಾವನ್ನು ಬೆಂಬಲಿಸಿ ಹಿಜಾಬ್ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

ವಿದ್ಯಾರ್ಥಿನಿಯರನ್ನು ಕಾಲೇಜುಗಳಿಂದ ಹೊರ ಹಾಕಿ ಬೀದಿ ಪಾಲು ಮಾಡಲಾಯಿತು. ಅವರನ್ನು ಭಯೋತ್ಪಾದಕರು ಎಂದೇ ಬಿಜೆಪಿ ಮುಖಂಡರು ಹೇಳಿದ್ದರು.

ಈಗ ಮುಂಬೈ ಕಾಲೇಜಿನ ಹಿಜಾಬ್ ನಿರ್ಬಂಧದ ವಿರುದ್ಧ ದೇಶದ ಪರಮೋಚ್ಚ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ಹಿಜಾಬ್ ನೆಪದಲ್ಲಿ ದೌರ್ಜನ್ಯ ಎಸಗಿದ ಎಲ್ಲರಿಗೂ ಅತ್ಯುತ್ತಮ ಪಾಠವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಿ.ಎನ್. ಉಮೇಶ್

contributor

Similar News