ಮಹಿಳಾ ಮೀಸಲಾತಿ: ಕಣ್ಣೊರೆಸೋ ತಂತ್ರವೇ?

ಪುರುಷ ಪ್ರಧಾನ ಸಮಾಜ ಮಹಿಳೆಯರ ಹಕ್ಕು, ಪ್ರಾತಿನಿಧ್ಯ ಎಂದಾಕ್ಷಣ ಬೆಚ್ಚಿಬೀಳಬೇಕಾದ ಅಗತ್ಯವಿಲ್ಲ. ಮಹಿಳಾ ಪ್ರಾತಿನಿಧ್ಯವೆಂದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಹಿಳೆಯು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ರಂಗದಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳುವ ಮಾರ್ಗವಷ್ಟೆ. ನೀವು ಮಹಿಳೆಯರ ಹಕ್ಕನ್ನು ಬೆಂಬಲಿಸುವುದಾದರೆ ಆ ಪಾಲು ನಿಮ್ಮ ತಾಯಿಗೂ ಸಿಗಬೇಕಾಗುತ್ತದೆ. ನಿಮ್ಮ ಹೆಂಡತಿಗೂ ಸಿಗಬೇಕಾಗುತ್ತದೆ. ನಿಮ್ಮ ಮಗಳಿಗೂ ಸಿಗಬೇಕಾಗುತ್ತದೆ. ವಿರೋಧಿಸಿದರೆ ನಿಮ್ಮ ತಾಯಿ, ಹೆಂಡತಿ, ಮಗಳ, ಸಾಂವಿಧಾನಿಕ ಹಕ್ಕುಗಳನ್ನು ವಂಚಿಸುವ ಕಾರ್ಯದಲ್ಲಿ ನೀವು ಪಾಲುದಾರರಾಗುತ್ತೀರಿ ಎಂಬುದು ನೆನಪಿರಲಿ.

Update: 2023-10-16 09:06 GMT

ಮಹಿಳೆ ಶ್ರೇಣೀಕೃತ ವ್ಯವಸ್ಥೆಯಲ್ಲಿ ಇಂದಿಗೂ ಅತಿಶೂದ್ರಳು. ಇಡೀ ಮಹಿಳಾ ಸಮುದಾಯ ಸೂಕ್ತ ಪ್ರಾತಿನಿಧ್ಯ ಪಡೆಯಲು ಇತಿಹಾಸದುದ್ದಕ್ಕೂ ವ್ಯವಸ್ಥೆಯೊಂದಿಗೆ ಹೋರಾಡುತ್ತಾ ಬಂದಿರುವ ಸುದೀರ್ಘ ಇತಿಹಾಸ ನಮ್ಮದು.

ಮಹಿಳಾ ಸಮುದಾಯಕ್ಕೆ ಅವರ ಹಕ್ಕುಗಳು ಸಿಗಬೇಕೆಂದು ಬಯಸಿದ ಬಾಬಾ ಸಾಹೇಬರು ‘ಹಿಂದುಕೋಡ್ ಬಿಲ್’ ಜಾರಿಗೆ ತರಲು ಪ್ರಯತ್ನಿಸಿದರು. ಆದರೆ ಮನುಧರ್ಮ ಶಾಸ್ತ್ರ ಅಳವಡಿಸಿಕೊಂಡ ಪುರುಷ ಪ್ರಧಾನ ವ್ಯವಸ್ಥೆ ಹಿಂದೂಕೋಡ್ ಬಿಲ್ ನ್ನು ವಿರೋಧಿಸಿದ್ದರಿಂದ ಬಾಬಾ ಸಾಹೇಬ್ ಅವರು ತಮ್ಮ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು.

ಸ್ವಾತಂತ್ರ್ಯ ಪೂರ್ವದ ಪ್ರಾಂತೀಯ ಆಡಳಿತದ ಸಂದರ್ಭದಲ್ಲಿ 1930-32ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಜಾತಿ, ಲಿಂಗ, ಧರ್ಮವೆನ್ನದೆ 18 ವರ್ಷ ದಾಟಿದ ಎಲ್ಲಾ ಭಾರತೀಯರಿಗೆ ಮತದಾನ ಹಕ್ಕನ್ನು ನೀಡಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದರು.ಐತಿಹಾಸಿಕ ವಿಪರ್ಯಾಸವೇನೆಂದರೆ ಬಾಬಾ ಸಾಹೇಬರು 1932ರಲ್ಲಿ ನಡೆದದುಂಡು ಮೇಜಿನ ಸಭೆಯಲ್ಲಿಇಂಗ್ಲೆಂಡಿನ ಪ್ರಧಾನಿ ಎದುರು ಮಹಿಳೆಯರಿಗೆ ಮತದಾನದ ಹಕ್ಕನ್ನು ಪ್ರತಿಪಾದಿಸಿದ ಸಂದರ್ಭದಲ್ಲಿ ಜಗತ್ತಿನ ಮೊದಲ ಪ್ರಜಾಪ್ರಭುತ್ವ ಹೊಂದಿದ ಜಗತ್ತಿನ ಮೊದಲ ಸಂವಿಧಾನ ಮಾಗ್ನಕಾರ್ಟ ಇರುವ ದೇಶದಲ್ಲಿ 1932ರವರೆಗೆ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟಿರಲಿಲ್ಲ. ಇಂಗ್ಲೆಂಡಿನ ಮಹಿಳೆಯರಿಗೆ ಮತದಾನದ ಹಕ್ಕನ್ನು ಘೋಷಿಸಿದ ನಂತರವೇ ಭಾರತೀಯ ಪ್ರಾಂತೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ನೀಡಲುಒಪ್ಪಿಕೊಂಡರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮಹಿಳಾ ಪ್ರಾತಿನಿಧ್ಯದ ವಿವರಗಳನ್ನು ನೋಡುತ್ತಾ ಹೋದರೆ ರಾಜಕೀಯದಲ್ಲಿ ಹೆಸರು ಮಾಡಿದ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು. ಈಗಿರುವ ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ 78. ದೇಶದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಸಾಧ್ಯವಾಗಿದ್ದು ಮಹಿಳಾ ಮೀಸಲಾತಿ ಮೂಲಕ ಮಾತ್ರ. ಅದಕ್ಕೆ ಉತ್ತಮ ಉದಾಹರಣೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಇರುವುದು. ಈಗ ದೇಶದ ಉದ್ದಗಲಕ್ಕೂ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 1.5 ಅಧಿಕ ಲಕ್ಷಕ್ಕೂ ಮಹಿಳಾ ಜನಪ್ರತಿನಿಧಿಗಳಿದ್ದಾರೆ.

ಹಾಗೆಯೇ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಬೇಕೆಂಬುದು ಇಂದಿನ ಬೇಡಿಕೆ ಅಲ್ಲ. ಇದು ಮೊದಲ ಪ್ರಯತ್ನವೂ ಅಲ್ಲ. ಮಹಾರಾಷ್ಟ್ರದ ಸಂಸದೆಯಾಗಿದ್ದ ಪ್ರಮೀಳಾ ದಂಡವತೆ ಅವರು 1996ರಲ್ಲಿ ಮಹಿಳಾ ಮೀಸಲಾತಿ ಖಾಸಗಿ ಮಸೂದೆಯನ್ನು ಮೊದಲ ಬಾರಿಗೆ ಮಂಡಿಸಿದರು. 1996ರಲ್ಲಿ ಅಂದಿನ ಎಚ್.ಡಿ. ದೇವೇಗೌಡಅವರ ನೇತೃತ್ವದ ಸಂಯುಕ್ತರಂಗ ಸರಕಾರವು ಅಂತಹ ಮಸೂದೆಯನ್ನು ಮೊದಲ ಬಾರಿ ಲೋಕಸಭೆಯಲ್ಲಿ ಮಂಡಿಸಿತ್ತು. ಆದರೆ ಆ ಲೋಕಸಭೆಯೇ ವಿಸರ್ಜನೆಯಾದ ಕಾರಣ ಮಸೂದೆಯೂ ಬಿದ್ದುಹೋಯಿತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಅಂಥದ್ದೇ ಮಸೂದೆಯನ್ನು 1998, 1999, 2002 ಮತ್ತು 2003ರಲ್ಲಿ ಮಂಡಿಸಿತ್ತು. 2004ರಲ್ಲಿ ಯುಪಿಎ-1 ಸರಕಾರ ಮತ್ತೆ ಮಂಡಿಸಿತ್ತು. ಈ ಹಿಂದೆ ಐದು ಬಾರಿ ಮಸೂದೆಗೆ ಅನುಮೋದನೆ ಸಿಕ್ಕಿರಲಿಲ್ಲ. 2008 ಮೇನಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ಸರಕಾರ ಮತ್ತೆ ಮಸೂದೆಯನ್ನು ಮಂಡಿಸಿತು. ಆ ಮಸೂದೆಯೂ ಲೋಕಸಭೆ ವಿಸರ್ಜನೆಯಾದ ಕಾರಣ ಬಿದ್ದುಹೋಯಿತು.

ಪ್ರಸ್ತುತ 20, ಸೆಪ್ಟಂಬರ್ 2023ರಂದು ಲೋಕಸಭೆಯಲ್ಲಿ ಮಂಡಿಸಲಾದ ನಾರಿ ವಂದನ್ ಅಧಿನಿಯಮ 2023 ಬಿಲ್‌ನ್ನು ಸ್ವಾತಂತ್ರ್ಯ ಬಂದು 74 ವರ್ಷಗಳ ನಂತರವಾದರೂ ಲೋಕಸಭೆಯಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನವನ್ನು ಮೀಸಲಿಡುವ ಸಂವಿಧಾನದ ತಿದ್ದುಪಡಿಯ ಕುರಿತು ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಈ ಅಧಿನಿಯಮದ ಸತ್ಯಾಸತ್ಯತೆಗಳನ್ನು ಪರಿಶೀಲಿಸುವುದು ಸೂಕ್ತ.

ಕೇಂದ್ರ ಸರಕಾರ ತರಾತುರಿಯಲ್ಲಿ ಜಾರಿಗೆ ತಂದ ಅಧಿನಿಯಮದ ಪ್ರಾರಂಭದ ಮೊದಲನೇ ಕಲಂನಲ್ಲಿ 128ನೇ ತಿದ್ದುಪಡಿಎಂದು ಕರೆಯಲಾಗಿದೆ. ಮುಂದುವರಿದು ಯಾವಾಗ ಜಾರಿಗೆ ಬರುತ್ತದೆ ಎಂದು ಯಾವುದೇ ನಿಖರ ಅಂಶವನ್ನು ತಿಳಿಸುವುದಿಲ್ಲ. ಅಂದರೆ ಅಧಿನಿಯಮ ಜಾರಿಗೆ ತರುವ ಅಂಶ ಕೇಂದ್ರ ಸರಕಾರದ ನಿರಂಕುಶಾಧಿಕಾರ ಮತ್ತು ಆಳುವ ಸರಕಾರದ ಹಿತಾಸಕ್ತಿಯನ್ನು ಅವಲಂಬಿಸಿಕೊಂಡಿದೆ. ಈ ಅಧಿನಿಯಮ ಜಾರಿಯ ವಿಳಂಬಕ್ಕೆ ಕೊಡುವ ಕಾರಣಗಳು ಜಾತಿಗಣತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡನೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ 2024 ಅಲ್ಲ 2029ಕ್ಕೂ ಮೀಸಲಾತಿ ಜಾರಿಗೆ ಬರುವುದು ಅನುಮಾನ.

ಮುಂದೆ ಕಲಂ 5ರಲ್ಲಿ ಸಂವಿಧಾನದ ಅನುಚ್ಛೇದ 334 -ಎ ಅಡಿಯಲ್ಲಿ. ಕೇವಲ 15 ವರ್ಷದಲ್ಲಿ ಈ ಮೀಸಲಾತಿಯ ಅವಧಿ ಮುಗಿಯುತ್ತದೆ. ಮಹಿಳೆಯರ ಪ್ರಾತಿನಿಧ್ಯ ಕೇವಲ 15 ವರ್ಷಗಳಿಗೆ ಸೀಮಿತವೇ? ಸಾವಿರಾರು ವರ್ಷಗಳಿಂದ ಇಡೀ ಮಹಿಳಾ ಸಂಕುಲಕ್ಕೆ ಅನ್ಯಾಯವೆಸಗಿದ ಪುರುಷ ಪ್ರಧಾನ ವ್ಯವಸ್ಥೆ. ಪ್ರಜಾಪ್ರಭುತ್ವದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗುವವರೆಗೂ ಈ ಅಧಿನಿಯಮ ಇರಬೇಕು ಅಲ್ಲವೇ? ಹಾಗೂ ಶೇ.33ರಷ್ಟು ಇದು ಸೂಕ್ತ ಪ್ರಾತಿನಿಧ್ಯ ಅಲ್ಲವೇ ಅಲ್ಲ. ಮಹಿಳಾ ಜನಸಂಖ್ಯೆ ಅನುಸಾರ ನೀಡುವ ಪ್ರಾತಿನಿಧ್ಯವೇ ಮೀಸಲಾತಿ. ನಾರಿ ವಂದನ್ ಅಧಿನಿಯಮದ ಹೆಸರು ಪ್ರತಿಪಾದಿಸುವಂತೆ ಯಾರೂ ಯಾರಿಗೆ ವಂದನೆ ಮಾಡಬೇಕಿಲ್ಲ. ದೇವತೆ ಅಂತ ಪೂಜೆ ಮಾಡಬೇಕಿಲ್ಲ. ಆದರೆ ಇಡೀ ಮಹಿಳಾ ಸಂಕುಲಕ್ಕೆ ಅವರ ಸೂಕ್ತ ಪ್ರಾತಿನಿಧ್ಯ ಕೊಟ್ಟರೆ ಅದೇ ದೊಡ್ಡ ಉಪಕಾರ. ಇಲ್ಲಿಯೂ ಕೇಲವು ರಾಜಕೀಯ ಹಿತಾಸಕ್ತಿಗಳು ತಮ್ಮ ರಾಜಕೀಯ ಮಾಡುವುದು ತುಂಬಾ ನೋವಿಗೀ ಡು ಮಾಡುತ್ತದೆ.

ಮಹಿಳಾ ಪ್ರಾತಿನಿಧ್ಯಕ್ಕೆ ಸಂಬಂಧಿಸಿ ಸಂಸತ್ತಿನಲ್ಲಿ ಹಲವು ಬಾರಿ ನಿರಂತರ ಪ್ರಯತ್ನಗಳ ನಂತರ ಎನ್‌ಡಿಎ ಮೈತ್ರಿಯ ಬಿಜೆಪಿ ಸರಕಾರ ನಾರಿ ವಂದನ್‌ಅಧಿನಿಯಮವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಜಂಬ ಕೊಚ್ಚಿಕೊಂಡರೂ ಮಹಿಳೆಯರಿಗೆ ಕೊಡಬೇಕಾದ ಸಾಂವಿಧಾನಿಕ ಹಕ್ಕು ಮತ್ತುಪ್ರಾತಿನಿಧ್ಯವನ್ನು ನಿರ್ಲಕ್ಷಿಸಿಲ್ಪಟ್ಟಿದ್ದು ಸತ್ಯ.

ಕುವೆಂಪುರವರು ರೈತರ ವಿಚಾರಕ್ಕೆ ಹೇಳಿದಂತೆ ‘‘ಕರಿಯರದ್ದೊ ಬಿಳಿಯರದ್ದೊ, ಯಾರದಾದರೆ ಏನು ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ!

ವಿಜಯನಗರವೋ? ಮೊಗಲರಾಳ್ವಿಕೆಯೋ? ಇಂಗ್ಲಿಷರೋ? ಎಲ್ಲರೂ ಜಿಗಣಿಗಳೆ ನನ್ನ ನೆತ್ತರಿಗೆ.’’

ಈ ವಿಚಾರವನ್ನು ಮಹಿಳೆಯರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ವಿವರಿಸುವುದಾದರೆ ಬ್ರಿಟಿಷರೋ, ಭಾರತೀಯರೋ, ಆ ಪಕ್ಷವೋ, ಈ ಪಕ್ಷವೋ ನೀವೆಲ್ಲ ಒಂದೇ. ಮಹಿಳಾ ವಿರೋಧಿ ನಿಲುವಿಗೆ.

ಪುರುಷ ಪ್ರಧಾನ ಸಮಾಜ ಮಹಿಳೆಯರ ಹಕ್ಕು, ಪ್ರಾತಿನಿಧ್ಯ ಎಂದಾಕ್ಷಣ ಬೆಚ್ಚಿ ಬೀಳಬೇಕಾದ ಅಗತ್ಯವಿಲ್ಲ. ಮಹಿಳಾ ಪ್ರಾತಿನಿಧ್ಯವೆಂದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಹಿಳೆಯು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ರಂಗದಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳುವ ಮಾರ್ಗವಷ್ಟೆ. ನೀವು ಮಹಿಳೆಯರ ಹಕ್ಕನ್ನು ಬೆಂಬಲಿಸುವುದಾದರೆ ಆ ಪಾಲು ನಿಮ್ಮತಾಯಿಗೂ ಸಿಗಬೇಕಾಗುತ್ತದೆ. ನಿಮ್ಮ ಹೆಂಡತಿಗೂ ಸಿಗಬೇಕಾಗುತ್ತದೆ. ನಿಮ್ಮ ಮಗಳಿಗೂ ಸಿಗಬೇಕಾಗುತ್ತದೆ. ವಿರೋಧಿಸಿದರೆ ನಿಮ್ಮ ತಾಯಿ, ಹೆಂಡತಿ, ಮಗಳ, ಸಾಂವಿಧಾನಿಕ ಹಕ್ಕುಗಳನ್ನು ವಂಚಿಸುವ ಕಾರ್ಯದಲ್ಲಿ ನೀವು ಪಾಲುದಾರರಾಗುತ್ತೀರಿ ಎಂಬುದು ನೆನಪಿರಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಮಂಜುಳಾ ಮುನವಳ್ಳಿ

contributor

Similar News