ಸಾಹಿತ್ಯ ಸಮ್ಮೇಳನಗಳು ಬ್ರಾಹ್ಮಣ ಸಮ್ಮೇಳನವಾಗದಿರಲಿ

ಸಾಹಿತ್ಯ ಸಮ್ಮೇಳನ ಎಂದರೆ ಅದು ಸಂಧ್ಯಾವಂದನೆಯಲ್ಲ. ಮತ ಮೌಢ್ಯತೆಗಳ ಮೆರವಣಿಗೆಯೂ ಅಲ್ಲ. ಒಂದು ನಿರ್ದಿಷ್ಟ ಜಾತಿಯನ್ನಾಗಲಿ, ಗುಂಪನ್ನಾಗಲಿ ಅಥವಾ ಕೋಮು ಗಲಭೆಗಳನ್ನಾಗಲಿ ಕೆರಳಿಸುವುದೂ ಅಲ್ಲ. ಸಾಹಿತ್ಯ ಸಮ್ಮೇಳನ ಎಂದರೆ ಮಾನವನ ಸಮಸ್ತ ಸಂವೇದನೆಗಳಿಗೆ ಕಣ್ಣಾಗುವುದು, ಮಾತಾಗುವುದು, ಕೊನೆಗೆ ಹೃದಯವಾಗುವುದು.

Update: 2023-11-26 07:56 GMT
Editor : Ismail | Byline : ಜಯನ್ ಮಲ್ಪೆ

ನಾ ಡಿನಾದ್ಯಂತ ಇದೀಗ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದೆ. ಆದರೆ ಬಹುತೇಕ ಈ ಸಾಹಿತ್ಯ ಸಮ್ಮೇಳನಕ್ಕೆ ಬ್ರಾಹ್ಮಣ ಸಮುದಾಯದವರನ್ನೇ ಸಮ್ಮೇಳನದ ಆಧ್ಯಕ್ಷರನ್ನಾಗಿ ಆಯ್ಕೆಮಾಡುತ್ತಿರುವುದು ಕಂಡುಬಂದಿದೆ.

ಸಾಹಿತ್ಯವು ಒಂದು ಸೃಜನಶೀಲ ಪ್ರಕ್ರಿಯೆ ಎಂಬುದು ನಮ್ಮೆಲ್ಲರ ರೂಢಿಗತವಾಗಿದ ತಿಳುವಳಿಕೆಯಾಗಿದೆ. ಹಾಗೆಯೇ ಅದು ನಾವು ಕಾಣುತ್ತಿರುವ ಸಮಾಜದ ಸಮಸ್ತ ನಡವಳಿಕೆಗಳ ಒಟ್ಟು ಮೊತ್ತವೆಂದೂ, ಮಾನವನ ಒಳ-ಹೊರಗಿನ ಹೋರಾಟವೆಂದೂ ತಿಳಿಯಬೇಕಾಗಿದೆ. ಸಾಹಿತ್ಯದಲ್ಲಿ ಮಾನವನ ಕನಸಿನ ಅಂಶವೂ, ಕಲೆಯ ಅಂಶವೂ ಮಿಳಿತವಾಗಿರುವಂತೆ, ಅದು ಸತ್ಯದೊಡನೆ ಮುಖಾಮುಖಿಯಾಗಿ ನಿಲ್ಲುತ್ತಾ ಮತ್ತು ತಾನೇ ಸತ್ಯವಾಗಿ ಅರಳಬೇಕಾಗುತ್ತದೆ. ಸಾಹಿತ್ಯವು ಸೃಷ್ಟಿಸುತ್ತಾ ಹೋಗುವ ಕ್ರಿಯೆಯಾದ್ದರಿಂದ, ಬರೆಯುವಾತನೂ, ಅವನ ಸಮಾಜವೂ ಮತ್ತೆ ಮತ್ತೆ ಸೃಷ್ಟಿಯಾಗುತ್ತಾ ಹೋಗುತ್ತವೆ. ಈ ಸೃಷ್ಟಿ ಕ್ರಿಯೆಯಾದ ಬರಹವು ಹೇಗಿರುತ್ತೋ ಹಾಗೇನೆ ಬರೆದವನ ಬದುಕೂ ಇದ್ದರೆ ಮಾತ್ರವೇ ಬರೆದ ಬರಹವು ಮೌಲಿಕವೆನಿಸುತ್ತದೆ. ಹಾಗಿಲ್ಲವಾದಲ್ಲಿ ಮೌಲಿಕ ಬರಹ ಕೂಡಾ ಕಸವೇ. ಈ ಕಸವ ಅನಗತ್ಯವಾಗಿ ಜನರೆದೆಯ ಮೇಲೆ ಹೇರುವ ಲೇಖಕ ನಿಜಕ್ಕೂ ಜನದ್ರೋಹಿ ಲೇಖಕನಾಗಿರುತ್ತಾನೆ.

ಶತಮಾನಗಳ ಹಿಂದಿನ ಮೌನದಾಳದಿಂದ ಅದ್ದಿ ತೆಗೆದ ಚೇತನವೂ ಲೋಕದ ಭೀಕರತೆಯನ್ನು ನಿರ್ಜೀವ ಹಾಳೆಗಳ ಮೇಲೆ ರೇಖಿಸುತ್ತಾ ಹೋದಂತೆ, ನೋವು ಯಾತನೆಗಳಿಂದ ಕೂಡಿದ ಸಮಾಜದ ತಳದ ಗರ್ಭದಿಂದ ಒಂದು ಹೊಸ ಚಿಗುರು ಚಿಗುರುತ್ತೆ. ಆ ಕಾಗದದಲ್ಲಿ ನೋವು ಯಾತನೆಗಳಿಂದ ಕೂಡಿದ ಒಂದು ಹೊಸ ಜೈವಿಕ ಜಗತ್ತು ಚಿತ್ತಾರವಾಗುತ್ತೆ.ತಳದ ಸಮಾಜವು ಕಂಡು, ಅನುಭವಿಸಿದ ಜೀವನದ ಸಮಸ್ತವೂ ಆಳದ ತಳಮಳದೊಡನೆ, ತನ್ನೊಳಗೆ ತಾನೇ ಅಲ್ಲೋಲ ಕಲ್ಲೋಲಗೊಳ್ಳುತ್ತಾ, ಜೀವನದ ಸತ್ಯವಾಗುತ್ತಾ, ಒಂದು ಮಹಾ ಪ್ರವಾಹದಂತೆ ದಿಕ್ಕುಗಳನ್ನು ಕೊಚ್ಚಿ ಹರಿಯಬಲ್ಲ ಶಕ್ತಿಯು ಮೈತಳೆಯುತ್ತದೆ ಎಂಬುದನ್ನು ನಮ್ಮ ಸಾಹಿತ್ಯ ಸಮ್ಮೇಳನದ ಸಂಘಟಕರು ತಿಳಿಯಬೇಕು.

ಯಾಕೆಂದರೆ ಇಡೀ ಭೂಮಿಯ ಹೃದಯ ಕೊಳೆತುಹೋದಂತೆ, ನಾನಾ ಜಾತಿ, ವರ್ಗ, ವರ್ಣಗಳ ಅನಾಗರಿಕ ವೃಕ್ಷ ಕೋಟಿಗಳು ಭೂಮಿಯ ಮೇಲೆ ಮೈ ತಳೆದಂತೆ, ಪ್ರತಿಯೊಂದು ಮರವೂ ತನ್ನ ಸುಡುವ ಬೆಂಕಿಯ ತಾನೇ ಹುಟ್ಟಿಸಿದಂತೆ, ಮಾನವತೆಯ ಎಲ್ಲ ಅವನತಿಗೆ ಅವು ಕಾರಣವಾಗುತ್ತಿದೆ. ಈ ಭೂಮಿ ಎಂಬುದು ಪ್ರೀತಿಯ ಪ್ರೇಮದ ಸೌಹಾರ್ದದ ತವರಾಗಬೇಕಿತ್ತು. ಅದರ ಬದಲು ಭೂಮಿ ಮರಣದ ಮನೆಯಾಗಿದೆ, ಅಸಮಾನತೆಯೆಂಬ ರೋಗದ ಬೀಡಾಗಿದೆ. ಎಲ್ಲ ಮಾನವೀಯ ಕನಸುಗಳಿಗೆ ಬೆಂಕಿ ಬಿದ್ದಿದೆ. ಹೊಟ್ಟೆಯ ಪಾಡಿನ ರಾಜಕಾರಣಕ್ಕೆ ಸಾಹಿತ್ಯ ಕೂಡ ಗುಲಾಮವಾಗಿದೆ. ರೋಗಗ್ರಸ್ತ ಭಾರತದ ನಿಜ ಕರಾಳತೆಯು ನಮ್ಮೆದೆಗಳನ್ನು ಸುಡುತ್ತಿದೆ.

ಹೊಸದಾಗಿ ಬರೆಯುತ್ತಿರುವ ಯುವಕ-ಯುವತಿಯರಿಗೆ ಗಾಢವಾದ ಸಂಕೋಚವಿದೆ. ಬದುಕಿನ ಪ್ರತೀ ಹಂತದಲ್ಲೂ ಅವರನ್ನು ಕಾಡುವ ನಾನಾ ಅಸಮಾನತೆಗಳ ವಿರುದ್ಧ ಆಳವಾದ ಸಿಟ್ಟಿದೆ. ಇವರ ಹೃದಯಗಳಲ್ಲಿ ಹಳ್ಳಿಗಾಡಿನ ಸಾಂಪ್ರದಾಯಿಕ ಸೌಂದರ್ಯವಿದೆ. ಹಾಗೆಯೇ ಜಿಡ್ಡುಗಟ್ಟಿದ ನಗರ ಸಂಸ್ಕೃತಿಯ ಶಾಪವಿದೆ. ಜೊತೆಗೆ ಹುಟ್ಟಿನಿಂದಲೇ ಅಂಟಿಕೊಂಡ ಹಸಿವು, ಅಸ್ಪಶ್ಯತೆ, ಅವಮಾನಗಳು ಅವರ ನರನಾಡಿಗಳಲ್ಲಿ ಹರಿಯುವ ರಕ್ತವಾಗಿದೆ. ಈ ಸಂಕಟವೇ ಅವರನ್ನು ಬರೆಸಲು ತೊಡಗಿಸಿದೆ.ಹಾಗಾಗಿ ಯುವಜನಾಂಗದ ಬರಹಗಳು ಸಿಟ್ಟಿನಿಂದ ಕೂಡಿದ್ದರೂ ಸಿಟ್ಟು ಅವರ ಉದ್ದೇಶವಲ್ಲ. ದಿನದಿನವೂ ಅಣು ಅಣುವಾಗಿ ಆಕ್ರಮಿಸುತ್ತಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಅವನತಿಯಿಂದ ಅವರಷ್ಟಕ್ಕೆ ಅವರು ಪಾರಾಗುವುದು ಸಿಟ್ಟಿನ ಹಿಂದಡಗಿರುವ ಉದ್ದೇಶ. ಈ ಸಿಟ್ಟು ನಮ್ಮೊಳಗೂ ಇರಬಹುದಾದ ಮಾನವ ವಿರೋಧಿ ಅವಿವೇಕಗಳ ವಿರುದ್ಧ; ಅಂತೆಯೇ ಪ್ರತಿಯೊಬ್ಬರಲ್ಲೂ ಇರಬಹುದಾದ ಅಂಥ ಗುಣಗಳ ವಿರುದ್ಧ.

ನಾನು ಓದಿದ ಒಂದು ಇಂಗ್ಲಿಷ್ ಕವಿತೆಯ ಸಾರ ನೆನಪಿದೆ. ಹಿಂದೆ ಒಂದಾನೊಂದು ಕಾಲದಲ್ಲಿ ಒಬ್ಬ ಋಷಿಯು ಗಾಢವಾದ ತಪಸ್ಸನ್ನು ಆಚರಿಸುತ್ತಿದ್ದ. ಅವನ ತಪಸ್ಸಿನ ಉದ್ದೇಶವು ಇಂದ್ರ ಪದವಿಯನ್ನು ಸಾಧಿಸುವುದು. ಪಾಪ, ಮುದುಕನಾದ ಋಷಿಗೆ ಅಧಿಕಾರದ ಚಪಲ. ಆದರೆ ಅಧಿಕಾರಾರೂಢನಾದ ಇಂದ್ರನು ತನ್ನ ಸ್ವಭಾವದಿಂದಲೇ ಕುತಂತ್ರಿಯಾದ ಪ್ರಯುಕ್ತ ಬಡ ಋಷಿಯ ವಿರುದ್ಧ ಸಂಚು ಹೂಡಿದನು. ಅನೇಕ ಆಮಿಷಗಳನ್ನು ಋಷಿಗೆ ಒಡ್ಡಿದರೂ ಆ ಋಷಿಯಾದವನು ತಪಸ್ಸಿನಿಂದ ವಿಮುಖನಾಗಲಿಲ್ಲ. ಇಂದ್ರನ ಅನೇಕ ತಂತ್ರಗಳೂ ಮುಗಿದು ಅವಾವುವೂ ಫಲಕೊಡದಿದ್ದಾಗ ಕೊನೆಯದಾಗಿ ಇಂದ್ರನು ತಪೋನಿರತ ಋಷಿಯ ಇದಿರು ವಜ್ರಖಚಿತ ಹಿಡಿಯುಳ್ಳ ಒಂದು ಚಿನ್ನದ ಕತ್ತಿಯನ್ನಿಟ್ಟು ಪರಾರಿಯಾದನು.

ತದನಂತರದಲ್ಲಿ ಎಷ್ಟೋ ಹಗಲುಗಳು ಸರಿದವು;ಎಷ್ಟೋ ರಾತ್ರಿಗಳು ಸರಿದವು;ಒಂದಾನೊಂದು ದಿನ ಬಡಪಾಯಿ ಋಷಿಯು ಕಣ್ಣು ತೆರೆದನು. ಕಣ್ತೆರೆದರೆ ಕಂಡದ್ದು ಹೊಳೆಹೊಳೆವ ಹೊನ್ನಕತ್ತಿ. ಅವನಿಗಾದರೂ ಕುತೂಹಲವ ಹತ್ತಿಕ್ಕಲಾಗದೆ ಕತ್ತಿ ಹಿಡಿಗೆ ಕೈ ಹಚ್ಚಿದ. ಎಂಥದೋ ಬಲ ಅವನ ಮೈಮನಗಳ ಹೊಕ್ಕಂತಾಯಿತು. ಅತ್ತಲೊಮ್ಮೆ ಕತ್ತಿ ಬೀಸಿದ. ಆ ಏಟಿಗೆ ತತ್ತರಿಸುತ್ತಾ ನಾನಾ ಮರಗಿಡಗಳು ಧರೆಗುರುಳಿದವು. ಋಷಿಯ ಬಲಹೀನ ತೋಳುಗಳಲ್ಲಿ ಭೀಮ ಬಲ ತುಂಬಿಬಂತು.

ಅದರಿಂದಾಗಿ ಕತ್ತಿಗೆ ಒಲಿದ ಋಷಿಯು ತಪಸ್ಸನ್ನು ತೊರೆದ. ವಿನಾಕಾರಣ ನಾನಾ ಜನರನ್ನೂ, ಪ್ರಾಣಿ ಪಕ್ಷಿಗಳ ರಕ್ತವನ್ನೂ ಚೆಲ್ಲಿದ. ತತ್ಪರಿಣಾಮವಾಗಿ ಕೊಲೆಯ ಪಾಪ ಅವನ ಚೇತನವ ಅಂಟುಕೊಂಡಿತು. ಅತ್ತ ತಪಸ್ಸೂ ಇಲ್ಲ;ಇತ್ತ ಇಂದ್ರ ಪದವಿಯೂ ಇಲ್ಲ. ಕೊನೆಗಾತ ಸತ್ತೇಹೋದ.ಈಗ ಋಷಿಗಳಿಲ್ಲ, ಕವಿ ಕಲಾವಿದ ಸಾಹಿತಿಗಳಿದ್ದಾರೆ.ಅವರನ್ನು ಕೊಂಡುಕೊಳ್ಳಲು ರಾಜಕೀಯದವರ ಹತ್ತಿರ ಹೆಣ್ಣು, ಹೆಂಡ, ಹಣ ಇತ್ಯಾದಿ ಅನೇಕ ವಜ್ರಾಯುಧಗಳಿವೆ.ರಾಜಕೀಯ ಆಮಿಷಗಳಿಗಾಗಿ ತನ್ನ ವಿವೇಕವನ್ನು ಒತ್ತೆಯಿಡುವ ಮುಲಾಜಿಗೆ ತನ್ನನ್ನು ಒಡ್ಡಿಕೊಂಡವ ಎಷ್ಟೇ ದೊಡ್ಡ ಕವಿ-ಕಲಾವಿದ-ಸಾಹಿತಿಯಾದರೂ ತಾನು ಪತನವಾಗುವುದಲ್ಲದೆ ತನ್ನನ್ನು ನಂಬಿದ ಜನರನ್ನು ನರಕಕ್ಕೆ ದೂಡುತ್ತಾನೆ. ಅಂಥವನನ್ನು ಚರಿತ್ರೆ ಕೂಡಾ ಕ್ಷಮಿಸದು.

ಹಾಗಾಗಿ ಸಾಹಿತ್ಯ ಸಮ್ಮೇಳನ ಎಂದರೆ ಅದು ಸಂಧ್ಯಾವಂದನೆಯಲ್ಲ. ಮತ ಮೌಢ್ಯತೆಗಳ ಮೆರವಣಿಗೆಯೂ ಅಲ್ಲ. ಒಂದು ನಿರ್ದಿಷ್ಟ ಜಾತಿಯನ್ನಾಗಲಿ, ಗುಂಪನ್ನಾಗಲಿ ಅಥವಾ ಕೋಮು ಗಲಭೆಗಳನ್ನಾಗಲಿ ಕೆರಳಿಸುವುದೂ ಅಲ್ಲ. ಸಾಹಿತ್ಯ ಸಮ್ಮೇಳನ ಎಂದರೆ ಮಾನವನ ಸಮಸ್ತ ಸಂವೇದನೆಗಳಿಗೆ ಕಣ್ಣಾಗುವುದು, ಮಾತಾಗುವುದು, ಕೊನೆಗೆ ಹೃದಯವಾಗುವುದು. ಸಾಹಿತ್ಯ ಸಮ್ಮೇಳನ ಎಂದರೆ ಬಾಳ ಬೀದಿಗಳಲ್ಲಿ ಹೋರಾಟದ ಹೊಸ ಹೆಜ್ಜೆಗಳನ್ನು ಇಡುವುದು; ಗೊಂಡಾರಣ್ಯಗಳ ನಡುವೆ ಹೊಸ ದಿಕ್ಕುಗಳನ್ನು ಉಂಟುಮಾಡುವುದು; ಮಾನವ-ಮಾನವರ ನಡುವೆ ಎದ್ದ ಹಿಮಾಲಯಗಳನ್ನು ಕತ್ತರಿಸಿ, ಅಂಥವನ್ನು ಮಾನವ ವಾಸಯೋಗ್ಯ ಪ್ರದೇಶಗಳನ್ನಾಗಿ ಮಾರ್ಪಡಿಸುವುದು.

ಇದು ತುಂಬಾ ಜಟಿಲವಾದ ಕೆಲಸ. ಕನಸಿನ ದಂತಗೋಪುರಗಳಲ್ಲಿ ಕುಳಿತು ಈ ಕೆಲಸ ಮಾಡಲಾಗದು ಅಥವಾ ಉಳ್ಳವರ ತೃಪ್ತಿಗಾಗಿಯೂ ಈ ಕೆಲಸ ಮಾಡಲಾಗದು. ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳುತ್ತಾ ಇಡೀ ಮಾನವ ಕುಲದ ಕಣ್ಣು ತೆರೆಸಲು ಸಾಹಿತ್ಯ ಸಮ್ಮೇಳನ ಕೆಲಸ ಮಾಡಬೇಕು. ಇಂಥ ಸಮ್ಮೇಳನ ಒಟ್ಟು ಮಾನವ ಕುಲದ ಹಿತಕ್ಕೆಂದು ನಾವು ಭಾವಿಸಬೇಕಾಗಿದೆ. ಸಾಹಿತಿಗಳು ಎಂದರೆ ಕೇವಲ ಬ್ರಾಹ್ಮಣರಿಗಾಗಿ ನಡೆಯಬಾರದು. ಜನರಿಗಾಗಿ ನಡೆಯುವ ಸಾಹಿತ್ಯ ಸಮ್ಮೇಳನ ಎಂಬ ಉದಾತ್ತವೂ ಮಾನವತೆಯೂ ಆದ ನಂಬಿಕೆಯೊಡನೆ ನಡೆಯಬೇಕು.

Writer - ವಾರ್ತಾಭಾರತಿ

contributor

Editor - Ismail

contributor

Byline - ಜಯನ್ ಮಲ್ಪೆ

contributor

Similar News