ಬಾಂಬ್ ಸ್ಪೋಟ ಮತ್ತು ಬಾಲನ್ ಬಯಲು ಮಾಡಿದ ಪೊಲೀಸರ ಸುಳ್ಳುಗಳು

2013 ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ‘ಮೋಟಾರ್ ಬೈಕ್ ನಲ್ಲಿ ಬಾಂಬ್ ಸ್ಪೋಟ’ ಎಂಬ ಸುದ್ದಿಯಾಯಿತು. ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದ ಈ ಮೋಟರ್ ಬೈಕ್ ಬಾಂಬ್ ಸ್ಪೋಟ ಪ್ರಕರಣವು ಮುಸ್ಲಿಂ ಸಮುದಾಯವನ್ನು ಅನುಮಾನಿಸುವಲ್ಲಿ ಯಶಸ್ವಿಯಾಯಿತು. ಈ ಬಾಂಬ್ ಸ್ಪೋಟವಾದ ಒಂದೇ ತಿಂಗಳಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ಇತ್ತು ! ಅದಾಗಿ ಒಂದು ವರ್ಷದಲ್ಲೇ ಲೋಕಸಭಾ ಚುನಾವಣೆ ಎದುರುಗೊಂಡಿತ್ತು. ಈ ಎರಡು ಚುನಾವಣೆಯ ಹೊಸ್ತಿಲ್ಲಲ್ಲಿ ಬೆಂಗಳೂರಿನಲ್ಲಿ ಬೈಕ್ ಬಾಂಬ್ ಸ್ಪೋಟ ನಡೆಯಿತು. ಈ ಸ್ಪೋಟದ ಹಿನ್ನಲೆಯಲ್ಲಿ ಹಿಂದುತ್ವವಾದಿಗಳು ಮತ್ತು ರಾಜಕೀಯ ಪಕ್ಷಗಳು ಪರಸ್ಪರ ವಾಗ್ದಾಳಿ ನಡೆಸಿ ಅಂತಿಮವಾಗಿ ‘ಮುಸ್ಲಿಂ ಸಮುದಾಯ ಅಪರಾಧಿ’ ಸ್ಥಾನದಲ್ಲಿ ನಿಲ್ಲುವಂತೆ ಮಾಡಿತ್ತು.
ರಾಜಕೀಯ ಚರ್ಚೆ, ಹಿಂದೂ ಮುಸ್ಲಿಂ, ದೇಶಭಕ್ತಿಯ ಚರ್ಚೆಯ ಬಳಿಕ ಎಲ್ಲರೂ ಬೆಂಗಳೂರು ಬೈಕ್ ಬಾಂಬ್ ಸ್ಪೋಟವನ್ನು ಮರೆತು ಬಿಟ್ಟಿದ್ದಾರೆ. ಈಗ ಪ್ರಕರಣದ ವಿಚಾರಣೆಯು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಿರಿಯ ವಕೀಲ ಎಸ್. ಬಾಲನ್ ಅವರು ಆರೋಪಿಗಳ ಪರವಾಗಿ ಎನ್ಐಎ ಕೋರ್ಟ್ ನಲ್ಲಿ ವಕಾಲತ್ತು ನಡೆಸುತ್ತಿದ್ದಾರೆ. ಚಾರ್ಜ್ಶೀಟ್ ನಲ್ಲಿ ಬಾಂಬ್ ಸ್ಪೋಟವನ್ನು ದೃಢೀಕರಿಸಿರುವ ಎಫ್‌ಎಸ್‌ಎಲ್ (FSL)ನ ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ (ballistics forensics) ನ ವಿಜ್ಞಾನಿಯನ್ನು ಪಾಟಿಸವಾಲಿಗೆ ಗುರಿಪಡಿಸಿ ಬಾಂಬ್ ಸ್ಪೋಟದ ಅಸಲಿಯತ್ತನ್ನು ಹೊರತೆಗೆದಿದ್ದಾರೆ. ನಿಜಕ್ಕೂ ಬಾಂಬ್ ಸ್ಪೋಟಿಸಲಾಗಿತ್ತೆ ? ಅಥವಾ ಬಿಸಿಲಿಗೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಪೋಟವಾಗಿದ್ದನ್ನೇ ಬಾಂಬ್ ಸ್ಪೋಟ ಎಂದು ಕರೆಯಲಾಯಿತೇ ? ನ್ಯಾಯಾಲಯದ ದಾಖಲೆಗಳಲ್ಲಿರುವ ಎಸ್ ಬಾಲನ್ ಮತ್ತು ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞರ ನಡುವಿನ ಪಾಟಿಸವಾಲಿನ (Cross-examination) ಆಯ್ದ ಭಾಗ ಇಲ್ಲಿದೆ.
ಎಸ್ ಬಾಲನ್, ವಕೀಲರು : ನೀವು ಎಫ್ಎಸ್ಎಲ್ಗೆ ಯಾವಾಗ ನೇಮಕಗೊಂಡ್ರಿ ? ಯಾವಾಗ ಪದೋನ್ನತಿ ಹೊಂದಿದ್ರಿ ? ಯಾವ್ಯಾವ ಹುದ್ದೆಯಲ್ಲಿ ಕೆಲಸ ಮಾಡಿದ್ರಿ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಾನು 1985ರಲ್ಲಿ ಬೆಂಗಳೂರು ಎಫ್‌ಎಸ್‌ಎಲ್ (FSL) ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ವಿಭಾಗದಲ್ಲಿ ವೈಜ್ಞಾನಿಕ ಸಹಾಯಕರಾಗಿ ನೇಮಕಗೊಂಡೆ. 2012ರಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ (Scientific Officer) ಪದೋನ್ನತಿ ಹೊಂದಿದೆ. 5 ವರ್ಷಗಳ ನಂತರ, ಅಂದರೆ 2017ರಲ್ಲಿ ಸಹಾಯಕ ನಿರ್ದೇಶಕರ (Asst. Director) ಹುದ್ದೆಗೆ ಪದೋನ್ನತಿ ಪಡೆದೆ.
ಎಸ್ ಬಾಲನ್, ವಕೀಲರು : ನಿಮ್ಮ ಹುದ್ದೆ ಯಾವ ದರ್ಜೆಯದ್ದು ? ಈ ಹುದ್ದೆಗಳ ನೇಮಕಾತಿ ಹೇಗೆ ನಡೆಯುತ್ತದೆ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ವೈಜ್ಞಾನಿಕ ಅಧಿಕಾರಿ (Scientific Officer) ಮತ್ತು ಸಹಾಯಕ ನಿರ್ದೇಶಕ (Asst. Director) ಹುದ್ದೆಗಳು ಗಜೇಟೆಡ್ (Gazetted) ಹುದ್ದೆಗಳಾಗಿವೆ. ಸಹಾಯಕ ನಿರ್ದೇಶಕರನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (Addl. Chief Secretary) ನೇಮಿಸುತ್ತಾರೆ. ಅಪರಾಧ ಮತ್ತು ತಂತ್ರಜ್ಞಾನ ವಿಭಾಗದ ಮೇಲ್ವಿಚಾರಣಾಧಿಕಾರಿ (Supervising Officer) ಎಡಿಜಿಪಿ (ADGP) ಆಗಿರುತ್ತಾರೆ.
ಎಸ್ ಬಾಲನ್, ಹಿರಿಯ ವಕೀಲರು : ನೀವು ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ವಿಭಾಗದ ಸಹಾಯಕ ನಿರ್ದೇಶಕರಾಗಿದ್ದೀರಿ. ನೀವು ರಸಾಯನಶಾಸ್ತ್ರ ವಿಭಾಗದ (Chemistry Division) ಸಹಾಯಕ ನಿರ್ದೇಶಕನಾಗಿರಲಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : 2017ರಲ್ಲಿ ನಾನು ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ವಿಭಾಗದ ಸಹಾಯಕ ನಿರ್ದೇಶಕರಾಗಿ (Asst. Director of Ballistic Division) ಪದೋನ್ನತಿ ಹೊಂದಿರುವುದು ಸತ್ಯ. 2013ರಲ್ಲಿ ನಾನು ರಸಾಯನಶಾಸ್ತ್ರ ವಿಭಾಗದ (Chemistry Division) ಸಹಾಯಕ ನಿರ್ದೇಶಕನಾಗಿರಲಿಲ್ಲ. ಆದರೆ, ಅದೇ ವರ್ಷ ಎಡಿಜಿಪಿಯವರಿಂದ ನೇಮಕಗೊಂಡ ತಾತ್ಕಾಲಿಕ (In-charge) ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದೇನೆ.
ಎಸ್ ಬಾಲನ್, ಹಿರಿಯ ವಕೀಲರು : ಈ ಸ್ಪೋಟ ನಡೆದಿದ್ದು 2013 ರಲ್ಲಿ. ಆಗ ನೀವು ರಸಾಯನಶಾಸ್ತ್ರ ವಿಭಾಗದ ಸಹಾಯಕ ನಿರ್ದೇಶಕರಾಗಿ ಉಲ್ಲೇಖಿಸಿಲ್ಲವೆ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು, ಅದು ಅಲ್ಲಿಲ್ಲ.
ಎಸ್ ಬಾಲನ್, ಹಿರಿಯ ವಕೀಲರು : ನಿಮ್ಮ ಪದವಿಯಲ್ಲಿ ನೀವು ಸ್ಪೋಟಕಗಳ ವೈಜ್ಞಾನಿಕ ಅಧ್ಯಯನ ಮಾಡಿದ್ದೀರಾ ? ನಿಮ್ಮಬಳಿ ಸ್ಪೋಟಕಗಳ ಅಧ್ಯಯನಕ್ಕೆ ಸಂಬಂಧಿಸಿ ಡಿಪ್ಲೊಮಾ ಅಥವಾ ಪ್ರಮಾಣ ಪತ್ರ ಇದೆಯಾ ? ಇದ್ರೆ ನ್ಯಾಯಾಲಯಕ್ಕೆ ಸಲ್ಲಿಸಬಹುದೇ ? ಅಥವಾ ನೀವು ಸ್ಪೋಟಕಗಳ ಅಧ್ಯಯನದ ಬಗ್ಗೆ ಯಾವುದಾದರೂ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದೀರಾ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಾನು ನನ್ನ ಪದವಿಯಲ್ಲಿ (Degree) ಸ್ಫೋಟಕಗಳ (Explosive Analysis) ವೈಜ್ಞಾನಿಕ ವಿಶ್ಲೇಷಣೆ ಅಧ್ಯಯನ ಮಾಡಿಲ್ಲ. ನನ್ನ ಬಳಿ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಡಿಪ್ಲೊಮಾ ಅಥವಾ ಪ್ರಮಾಣಪತ್ರವಿಲ್ಲ. ನಾನು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿಲ್ಲ.
ಎಸ್ ಬಾಲನ್, ಹಿರಿಯ ವಕೀಲರು : ನೀವು ಈವರೆಗೆ ಎಷ್ಟು ಸ್ಪೋಟ ಪ್ರಕರಣಗಳನ್ನು ತನಿಖೆ ನಡೆಸಿ ವರದಿ ನೀಡಿದ್ದೀರಿ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಾನು ಒಟ್ಟು 500 ಪ್ರಕರಣಗಳನ್ನು ಪರಿಶೀಲಿಸಿದ್ದೇನೆ.
ಎಸ್ ಬಾಲನ್ : ಒಬ್ಬ ವೈಜ್ಞಾನಿಕ ಅಧಿಕಾರಿಯು ಆಡಳಿತಾತ್ಮಕವಾಗಿರುವ ನಿರ್ದೇಶಕರ ಹುದ್ದೆಯನ್ನು ನಿರ್ವಹಿಸಲು ಸಾಧ್ಯವಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ವೈಜ್ಞಾನಿಕ ಅಧಿಕಾರಿಯು (Scientific Officer) ಹೆಚ್ಚುವರಿ ನಿರ್ದೇಶಕರ (Addl. Director) ಹುದ್ದೆಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಆದರೆ, ಸಹಾಯಕ ನಿರ್ದೇಶಕರ (Asst. Director) ಹುದ್ದೆಯನ್ನು ನೋಡಿಕೊಳ್ಳಲು ಸಾಧ್ಯ.
ಎಸ್ ಬಾಲನ್, ಹಿರಿಯ ವಕೀಲರು : ನೋಡಿ, ನಿಯಮಗಳ ಪ್ರಕಾರ ನೀವು ಹೆಚ್ಚುವರಿ ನಿರ್ದೇಶಕರಾಗಲು ಅರ್ಹರಲ್ಲ. ನೀವು ರಾಸಾಯನ ಶಾಸ್ತ್ರದಲ್ಲಿ ಕೆಲಸವನ್ನೇ ಮಾಡಿಲ್ಲ !
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಿಜ. 2013ರಲ್ಲಿ ನಾನು ಹೆಚ್ಚುವರಿ ನಿರ್ದೇಶಕರ (Addl. Director) ಹುದ್ದೆಗೆ ಅರ್ಹನಾಗಿರಲಿಲ್ಲ. ನಾನು ರಸಾಯನಶಾಸ್ತ್ರ ವಿಭಾಗದ ವೈಜ್ಞಾನಿಕ ಸಹಾಯಕನಾಗಿಲ್ಲ ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಲ್ಲ ಎನ್ನುವುದೂ ನಿಜ.
ಎಸ್ ಬಾಲನ್, ಹಿರಿಯ ವಕೀಲರು : ನೀವು ಬಾಂಬ್ ಸ್ಫೋಟದ ಸ್ಥಳ ಪರಿಶೀಲನೆ ಮಾಡುವಾಗ, ಅಲ್ಲಿ ಸಿಗುವ ಸಾಕ್ಷ್ಯಗಳ (Physical Evidence) ಫೋಟೋ ತೆಗೆಯಬೇಕು. ನೀವು ಫೋಟೋ ತೆಗೆದಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು. ತೆಗೆದಿಲ್ಲ.
ಎಸ್ ಬಾಲನ್, ಹಿರಿಯ ವಕೀಲರು : ನಿಮ್ಮ ಪರಿಶೀಲನೆಯ ವೇಳೆಯಲ್ಲಿ ಪತ್ತೆಯಾದ ಸಾಕ್ಷ್ಯಗಳನ್ನು ಪೆಟ್ಟಿಗೆಯಲ್ಲಿ (Container) ಸಂಗ್ರಹಿಸಬೇಕೆಂದು ನಿಯಮವಿದೆ. ಲೇಬಲ್ (Label) ನಲ್ಲಿ ಅಪರಾಧ ಸಂಖ್ಯೆ, ಪೊಲೀಸ್ ಠಾಣೆ ಹೆಸರು, ದಿನಾಂಕ, ಮತ್ತು ಸಹಿ ಇರಬೇಕು. ಅದನ್ನೆಲ್ಲಾ ಮಾಡಿ ನ್ಯಾಯಾಲಯಕ್ಕೆ List of Physical Evidence ಸಲ್ಲಿಸಿದ್ದೀರಾ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಾನು ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯವನ್ನು ಲ್ಯಾಬ್ ಸೀಲ್ (Laboratory Seal) ಮಾಡಿಲ್ಲ. ನಾನು ತಯಾರಿಸಿದ ಸಾಕ್ಷ್ಯಗಳ ಪಟ್ಟಿ (List of Physical Evidence) ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ. ಸಾಕ್ಷ್ಯಗಳನ್ನು ಪ್ಯಾಕಿಂಗ್ ಇಲ್ಲದೆ ವಾಪಸ್ ನೀಡಿದ್ದೇನೆ.
ಎಸ್ ಬಾಲನ್, ಹಿರಿಯ ವಕೀಲರು : ಬಾಂಬ್ ಸ್ಫೋಟದ ಪರಿಣಾಮ, ಸ್ಫೋಟದ ವ್ಯಾಪ್ತಿ, ಅಥವಾ ಅಪಘಾತದ ಪ್ರಭಾವದ ಬಗ್ಗೆ ನಿಮ್ಮ ವರದಿಯಲ್ಲಿ ಉಲ್ಲೇಖಿಸಿದ್ದೀರಾ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಇಲ್ಲ.
ಎಸ್ ಬಾಲನ್, ಹಿರಿಯ ವಕೀಲರು : ಕರ್ನಾಟಕ ಸರ್ಕಾರ ಅಥವಾ ಡಿಜಿಪಿ ಅಥವಾ ಐಜಿಪಿ ನಿಮ್ಮನ್ನು ಸ್ಫೋಟಕ ವಸ್ತುಗಳ ತಜ್ಞ (explosives expert) ಎಂದು ಘೋಷಿಸಿಲ್ಲ, ಅಲ್ಲವೇ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು, ಇದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ರಸಾಯನಶಾಸ್ತ್ರ ವಿಭಾಗದ ಸಹಾಯಕ ನಿರ್ದೇಶಕರು ಮತ್ತು ವೈಜ್ಞಾನಿಕ ಅಧಿಕಾರಿಗಳು (Scientific Officers) ಸ್ಫೋಟಕ ವಸ್ತುಗಳನ್ನು ಪರೀಕ್ಷಿಸಲು ಮತ್ತು ಅಭಿಪ್ರಾಯ ನೀಡಲು ನೇಮಿಸಲಾಗಿದೆ. ಆದರೆ ನೀವು ಬ್ಯಾಲಿಸ್ಟಿಕ್ ತಜ್ಞರು. ಅಲ್ಲವೇ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು.
ಎಸ್ ಬಾಲನ್, ಹಿರಿಯ ವಕೀಲರು: ನೋಡಿ, ನಿಮ್ಮ ವರದಿಯಲ್ಲಿ ಸ್ಪೋಟ ನಡೆದ ಸ್ಥಳದ ಗುರುತು, ಬೌತಿಕ ಸಾಕ್ಷ್ಯಗಳ ನಡುವಿನ ಅಂತರ, ಸ್ಪೋಟದ ಪರಿಣಾಮ, ಪ್ರದೇಶ, ವ್ಯಾಪ್ತಿಯ ಬಗ್ಗೆ ಏನೂ ಉಲ್ಲೇಖಿಸಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು. ನನ್ನ ಅಪರಾಧ ಸ್ಥಳದ ವರದಿಯಲ್ಲಿ ಘಟನೆಯ ಸ್ಥಳದ ಗಡಿ ಮತ್ತು ಭೌತಿಕ ಸಾಕ್ಷ್ಯಗಳ ನಡುವಿನ ಅಂತರವನ್ನು ನಮೂದಿಸಲಾಗಿಲ್ಲ ಎಂಬುದು ಸತ್ಯ. ಸ್ಫೋಟಕ ವಸ್ತುಗಳಿಂದ ಉಂಟಾದ ಹಾನಿಯ ಪ್ರದೇಶ, ಪರಿಣಾಮ (missile effect) ಹರಡಿದ ವ್ಯಾಪ್ತಿ ಮತ್ತು ವಾಹನದ ಭಾಗಗಳು ಎಷ್ಟು ದೂರ ಪತ್ತೆಯಾಗಿವೆ ಎಂಬುದನ್ನು ಉಲ್ಲೇಖಿಸಲಾಗಿಲ್ಲ ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ನೀವು ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞರಾಗಿ ಬಾಂಬ್ ನ ಕಚ್ಚಾ ವಸ್ತುಗಳಾದ nuts, bolts, nailsಗಳನ್ನು ಸಂಗ್ರಹಿಸಬೇಕಿತ್ತು. ಆದರೆ ಅದನ್ನು ನೀವು ಸಂಗ್ರಹಿಸಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಸ್ಪೋಟದ ಸ್ಥಳದಲ್ಲಿ ನಾನು ಬಾಂಬ್ ನ ಕಚ್ಚಾ ವಸ್ತುಗಳಾದ nuts, bolts, nails ಇತ್ಯಾದಿಗಳನ್ನು ಸಂಗ್ರಹಿಸಿಲ್ಲ ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ಅಮೋನಿಯಂ ನೈಟ್ರೇಟ್ ಆಧಾರಿತ ಸ್ಫೋಟಕವನ್ನು ANFO (Ammonium Nitrate Fuel Oil) ಎಂದು ಕರೆಯಲಾಗುತ್ತದೆಯೇ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು. ಜೆಲ್ ಸ್ಫೋಟಕಗಳು, ಇಮಲ್ಷನ್ ಸ್ಫೋಟಕಗಳೂ ಅಮೋನಿಯಂ ಆಧಾರಿತ ಸ್ಫೋಟಕಗಳೇ ಆಗಿವೆ. ANFO ಅಂದರೆ Ammonium Nitrate ಮತ್ತು Fuel Oil ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು: ಅಮೋನಿಯಂ ನೈಟ್ರೇಟ್ ಮತ್ತು ಪೆಟ್ರೋಲ್ ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾದರೆ, ಅದು ಸ್ಫೋಟಕ ವಸ್ತುವಾಗಿ ಪರಿವರ್ತನೆಗೊಳ್ಳುತ್ತದೆ ತಾನೆ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು. ಅಮೋನಿಯಂ ನೈಟ್ರೇಟ್ ಮತ್ತು ಪೆಟ್ರೋಲ್ ಸೇರಿದರೆ ಸ್ಪೋಟಕವಾಗುತ್ತದೆ.
ಎಸ್ ಬಾಲನ್, ಹಿರಿಯ ವಕೀಲರು : ಐಇಡಿ ಬಾಂಬ್ ಗಳಲ್ಲಿ (Improvised Explosive Device) ಸಾಮಾನ್ಯವಾಗಿ ಎಷ್ಟು nuts, bolts, nails, iron balls ಸೇರಿರುತ್ತವೆ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಸಾಮಾನ್ಯವಾಗಿ, IED ಬಾಂಬ್ಗಳಲ್ಲಿ ಮೊಬೈಲ್, ಮೆಕ್ಯಾನಿಕಲ್ ಅಥವಾ ಡಿಜಿಟಲ್ ಟೈಮರ್, ಸರ್ಕ್ಯೂಟ್ ಬೋರ್ಡ್, ಚಿಪ್, ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಅಥವಾ ಡಿಟೋನೇಟರ್ ಇರುತ್ತದೆ.
ಎಸ್ ಬಾಲನ್, ಹಿರಿಯ ವಕೀಲರು : ಬಾಂಬ್ ಸ್ಪೋಟ ಆಗಿದೆ ಎನ್ನುವ ಸ್ಥಳದಲ್ಲಿ ಮೊಬೈಲ್, ಮೆಕ್ಯಾನಿಕಲ್ ಅಥವಾ ಡಿಜಿಟಲ್ ಟೈಮರ್, ಸರ್ಕ್ಯೂಟ್ ಬೋರ್ಡ್, ಚಿಪ್, ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಅಥವಾ ಡಿಟೋನೇಟರ್ ನಿಮಗೆ ಪತ್ತೆಯಾಗಿಲ್ಲ ತಾನೆ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು. ನನ್ನ ಪರಿಶೀಲನೆಯಲ್ಲಿ ಬಾಂಬ್ ಸ್ಪೋಟದ ಸ್ಥಳದಲ್ಲಿ ಮೊಬೈಲ್, ಮೆಕ್ಯಾನಿಕಲ್ ಅಥವಾ ಡಿಜಿಟಲ್ ಟೈಮರ್, ಸರ್ಕ್ಯೂಟ್ ಬೋರ್ಡ್, ಚಿಪ್, ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಅಥವಾ ಡಿಟೋನೇಟರ್ ಪತ್ತೆಯಾಗಿಲ್ಲ.
ಎಸ್ ಬಾಲನ್, ಹಿರಿಯ ವಕೀಲರು : ನೀವು ಬಾಂಬ್ ತಜ್ಞರು. ಆದರೆ ನಿಮ್ಮ ವರದಿಯಲ್ಲಿ ಬಾಂಬ್ ಸ್ಪೋಟದ ತೀವ್ರತೆಯನ್ನು ನಮೂದಿಸಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಈ ಸ್ಫೋಟ Low Order (ಕಡಿಮೆ ತೀವ್ರತೆ) ಅಥವಾ High Order (ಅತಿ ಹೆಚ್ಚಿನ ತೀವ್ರತೆ)ಯ ಸ್ಫೋಟವೋ ಎಂಬುದನ್ನು ನಾನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ಎಎನ್‌ಎಫ್‌ಒ (ಅಮೋನಿಯಂ ನೈಟ್ರೇಟ್ ಫ್ಯುಯೆಲ್ ಆಯಿಲ್) ಎಂಬ ತೀವ್ರ ಸ್ಫೋಟಕದ ಸ್ಫೋಟದಲ್ಲಿ ತಾಪಮಾನ ಎಷ್ಟಿರುತ್ತದೆ ?
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಎಎನ್‌ಎಫ್‌ಒ (ಅಮೋನಿಯಂ ನೈಟ್ರೇಟ್ ಫ್ಯುಯೆಲ್ ಆಯಿಲ್) ಸ್ಪೋಟದಲ್ಲಿ 1000 ರಿಂದ 3000 ಡಿಗ್ರಿ ಸೆಲ್ಸಿಯಸ್ ತಾಪಮಾನ ಒಳಗೊಂಡಿರುತ್ತದೆ.
ಎಸ್ ಬಾಲನ್, ಹಿರಿಯ ವಕೀಲರು : 1000 ರಿಂದ 3000 ಡಿಗ್ರಿ ತಾಪಮಾನದಲ್ಲಿ ಲೋಹವು ಕರಗುತ್ತದೆ ಎಂದು ನಾನು ಹೇಳುತ್ತೇನೆ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಈ ತಾಪಮಾನದಲ್ಲಿ ಲೋಹವು ಕರಗುತ್ತದೆ.
ಎಸ್ ಬಾಲನ್, ಹಿರಿಯ ವಕೀಲರು : 1000-3000 ಡಿಗ್ರಿ ತಾಪಮಾನದಲ್ಲಿ ಬೈಕ್ನ ಪೆಟ್ರೋಲ್ ಟ್ಯಾಂಕ್ ಕರಗುತ್ತದೆ ಎಂದು ನಾನು ಹೇಳುತ್ತೇನೆ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ಪೊಲೀಸರು ಹೇಳಿದಂತೆ ಬೈಕ್ ನಲ್ಲಿ ಬಾಂಬ್ ಸ್ಪೋಟವಾಗಿದ್ದರೆ, ಬೈಕ್ ನ ಪೆಟ್ರೋಲ್ ಟ್ಯಾಂಗ್ ಕರಗಿ ಹೋಗಬೇಕಿತ್ತು, ಆದರೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಕರಗಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಈ ಪ್ರಕರಣದಲ್ಲಿ ಬೈಕ್ ನ ಪೆಟ್ರೋಲ್ ಟ್ಯಾಂಕ್ ಕರಗಿಲ್ಲ ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ಬೈಕ್ ಸ್ಪೋಟಕ್ಕೆ ಬಾಂಬ್ ಕಾರಣ ಮಾತ್ರವೇ ಆಗಬೇಕಿಲ್ಲ. ಬೈಕ್ನಲ್ಲಿದ್ದ ಪೆಟ್ರೋಲ್ ಕೂಡಾ ಸ್ಪೋಟ ಆಗಬಹುದು.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು, ಪೆಟ್ರೋಲಿಯಂ ಉತ್ಪನ್ನ ಆಮ್ಲಜನಕದೊಂದಿಗೆ ಸಂಯೋಜಿತವಾದರೆ, ಸೂಕ್ತ ತಾಪಮಾನದಲ್ಲಿ ಅದು ಸ್ಫೋಟವನ್ನು ಉಂಟು ಮಾಡಬಲ್ಲದು.
ಎಸ್ ಬಾಲನ್, ಹಿರಿಯ ವಕೀಲರು : ನೀವು ತಜ್ಞರಾಗಿದ್ದರೂ ನಿಖರವಾದ ವರದಿ ನೀಲ್ಲ. ಬಹುಶಃ, ಸಾಧ್ಯತೆ ಎಂಬ ಪದಗಳನ್ನು ಬಳಸಿದ್ದೀರಿ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನನ್ನ ವರದಿಯಲ್ಲಿ "ಬಹುಶಃ" ಮತ್ತು "ಸಾಧ್ಯತೆ" ಎಂಬ ಪದಗಳನ್ನು ಬಳಸಿದ್ದೇನೆ ಎಂಬುದು ಸತ್ಯ. ಸ್ಫೋಟದ ಸ್ಥಳದ ಚಿತ್ರಣವನ್ನು ನಾನು ಒದಗಿಸಿಲ್ಲ ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ಬಾಂಬ್ ಸ್ಪೋಟ ಅಲ್ಲದೆಯೇ, ಬೈಕ್ನ ಪೆಟ್ರೋಲ್ ಟ್ಯಾಂಕ್ ಸ್ಪೋಟ ಆಗಿರಬಹುದು. ಆದರೆ ನೀವು ಬೈಕ್ ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿಲ್ಲ ಎನ್ನುವುದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಿಜ. ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿಲ್ಲ ಎಂಬುದನ್ನು ಸೂಚಿಸುವ ಯಾವುದೇ ದಾಖಲೆಗಳನ್ನು ನಾನು ಒದಗಿಸಿಲ್ಲ.
ಎಸ್ ಬಾಲನ್, ಹಿರಿಯ ವಕೀಲರು : ನೀವು ಶಸ್ತ್ರಾಸ್ತ್ರ ವಿಭಾಆಗದ ವಿಜ್ಞಾನ ಅಧಿಕಾರಿ ಅಥವಾ ಸಹಾಯಕ ನಿರ್ದೇಶಕ ಅಧಿಕಾರಿಯಾಗಲು ಅಯೋಗ್ಯರಾಗಿದ್ದೀರಿ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಾನು ಶಸ್ತ್ರಾಸ್ತ್ರ ವಿಭಾಗದಲ್ಲಿ ವಿಜ್ಞಾನ ಅಧಿಕಾರಿ ಅಥವಾ ಸಹಾಯಕ ನಿರ್ದೇಶಕನಾಗಲು ಅಯೋಗ್ಯನಾಗಿದ್ದೇನೆ ಎಂಬುದು ತಪ್ಪು. ನಾನು ರಾಸಾಯನಿಕ ವಿಭಾಗದ ವಿಜ್ಞಾನ ಅಧಿಕಾರಿ ಅಥವಾ ಸಹಾಯಕ ನಿರ್ದೇಶಕನಾಗಲು ಅಯೋಗ್ಯನಾಗಿದ್ದೇನೆ ಎಂಬುದು ಸಹ ತಪ್ಪು.
ಎಸ್ ಬಾಲನ್, ಹಿರಿಯ ವಕೀಲರು : ನೀವು ಕೇಂದ್ರ ವಿಜ್ಞಾನ ಫೋರೆನ್ಸಿಕ್ ಪ್ರಯೋಗಾಲಯದ ರಾಷ್ಟ್ರೀಯ ಮಟ್ಟದ ‘ಸ್ಪೋಟ-ಅಪರಾಧ ಸ್ಥಳ ನಿರ್ವಹಣೆ ಮತ್ತು ಸ್ಪೋಟ ಅವಶೇಷಗಳ ವಿಶ್ಲೇಷಣೆ’ಯ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ನಾನು ಕೇಂದ್ರ ವಿಜ್ಞಾನ ಫೋರೆನ್ಸಿಕ್ ಪ್ರಯೋಗಾಲಯದ ರಾಷ್ಟ್ರೀಯ ಮಟ್ಟದ ಸ್ಪೋಟ, ಅಪರಾಧ ಸ್ಥಳ ನಿರ್ವಹಣೆ ಮತ್ತು ಸ್ಪೋಟ ಅವಶೇಷಗಳ ವಿಶ್ಲೇಷಣೆಯ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿಲ್ಲ ಎಂಬುದು ಸತ್ಯ.
ಎಸ್ ಬಾಲನ್, ಹಿರಿಯ ವಕೀಲರು : ನೋಡಿ, ಪೊಲೀಸರು ಬಾಂಬ್ ಸ್ಪೋಟದಲ್ಲಿ ಸಿಕ್ಕ ವಯರ್ ಮತ್ತು ತಂತಿಯ ತುಣುಕುಗಳನ್ನು ಸಾಕ್ಷ್ಯವಾಗಿ ತೋರಿಸಿದ್ದಾರೆ. ಅಂತಹ ವಯರ್, ತಂತಿಯ ತುಣುಕುಗಳನ್ನು ಸ್ಪೋಟದಲ್ಲಿ ಸ್ಥಳದಲ್ಲಿ ವಶಪಡಿಸಿಕೊಂಡಿಲ್ಲ.
ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞ : ಹೌದು. ವಯರ್ ಮತ್ತು ತಂತಿಯ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂಬುದು ಸತ್ಯ.
(ಇದು ಕೇವಲ ಬ್ಯಾಲಿಸ್ಟಿಕ್ಸ್ ಫೋರೆನ್ಸಿಕ್ಸ್ ತಜ್ಞರ ಪಾಟಿ ಸವಾಲಿನ ಆಯ್ದ ಭಾಗ. ಈ ಪಾಟಿ ಸವಾಲಿನ ದಾಖಲೆಯ ಆಧಾರದಲ್ಲಿ ಪ್ರಕರಣದ ತೀರ್ಪಿನ ಬಗ್ಗೆ ನಾವು ಅಭಿಪ್ರಾಯಕ್ಕೆ ಬರುವಂತಿಲ್ಲ. ಅದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರ. ಬಾಂಬ್ ಸ್ಪೋಟವಾದಾಗ ಹಿಂದುತ್ವವಾದಿಗಳು-ರಾಜಕಾರಣಿಗಳು ಹೇಳಿಕೆಗಳ ದಾಳಿ ನಡೆಸುತ್ತಾರೆ. ಆದರೆ ಸ್ಪೋಟದ ವೈಜ್ಞಾನಿಕ ಸಾಕ್ಷ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ಸ್ಪೋಟವಾದ ಬಳಿಕ ಅದನ್ನು ವೈಜ್ಞಾನಿಕವಾಗಿ ಹೇಗೆ ನೋಡಬೇಕು ? ಎಲ್ಲಾ ಸ್ಪೋಟಗಳನ್ನು ವೈಜ್ಞಾನಿಕವಾಗಿ ಚರ್ಚಿಸದೇ ರಾಜಕೀಯ ಲಾಭಕ್ಕಾಗಿ, ಕೋಮು ದ್ವೇಷಕ್ಕಾಗಿ ಹೇಗೆಲ್ಲಾ ಬಳಸಲಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಮಾತ್ರ ಈ ಪಾಟಿ ಸವಾಲಿನ ದಾಖಲೆಯನ್ನು ಬಳಸಲಾಗಿದೆ. ಇದು ವಿಚಾರಣೆ ಮತ್ತು ತೀರ್ಪಿನ ಮೇಲೆ ಪರಿಣಾಮ ಬೀರದಂತೆ ಘಟನೆಯ ದಿನಾಂಕ, ಪ್ರಕರಣ ಸಂಖ್ಯೆ, ಸಾಕ್ಷ್ಯಗಳ ಹೆಸರು ಬಳಸಲಾಗಿಲ್ಲ. ಪಾಟಿ ಸವಾಲಿನ ಆಯ್ದ ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ - ನವೀನ್ ಸೂರಿಂಜೆ)