ಮೂಲ ನಿವಾಸಿಗಳ ಅಸ್ಮಿತೆ ‘ಮಹಿಷ ದಸರಾ’

ಸಾವಿರಾರು ವರ್ಷಗಳಿಂದ ಮಹಿಷ ಮಂಡಲದ ದೊರೆ ಮಹಿಷಾಸುರನನ್ನು ಮರೆತಿದ್ದ ಇಲ್ಲಿನ ಮೂಲನಿವಾಸಿಗಳು ಮತ್ತೆ ಆತನನ್ನು ಸ್ಮರಿಸುತ್ತಿರುವುದು ಪ್ರಶಂಸನೀಯ. ಮಹಿಷ ದಸರಾದ ಮೂಲಕ ತಮ್ಮ ಮೂಲ ಸಂಸ್ಕೃತಿಯನ್ನು ಪುನರ್ ಆಚರಿಸುತ್ತಿರುವುದನ್ನು ಪ್ರಜಾಪ್ರಭುತ್ವದಲ್ಲಿ ಸಮಸ್ತ ನಾಡಿನ ಜನತೆ ಸಕಾರಾತ್ಮಕವಾಗಿ ಸ್ವೀಕರಿಸಿ ಗೌರವಿಸಬೇಕಿದೆ.

Update: 2023-10-12 09:42 GMT

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಳೆದ ಒಂದು ದಶಕದಿಂದ ನಿರಂತವಾಗಿ ‘ಮಹಿಷ ದಸರಾ’ ನಡೆಯುತ್ತಿರುವುದು ನಾಡ ದಸರಾದಷ್ಟೇ ಇಂದು ಜಗತ್ಪ್ರಸಿದ್ಧಿಯಾಗಿದೆ. ಮೊದಲ ಬಾರಿಗೆ 1973ರಲ್ಲಿ ವಿಚಾರವಾದಿ ಮೈಸೂರು ಮಂಟೆಲಿಂಗಯ್ಯ ಅವರು ಮಹಿಷ ದಸರಾವನ್ನು ಪ್ರಾರಂಭಿಸಿ ಈ ನೆಲದ ಮೂಲನಿವಾಸಿಗಳಿಗೆ ತಮ್ಮ ಭವ್ಯ ಚರಿತ್ರೆಯನ್ನು ಪುನರ್ ರಚಿಸಲು ಅಂದು ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಿಷ ದಸರಾವನ್ನು ಪ್ರಗತಿಪರರು, ಇತಿಹಾಸಕಾರರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಮೈಸೂರು ಜಿಲ್ಲೆಯ ಸಮಸ್ತ ನಾಗರಿಕರು ಆಚರಿಸುತ್ತಿರುವುದನ್ನು ಸಹಿಸದ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ವೈದಿಕರ ಪರ ವಕಾಲತ್ತು ವಹಿಸಿ ಮಹಿಷ ದಸರಾವನ್ನು ಮಾಡಲು ಬರುವವರನ್ನು ತುಳಿದು ಹಾಕುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು ಭಾರತೀಯ ಸಂವಿಧಾನಕ್ಕೆ ಮಾಡಿದ ಬಹುದೊಡ್ಡ ಅಪಚಾರವಾಗಿದೆ. ಮಹಿಷ ದಸರಾ ಆಚರಣಾ ಸಮಿತಿಯ ಎಲ್ಲಾ ಪ್ರತಿನಿಧಿಗಳು ಮಹಿಷ ದಸರಾ ಆಚರಣೆಯು ನಾಡ ದೇವತೆ ಚಾಮುಂಡಿ ವಿರುದ್ಧವಲ್ಲವೆಂದು ವಿಚಾರ ಸಂಕಿರಣ ಮತ್ತು ಹಲವಾರು ಪತ್ರಿಕಾಗೋಷ್ಠಿಗಳ ಮೂಲಕ ಸ್ಪಷ್ಟಪಡಿಸಿದ್ದರೂ ಸಂಸದ ಪ್ರತಾಪ ಸಿಂಹ ಅವರು ಮಾತ್ರ ಇಲ್ಲಿನ ಪ್ರಗತಿಪರರು, ಇತಿಹಾಸಕಾರರು, ಸಂಶೋಧಕರು ಹಾಗೂ ನಾಗರಿಕರಿಗೆ ಹಿಂದೂ ಧರ್ಮದ ವಿರೋಧಿಗಳೆಂದು ಪಟ್ಟಕಟ್ಟಿ ಉಗ್ರ ಹೇಳಿಕೆ ನೀಡುತ್ತಿದ್ದಾರೆೆ. ಹಿಂದೆ, 2016ರಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳಾದ ಜೆಎನ್‌ಯು, ಹೈದರಾಬಾದ್ ಕೇಂದ್ರೀಯ ವಿವಿ ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯಗಳಲ್ಲಿನ ವಿದ್ಯಾರ್ಥಿಗಳು ‘ಮಹಿಷಾಸುರ ಹುತಾತ್ಮ ದಿನ’ವನ್ನು ತಮ್ಮ ಕ್ಯಾಂಪಸ್‌ನಲ್ಲಿ ಆಚರಿಸಿದ್ದರು. ಈ ವಿಚಾರವಾಗಿ ಕುಪಿತಗೊಂಡ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಅಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿದ್ದ ಸ್ಮತಿ ಇರಾನಿಯವರು ವಿದ್ಯಾರ್ಥಿಗಳನ್ನು ಹಿಂದೂ ಧರ್ಮದ ವಿರೋಧಿಗಳು ಹಾಗೂ ದೇಶದ್ರೋಹಿಗಳೆಂದು ಹೇಳಿದ್ದು ಇನ್ನು ಹಸಿಯಾಗಿಯೇ ಇದೆ. ಪ್ರಜ್ಞಾವಂತ ವಿದ್ಯಾರ್ಥಿಗಳ ವಿರುದ್ಧ ಇಂತಹ ಭೀಷಣ ಹೇಳಿಕೆಗಳನ್ನು ನೀಡಿದ್ದ ಸ್ಮತಿ ಇರಾನಿಯವರನ್ನು ಬಿಜೆಪಿ ಹೈಕಮಾಂಡ್ ಪ್ರಶಂಸಿಸಿತ್ತು, ಇಂದು ಸಂಸದ ಪ್ರತಾಪ ಸಿಂಹ ಅವರು ಕೂಡ ಅದೇ ದಾರಿ ಆಯ್ಕೆಮಾಡಿಕೊಂಡಿರುವುದು ಸ್ಪಷ್ಟವಾಗಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಹಿಷ ಜಯಂತಿಯನ್ನು ಆಚರಿಸಿದರೆ ಸಮಾಜದಲ್ಲಿ ಅಶಾಂತಿ, ರಾಜ್ಯಕ್ಕೆ ಸಂಕಟ ಎದುರಾಗುತ್ತದೆ ಎಂಬ ಮೊಂಡು ವಾದಗಳನ್ನು ಕೆಲ ವರ್ಷಗಳಿಂದ ಪುರಾಣ ಕಾರರು, ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮೂಲಭೂತವಾದಿಗಳ ಆರೋಪವಾಗಿರುವುದು ವಿಪರ್ಯಾಸವೆನಿಸುತ್ತದೆ. ನೈಜ ಇತಿಹಾಸವನ್ನು ಮುಚ್ಚಿಡುವ ಹುನ್ನಾರದಿಂದ ಮಹಿಷಾಸುರ ಕೆಟ್ಟವನು, ಅವನೊಬ್ಬ ನರಭಕ್ಷಕನಾಗಿದ್ದ, ಪ್ರಜಾಕಂಟಕ, ಜನಾಡಳಿತ ವಿರೋಧಿಯಾಗಿದ್ದ ಎಂಬಿತ್ಯಾದಿ ಕಟ್ಟುಕಥೆಗಳನ್ನು ವ್ಯವಸ್ಥಿತವಾಗಿ ಜನಮಾಸದಲ್ಲಿ ಪುರಾಣಕಾರರು ಬಿತ್ತಿರುವುದು ನೋವಿನ ಸಂಗತಿ. ಆದರೆ ಪುರಾಣ ಅಥವಾ ಇತಿಹಾಸ ದೃಷ್ಟಿಕೋನದಲ್ಲಿ ಮಹಿಷಾಸುರನ ಚರಿತ್ರೆಯನ್ನು ಅವಲೋಕಿಸಿದರೆ ಆತ ರಾಕ್ಷಸನಾಗಿರಲಿಲ್ಲ ಬದಲಾಗಿ ಮಹಾನ್ ರಕ್ಷಕನಾಗಿದ್ದನು ಎಂಬುದನ್ನು ಮನಗಾಣಬೇಕಿದೆ. ಮಹಿಷನು ವೈದಿಕರ ಅಧಾರ್ಮಿಕ ಆಚರಣೆಗಳನ್ನು ಧಿಕ್ಕರಿಸಿ ಮೂಲನಿವಾಸಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಒಬ್ಬ ಬೌದ್ಧ ರಾಜನಾಗಿದ್ದನು ಎಂಬುದಕ್ಕೆ ಮೂಟೆಗಟ್ಟಲೆ ದಾಖಲೆಗಳ ಸಾಕ್ಷಿ ಇದೆ. ಕುತೂಹಲವೇನೆಂದರೆ, ಮಹಿಷಾಸುರನಿಗೂ ಚಾಮುಂಡೇಶ್ವರಿಗೂ ಯುದ್ಧ ನಡೆದ ಸ್ಥಳವೇ ಚಾಮುಂಡಿ ಬೆಟ್ಟ ಎಂದು ಟಿ.ವಿ. ಮಾಧ್ಯಮ ಚರ್ಚೆಗಳಲ್ಲಿ ಕೆಲವರ ಅಭಿಮತವಾಗಿದೆ. ಬೆಟ್ಟದಲ್ಲಿರುವ ಕೋಣನಕುಂಟೆ ಎಂಬ ಬೃಹತ್ ಬಂಡೆಯ ಮೇಲೆ ಮಹಿಷಾಸುರನನ್ನು ಚಾಮುಂಡಿ ತಾಯಿ ಕೊಂದದ್ದು ಎಂದು ವಾದಿಸುತ್ತಾರೆ. ಆದರೆ ವೈಜ್ಞಾನಿಕವಾಗಿ ಆ ಸ್ಥಳವನ್ನು ಪರೀಕ್ಷಿಸಿದರೆ ಬಂಡೆಯ ಮೇಲೆ ಯಾವ ಯುದ್ಧವೂ ನಡೆದಿರುವ ಕುರುಹುಗಳಿಲ್ಲ. ಬಂಡೆಯ ಮೇಲಿರುವ ಕುಳಿಗಳು ಮಹಿಷಾಸುರನ ಹೆಜ್ಜೆಗುರುತು ಎಂದು ಹೇಳಿಕೊಂಡು ಮೈಸೂರಿನ ಪುರೋಹಿತರೊಬ್ಬರು 2017ರಲ್ಲಿ ಆ ಸ್ಥಳಕ್ಕೆ ಪೂಜೆಗೈದು ಜನಸಾಮಾನ್ಯರನ್ನು ಮಾಧ್ಯಮಗಳ ಮೂಲಕ ನಂಬಿಸಲು ಪ್ರಯತ್ನಿದ್ದನ್ನು ಇಲ್ಲಿನ ಚಾಮುಂಡಿ ತಾಯಿಯ ಭಕ್ತರೇ ತಿರಸ್ಕರಿಸಿದ್ದರು.

ದಕ್ಷಿಣ ಪ್ರಾಂತವನ್ನಾಳಿದ ಗಂಗರು, ಚೋಳರು, ಹೊಯ್ಸಳರ ಕಾಲಘಟ್ಟಗಳಲ್ಲಾಗಲಿ ಅಥವಾ ಅವರ ಹಿಂದಿನ ಕಾಲಘಟ್ಟಗಳಲ್ಲಾಗಲಿ ಚಾಮುಂಡಿ ಮತ್ತು ಮಹಿಷನ ನಡುವೆ ಯುದ್ಧವಾಗಿರುವ ಪ್ರಸಂಗವೇ ಉಲ್ಲೇಖವಾಗಿಲ್ಲ. ಅಂದಿನ ರಾಜಮನೆತನಗಳಿಗೆ ಯುದ್ಧದ ಕತೆ ತಿಳಿದಿದ್ದರೆ ಬಹುಶಃ ಶಾಸನಗಳಲ್ಲಿ ಬರೆಸುತ್ತಿದ್ದರೇನೋ ಎಂದೆನಿಸುತ್ತದೆ. ಅಂತಹ ಯಾವುದೇ ಶಾಸನಗಳು ಚಾಮುಂಡಿ ಬೆಟ್ಟದಲ್ಲಿ ಇದುವರೆಗೂ ಪ್ರಾಚ್ಯವಸ್ತು ಸಂಶೋಧಕರ ಹುಡುಕಾಟಕ್ಕೆ ಸಿಕ್ಕಿರುವುದಿಲ್ಲ ಎಂದು ಲೇಖಕ ಅಶೋಕಪುರಂ ಸಿದ್ಧಸ್ವಾಮಿ ಅವರ ಕೃತಿಗಳಲ್ಲಿ ವಿವರಿಸಿದ್ದಾರೆ. ಹಾಗಾದರೆ ಇಲ್ಲಿ ರಾಜ ಮಹಿಷಾಸುರನಿಗೂ ಮತ್ತು ಚಾಮುಂಡೇಶ್ವರಿ ನಡುವೆಯೂ ಯುದ್ಧವೇ ನಡೆದಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು. ಕುತೂಹಲವೆಂದರೆ ದಾಖಲಾತಿಗಳ ಪ್ರಕಾರ ಮಹಿಷಾಸುರನ ಆಡಳಿತ ಅವಧಿಯೇ ಬೇರೆ. ಚಾಮುಂಡೇಶ್ವರಿ ನಾಡದೇವತೆಯಾದ ಕಥೆಯ ಕಾಲಘಟ್ಟವೇ ಬೇರೆ ಎಂಬುದು ಇತಿಹಾಸಕಾರರ ವಿಶ್ಲೇಷಣೆಯಾಗಿದೆ.

ಮೈಸೂರಿಗೆ ಮಹಿಷಾಸುರನಿಂದಾಗಿ ‘ಮಹಿಷೂರು’ ಎಂಬ ಹೆಸರು ಬಂದಿದೆ. ಮಹಿಷಮಂಡಲ, ಮಹಿಷೂರು, ಮಹಿಷ ನಾಡು, ಮಹಿಷಪುರಿ, ಮಹಿಷ ರಾಷ್ಟ್ರ ಮೊದಲಾದ ಹೆಸರುಗಳು ಬರಲು ಮಹಿಷನ ಅಸ್ತಿತ್ವ, ಕೊಡುಗೆ ಮತ್ತು ಅಸ್ಮಿತೆಗಳೇ ಪ್ರಮುಖ ಕಾರಣಗಳಾಗಿವೆ. ಬೌದ್ಧ ಗ್ರಂಥ ದೀಪವಂಶದಲ್ಲಿ ಮೌರ್ಯ ಚಕ್ರವರ್ತಿ ಅಶೋಕನು ಮಹಾದೇವ ಥೇರ ಎಂಬ ಭಿಕ್ಕುವನ್ನು ದಕ್ಷಿಣ ಭಾರತಕ್ಕೆ ಮತ್ತು ತನ್ನ ಮಗಳು ಸಂಘಮಿತ್ರೆಯನ್ನು ಶ್ರೀಲಂಕಾ ದೇಶಕ್ಕೆ ನಿಯೋಜಿಸಿದ ಬಗ್ಗೆ ವಿಪುಲವಾದ ಮಾಹಿತಿ ಲಭ್ಯವಿದೆ. ತಮಿಳು ಪ್ರಾಚೀನ ಗ್ರಂಥವಾದ ಸಂಗಂ ಸಾಹಿತ್ಯದಲ್ಲಿ ಮೈಸೂರನ್ನು ‘ಎರುಮೈ ನಾಡು’ ಎಂದು ಕರೆಯಲಾಗಿದೆ. ಆಗಿನ ಮೈಸೂರು ಎಮ್ಮೆಗಳ ಪ್ರಮುಖ ಮಾರಾಟ ಕೇಂದ್ರವಾದ್ದರಿಂದ ಈ ಹೆಸರು ಬಂದಿದೆ.

ಮೈಸೂರು ಗೆಜೆಟಿಯರ್‌ನಲ್ಲಿ ಮಹಿಷ ಮಂಡಲವನ್ನು ಪ್ರಮುಖವಾಗಿ ನಮೂದಿಸಲಾಗಿದೆ. ಮೈಸೂರು ಸೀಮೆಗೆ ಮಹಿಷ ರಾಷ್ಟ್ರ ಎಂಬ ಹೆಸರು ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ವಿಸ್ತೃತ ಮಾಹಿತಿ ಲಭಿಸುತ್ತವೆ. ಭಾರತದಲ್ಲಿ ಪ್ರಮುಖ ಬೌದ್ಧ ದೊರೆಯಾಗಿ ಮಹಿಷ ಮೂಲನಿವಾಸಿಗಳ ಉದ್ಧಾರಕ್ಕಾಗಿ ನೀಡಿದ ಕೊಡುಗೆಗಳು ಅನನ್ಯವಾಗಿದೆಯೆಂದು ಇತಿಹಾಸಕಾರರು ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಅಂದು ಮಹಿಷಮಂಡಲ ಕನ್ಯಾಕುಮಾರಿಯಿಂದ ವಿಂಧ್ಯ ಪರ್ವತದ ತನಕ ವ್ಯಾಪಿಸಿತ್ತು ಎಂದು ಭೂಗೋಳ ಶಾಸ್ತ್ರಜ್ಞರು ಅಧಿಕೃತವಾಗಿ ಉಲ್ಲೇಖಿಸಿದ್ದಾರೆ.

8ನೇ ಶತಮಾನದ ಗಂಗರ ಕಾಲದಲ್ಲಿ ಮಹಾಬಲೇಶ್ವರ ದೇವಾಲಯವನ್ನು ಇಂದಿನ ಚಾಮುಂಡಿ ಬೆಟ್ಟದಲ್ಲಿ ಪುನರ್ ನಿರ್ಮಾಣಗೊಳಿಸಲಾಯಿತು. ನಂತರದ ವಿಷ್ಣುವರ್ಧನ ಕಾಲದ 1128ರ ಶಿಲಾ ಶಾಸನಗಳಲ್ಲಿ ಚಾಮುಂಡಿ ಬೆಟ್ಟವನ್ನು ಸ್ವಸ್ತಿ ಶ್ರೀ ಮಹಾಬಲ ತೀರ್ಥ ಎಂದು ಕೆತ್ತಲಾಗಿದೆ. 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಲಘಟ್ಟದಲ್ಲಿಯೂ ಈ ಬೆಟ್ಟ ಮಹಾಬಲಗಿರಿ ಎಂದೇ ಪ್ರಖ್ಯಾತವಾಗಿತ್ತು. ಅಷ್ಟೇ ಯಾಕೆ? ಕ್ರಿ.ಶ. 1399ರಲ್ಲಿ ಪ್ರಾರಂಭವಾದ ಯದುವಂಶದ ಯದುಕೃಷ್ಣ ಒಡೆಯರ್ ಕಾಲದಲ್ಲಿಯೂ ಮಹಾಬಲಗಿರಿ ಬೆಟ್ಟ ಎಂದೇ ಸಂಬೋಧಿಸುತ್ತಿದ್ದರು. ಈ ಎಲ್ಲಾ ಮೂಲಾಧಾರಗಳ ಅರಿವಿದ್ದ ದೊಡ್ಡ ದೇವರಾಜ ಒಡೆಯರ್ 1659ರಲ್ಲಿ ಚಾಮುಂಡಿ ಬೆಟ್ಟದಲ್ಲಿ ರಾಜ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ಸ್ಥಾಪಿಸಿ ಮಹಿಷಾಸುರನನ್ನು ಸ್ಮರಿಸುತ್ತಾರೆ. ಇಂದಿಗೂ, ಮೈಸೂರು ರಾಜವಂಶಸ್ಥರು ಅಧಿಕೃತ ಲೆಟರ್ ಹೆಡ್‌ನಲ್ಲಿ ‘ಮಹಿಷೂರು’ ಎಂದೇ ಬಳಸುತ್ತಾರೆ.

ಪ್ರಸ್ತುತದಲ್ಲಿ ಮಹಿಷ ಮಂಡಲದಲ್ಲಿ ನೆಲೆಸಿದ್ದ ಪ್ರಜೆಗಳೆಲ್ಲಾ ನಾಗವಂಶಕ್ಕೆ ಸೇರಿದವರು. ಇವರು ಮೂಲತಃ ಬೌದ್ಧರು ಎನ್ನಲಾಗುತ್ತಿದೆ. 1970ರಲ್ಲಿ ಕರ್ನಾಟಕ ಸರಕಾರಿ ಪ್ರಕಾಶನ ಮಂದಿರ (ನಿಯಮಿತ) ವತಿಯಿಂದ ಪ್ರಕಟವಾದ ಡಾ.ಎಂ.ವಿ.ಕೃಷ್ಣರಾವ್ ಮತ್ತು ಎಂ.ಎಂ.ಕೇಶವ ಭಟ್ಟರ ‘ಕರ್ನಾಟಕದ ಇತಿಹಾಸ ದರ್ಶನ’ ಕೃತಿಯಲ್ಲಿ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯಾದ ಅಶೋಕನು ರಕ್ಕತ ಎಂಬ ಬೌದ್ಧ ಭಿಕ್ಕುವನ್ನು ಬನವಾಸಿಗೂ ಹಾಗೂ ಮಹಾದೇವ ಎಂಬ ಭಿಕ್ಕುವನ್ನು ಮಹಿಷ ಮಂಡಲಕ್ಕೂ ಬೌದ್ಧ ಮತ ಪ್ರಚಾರಕ್ಕಾಗಿ ಕಳುಹಿಸಿಕೊಟ್ಟಿದ್ದಾನೆಂದು ಬೌದ್ಧ ಗ್ರಂಥಗಳು ತಿಳಿಸುತ್ತದೆ ಎಂದು ದಾಖಲಿಸುತ್ತಾರೆ. ಇನ್ನು ಮುಂದುವರಿದು 1979ರಲ್ಲಿ ಮೈಸೂರು ವಿವಿಯಲ್ಲಿ ಪ್ರಕಟವಾದ ಕನ್ನಡ ವಿಶ್ವಕೋಶ ಪುಟ ಸಂಖ್ಯೆ 34ರಲ್ಲೂ ತೇರಾ ಮಹಾದೇವನೆಂಬ ಬೌದ್ಧ ಭಿಕ್ಕು ಮಹಿಷ ಮಂಡಲಕ್ಕೆ ಬಂದಿದ್ದನೆಂದು ಉಲ್ಲೇಖವಿದೆ.

ಇಷ್ಟೆಲ್ಲಾ ಐತಿಹಾಸಿಕ ದಾಖಲೆಗಳಿರುವ ಮಹಿಷ ಮಂಡಲದ ದೊರೆ ಮಹಿಷಾಸುರನನ್ನು ವೈದಿಕರು ನರಭಕ್ಷಕನಂತೆ ಬಿಂಬಿಸಿದ್ದು ಮಾತ್ರ ಘೋರ ಅಪರಾಧವೆನಿಸುತ್ತದೆ. ಇಂದು ಎಲ್ಲವೂ ಬದಲಾಗಿದೆ. ಮಹಿಷಾಸುರ ರಾಕ್ಷಸನಾಗಿರಲಿಲ್ಲ. ಆತನೊಬ್ಬ ಸತ್ಯ, ಪ್ರೀತಿ, ಅಹಿಂಸೆ, ಸಮಾನತೆ ಮತ್ತು ಭಾತೃತ್ವದಲ್ಲಿ ನಂಬಿಕೆಯನ್ನಿಟ್ಟು ತನ್ನ ನಾಡು ಮತ್ತು ಪ್ರಜೆಗಳನ್ನು ಮಮತೆಯಿಂದ ಕಾಣುತ್ತಿದ್ದ ಮಾತೃ ಹೃದಯಿಯಾಗಿದ್ದನು ಎಂದು ಐತಿಹಾಸಿಕ ದಾಖಲೆಗಳು ಬಹಿರಂಗ ಪಡಿಸಿವೆ. ಮಹಿಷಾಸುರನು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಅಪಾರವಾದ ಗೌರವವನ್ನಿಟ್ಟು ಪಿತೃಪಕ್ಷ (ಪೂರ್ವಿಕರ ನೆನೆಯುವ ದಿನ) ಎಂಬ ಆಚರಣೆಗೆ ಬುನಾದಿ ಹಾಕಿಕೊಟ್ಟವನು. ಅದನ್ನು ಪಾಲಿಸುತ್ತಿರುವ ಮೂಲನಿವಾಸಿಗಳು ಮೈಸೂರು ದಸರಾ ಪ್ರಾರಂಭವಾಗುವ ಮುನ್ನ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಬಹುತೇಕ ಗ್ರಾಮೀಣ ಭಾಗಗಳಿಂದ ಬಂದು ಮಹಿಷಾಸುರನಿಗೆ ತಮ್ಮದೇ ರೀತಿಯ ಗೌರವ ಸಲ್ಲಿಸುತ್ತಿರುವುದು ಇಂದಿಗೂ ಜೀವಂತವಾಗಿದೆ. ಸಾವಿರಾರು ವರ್ಷಗಳಿಂದ ಮಹಿಷ ಮಂಡಲದ ದೊರೆ ಮಹಿಷಾಸುರನನ್ನು ಮರೆತಿದ್ದ ಇಲ್ಲಿನ ಮೂಲನಿವಾಸಿಗಳು ಮತ್ತೆ ಆತನನ್ನು ಸ್ಮರಿಸುತ್ತಿರುವುದು ಪ್ರಶಂಸನೀಯ. ಇವರ ಈ ಆಚರಣೆ ನಾಡದೇವತೆ ಚಾಮುಂಡೇಶ್ವರಿ ನಂಬಿರುವವರ ವಿರುದ್ಧವಾಗಲಿ ಅಥವಾ ಪರ್ಯಾಯ ದಸರಾವೆಂದು ಯಾರೂ ಭಾವಿಸಬೇಕಿಲ್ಲ. ಮಹಿಷ ದಸರಾದ ಮೂಲಕ ತಮ್ಮ ಮೂಲ ಸಂಸ್ಕೃತಿಯನ್ನು ಪುನರ್ ಆಚರಿಸುತ್ತಿರುವುದನ್ನು ಪ್ರಜಾಪ್ರಭುತ್ವದಲ್ಲಿ ಸಮಸ್ತ ನಾಡಿನ ಜನತೆ ಸಕಾರಾತ್ಮಕವಾಗಿ ಸ್ವೀಕರಿಸಿ ಗೌರವಿಸಬೇಕಿದೆ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುತ್ತೇವೆಂದು ಕನಸು ಹೊತ್ತಿರುವ ರಾಜ್ಯ ಸರಕಾರ ಅಕ್ಟೋಬರ್ 13, 2023ರಂದು ನಡೆಯಲಿರುವ ಮೂಲ ನಿವಾಸಿಗಳ ಮಹಿಷ ದಸರಾವನ್ನು ಸುಲಲಿತವಾಗಿ ನಡೆಸಲು ರಕ್ಷಣೆ ನೀಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಡಾ. ದಿಲೀಪ್ ನರಸಯ್ಯ ಎಂ.

contributor

Similar News