ಕೋವಿಡ್-19 ಲಸಿಕೆ ಸಂಶೋಧನೆಗೆೆ ನೊಬೆಲ್ ಪ್ರಶಸ್ತಿ
ಪ್ರೊ. ಎಂ. ನಾರಾಯಣ ಸ್ವಾಮಿ,
ತ್ಯಾವನಹಳ್ಳಿ
ಕೋವಿಡ್-19 ರೋಗ ನಿವಾರಣೆಗೆ ಮೆಸೆಂಜೆರ್ ರೈಬೋನ್ಯೂಕ್ಲಿಯಕ್ ಆ್ಯಸಿಡ್ (ಎಂಆರ್‌ಎನ್‌ಎ) ಲಸಿಕೆಯನ್ನು ಕಂಡುಹಿಡಿಯಲು ಅಗತ್ಯ ಜ್ಞಾನ ಒದಗಿಸಿದ ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿದೆ. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಕ್ಯಾಟಾಲಿನ್ ಕಾರಿಕೊ ಮತ್ತು ಡ್ರೂ ವೈಸ್‌ಮನ್ ಅವರು ತಮ್ಮ ಸಾಧನೆಗಾಗಿ 2023ನೇ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜಾಗತಿಕವಾಗಿ 69,60,39,134 ಜನರಿಗೆ ಕೋವಿಡ್ ಸೋಂಕು ತಗಲಿ 69,21,819 ಜನರು ಮರಣ ಹೊಂದಿದರು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಯ ಅಂಕಿಅಂಶಗಳು. ಹೆಚ್ಚು ಸಾವುಗಳು ಸಂಭವಿಸಿದ ದೇಶಗಳಲ್ಲಿ ಅನುಕ್ರಮವಾಗಿ ಅಮೆರಿಕ, ಬ್ರೆಝಿಲ್, ಭಾರತ, ರಶ್ಯ ಮತ್ತು ಮೆಕ್ಸಿಕೋ ನಿಲ್ಲುತ್ತವೆ. ಸಂಭವಿಸಬಹುದಾಗಿದ್ದ ಇನ್ನಷ್ಟು ಸಾವು ನೋವುಗಳನ್ನು ತಡೆಯಲು ಕೋವಿಡ್ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾದ ಲಸಿಕೆಯನ್ನು ಅಭಿವೃದ್ಧಿಪಡಿಸಬೇಕಿತ್ತು. ವೈರಾಣುಗಳ ಎಂಆರ್‌ಎನ್‌ಎ ಕ್ರಿಯೆಗಳ ಕುರಿತು ಅದಾಗಲೇ ಕೆಲದಶಕಗಳ ಕಾಲ ಸಂಶೋಧನೆ ನಡೆಸಿದ್ದ ಕಾರಿಕೊ ಮತ್ತು ವೈಸ್‌ಮನ್ ತಮ್ಮ ಆಳವಾದ ಜ್ಞಾನದಿಂದ ಎಂಆರ್‌ಎನ್‌ಎ ಕೋವಿಡ್ ಲಸಿಕೆ ತಯಾರಿಸಲು ಕೊಟ್ಟ ಆವಿಷ್ಕಾರಕ್ಕಾಗಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
ನಮ್ಮ ದೇಶದಲ್ಲಿ ಕೋವಿಡ್ 19 ರೋಗ ತಡೆಗೆ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎಂಬ ಲಸಿಕೆಗಳನ್ನು ಬಳಸಲಾಯಿತು. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನದಂತೆ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ನಿಷ್ಕ್ರಿಯಗೊಳಿಸಿದ ವೈರಸ್ ಬಳಸಿ ಹೈದರಾಬಾದಿನ ಭಾರತ್ ಬಯೋಟೆಕ್ ಕಂಪೆನಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಂತೆ ತಯಾರಿಸಲಾಯಿತು. ಭಾರತ್ ಬಯೋಟೆಕ್ ಕಂಪೆನಿಯ ಸಂಸ್ಥಾಪಕ ಡಾ. ಕೃಷ್ಣ ಎಲ್ಲ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ಸ್ ಪದವಿಯನ್ನು ಅಧ್ಯಯನ ಮಾಡಿದ ರೆಂಬುದು ಇಲ್ಲಿ ನೆನಪಿಸಿಕೊಳ್ಳಲೇಬೇಕಾದ ಸಂತೋಷದ ಸಂಗತಿ.
ಎರಡು ದಶಕಗಳಿಂದ ಬೆಂಗಳೂರು ಐಟಿ, ಬಿಟಿಗೆ ಪ್ರಸಿದ್ಧಿಯಾಗಿದೆ. ರಾಜ್ಯ ಸರಕಾರದಲ್ಲಿ ಐಟಿ, ಬಿಟಿ ಸಚಿವಾಲಯವಿದೆ. ಬಿಟಿ ಎಂಬ ಬಯೋಟೆಕ್ನಾಲಜಿಯೆಂದರೆ ಮಾಲೆಕ್ಯುಲಾರ್ ಬಯಾಲಜಿ. ಕನ್ನಡದಲ್ಲಿ ಆಣ್ವಿಕ ಜೀವವಿಜ್ಞಾನ. ಇದು ಆಣ್ವಿಕ ಜೀವವಿಜ್ಞಾನದ ಯುಗ.
ಮಾರ್ಪಡಿಸಿದ ನ್ಯೂಕ್ಲಿಯೋಸೈಡ್ ಆಧಾರಿತ
ಕೋವಿಡ್ ಲಸಿಕೆ
ಕಾರಿಕೊ ಮತ್ತು ವೈಸ್‌ಮನ್ ಅವರು ಕೋವಿಡ್ ರೋಗಕ್ಕೆ ಎಂಆರ್‌ಎನ್‌ಎ ಆಧಾರಿತ ನ್ಯೂಕ್ಲಿಯೋಸೈಡ್ ಲಸಿಕೆಯನ್ನು ತಯಾರಿಸಲು ನೆರವಾಗಿದ್ದಾರೆ. ನ್ಯೂಕ್ಲಿಯೋಸೈಡ್ ವೈರಸ್ ನೊಳಗಿನ ಒಂದು ಘಟಕವಿದ್ದಂತೆ. ಇಲ್ಲಿ ಕೊಂಚ ಕ್ಲಿಷ್ಟಕರ ವಿಜ್ಞಾನವಿದೆ. ನ್ಯೂಕ್ಲಿಯೋಸೈಡ್ ಎಂಬ ಆಣ್ವಿಕವನ್ನು ಅರಿಯಬೇಕಿದೆ. ಡಿಎನ್‌ಎ ಹಾಗೂ ಆರ್‌ಎನ್‌ಎಗಳು ನ್ಯೂಕ್ಲಿಯೋಟೈಡ್‌ಗಳಿಂದ ರಚಿತವಾಗಿವೆ. ನ್ಯೂಕ್ಲಿಯೋಟೈಡ್ ರಚಿತವಾಗಿರುವುದು ನ್ಯೂಕ್ಲಿಯೋಸೈಡ್ ನಿಂದ. ನ್ಯೂಕ್ಲಿಯೋಟೈಡ್ ಗೆ ಹೋಲಿಸಿದಲ್ಲಿ ನ್ಯೂಕ್ಲಿಯೋಸೈಡ್ ನಲ್ಲಿ ಫಾಸ್ಫೇಟ್ ಗುಂಪು ಇರುವುದಿಲ್ಲ. ಆರ್‌ಎನ್‌ಎ ನಲ್ಲಿರುವ ನ್ಯೂಕ್ಲಿಯೋಸೈಡ್ ನಲ್ಲಿ ಪ್ಯೂರಿನ್ ಹಾಗೂ ಪಿರಿಮಿಡಿನ್ ಎಂಬ ಮೂಲಾಧಾರ ವಸ್ತುಗಳ ಜೊತೆಗೆ ರೈಬೋಸ್ ಎಂಬ ಸಕ್ಕರೆ ಅಂಶವಿರುತ್ತದೆ. ಎಂಆರ್‌ಎನ್‌ಎ ನಲ್ಲಿರುವ ಘಟಕ ವಸ್ತುವಾದ ನ್ಯೂಕ್ಲಿಯೋಸೈಡ್ ಆಧಾರದ ಮೇಲೆ ಕೋವಿಡ್ ಲಸಿಕೆ ತಯಾರಿಸಲಾಯಿತು.
ಕೋವಿಡ್ ವೈರಾಣು ಮೂಲತಃ ಕೊರೋನ ಗುಂಪಿಗೆ ಸೇರಿದ ವೈರಾಣು. ಕೊರೋನ ಎಂದರೆ ಕಿರೀಟ. ಕಿರೀಟದ ರಚನೆಯನ್ನು ಹೊಂದಿರುವ ಕೊರೋನ ವೈರಾಣು ತನ್ನ ದೇಹದ ಮೇಲೆ ಚುಚ್ಚುಮೊಳೆ (ಸ್ಪೈಕ್)ಗಳನ್ನು ಹೊಂದಿರುತ್ತದೆ. ಅದೊಂದು ಆರ್‌ಎನ್‌ಎ ವೈರಾಣು. ಆ ವೈರಾಣುವಿನ ಮೆಸೆಂಜರ್ ಆರ್‌ಎನ್‌ಎ ದಲ್ಲಿರುವ ನ್ಯೂಕ್ಲಿಯೋಸೈಡ್ ಅನ್ನು ಮಾರ್ಪಡಿಸಿ ಕಾರಿಕೊ ಮತ್ತು ವೈಸ್‌ಮನ್ ಅವರು ಕೃತಕವಾಗಿ ನ್ಯೂಕ್ಲಿಯೋಸೈಡ್ ರಚಿಸಿಕೊಟ್ಟಿದ್ದರು. ಅದರಿಂದ ಕೋವಿಡ್-19ರ ಲಸಿಕೆಯನ್ನು ಯಶಸ್ವಿಯಾಗಿ ತಯಾರಿಸಿಕೊಳ್ಳಲು ಅನುಕೂಲವಾಯಿತು. ಫೈಝರ್ ಮತ್ತು ಮಾಡರ್ನಾ ಕಂಪೆನಿಗಳು ಮಾರ್ಪಡಿಸಿದ ನ್ಯೂಕ್ಲಿಯೋಸೈಡ್ ಬಳಸಿ ಕೋವಿಡ್ ಲಸಿಕೆ ಉತ್ಪಾದಿಸಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ಪೂರೈಸಿದರು.
ಲಸಿಕೆಯ ಕಾರ್ಯಕ್ಷಮತೆ
ಮೆಸೆಂಜರ್ ಆರ್‌ಎನ್‌ಎ ನ್ಯೂಕ್ಲಿಯೋಸೈಡ್ ಕೋವಿಡ್ ಲಸಿಕೆಯನ್ನು ಕೊಟ್ಟಾಗ ಅದು ದೇಹದೊಳಗೆ ಹೊಕ್ಕು ಪ್ರತಿಜನಕ (ಆ್ಯಂಟಿಜೆನ್)ಗಳಾಗಿ ಕಾರ್ಯನಿರ್ವಹಿಸುತ್ತವೆ. ಆ ಆ್ಯಂಟಿಜೆನ್‌ಗಳು ಪ್ರತಿಕಾಯ (ಆ್ಯಂಟಿಬಾಡಿ)ಗಳನ್ನು ಸೃಷ್ಟಿಸುತ್ತವೆ. ಕೋವಿಡ್ ಸೋಂಕಿಗೆ ಕಾಯುತ್ತಿರುವ ಆ ಆ್ಯಂಟಿಬಾಡಿಗಳು ಆ್ಯಂಟಿಬಾಡಿ ಮೀಡಿಯೇಟೆಡ್ ಇಮ್ಮ್ಯೂನಿಟಿ : ಎಎಮ್‌ಐ ಮೂಲಕ ಕೋವಿಡ್ ವೈರಾಣುವನ್ನು ಹೊಸಕಿಹಾಕುತ್ತವೆ. ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತವೆ. ಕೋವಿಡ್ ರೋಗದಿಂದ ಕಾಪಾಡುತ್ತವೆ. ಅಲ್ಲಿಗೆ ಕೋವಿಡ್ ಲಸಿಕೆಯು ತನ್ನ ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ನಿರ್ವಹಿಸಿದಂತಾಗುತ್ತದೆ. ಜೀವಗಳನ್ನು ಕಾಪಾಡಿದಂತಾಗುತ್ತದೆ. ಜಗತ್ತಿನ ಹಲವು ವಿಜ್ಞಾನಿಗಳು ಅಮೂಲ್ಯ ಕೊಡುಗೆಯಾಗಿ ಮಾರ್ಪಡಿಸಿದ ಮೆಸೆಂಜರ್ ಆರ್‌ಎನ್‌ಎ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ಬರಬಹುದೆಂದು ಗ್ರಹಿಸಿದ್ದರು. ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳಿಗೆ 8.31 ಕೋಟಿ ರೂ. ಬಹುಮಾನ ಸಿಗಲಿದೆ. ಡಿಸೆಂಬರ್ 10ರಂದು ಪ್ರಶಸ್ತಿ ಪ್ರದಾನವಾಗಲಿದೆ.
ಕೋವಿಡ್ ಲಾಕ್ ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಜನರ ಬದುಕು ದುಸ್ತರವಾಗಿತ್ತು. ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತ, ಸಾವು ನೋವಿನಿಂದಾಗಿ ಕೌಟುಂಬಿಕ ಸಮಸ್ಯೆಗಳು ಉಂಟಾದವು. ಕೋವಿಡ್ ಲಸಿಕೆಗಳ ಮೂಲಕ ಕೋವಿಡ್ ಅನ್ನು ಹಿಮ್ಮೆಟ್ಟಿಸಿದ್ದರಿಂದ ಲಾಕ್‌ಡೌನ್‌ನಿಂದ ಮುಕ್ತಿ ಸಿಕ್ಕಂತಾಗಿದೆ. ಮಾಸ್ಕ್ ಧರಿಸುವುದನ್ನು ಕೈಬಿಡಲಾಗಿದೆ. ಕೋವಿಡ್ ಭಯ ಇಲ್ಲದಂತಾಗಿದೆ. ಮನುಕುಲಕ್ಕೆ ಅಳತೆಗೂ ಮೀರಿದ ಒಳಿತಾಗಿದೆ.