‘ಓಪನ್ ಹೈಮರ್’ ಶತಮಾನದ ಶ್ರೇಷ್ಠ ಬಯೋಪಿಕ್?
ಒಳ್ಳೆಯ ಉದ್ದೇಶಕ್ಕಾಗಿ ಮಾತ್ರವೇ ವಿಜ್ಞಾನದ ಬಳಕೆಯಾಗಬೇಕು ಎಂಬ ನಿಲುವು ಹೊಂದಿದ್ದ ಭೌತಶಾಸ್ತ್ರಜ್ಞ ಓಪನ್ ಹೈಮರ್ ಅಣುಬಾಂಬ್ ಸಿದ್ಧ ಪಡಿಸುವ ಅಮೆರಿಕದ ಮ್ಯಾನ್ ಹ್ಯಾಟನ್ ಪ್ರಾಜೆಕ್ಟ್ನ ನೇತೃತ್ವ ವಹಿಸುವಲ್ಲಿಗೆ ಮುಟ್ಟಿದ ದಾರಿ ಬಹಳ ದೂರ. ಆನಂತರದ ಅವರ ಬದುಕು ಇವೆಲ್ಲದರ ಕುರಿತ ಕುತೂಹಲಗಳಲ್ಲಿ ನಮಗೆ ಎದುರಾಗುವುದು ಒಬ್ಬ ವಿಜ್ಞಾನಿಯ ಕಥೆ ಎಂಬುದಕ್ಕಿಂತ ಹೆಚ್ಚಾಗಿ ಒಬ್ಬ ಮನುಷ್ಯನ ಕಥೆ, ದ್ವಂದ್ವಗಳ ಕಥೆ. ವ್ಯಕ್ತಿಯೊಬ್ಬ ಅಪಾರ್ಥಗಳ ನಡುವೆ ನುಚ್ಚುನೂರಾಗುವ ಕಥೆ.
- ವಿನಯ್ ಕೆ.
ಕ್ರಿಸ್ಟೋಫರ್ ನೋಲನ್ ಅವರ ಹೊಸ ಸಿನೆಮಾ ಎಂದರೆ ಆ ಸಿನೆಮಾವನ್ನು ಫಸ್ಟ್ ಡೇ, ಫಸ್ಟ್ ಶೋ ನೋಡಲು ಇಡೀ ವಿಶ್ವದ ಸಿನೆಮಾ ಪ್ರಿಯರು ಕಾಯುತ್ತಾರೆ. ಅಂತಹ ತೀವ್ರ ಕುತೂಹಲ ಅಷ್ಟೇ ಕಾತರ ಮೂಡಿಸುವ ಮಾಂತ್ರಿಕ ಸಿನೆಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್. ಅವರ ಸಿನೆಮಾದಲ್ಲಿ ಕತೆ ಏನು ಎಂದು ಕೇಳದೆಯೇ ನಟಿಸಲು ಹಾಲಿವುಡ್ ಸೂಪರ್ ಸ್ಟಾರ್ಗಳು ಕಾಯುತ್ತಾರೆ.
ಅಂತಹ ಸೂಪರ್ ಸ್ಟಾರ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಹೊಸ ಸಿನೆಮಾ ‘ಓಪನ್ ಹೈಮರ್’ ಜುಲೈ 21ಕ್ಕೆ ಬಿಡುಗಡೆಯಾಗಿ ಈಗ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಇದೊಂದು ಬಯೋಪಿಕ್. ಈಗ ಹೇಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತರಲಿರುವ ಕ್ರಾಂತಿಯ ಜೊತೆ ಜೊತೆಗೆ ಅದರಿಂದಾಗುವ ಅನಾಹುತಗಳ ಬಗ್ಗೆಯೂ ಭಯವಿದೆಯೋ ಹಾಗೆಯೆ ಅಣು ಬಾಂಬ್ ತಂತ್ರಜ್ಞಾನ ಬಂದಿದ್ದಾಗ ಅದು ಏನೇನು ಅನಾಹುತ ಮಾಡಲಿದೆಯೋ ಎಂದು ಅದರ ಜನಕನೇ ಚಿಂತಿತನಾಗಿದ್ದ. ಆ ಚಿಂತನೆಯ ಫಲವಾಗಿ ವ್ಯಕ್ತಿ ಹಾಗೂ ವ್ಯವಸ್ಥೆಯ ನಡುವೆ ಸೃಷ್ಟಿಯಾಗುವ ಸಂಘರ್ಷದ ಅದ್ಭುತ ಕತೆಯೇ ‘ಓಪನ್ ಹೈಮರ್’
ಜಗತ್ತೆಂದೂ ಮರೆಯಲಾಗದ ಭೀಕರ ಹಿರೋಷಿಮಾ- ನಾಗಾಸಾಕಿ ದುರಂತಕ್ಕೆ ಕಾರಣವಾದ ಅಣುಬಾಂಬ್ ಆವಿಷ್ಕರಿಸಿದವನು ಓಪನ್ ಹೈಮರ್. ಆತನ ಪೂರ್ಣ ಹೆಸರು ಜಾನ್ ರಾಬರ್ಟ್ ಓಪನ್ ಹೈಮರ್ .
ಒಳ್ಳೆಯ ಉದ್ದೇಶಕ್ಕಾಗಿ ಮಾತ್ರವೇ ವಿಜ್ಞಾನದ ಬಳಕೆಯಾಗಬೇಕು ಎಂಬ ನಿಲುವು ಹೊಂದಿದ್ದ ಭೌತಶಾಸ್ತ್ರಜ್ಞ ಓಪನ್ ಹೈಮರ್ ಅಣುಬಾಂಬ್ ಸಿದ್ಧಪಡಿಸುವ ಅಮೆರಿಕದ ಮ್ಯಾನ್ ಹ್ಯಾಟನ್ ಪ್ರಾಜೆಕ್ಟ್ನ ನೇತೃತ್ವ ವಹಿಸುವಲ್ಲಿಗೆ ಮುಟ್ಟಿದ ದಾರಿ ಬಹಳ ದೂರ.
ಆನಂತರದ ಅವರ ಬದುಕು ಇವೆಲ್ಲದರ ಕುರಿತ ಕುತೂಹಲಗಳಲ್ಲಿ ನಮಗೆ ಎದುರಾಗುವುದು ಒಬ್ಬ ವಿಜ್ಞಾನಿಯ ಕಥೆ ಎಂಬುದಕ್ಕಿಂತ ಹೆಚ್ಚಾಗಿ ಒಬ್ಬ ಮನುಷ್ಯನ ಕಥೆ, ದ್ವಂದ್ವಗಳ ಕಥೆ. ವ್ಯಕ್ತಿಯೊಬ್ಬ ಅಪಾರ್ಥಗಳ ನಡುವೆ ನುಚ್ಚುನೂರಾಗುವ ಕಥೆ.
ಇನ್ನು ಓಪನ್ ಹೈಮರ್ ಚಿತ್ರ ಕೂಡ ಬಿಡುಗಡೆಯಾದ ಬೆನ್ನಿಗೇ ಬಹಳ ಚರ್ಚೆಯಾಗುತ್ತಿದೆ. ಇದು ಈ ವರ್ಷದ ಅತಿದೊಡ್ಡ ಹಾಗೂ ಅತ್ಯಂತ ಶ್ರೇಷ್ಠ ಚಿತ್ರ ಎಂಬ ಹೆಗ್ಗಳಿಕೆ ಒಂದೆಡೆಯಾದರೆ ಇದು ಈವರೆಗೆ ಬಂದಿರುವ ಬಯೋಪಿಕ್ಗಳಲ್ಲೇ ಅತ್ಯಂತ ಶ್ರೇಷ್ಠ ಬಯೋಪಿಕ್ ಅಥವಾ ಆತ್ಮ ಚರಿತ್ರೆಯ ಚಿತ್ರ ಎಂದು ಹೇಳಲಾಗುತ್ತಿದೆ.
ಮೊದಲು ಈ ಚಿತ್ರಕ್ಕೆ ಕಾರಣವಾದ ಅಣುಬಾಂಬ್ ಆವಿಷ್ಕಾರದ ಹಿಂದಿದ್ದ ಈ ಓಪನ್ ಹೈಮರ್ ಯಾರೆಂದು ನೋಡುವುದಾದರೆ...
ಓಪನ್ ಹೈಮರ್ ಹುಟ್ಟಿದ್ದು ನ್ಯೂಯಾರ್ಕ್ ನಗರದಲ್ಲಿ, 1904ರ ಎಪ್ರಿಲ್ 22ರಂದು. ತಂದೆ ಜರ್ಮನ್ ವಲಸಿಗ, ಜವಳಿ ಉದ್ಯಮಿ. ತಾಯಿ ಚಿತ್ರಕಲಾವಿದೆ. ಓಪನ್ ಹೈಮರ್ ಬೆಳೆದ ಮನೆಯ ಗೋಡೆಗಳನ್ನೆಲ್ಲ ವಿನ್ಸೆಂಟ್ ವ್ಯಾನ್ಗೋ, ಪಾಲ್ ಸೆಜನ್ ಥರದ ಅದ್ಭುತ ಕಲಾವಿದ ಕಲಾ ಕೃತಿಗಳೇ ಆವರಿಸಿದ್ದವು.
ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಓದಿದ ಓಪನ್ ಹೈಮರ್ಗೆ , ಅದರಲ್ಲಿನ ಉತ್ಕೃಷ್ಟ ಸಾಧನೆಯ ಜೊತೆಗೇ ರಸಾಯನಶಾಸ್ತ್ರ, ಲ್ಯಾಟಿನ್, ಗ್ರೀಕ್, ಕವಿತೆ ಮತ್ತು ಪೌರ್ವಾತ್ಯ ತತ್ವಶಾಸ್ತ್ರದಂಥ ವಿಷಯಗಳಲ್ಲಿಯೂ ಪರಿಣತಿಯಿತ್ತು.
ಇಂಗ್ಲೆಂಡ್ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿನ ಸಂಶೋಧನೆ ಅಷ್ಟೊಂದು ಆಸಕ್ತಿ ಮೂಡಿಸದೆ, ಕ್ವಾಂಟಮ್ ಭೌತಶಾಸ್ತ್ರ ಅಧ್ಯಯನಕ್ಕಾಗಿ ಹೋದದ್ದು ಜರ್ಮನಿಯ ಗೊಟ್ಟಿಂಗನ್ ವಿಶ್ವವಿದ್ಯಾನಿಲಯಕ್ಕೆ. ಪಿಎಚ್ಡಿ ಪದವಿಯ ಬೆನ್ನಲ್ಲೇ ಖ್ಯಾತಿಯೂ ಬಂದಿತ್ತು.
ಲಾಸ್ ಏಂಜಲೀಸ್ನ ಕಾಲ್ಟೆಕ್ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯಗಳೆರಡರಲ್ಲೂ ಬೋಧಕನಾಗುವ ಅವಕಾಶ. ಓಪನ್ ಹೈಮರ್ ಪ್ರಭಾವದಲ್ಲಿ ಶ್ರೇಷ್ಠ ಭೌತವಿಜ್ಞಾನಿಗಳ ಒಂದು ಪೀಳಿಗೆಯೇ ಬೆಳೆಯಿತು.
ಓಪನ್ ಹೈಮರ್ 1930ರ ದಶಕದಲ್ಲಿ ಕಮ್ಯುನಿಸಂ ಜೊತೆ ಗುರುತಿಸಿಕೊಂಡರು. ಆದರೆ ಎಂದಿಗೂ ಕಮ್ಯುನಿಸ್ಟ್ ಪಕ್ಷವನ್ನು ಸೇರಲಿಲ್ಲ. ಕಮ್ಯುನಿಸಂ ಅನ್ನು ಫ್ಯಾಶಿಸಂಗೆ ಒಂದು ಪ್ರಬಲ ಪರ್ಯಾಯವೆಂದು ಕಂಡಿದ್ದ ಕಾಲಘಟ್ಟ ಅದಾಗಿತ್ತು. ಆದರೆ ಅವರ ರಾಜಕೀಯ ಒಲವುಗಳನ್ನು ಮೀರಿದ ತಿರುವೊಂದು ಎರಡನೇ ಮಹಾಯುದ್ಧದ ಕಾರಣದಿಂದಾಗಿ ಸೃಷ್ಟಿಯಾಗಿತ್ತು. ಭೌತವಿಜ್ಞಾನಿಗಳ ಎದುರು ಊಹಾತೀತ ದಾರಿಯೊಂದು ತೆರೆದುಕೊಂಡಿತ್ತು.
ಜರ್ಮನಿಯ ವಿರುದ್ಧ ಜಿದ್ದಿಗೆ ಬಿದ್ದು ಹೇಗಾದರೂ ಅಣುಬಾಂಬ್ ಅಭಿವೃದ್ಧಿ ಪಡಿಸಲು ಅಮೆರಿಕ ಪಣ ತೊಟ್ಟಿತ್ತು.
ಪರಮಾಣು ಶಕ್ತಿಯನ್ನು ಮಿಲಿಟರಿ ಶಕ್ತಿಯಾಗಿ ಮಾರ್ಪಡಿಸಲು ಅಮೆರಿಕ ಸೇನೆಯ ಉಸ್ತುವಾರಿಯಲ್ಲಿ ನಡೆದ ಮಹತ್ವದ ರಹಸ್ಯ ಯೋಜನೆಯೇ ಮ್ಯಾನ್ ಹ್ಯಾಟನ್ ಪ್ರಾಜೆಕ್ಟ್. ಅದರ ನೇತೃತ್ವ ವಹಿಸಿದ್ದು ಓಪನ್ ಹೈಮರ್ .
ಹಲವು ರಹಸ್ಯ ಪ್ರಯೋಗಾಲಯಗಳ ಕಾರ್ಯಾಚರಣೆಗೆ ಅವರದೇ ಮೇಲ್ವಿಚಾರಣೆ. ಅಂಥವುಗಳಲ್ಲಿ ಪ್ರಸಿದ್ಧವಾದ ನ್ಯೂ ಮೆಕ್ಸಿಕೋದ ಲಾಸ್ ಅಲಾಮೋಸ್ನಲ್ಲಿ ಆರಂಭಿಕ ಪರೀಕ್ಷಾ ಪರಮಾಣು ಸ್ಫೋಟ 1945ರ ಜುಲೈನಲ್ಲಿ ಆಯಿತು. ಮುಂದಿನ ತಿಂಗಳಲ್ಲೇ ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಅಮೆರಿಕ ಎರಡು ಅಣುಬಾಂಬ್ಗಳನ್ನು ಹಾಕಿತು.
ಈ ಭೀಕರ ದುರಂತದ ಬಳಿಕ ಕೆಲವೇ ತಿಂಗಳುಗಳಲ್ಲಿ ಓಪನ್ ಹೈಮರ್ ಮ್ಯಾನ್ ಹ್ಯಾಟನ್ ಪ್ರಾಜೆಕ್ಟ್ ಹುದ್ದೆಗೆ ರಾಜೀನಾಮೆ ನೀಡಿದರು. 1947ರಲ್ಲಿ, ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಮುಖ್ಯಸ್ಥನಾದರು. 1952ರವರೆಗೆ ಪರಮಾಣು ಶಕ್ತಿ ಆಯೋಗದ ಸಾಮಾನ್ಯ ಸಲಹಾ ಸಮಿತಿಯ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದರು. ಹೈಡ್ರೋಜನ್ ಬಾಂಬ್ ಅಭಿವೃದ್ಧಿಯನ್ನು ಬಹಿರಂಗವಾಗಿ ವಿರೋಧಿಸಿದರು.
1953ರ ಹೊತ್ತಿಗೆ ಅಮೆರಿಕ ಅಧಿಕಾರಿಗಳು ಓಪನ್ ಹೈಮರ್ನನ್ನು ಅನುಮಾನದ ಕಣ್ಣಿಂದ ನೋಡಲು ಶುರುಮಾಡಿದ್ದರು. ಕಮ್ಯುನಿಸ್ಟರೊಂದಿಗೆ ಹಿಂದೆ ಓಪನ್ಹೈಮರ್ ಹೊಂದಿದ್ದ ಸಂಬಂಧ ಈಗ ಅವರಿಗೆ ದೊಡ್ಡದಾಗಿ ಕಾಣತೊಡಗಿತ್ತು. ರಶ್ಯ ತಮ್ಮ ಅಣು ಬಾಂಬ್ ತಂತ್ರಜ್ಞಾನವನ್ನು ಕದ್ದು ಸ್ವತಃ ಅದನ್ನು ಅಭಿವೃದ್ಧಿಪಡಿಸಿದೆ ಎಂಬ ಸಿಟ್ಟು ಅಮೆರಿಕವನ್ನು ಕಾಡುತ್ತಿತ್ತು. ಹಾಗಾಗಿ ಕಮ್ಯುನಿಸ್ಟರ ಜೊತೆಗೆ ಸ್ವಲ್ಪನಂಟಿದ್ದರೆ ಸಾಕು ಅಂತಹವರನ್ನು ರಶ್ಯದ ಏಜೆಂಟ್ ಎಂದೇ ನೋಡಿ ಅವರ ಜೀವನ, ವೃತ್ತಿ ಎಲ್ಲವನ್ನೂ ಹಾಳು ಮಾಡಿಬಿಡುವ ಪ್ರವೃತ್ತಿ ಆಗ ಅಮೆರಿಕದಲ್ಲಿತ್ತು. ಹಾಗಾಗಿ ಓಪನ್ ಹೈಮರ್ ತನಿಖೆ ಎದುರಿಸಬೇಕಾಯಿತು. ಅಮೆರಿಕದ ಹೀರೊ ಆಗಿದ್ದ ಓಪನ್ ಹೈಮರ್ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಕಡೆಗೆ ದೇಶದ್ರೋಹದ ಆರೋಪವನ್ನೂ ಎದುರಿಸಬೇಕಾಯಿತು. ಅದರಿಂದ ಮುಕ್ತನಾದರೂ, ಮಿಲಿಟರಿ ಮತ್ತು ಪರಮಾಣು ಶಕ್ತಿ ಆಯೋಗದ ಬಾಗಿಲು ಆತನ ಪಾಲಿಗೆ ಮುಚ್ಚಿದವು.
ಆಗ ಕುಗ್ಗಿದ ಓಪನ್ ಹೈಮರ್ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ.
ವಿನಾಶಕ್ಕಾಗಿ ವಿಜ್ಞಾನದ ಬಳಕೆ ಕುರಿತ ಓಪನ್ಹೈಮರ್ ರ ನಿಲುವುಗಳು ಮೇಲ್ನೋಟಕ್ಕೆ ಕಾಣಿಸುವುದಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿವೆ ಎನ್ನಲಾಗುತ್ತದೆ.
ಓಪನ್ಹೈಮರ್ ತನ್ನ 62ನೇ ವಯಸ್ಸಿನಲ್ಲಿ ಗಂಟಲು ಕ್ಯಾನ್ಸರ್ಗೆ ತುತ್ತಾಗಿ 1967ರ ಫೆಬ್ರವರಿ 18ರಂದು ನ್ಯೂಜೆರ್ಸಿಯಲ್ಲಿ ಸಾವನ್ನಪ್ಪಿದರು.
ಈ ನಡುವೆ, ಓಪನ್ ಹೈಮರ್ರನ್ನು ಅನುಮಾನದ ಕಣ್ಣಿಂದ ನೋಡಿ ಕಿರುಕುಳ ಕೊಟ್ಟಿದ್ದ ಅಮೆರಿಕ ಸರಕಾರವೇ ಪರಮಾಣು ಶಕ್ತಿ ಆಯೋಗದ ಅತ್ಯುನ್ನತ ಗೌರವವಾದ ಎನ್ರಿಕೊ ಫರ್ಮಿ ಪ್ರಶಸ್ತಿಯನ್ನು ನೀಡಿತ್ತು.
ಆದರೆ, ನಿಜವಾಗಿಯೂ ಓಪನ್ ಹೈಮರ್ ವಿಚಾರದಲ್ಲಿ ಜಗತ್ತು ಗೌರವಭಾವನೆ ಹೊಂದಿದೆಯೇ? ಅವರ ಮಹತ್ವಪೂರ್ಣ ಬದುಕು ಮತ್ತು ವಿದ್ವತ್ತು ಅವರೇ ಆವಿಷ್ಕರಿಸಿದ ಅಣುಬಾಂಬಿನ ದುರಂತದ ಕರಿನೆರಳಲ್ಲಿ ಮಸುಕಾಯಿತೆ ? ಇದು ದೊಡ್ಡ ಚರ್ಚೆಯ ವಿಷಯ.
ಇನ್ನು ‘ಓಪನ್ ಹೈಮರ್’ ಚಿತ್ರದ ಬಗ್ಗೆ ಹೇಳುವುದಾದರೆ...
ಇದು ಅಣುಬಾಂಬ್ ಜನಕನ ಕುರಿತ ಚಿತ್ರವಾದರೂ ಇದರಲ್ಲಿ ಭಾರೀ ಆ್ಯಕ್ಷನ್ ನಿರೀಕ್ಷಿಸಿ ನೀವು ನೋಡಲು ಹೋದರೆ ನಿರಾಸೆ ಖಚಿತ. ಯಾಕೆಂದರೆ ಮೂರು ಗಂಟೆಯ ಚಿತ್ರದಲ್ಲಿ ಅಣುಬಾಂಬ್ ಕುರಿತ ಪ್ರಮುಖ ಘಟ್ಟ ಅರ್ಧ ಗಂಟೆಯಷ್ಟೇ ಇದೆ. ಹಾಗಾದರೆ ಮತ್ತೆ ಸಿನೆಮಾದಲ್ಲೇನಿದೆ ಅಂತ ನೀವು ಕೇಳುವುದು ಖಚಿತ. ಅಲ್ಲಿಯೇ ಇರುವುದು ನಿಜವಾದ ಸಿನೆಮಾ ಅನುಭವ. ಅಣು ತಂತ್ರಜ್ಞಾನ ಕುರಿತ ಓಪನ್ ಹೈಮರ್ ಭಯ, ಅನುಮಾನ, ಅಶಂಕೆ ಹಾಗೂ ಅವುಗಳನ್ನು ಮುಂದಿಟ್ಟಿದ್ದಕ್ಕಾಗಿ ಆತನನ್ನು ಚಾರಿತ್ರ್ಯ ವಧೆ ಮೂಲಕ ಮುಗಿಸಿಬಿಡಲು ಅಮೆರಿಕದ ಅಣು ಶಕ್ತಿ ಕಮಿಷನ್ನ ಮುಖ್ಯಸ್ಥ ಲೂವಿಸ್ ಸ್ಟ್ರಾಸ್ ಏನೇನು ಕುತಂತ್ರಗಳನ್ನು ಮಾಡುತ್ತಾರೆ.. ಅವರ ವೈಯಕ್ತಿಕ ಬದುಕನ್ನು ಹೇಗೆಲ್ಲ ಜಾಲಾಡುತ್ತ್ತಾರೆ... ಎಂತೆಂತಹ ಕೆಟ್ಟ ರಾಜಕೀಯ ನಡೆಯುತ್ತದೆ... ತಮ್ಮ ಕೆಲವು ವೈಯಕ್ತಿಕ ದೌರ್ಬಲ್ಯಗಳಿಂದ ಅದಕ್ಕೆ ಓಪನ್ ಹೈಮರ್ ಹೇಗೆಲ್ಲ ಸರಕು ಒದಗಿಸುತ್ತಾರೆ, ತನಗೆ ವಂಚನೆಯಾಗಿದ್ದರೂ ಓಪನ್ ಹೈಮರ್ ಪತ್ನಿ ಹೇಗೆ ಪತಿಗೆ ಆಸರೆಯಾಗಿ ನಿಲ್ಲುತ್ತಾರೆ... ಇವೆಲ್ಲವನ್ನೂ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಕ್ರಿಸ್ಟೋಫರ್ ನೋಲನ್ ಎನ್ನುತ್ತಿದ್ದಾರೆ ವಿಮರ್ಶಕರು.
ಓಪನ್ ಹೈಮರ್ ಪಾತ್ರದಲ್ಲಿ ಕಿಲಿಯನ್ ಮರ್ಫಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಂತಹ ಅದ್ಭುತ ನಟನೆ ಅವರದ್ದು. ಓಪನ್ ಹೈಮರ್ ಅನ್ನು ಮೊದಲು ರೂಪಿಸುವ ಆಮೇಲೆ ಅವರನ್ನೇ ಮುಗಿಸಿಬಿಡಲು ಸಂಚು ಹೂಡುವ ಲೂವಿಸ್ ಸ್ಟ್ರಾಸ್ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ಹಾಗೂ ಇಡೀ ಅಣುಬಾಂಬ್ ಯೋಜನೆಯ ನಿರ್ದೇಶಕ ಹಿರಿಯ ಸೇನಾಧಿಕಾರಿ ಲೆಸ್ಲಿ ಗ್ರೋವ್ಸ್ ಪಾತ್ರದಲ್ಲಿ ಮ್ಯಾಟ್ ಡೆಮನ್, ಓಪನ್ ಹೈಮರ್ ಪತ್ನಿ ಪಾತ್ರದಲ್ಲಿ ಎಮಿಲಿ ಬ್ಲಂಟ್ ಹೀಗೆ ಒಬ್ಬರಿಗಿಂತ ಒಬ್ಬರು ಅದ್ಭುತ ನಟನೆಯಿಂದ ನಮ್ಮನ್ನು ಹಿಡಿದಿಡಬಲ್ಲರು.
ಅಣುಬಾಂಬ್ ದೇಶ ದೇಶಗಳ ನಡುವೆ ಹೇಗೆ ದೊಡ್ಡ ಸ್ಪರ್ಧೆ ಒಡ್ಡುತ್ತದೋ ಅದನ್ನು ತೋರಿಸುವುದರ ಜೊತೆ ಜೊತೆಗೆ ಮನುಷ್ಯ ಮನುಷ್ಯ ನಡುವಿನ ಸಂಘರ್ಷ, ಭಾವನೆಗಳ ತಾಕಲಾಟ, ರಾಜಕೀಯ ಮೇಲಾಟ, ಷಡ್ಯಂತ್ರ, ವೈಯಕ್ತಿಕ ಬದುಕು, ಪ್ರೀತಿ, ಪ್ರೇಮ - ಇವೆಲ್ಲವುಗಳ ಪರಿಪೂರ್ಣ ಸಮ್ಮಿಲನವಾಗಿ ಮೂಡಿ ಬಂದಿದೆ ಓಪನ್ ಹೈಮರ್.
ಹೇಗೆ ಒಬ್ಬ ಇಡೀ ದೇಶದ ಪಾಲಿನ ಹೀರೊ ಅದೇ ದೇಶಕ್ಕೆ ವಿಲನ್ ಆಗಿ ಬದಲಾಗುತ್ತಾನೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದೆ ಓಪನ್ ಹೈಮರ್ ಎನ್ನುತ್ತಿದ್ದಾರೆ ವಿಮರ್ಶಕರು.
ಹಾಗಾಗಿ ಸಿನಿಪ್ರಿಯರು ನೋಡಲೇಬೇಕಾದ ಚಿತ್ರ ಓಪನ್ ಹೈಮರ್