ಮರು ನಾಮಕರಣ,ಮರು ಬ್ರ್ಯಾಂಡಿಂಗ್: ಬಿಜೆಪಿ ನೀತಿಗಳು ಮತ್ತು ಯೋಜನೆಗಳ ಕಥೆ
ವಾಸ್ತವವೆಂದರೆ, ಯುಪಿಎಯ ಯೋಜನೆಗಳು ಉತ್ತಮ ಗುರಿಗಳನ್ನು ಹೊಂದಿದ್ದರೂ ಅವುಗಳ ಹೆಸರು ನೆನಪಿನಲ್ಲಿ ಉಳಿಯುವಂಥದ್ದಾಗಿರಲಿಲ್ಲ. ಮೋದಿಯವರ ಯೋಜನೆಗಳು ಆಕರ್ಷಕ ಹೆಸರುಗಳನ್ನು ಹೊಂದಿವೆ. ಶ್ರೀಮಂತರನ್ನು ಗುರಿಯಾಗಿಸಿಕೊಂಡ ಮೋದಿಯವರ ಯೋಜನೆಗಳಿಗೆ ಇಂಗ್ಲಿಷ್ ಹೆಸರುಗಳಿವೆ. ಬಡವರಿಗಾಗಿ ಇರುವ ಯೋಜನೆಗಳು ಹಿಂದಿ ಹೆಸರುಗಳನ್ನು ಹೊಂದಿವೆ. ಅವು ಬ್ರ್ಯಾಂಡಿಂಗ್ ಆದ್ಯತೆಯನ್ನು ಪ್ರತಿಬಿಂಬಿಸುತ್ತವೆ.
ಕಾಂಗ್ರೆಸ್‌ನ 23 ಯೋಜನೆಗಳ ಹೆಸರನ್ನು ಬಿಜೆಪಿ ಬದಲಾಯಿಸಿದೆ ಎಂದು ಕಾಂಗ್ರೆಸ್‌ನ ಶಶಿ ತರೂರ್ ಒಮ್ಮೆ ಟ್ವೀಟ್‌ನಲ್ಲಿ ದೂರಿದರು. ಪ್ರಧಾನಿ ನರೇಂದ್ರ ಮೋದಿ ಅವರು ನೇಮ್ ಚೇಂಜಿಂಗ್ ಸರಕಾರವನ್ನು ನಡೆಸುತ್ತಿದ್ದಾರೆಯೇ ಹೊರತು ಗೇಮ್ ಚೇಂಜಿಂಗ್ ಸರಕಾರವನ್ನಲ್ಲ ಎಂದೂ ಅವರು ಟೀಕಿಸಿದ್ದರು.
ತರೂರ್ ಅವರು ಹೇಳಿದ್ದರ ಬಗ್ಗೆ ಗಮನಿಸಿದಾಗ, 19 ಯೋಜನೆಗಳ ವಿಚಾರದಲ್ಲಿ ಅವರ ಹೇಳಿಕೆ ಸರಿಯಿತ್ತು.
‘ಪ್ರಧಾನ ಮಂತ್ರಿ ಜನ ಧನ್ ಯೋಜನೆ’ಯು ಯುಪಿಎ ಸರಕಾರದ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಎಂಬ ಯೋಜನೆಯಾಗಿತ್ತು. ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನೇ ಹೋಲುತ್ತಿತ್ತು. ‘ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ’ಯು ‘ರಾಜೀವ್ ಗ್ರಾಮೀಣ ವಿದ್ಯುತ್ಕರಣ ಯೋಜನೆ’ಯಾಗಿತ್ತು. ‘ನವೀಕರಣ ಮತ್ತು ನಗರ ಪರಿವರ್ತನಾ ಅಟಲ್ ಮಿಷನ್ ಯೋಜನೆ’ಯು ‘ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಮಿಷನ್ ಯೋಜನೆ’ಯ ಮರುನಾಮಕರಣವಾಗಿತ್ತು. ಬಿಜೆಪಿಯ ಬೇವು ಲೇಪಿತ ಯೂರಿಯಾ ಕಾಂಗ್ರೆಸ್‌ನ ಬೇವು ಲೇಪಿತ ಯೂರಿಯಾ ಯೋಜನೆಯ ಹಾಗೆಯೇ ಇತ್ತು. ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯು ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ನಿರ್ವಹಣಾ ರಾಷ್ಟ್ರೀಯ ಯೋಜನೆಯಾಗಿತ್ತು. ‘ಅಟಲ್ ಪಿಂಚಣಿ ಯೋಜನೆ’ಯು ‘ಸ್ವಾವಲಂಬನಾ ಯೋಜನೆ’ಯ ಮರುನಾಮಕರಣವಾಗಿತ್ತು. ಮೋದಿಯವರು ದೊಡ್ಡದಾಗಿ ಹೇಳಿಕೊಳ್ಳುವ ‘ಮೇಕ್ ಇನ್ ಇಂಡಿಯಾ’ ಯೋಜನೆಯು ರಾಷ್ಟ್ರೀಯ ಉತ್ಪಾದನಾ ನೀತಿಯ (ಎನ್‌ಎಂಪಿ) ಹೆಸರನ್ನಷ್ಟೇ ಬದಲಿಸಿರುವ ಯೋಜನೆಯಾಗಿತ್ತು.
ಅದು ಕೇವಲ ಮರುನಾಮಕರಣವಾಗಿರಲಿಲ್ಲ, ಬದಲಾಗಿ, ರಾಷ್ಟ್ರೀಯ ಉತ್ಪಾದನಾ ನೀತಿ ಸಂಪೂರ್ಣ ರೂಪುರೇಷೆಯದ್ದೇ ನಕಲು ಕೂಡ ಆಗಿತ್ತು. ಉದ್ಯಮ ಮತ್ತು ಆಂತರಿಕ ವ್ಯವಹಾರದ ಪತ್ರಿಕಾ ಪ್ರಕಟಣೆ (2011) ಮತ್ತು ರಾಷ್ಟ್ರೀಯ ಉತ್ಪಾದನೆಯ ಕುರಿತ ಮೇಕ್ ಇನ್ ಇಂಡಿಯಾ ವೆಬ್‌ಸೈಟ್‌ನ ಪುಟದಲ್ಲಿನ ಹೆಚ್ಚಿನ ವಿವರಗಳೆಲ್ಲ ಅದರದ್ದೇ ಬಹುತೇಕ ನಕಲಾಗಿದ್ದವು.
ಯುಪಿಎಯ ‘ಎನ್‌ಎಂಪಿ ಯೋಜನೆ’ಯು ಜಿಡಿಪಿಯಲ್ಲಿ ಉತ್ಪಾದನೆಯ ಪಾಲನ್ನು ಒಂದು ದಶಕದೊಳಗೆ ಶೇ.25ಕ್ಕೆ ಹೆಚ್ಚಿಸುವ ಮತ್ತು 100 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಬಗ್ಗೆ ಹೇಳಿತ್ತು. ಮೇಕ್ ಇನ್ ಇಂಡಿಯಾವು ದೇಶದ ಜಿಡಿಪಿಯಲ್ಲಿ ಉತ್ಪಾದನೆಯ ಪಾಲನ್ನು ಶೇ.25ಕ್ಕೆ ಹೆಚ್ಚಿಸಲು ಮತ್ತು ಉತ್ಪಾದನೆಯಲ್ಲಿ 2022ರ ವೇಳೆಗೆ 100 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲು ಹೊಂದಿರುವ ಗುರಿಯ ಬಗ್ಗೆ ಹೇಳುತ್ತದೆ. ಯುಪಿಎಯ ಎನ್‌ಎಂಪಿಯು ಮಧ್ಯಮಾವಧಿಯಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯನ್ನು ಶೇ.12-14ಕ್ಕೆ ಹೆಚ್ಚಿಸುವ ಬಗ್ಗೆ ಹೇಳಿತ್ತು. ಮೇಕ್ ಇನ್ ಇಂಡಿಯಾ ಮಧ್ಯಮಾವಧಿಯಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯಲ್ಲಿ ಶೇ.12-14ಕ್ಕೆ ಹೆಚ್ಚಾಗುತ್ತದೆ ಎಂದು ಹೇಳುತ್ತದೆ.
ಎನ್‌ಎಂಪಿ ನೀತಿಯು ಗ್ರಾಮೀಣ ವಲಸಿಗರು ಮತ್ತು ನಗರ ಬಡವರ ಪ್ರಗತಿಗಾಗಿ ಸೂಕ್ತವಾದ ಕೌಶಲ್ಯಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿತ್ತು. ಮೇಕ್ ಇನ್ ಇಂಡಿಯಾವು ಕೂಡ ಗ್ರಾಮೀಣ ವಲಸಿಗರು ಮತ್ತು ನಗರ ಬಡವರಲ್ಲಿ ಅಂತರ್ಗತ ಬೆಳವಣಿಗೆಗೆ ಸೂಕ್ತವಾದ ಕೌಶಲ್ಯದ ರಚನೆಯ ಅಗತ್ಯವಿದೆ ಎಂದು ಹೇಳುತ್ತದೆ.
ಯುಪಿಎ ಎನ್‌ಎಂಪಿ ನೀತಿಯು ದೇಶೀಯ ಮೌಲ್ಯ ಸೇರ್ಪಡೆ ಮತ್ತು ಉತ್ಪಾದನೆಯಲ್ಲಿ ತಾಂತ್ರಿಕತೆಯನ್ನು ಉತ್ತಮಪಡಿಸುವ ಬಗ್ಗೆ ಹೇಳಿತ್ತು. ಮೇಕ್ ಇನ್ ಇಂಡಿಯಾ ದೇಶೀಯ ಮೌಲ್ಯ ಸೇರ್ಪಡೆ ಮತ್ತು ತಾಂತ್ರಿಕ ಆಳ ಎಂಬ ಮಾತುಗಳನ್ನೇ ಬಳಸಿದೆ. ವಾಸ್ತವವಾಗಿ, ಮೇಕ್ ಇನ್ ಇಂಡಿಯಾ ವೆಬ್‌ಸೈಟ್ ಕಾಂಗ್ರೆಸ್ ಯೋಜನೆಯದ್ದೇ ಪ್ರತಿಬಿಂಬವಾಗಿದೆ. ಮಾತ್ರವಲ್ಲ, ಅದರ ಡೌನ್‌ಲೋಡ್ ಕೊಂಡಿ ಕೂಡ ಹಳೆಯ ನೀತಿಯ 2011ರ ದಾಖಲೆಯನ್ನೇ ಕಾಣಿಸುತ್ತಿತ್ತು.
ಇನ್ನು, ‘ಡಿಜಿಟಲ್ ಇಂಡಿಯಾ’ ಹಿಂದಿನ ರಾಷ್ಟ್ರೀಯ ಇ-ಆಡಳಿತ ಯೋಜನೆಯಂತೆಯೇ ಇತ್ತು. ‘ಸ್ಕಿಲ್ ಇಂಡಿಯಾ’ ಎನ್ನುವುದು ಹಿಂದಿನ ‘ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ’ದಂತೆಯೇ ಇತ್ತು. ‘ಮಿಷನ್ ಇಂದ್ರಧನುಷ್’ ಎಂಬುದು ‘ಯುನಿವರ್ಸಲ್ ಇಮ್ಯುನೈಸೇಶನ್’ ಕಾರ್ಯಕ್ರಮವಾಗಿತ್ತು. Pಂಊಂಐ ಎಲ್‌ಪಿಜಿ ಯೋಜನೆ ಹಿಂದಿನ ನೇರ ಪ್ರಯೋಜನಗಳ ವರ್ಗಾವಣೆ ಯೋಜನೆಯೇ ಆಗಿತ್ತು. ಭಾರತ್‌ನೆಟ್ ಎಂಬುದು 2011ರ ಅಕ್ಟೋಬರ್ 25ರಂದು ಅನುಮೋದಿಸಲಾಗಿದ್ದ, ಎಲ್ಲಾ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದ್ದ ರಾಷ್ಟ್ರೀಯ ಆಪ್ಟಿಕ್ ಫೈಬರ್ ನೆಟ್‌ವರ್ಕ್ ಯೋಜನೆಯೇ ಆಗಿತ್ತು. ‘ರಾಜೀವ್ ಆವಾಸ್ ಯೋಜನೆ’ಯನ್ನು ‘ಸರ್ದಾರ್ ಪಟೇಲ್ ರಾಷ್ಟ್ರೀಯ ನಗರ ವಸತಿ ಮಿಷನ್’ ಎಂದು ಮರುನಾಮಕರಣ ಮಾಡಲಾಗಿತ್ತು. ಆಗ, 2022ರ ವೇಳೆಗೆ ಎಲ್ಲರಿಗೂ ವಸತಿ ಬರಲಿದೆ ಎಂದು ಅಂದಿನ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವ ಎಂ. ವೆಂಕಯ್ಯ ನಾಯ್ಡು ಅವರ ಹೇಳಿಕೆಗೆ ಬಿಜೆಡಿ ಸಂಸದ ಪಿನಾಕಿ ಮಿಶ್ರಾ ನೇತೃತ್ವದ ಸಂಸದೀಯ ಸಮಿತಿ, ಹೆಸರನ್ನು ಬದಲಾಯಿಸುವುದರಿಂದ ಯೋಜನೆಯ ಅನುಷ್ಠಾನ ಹೇಗೆ ವೇಗ ಪಡೆಯಲು ಸಾಧ್ಯ ಎಂದು ಸರಕಾರವನ್ನು ಪ್ರಶ್ನಿಸಿತ್ತು. ಅದು ಹೆಚ್ಚಾಗಿ ವರದಿಯಾಗಲಿಲ್ಲ.
ವಾಸ್ತವವೆಂದರೆ ಯುಪಿಎಯ ಯೋಜನೆಗಳು ಅದೇ ಗುರಿಗಳನ್ನು ಹೊಂದಿದ್ದರೂ ಅವುಗಳ ಹೆಸರು ನೆನಪಿನಲ್ಲಿ ಉಳಿಯುವಂಥದ್ದಾಗಿರಲಿಲ್ಲ. ಮೋದಿಯವರ ಯೋಜನೆಗಳು ಆಕರ್ಷಕ ಹೆಸರುಗಳನ್ನು ಹೊಂದಿವೆ. ಏಕೆಂದರೆ ಅವರು ವೈಯಕ್ತಿಕವಾಗಿ ಅಂಥ ಹೆಸರುಗಳನ್ನು ಚಲಾವಣೆಗೆ ತರುವ ಬಗ್ಗೆ ತುಂಬಾ ಗಮನ ಕೊಡುತ್ತಾರೆ.
ಶ್ರೀಮಂತರನ್ನು ಗುರಿಯಾಗಿಸಿಕೊಂಡ ಮೋದಿಯವರ ಯೋಜನೆಗಳಾದ ‘ಡಿಜಿಟಲ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಸ್ಟಾರ್ಟ್-ಅಪ್ ಇಂಡಿಯಾ’, ‘ಮೇಕ್ ಇನ್ ಇಂಡಿಯಾ’ ಎಂಬ ಇಂಗ್ಲಿಷ್ ಹೆಸರುಗಳಿವೆ ಎಂಬುದನ್ನು ಗಮನಿಸಬಹುದು.
ಬಡವರಿಗಾಗಿ ಇರುವ ಯೋಜನೆಗಳು ಹಿಂದಿ ಹೆಸರುಗಳನ್ನು ಹೊಂದಿವೆ. ಉದಾಹರಣೆಗೆ ‘ಉಜ್ವಲ ಯೋಜನೆ’, ‘ಸ್ವಚ್ಛ ಭಾರತ ಅಭಿಯಾನ’, ‘ಬೇಟಿ ಪಢಾವೋ ಬೇಟಿ ಬಚಾವೋ’, ‘ಜನ ಧನ್’, ‘ಗರೀಬ್ ಕಲ್ಯಾಣ್’, ‘ಪಿಎಂ ಕಿಸಾನ್’, ‘ಮುದ್ರಾ ಯೋಜನೆ’ ಹೀಗೆ. ಇವು ಬ್ರ್ಯಾಂಡಿಂಗ್ ಆದ್ಯತೆಯನ್ನು ಪ್ರತಿಬಿಂಬಿಸುತ್ತವೆ.
ಹೀಗೆ ಹೆಸರು ಬದಲಿಸಿ ಯೋಜನೆ ಘೋಷಿಸಿದರೂ ಅನುಷ್ಠಾನಕ್ಕೆ ಹೆಚ್ಚು ಶ್ರಮ ವಹಿಸಲಿಲ್ಲ. ಭಾರತದಲ್ಲಿ ಉತ್ಪಾದನೆ ಕುಸಿದಿದ್ದರಿಂದ ‘ಮೇಕ್ ಇನ್ ಇಂಡಿಯಾ’ದ ಗುರಿಯನ್ನು 2022ರಿಂದ 2025ಕ್ಕೆ ವಿಸ್ತರಿಸಲಾಯಿತು. 2014ರಲ್ಲಿನ ಶೇ.16ರಿಂದ 2022ರಲ್ಲಿ ಶೇ.25ಕ್ಕೆ ಏರುವ ಬದಲು ಶೇ.13ಕ್ಕೆ ಇಳಿಯಿತು. ಮತ್ತು 2023ರಲ್ಲಿಯೂ ಶೇ.13ರಲ್ಲಿಯೇ ಉಳಿಯಿತು. ಆದರೆ ಮೇಕ್ ಇನ್ ಇಂಡಿಯಾ ಲೋಗೋ ಮಾತ್ರ ಆಕರ್ಷಕವಾಗಿದೆ.
ಯೋಜನೆಗಳ ಹೆಸರು ಬದಲಿಸಿ ಮುಂದುವರಿಸುವುದರ ಬಗ್ಗೆ ತರೂರ್ ಒಳ್ಳೆಯ ರೀತಿಯಲ್ಲಿಯೇ ಸಮ್ಮತಿ ವ್ಯಕ್ತಪಡಿಸಿದ್ದರು. ಅದು ನಿರಂತರತೆಯನ್ನು ಪ್ರತಿನಿಧಿಸುತ್ತದೆ ಎಂದು ತರೂರ್ ಹೇಳಿದ್ದರು. ಡಾ. ಮನಮೋಹನ್ ಸಿಂಗ್ ಮರುನಾಮಕರಣದ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ ಎಂಬುದು ಬೇರೆ. ಆದರೆ ಬಿಜೆಪಿ ನೀತಿ ಮಾತ್ರ ತರೂರ್ ಅಂದುಕೊಂಡದ್ದಕ್ಕೆ ವ್ಯತಿರಿಕ್ತವಾಗಿತ್ತು.
ಯುಪಿಎಯ ವಿಶಿಷ್ಟ ಗುರುತಿನ ಯೋಜನೆ ಆಧಾರ್ ಬಗ್ಗೆ ಅದು ದ್ವೇಷದ ಮಾತುಗಳನ್ನೇ ಆಡಿತ್ತು. 2014ರ ಪ್ರಚಾರದ ಸಮಯದಲ್ಲಿ, ಮಾರ್ಚ್ 12, 2014ರಂದು ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ್ದ ಪ್ರಕಾರ, ಆಧಾರ್ ಒಂದು ವಂಚನೆ, ಅಧಿಕಾರಕ್ಕೆ ಬಂದರೆ ಅದನ್ನು ಪರಿಶೀಲಿಸುವುದಾಗಿ ಬಿಜೆಪಿ ಹೇಳಿತ್ತು. ಆಧಾರ್ ಕ್ರಿಮಿನಲ್ ಯೋಜನೆಯಾಗಿದ್ದು, ಸಿಬಿಐ ತನಿಖೆ ನಡೆಸುವುದಾಗಿಯೂ ಅದು ಹೇಳಿತ್ತು. ದೇಶದಲ್ಲಿ ಅಕ್ರಮ ವಲಸಿಗರ ವಾಸ್ತವ್ಯವನ್ನು ಕ್ರಮಬದ್ಧಗೊಳಿಸಲು ಇದು ಅಪಾಯಕಾರಿ ಕಾರ್ಯಕ್ರಮವಾಗಿದೆ. ಅಕ್ರಮ ವಲಸಿಗರಿಗೆ ಭಾರತ ಇಷ್ಟು ಮುಕ್ತವಾಗಿದೆಯೆ? ಆಧಾರ್ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸುತ್ತದೆ ಎಂದು ಮೀನಾಕ್ಷಿ ಲೇಖಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಆಧಾರ್ ಯೋಜನೆ ರೂಪಿಸಿದ್ದ ನಂದನ್ ನಿಲೇಕಣಿ ವಿರುದ್ಧ ಪ್ರಚಾರ ಮಾಡುವಾಗ ಹೇಳಿದ್ದರು. ದಾಖಲಾದ ಜನರ ಸಂಪೂರ್ಣ ಬಯೋಮೆಟ್ರಿಕ್ ಡೇಟಾವನ್ನು ದೇಶದ ಹೊರಗೆ ಸಂಗ್ರಹಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಆಧಾರ್ ದೊಡ್ಡ ವಂಚನೆಯಾಗಿದೆ ಎಂದು ನಿಲೇಕಣಿ ಅವರ ಎದುರಾಳಿಯಾಗಿದ್ದ ಅನಂತ್ ಕುಮಾರ್ ಆರೋಪ ಮಾಡಿದ್ದರು. ಬಿಜೆಪಿ ಆಧಾರ್ ರದ್ದು ಮಾಡಲಿದೆ ಎಂದೂ ಅನಂತ್ ಕುಮಾರ್ ಹೇಳಿದ್ದರು.
ಮೋದಿ ಕೂಡ ಆಧಾರ್ ವಿರುದ್ಧ ಮಾತಾಡಿದ್ದರು. ಆಧಾರ್‌ಗೆ ವ್ಯಯಿಸಿದ ಹಣ ವ್ಯರ್ಥವಾಗಿದೆ ಎಂದಿದ್ದರು. ನರೇಗಾ ಯೋಜನೆ ಬಗ್ಗೆಯೂ ಅವರು ತಕರಾರೆತ್ತಿದ್ದರು. ಮತ್ತು ಮಾಹಿತಿ ಹಕ್ಕು ಕಾಯ್ದೆ ನಿಷ್ಪ್ರಯೋಜಕವಾಗಿದೆ ಎಂದು ಮೋದಿ ಹೇಳಿದ್ದರು.
ಆದರೆ ಆನಂತರ ಮೋದಿ ನೇತೃತ್ವದ ಬಿಜೆಪಿಯು ಆಧಾರ್ ಅನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ, ಅದನ್ನು ಎಲ್ಲಾ ಭಾರತೀಯರ ಮೇಲೆ ಬಲವಂತವಾಗಿ ಹೇರಿತು. ಹಾಗೆಯೇ ಹಿಂದಿನ ಸರಕಾರದ ಸಮಾಜ ಕಲ್ಯಾಣ ಯೋಜನೆಗಳನ್ನು ವಿಸ್ತರಿಸಿ, ಅವೆಲ್ಲವೂ ತನ್ನದೇ ಯೋಜನೆಗಳು ಎಂದು ತೋರಿಸಿಕೊಳ್ಳಲು ಹೆಸರುಗಳನ್ನೇ ಬದಲಿಸಿತು.
(ಕೃಪೆ:thewire.in)