ರಾಜ್ಯದ ಸಹಕಾರ ಸಂಘಗಳಲ್ಲಿ 5 ವರ್ಷಗಳಲ್ಲಿ 141.78 ಕೋಟಿ ರೂ. ದುರುಪಯೋಗ

Update: 2023-10-20 04:06 GMT

ಬೆಂಗಳೂರು, ಅ.19: ರಾಜ್ಯದಲ್ಲಿರುವ ಸುಮಾರು 45 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟಾರೆ 141.78 ಕೋಟಿ ರೂ. ದುರುಪಯೋಗವಾಗಿರುವುದು ಇದೀಗ ಬಹಿರಂಗವಾಗಿದೆ.

ವಿವಿಧೋದ್ದೇಶ ಸೇರಿದಂತೆ ವಿವಿಧ ಸ್ವರೂಪದ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸುವ ಖಾಸಗಿ/ಸನ್ನದು ಲೆಕ್ಕ ಪರಿಶೋಧಕರು ಹಣ ದುರುಪಯೋಗ ಪತ್ತೆ ಹಚ್ಚುವುದರಲ್ಲಿ ವಿಫಲರಾಗಿದ್ದಾರೆ. ಅದೇ ರೀತಿ ಇಲಾಖೆ ಲೆಕ್ಕ ಪರಿಶೋಧಕರೇ ಹೆಚ್ಚಿನ ಸಂಖ್ಯೆಯಲ್ಲಿ ಹಣ ದುರುಪಯೋಗ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದಾರೆ ಎಂಬುದನ್ನೂ ಸಹಕಾರ ಇಲಾಖೆಯೇ ಬಹಿರಂಗಪಡಿಸಿದೆ.

ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆಯನ್ನು ಸಹಕಾರ ಇಲಾಖೆಯಲ್ಲಿಯೇ ಮುಂದುವರಿಸುವ ಕುರಿತು ಇಲಾಖೆಯು 2023ರ ಸೆ.21ರಂದು ಹೊರಡಿಸಿರುವ ನಡವಳಿಗಳಲ್ಲಿ ಈ ಎಲ್ಲಾ ಅಂಶವು ಪ್ರಸ್ತಾಪಿತವಾಗಿದೆ. ಇದರ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಇಲಾಖೆ ಲೆಕ್ಕ ಪರಿಶೋಧಕರಿಗಿಂತಲೂ ಖಾಸಗಿ ಸನ್ನದು ಲೆಕ್ಕ ಪರಿಶೋಧಕರೇ ಹೆಚ್ಚಿನ ಸಂಖ್ಯೆಯಲ್ಲಿ ಲೆಕ್ಕ ಪರಿಶೋಧನೆ ನಡೆಸಿದ್ದಾರೆ. ಕಳೆದ 5 ವರ್ಷಗಳಲ್ಲಿ 82,444 ಖಾಸಗಿ ಸನ್ನದು ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನೆ ನಡೆಸಿದ್ದರೆ 66,159 ಮಂದಿ ಇಲಾಖೆ ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನೆ ನಡೆಸಿದ್ದಾರೆ. ಆದರೂ ಕಳೆದ 5 ವರ್ಷಗಳಲ್ಲಿ ಇನ್ನು 76,156 ಸಹಕಾರ ಸಂಘಗಳಲ್ಲಿ ಲೆಕ್ಕ ಪರಿಶೋಧನೆಗೆ ಬಾಕಿ ಉಳಿದಿವೆ.

ಖಾಸಗಿ ಸನ್ನದು ಲೆಕ್ಕ ಪರಿಶೋಧಕರು ಸಂಘಗಳಲ್ಲಿ ಜರುಗಿರುವ ಅವ್ಯವಹಾರ/ದುರುಪಯೋಗ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು, ಸಾರ್ವಜನಿಕರು ನೂರಾರು ಕೋಟಿ ರೂ.ಗಳು ಉಳಿತಾಯ, ಬಂಡವಾಳ (ಹೂಡಿಕೆ)ಗಳನ್ನು ಕಳೆದುಕೊಂಡಿದ್ದಾರೆ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ಗುರು ಸಾರ್ವಭೌಮ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ, ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಗಳು ಉದಾಹರಣೆಗಳಿವೆ ಎಂದು ಸಹಕಾರ ಇಲಾಖೆಯು ನಡವಳಿಯಲ್ಲಿ ವಿವರಿಸಿದೆ.

ಅಲ್ಲದೆ ಇಲಾಖೆಯ ಲೆಕ್ಕ ಪರಿಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಲೆಕ್ಕ ಪರಿಶೋಧನೆ ನಿರ್ವಹಿಸಿದ್ದಲ್ಲಿ ಸರಕಾರಕ್ಕೆ ಬರುವ ಆದಾಯವೂ ಗಣನೀಯವಾಗಿ ಹೆಚ್ಚಲಿದೆ ಎಂದೂ ಇಲಾಖೆಯು ಹೇಳಿದೆ.

ದೋಷಪೂರ್ಣ ಲೆಕ್ಕ ಪರಿಶೋಧನೆ ಕೈಗೊಂಡ ಲೆಕ್ಕ ಪರಿಶೋಧಕರನ್ನು, ಲೆಕ್ಕ ಪರಿಶೋಧನಾ ಸಂಸ್ಥೆಗಳನ್ನು ಪ್ಯಾನಲ್‌ನಿಂದ ಕೈ ಬಿಡಬೇಕು. ಗಂಭೀರ ಪ್ರಕರಣಗಳಲ್ಲಿ ಅಂತಹ ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನಾ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಂತಹ ಪ್ರಕರಣಗಳಲ್ಲಿ ಪತ್ತೆಯಾದ ಹಣ ದುರುಪಯೋಗದ ಮಾಹಿತಿಯೊಂದಿಗೆ ತೊಂದರೆಗೊಳಗಾದ ಸಾರ್ವ ಜನಿಕರಿಗೆ ನ್ಯಾಯ ಒದಗಿಸುವುದು ಇಲಾಖೆಯ ಮುಖ್ಯ ಕರ್ತವ್ಯವಾಗಿದೆ ಎಂದೂ ವಿವರಿಸಲಾಗಿದೆ.

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಶ್ರೀ ಗುರು ಸಾರ್ವ ಭೌಮ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯಲ್ಲಿ 2014-15ರಿಂದ 2018-19ರವರೆಗೆ ಒಟ್ಟು 2,692.13 ಕೋಟಿ ರೂ. ದುರುಪಯೋಗವಾಗಿದೆ ಎಂದು ಮರು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿತ್ತು.

ದುರುಪಯೋಗ

2018-19ರಲ್ಲಿ 60 ಪ್ರಕರಣಗಳಲ್ಲಿ 31.27 ಕೋಟಿ ರೂ., 2019-20ರಲ್ಲಿ 44 ಪ್ರಕರಣಗಳಲ್ಲಿ 23.52 ಕೋಟಿ ರೂ., 2020-21ರಲ್ಲಿ 58 ಪ್ರಕರಣಗಳಲ್ಲಿ 18.08 ಕೋಟಿ ರೂ., 2021-22ರಲ್ಲಿ 65 ಪ್ರಕರಣಗಳಲ್ಲಿ 36.34 ಕೋಟಿ ರೂ., 2022-23ರಲ್ಲಿ 63 ಪ್ರಕರಣಗಳಲ್ಲಿ 32.55 ಕೋಟಿ ರೂ. ಸೇರಿ ಒಟ್ಟಾರೆ 141.78 ಕೋಟಿ ರೂ. ದುರುಪಯೋಗವಾಗಿರುವುದು ನಡವಳಿಯಿಂದ ತಿಳಿದು ಬಂದಿದೆ.

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನ 2014-15ರಿಂದ 2018-19ನೇ ಸಾಲಿನವರೆಗಿನ ಮರು ಲೆಕ್ಕ ಪರಿಶೋಧನೆ ವರದಿ ಪೂರ್ಣಗೊಂಡಿದ್ದು ವರದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಮರುಲೆಕ್ಕಪರಿಶೋಧನೆಯಿಂದ 2,574.13 ಕೋಟಿ ರೂ. ದುರುಪಯೋಗದ ಮೊತ್ತವನ್ನು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ಸರಕಾರಕ್ಕೆ ಹಾಗೂ ಸಹಕಾರ ಸಂಘಗಳ ನಿಬಂಧಕರಿಗೆ ವರದಿ ಮಾಡ

ಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿತ್ತು.

ಅದೇ ರೀತಿ ಶ್ರೀ ಗುರುಸಾರ್ವಭೌಮ ಕ್ರೆಡಿಟ್ ಸೌಹಾರ್ದ ಸಹಕಾರಿಯ 2015-16 ಮತ್ತು 2016-17ನೇ ಸಾಲಿನ ಮರುಲೆಕ್ಕಪರಿಶೋಧನೆ ವರದಿ ಪೂರ್ಣಗೊಂಡು ವರದಿ ಬಿಡುಗಡೆಯಾಗಿದೆ. 2017-18ನೇ ಸಾಲಿನ ಮರುಲೆಕ್ಕಪರಿಶೋಧನೆ ಪೂರ್ಣಗೊಂಡಿದ್ದು ವರದಿ ಬಿಡುಗಡೆಗೆ ಬಾಕಿ ಇದೆ. 2015-16ರಿಂದ 2017-18ನೇ ಸಾಲುಗಳ ಮರುಲೆಕ್ಕಪರಿಶೋಧನೆಯಿಂದ 118 ಕೋಟಿ ರೂ. ದುರುಪಯೋಗ ಪತ್ತೆಯಾಗಿದೆ ಎಂದು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2018-19ನೇ ಸಾಲಿನ ಮರುಲೆಕ್ಕಪರಿಶೋಧನೆ ವರದಿಯನ್ನು ಜುಲೈ 2022ರೊಳಗೆ ಪೂರ್ಣಗೊಳಿಸಿ ವರದಿ ಬಿಡುಗಡೆಗೊಳಿಸಲು ಸನ್ನದು ಲೆಕ್ಕಪರಿಶೋಧಕರಿಗೆ ಸೂಚಿಸಿದೆ. 2015-16 ಮತ್ತು 2016-17ನೇ ಸಾಲಿನ ವಿಧಿವಿಜ್ಞಾನ ಲೆಕ್ಕಪರಿಶೋಧನೆ ವರದಿ ಪೂರ್ಣಗೊಂಡು ವರದಿ ಬಿಡುಗಡೆಯಾಗಿದೆ. 2017-18, 2018-19, 2019-20ನೇ ಸಾಲಿನ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಪ್ರಗತಿಯಲ್ಲಿದೆ ಎಂಬುದು ಅನುಪಾಲನಾ ವರದಿಯಲ್ಲಿ ಮಾಹಿತಿ ಒದಗಿಸಿದೆ.

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 2014-15ನೇ ಸಾಲಿಗೆ 871 ಕೋಟಿ ರೂ. ನಷ್ಟ ಮತ್ತು 807 ಕೋಟಿ ರೂ. ದುರುಪಯೋಗವಾಗಿದೆ. 2018-19ರವರೆಗಿನ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸಿದ್ದ ಸನ್ನದು ಲೆಕ್ಕಪರಿಶೋಧಕರು 2020ರ ಮಾರ್ಚ್ ಅಂತ್ಯಕ್ಕೆ ಒಟ್ಟು 1,923 ಕೋಟಿ ರೂ. ನಷ್ಟ ಹೊಂದಿದೆ ಎಂದು ವರದಿ ಸಲ್ಲಿಸಿದ್ದರು. ಎವರ್ ಗ್ರೀನ್ ಅಕೌಂಟ್ಸ್ ರಚಿಸಿ ವಾಸ್ತವಿಕವಾಗಿ ಸಾಲಗಾರರಿಗೆ ಸಾಲ ನೀಡಲಾಗಿದೆ ಎಂದು ದಾಖಲೆಯನ್ನು ಸೃಷ್ಟಿಸಲಾಗಿದೆ.

ಸಾಲ ನೀಡುವಿಕೆಯಲ್ಲಿ ದೊಡ್ಡ ಪ್ರಮಾಣದ ವಂಚನೆ ಕಂಡು ಬರುತ್ತಿದೆ. ಪ್ರತೀ ಖಾತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದ್ದು, ಸಾಲ ಮಂಜೂರಾತಿ, ಸಾಲದ ಹಣ ವರ್ಗಾವಣೆ ಆಯಾ ಸಾಲಗಾರರಿಗೆ ಆಗದೇ ಬೇರೆ ಸಾಲಗಳಿಗೆ ವರ್ಗಾವಣೆ ಮಾಡಿ ಹೊಂದಾಣಿಕೆ ಮಾಡಿರುವುದು ಸಾಬೀತಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ 2022ರ ಫೆಬ್ರವರಿ 9ರಂದು ನಡೆದಿದ್ದ ಸಭೆಯಲ್ಲಿ ಸಹಕಾರ ನಿಬಂಧಕರು ವಿವರಣಾತ್ಮಕವಾದ ಟಿಪ್ಪಣಿ ಸಲ್ಲಿಸಿದ್ದರು. ಅಲ್ಲದೆ ಕಳೆದ 20 ವರ್ಷಗಳಿಂದಲೂ ಈ ಬ್ಯಾಂಕ್‌ನಲ್ಲಿ ಹಣ ದುರುಪಯೋಗವಾಗುತ್ತಿದೆ ಎಂಬ ಕುರಿತು 2022ರ ಫೆ.14ರಂದು ‘ದಿ ಫೈಲ್’ ವರದಿ ಪ್ರಕಟಿಸಿತ್ತು.

ಸಂಘದ ಅವ್ಯವಹಾರಕ್ಕೆ ಕಾರಣರಾಗಿರುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ 2022ರ ಜುಲೈ 20ರಂದು ಪತ್ರ ಬರೆದಿದ್ದನ್ನು ಸ್ಮರಿಸಬಹುದು. ಈ ಕುರಿತು ಜುಲೈ 22ರಂದು ‘ದಿ ಫೈಲ್’ ವರದಿ ಪ್ರಕಟಿಸಿತ್ತು. 2015-16 ಮತ್ತು 2016-17ನೇ ಸಾಲಿನ ಮರು ಲೆಕ್ಕ ಪರಿಶೋಧನೆ ವರದಿಯನ್ನು ಸಲ್ಲಿಸಿರುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರು ಅಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದನ್ನು ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News