"ದೇಶವನ್ನು ಆರು ಮಂದಿ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಭಾಷಣದ ಪೂರ್ಣಪಾಠ ಇಲ್ಲಿದೆ...
ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತಾಡಿದ್ದಾರೆ. ನಿರೀಕ್ಷೆಯಂತೆ ಈ ಮೊದಲಿನ ಭಾಷಣದಂತೆ ಈ ಭಾಷಣವೂ ದೊಡ್ಡ ಚರ್ಚೆಗೆ ಕಾರಣವಾಗಿದೆ.
ರಾಹುಲ್ ಗಾಂಧಿ ಭಾಷಣದ ಪೂರ್ಣಪಾಠ ಇಲ್ಲಿದೆ...
ಈ ಹಿಂದೆ ಸಂಸತ್ತಿನಲ್ಲಿ ಮಾತನಾಡುತ್ತ ಬಳಸಿದ್ದ ಶಿವನ ಕೊರಳಲ್ಲಿಯ ಹಾವಿನ ರೂಪಕದ ಪ್ರಸ್ತಾಪದೊಂದಿಗೇ ರಾಹುಲ್ ಗಾಂಧಿ ಬಜೆಟ್ ಮೇಲಿನ ತಮ್ಮ ಭಾಷಣ ಆರಂಭಿಸಿದರು. ಪ್ರಾಚೀನ ಕಾಲದಿಂದಲೂ ಹೇಗೆ ಅಹಿಂಸೆ ಎನ್ನುವುದು ಧರ್ಮದೊಳಗೆ ಹಾಸುಹೊಕ್ಕಾಗಿದೆ ಮತ್ತು ಹೆದರಬೇಡ, ಹೆದರಿಸಬೇಡ ಎಂಬ ನೀತಿ ಅಡಕವಾಗಿದೆ ಎಂಬುದನ್ನು ಅವರು ಮತ್ತೊಮ್ಮೆ ನೆನಪಿಸಿದರು.
ಅಭಯ ಮುದ್ರೆ ಕೂಡ ಅಹಿಂಸೆಯನ್ನೇ ಅಪೇಕ್ಷಿಸುತ್ತದೆ, ದೇಶದಲ್ಲಿ ಈಗ ಭಯದ ವಾತಾವರಣವಿದೆ ಎಂದರು. ಬಿಜೆಪಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶ ಕೊಟ್ಟಿದೆ ಎಂದು ಇದೇ ವೇಳೆ ರಾಹುಲ್ ಲೇವಡಿ ಮಾಡಿದರು.
ಯಾಕೆ ದೇಶದ ತುಂಬ ಭಯ ಹರಡುತ್ತಿದೆ? ಯಾಕೆ ಬಿಜೆಪಿಯಲ್ಲಿರುವ ಮಿತ್ರರು, ಮಂತ್ರಿಗಳು ಹೆದರುತ್ತಿದ್ದಾರೆ? ಯಾಕೆ ದೇಶದ ರೈತರು ಹೆದರುವಂತಾಗಿದೆ? ಯಾಕೆ ಈ ದೇಶದ ಕಾರ್ಮಿಕರು, ಯುವಕರು ಹೆದರುತ್ತಿದ್ದಾರೆ? ಇದರ ಬಗ್ಗೆ ಯೋಚಿಸುತ್ತ ಒಂದು ವಿಚಾರ ಹೇಳಬೇಕಿದೆ. ಸಾವಿರ ವರ್ಷಗಳ ಹಿಂದೆ ಹರ್ಯಾಣದಲ್ಲಿ ಕುರುಕ್ಷೇತ್ರದಲ್ಲಿ ಅಭಿಮನ್ಯು ಎಂಬ ಯುವಕನನ್ನು ಆರು ಮಂದಿ ಭಯ, ಹಿಂಸೆ ಎಲ್ಲವೂ ಇರುವ ಚಕ್ರವ್ಯೂಹದೊಳಗೆ ಹೊಡೆದುಹಾಕಿದರು. ಚಕ್ರವ್ಯೂಹಕ್ಕೆ ಪದ್ಮವ್ಯೂಹ ಎಂತಲೂ ಕರೆಯುತ್ತಾರೆ. ಅದು ಕಮಲದ ಆಕಾರದಲ್ಲಿರುತ್ತದೆ. ಈಗ ಅಂಥದೇ ಹೊಸ ಚಕ್ರವ್ಯೂಹವಿದೆ. ಅದರ ಸಂಕೇತ ಕಮಲವನ್ನು ಪ್ರಧಾನಿ ತಮ್ಮ ಎದೆಯ ಮೇಲೆ ಧರಿಸಿಕೊಂಡಿದ್ದಾರೆ.
ಅವತ್ತು ಅಭಿಮನ್ಯುವಿನ ವಿಚಾರದಲ್ಲಿ ಏನು ಆಯಿತೊ ಅದು ಇವತ್ತು ಈ ದೇಶದ ಯುವಕರ ವಿಚಾರದಲ್ಲಿ ಆಗುತ್ತಿದೆ. ಈ ದೇಶದ ರೈತರ ವಿಚಾರದಲ್ಲಿ ಆಗುತ್ತಿದೆ. ನಮ್ಮ ತಾಯಿ ಮತ್ತು ಸಹೋದರಿಯರ ವಿಚಾರದಲ್ಲಿ ಆಗುತ್ತಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ವಿಚಾರದಲ್ಲಿ ಆಗುತ್ತಿದೆ. ಅಭಿಮನ್ಯುವನ್ನು ಕೊಂದ ಆರು ಮಂದಿಯೆಂದರೆ, ದ್ರೋಣ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ. ಇವತ್ತು ಕೂಡ ಚಕ್ರವ್ಯೂಹದ ಎಲ್ಲ ನಿಯಂತ್ರಣವಿರುವ ಕೇಂದ್ರ ಭಾಗದಲ್ಲಿ ಆರು ಮಂದಿ ಇದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗ್ವತ್, ಅಜಿತ್ ಧೋವಲ್, ಅಂಬಾನಿ ಮತ್ತು ಅದಾನಿ.
ಈ ಸಂದರ್ಭದಲ್ಲಿ ಸ್ಪೀಕರ್ ಆಕ್ಷೇಪವೆತ್ತುತ್ತಾರೆ. ಸದನಕ್ಕೆ ಸೇರದವರ ಹೆಸರು ತೆಗೆಯಕೂಡದು ಎಂದಾಗ, ರಾಹುಲ್ ಆ ಮೂವರ ಹೆಸರು ಹಿಂತೆಗೆದುಕೊಳ್ಳುವುದಾಗಿ ಹೇಳುತ್ತಾರೆ.
ಚಕ್ರವ್ಯೂಹ ಇಂದು ಭಾರತವನ್ನು ಹಿಡಿದಿಟ್ಟಿದೆ. ಇದರ ಹಿಂದಿರುವ ಶಕ್ತಿಗಳೆಂದರೆ, ಒಂದು, ಏಕಸ್ವಾಮ್ಯ ಹೂಡಿಕೆ. ಇಬ್ಬರು ಮಾತ್ರ ಇಡೀ ದೇಶದ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಡಲಾಗಿದೆ. ಅಂದರೆ, ಆರ್ಥಿಕ ಅಧಿಕಾರದ ಮೇಲಿನ ಏಕೀಕೃತ ಹಿಡಿತ ಈ ಚಕ್ರವ್ಯೂಹದ ಒಂದು ಅಂಶ. ಎರಡನೆಯದು, ಸಿಬಿಐ, ಈಡಿ, ಐಟಿಯಂಥ ಈ ದೇಶದ ಸಂಸ್ಥೆಗಳು, ಮೂರನೆಯವರು ರಾಜಕಾರಣಿಗಳು.
ಚಕ್ರವ್ಯೂಹದ ಈ ಶಕ್ತಿಗಳನ್ನು ಬಜೆಟ್ ದುರ್ಬಲಗೊಳಿಸಬಹುದು ಎಂಬುದು ನನ್ನ ನಿರೀಕ್ಷೆಯಾಗಿತ್ತು. ರೈತರಿಗೆ, ಯುವಕರಿಗೆ, ಕಾರ್ಮಿಕರಿಗೆ, ಸಣ್ಣ ಉದ್ದಿಮೆದಾರರಿಗೆ ಬಜೆಟ್ ನೆರವಾಗಬೇಕಿತ್ತು. ಆದರೆ ಅದು ಈ ಚಕ್ರವ್ಯೂಹದ ಚೌಕಟ್ಟನ್ನೇ ಬಲಪಡಿಸುತ್ತಿದೆ. ಉದ್ಯಮದ ಏಕಸ್ವಾಮ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವ ರಾಜಕೀಯ ಏಕಸ್ವಾಮ್ಯ ಮತ್ತು ಏಜನ್ಸಿಗಳು ಈ ಚೌಕಟ್ಟುಗಳಾಗಿವೆ.
ಸಣ್ಣ ಉದ್ಯಮದವರನ್ನು ಮುಗಿಸಿಬಿಡುವ ತೆರಿಗೆ ಭಯೋತ್ಪಾದಕತೆ ತಡೆಗೆ ಬಜೆಟ್ ನಲ್ಲಿ ಏನೂ ಕ್ರಮ ಕೈಗೊಂಡಿಲ್ಲ. ಕೋವಿಡ್ ಕಾಲದಲ್ಲಿ ಸಣ್ಣ ಉದ್ಯಮಗಳನ್ನು ನಿರ್ಲಕ್ಷಿಸಿ, ದೊಡ್ಡ ಉದ್ಯಮಗಳನ್ನು ಬೆಳೆಸಲಾಯಿತು. ಹೀಗಾಗಿ ಯುವಕರಿಗೆ ಇಂದು ಕೆಲಸಗಳು ಸಿಗುತ್ತಿಲ್ಲ. ಬಜೆಟ್ ನಲ್ಲಿ ಇಂಟರ್ನ್ಶಿಪ್ ಪ್ರಸ್ತಾಪವಿದೆ. ಆದರೆ ಇದು 500 ದೊಡ್ಡ ಕಂಪನಿಗಳಲ್ಲಿ ಮಾತ್ರ ನಡೆಯುತ್ತದೆ ಎನ್ನಲಾಗಿದೆ. ಇದು, ಗಾಯ ಮಾಡಿ, ಬ್ಯಾಂಡೇಜ್ ಹಾಕಲು ಯತ್ನಿಸಿದ ಹಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಇವತ್ತಿನ ಮುಖ್ಯ ವಿಷಯ. ನಿರುದ್ಯೋಗ ಒಂದೆಡೆ ಇರುವಾಗ, ಪ್ರಶ್ನೆಪತ್ರಿಕೆ ಸೋರಿಕೆಯೂ ಆಗುತ್ತಿದೆ. ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಚಕ್ರವ್ಯೂಹ, ಇನ್ನೊಂದೆಡೆ ನಿರುದ್ಯೋಗದ ಚಕ್ರವ್ಯೂಹವಿದೆ. 10 ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಬಜೆಟ್ ನಲ್ಲಿ ಮಾತೇ ಇಲ್ಲ. ಬದಲಾಗಿ, 20 ವರ್ಷಗಳಲ್ಲೇ ಶಿಕ್ಷಣಕ್ಕೆ ಅತಿ ಕಡಿಮೆ ಅಂದರೆ ಶೇ.2.5 ಹಂಚಿಕೆ ಮಾಡಲಾಗಿದೆ.
ಇನ್ನು ಸೇನೆಯ ಯೋಧರನ್ನು ಅಗ್ನವೀರ್ ಎಂಬ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಈ ಬಜೆಟ್ ನಲ್ಲಿ ಅಗ್ನಿವೀರ್ ಪಿಂಚಣಿಗಾಗಿ ಒಂದೇ ಒಂದು ರೂಪಾಯಿ ಕೂಡ ಇಲ್ಲ. ದೇಶಭಕ್ತರು ಎಂದು ಕರೆದುಕೊಳ್ಳುತ್ತೀರಿ. ಆದರೆ ಅಗ್ನೀವೀರ್ ಗಳಿಗೆ ಹಣ ಕೊಡುವ ವಿಚಾರ ಬಂದಾಗ ಒಂದು ರೂಪಾಯಿಯೂ ಇಲ್ಲ.
ಇನ್ನು ರೈತರು. ನೀವು ಮಾಡಿದ ಮೂರು ಕಾನೂನುಗಳ ಚಕ್ರವ್ಯೂಹದಿಂದ ಬಿಡಿಸಿಕೊಳ್ಳಲು ಅವರು ಕೇಳಿದ್ದು ಒಂದೇ ಒಂದು. ಎಂಎಸ್ಪಿಗೆ ಕಾನೂನು ಖಾತ್ರಿ ಕೊಡಿ ಎಂಬುದೊಂದನ್ನೇ ಅವರು ಕೇಳಿರುವುದು. ಅವರ ದಾರಿಯನ್ನು ಬಂದ್ ಮಾಡಿರುವ ನೀವು, ಅವರ ಜೊತೆ ಮಾತಾಡುವುದಕ್ಕೂ ತಯಾರಿಲ್ಲ. ನನ್ನನ್ನು ಕಾಣಲು ಬಂದರೂ ಅವರನ್ನು ತಡೆಯಲಾಯಿತು.
ಈ ಹಂತದಲ್ಲಿ ಮತ್ತೆ ಸ್ಪೀಕರ್ ಮಧ್ಯಪ್ರವೇಶ ಮಾಡಿದರು.
ಬಜೆಟ್ ನಲ್ಲಿ ಎಂಎಸ್ಪಿ ವಿಚಾರ ಬಂದಿದ್ದರೆ, ರೈತರು ನಿಮ್ಮ ಚಕ್ರವ್ಯೂಹದಿಂದ ಪಾರಾಗಬಹುದಿತ್ತು. ಸರ್ಕಾರ ಅದನ್ನು ಮಾಡದಿದ್ದರೆ ನಾವು ಮಾಡುತ್ತೇವೆ ಎಂದು ರಾಹುಲ್ ಹೇಳಿದರು.
ಮಧ್ಯಮವರ್ಗದವರು ಈ ಬಜೆಟ್ ಗೂ ಮೊದಲು ಬಹುಶಃ ಪ್ರಧಾನಿಯನ್ನು ಬೆಂಬಲಿಸುತ್ತಿದ್ದರು. ಕೋವಿಡ್ ಕಾಲದಲ್ಲಿ ಚಪ್ಪಾಳೆ ತಟ್ಟಲು ಪ್ರಧಾನಿ ಹೇಳಿದರೆ ಅವರೆಲ್ಲ ಸೇರಿ ಚಪ್ಪಾಳೆ ತಟ್ಟಿದ್ದರು. ಆಮೇಲೆ ಮೊಬೈಲ್ ಫೋನ್ ಫ್ಲ್ಯಾಷ್ ಲೈಟ್ ಆನ್ ಮಾಡಲು ಹೇಳಲಾಯಿತು. ಅವರು ಅದನ್ನೂ ಮಾಡಿದರು.
ಆದರೆ ಅದೇ ಮಧ್ಯಮ ವರ್ಗದವರಿಗೆ ಈ ಬಜೆಟ್ ನಲ್ಲಿ ಸರಿಯಾದ ಏಟು ಕೊಟ್ಟಿದ್ದೀರಿ. ಇಂಡಕ್ಸೇಷನ್ ಮತ್ತು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇವೆರಡರ ಮೂಲಕ ಮಧ್ಯಮವರ್ಗದವರ ಬೆನ್ನಲ್ಲೂ ಎದೆಗೂ ಇರಿದಂತಾಗಿದೆ. ಇದು ಅತ್ಯಂತ ದುಃಖದ ವಿಚಾರ.
ಇದರಿಂದ ಇಂಡಿಯಾ ಮೈತ್ರಿಗೆ ಲಾಭವಾಗಲಿದೆ. ಮಧ್ಯಮ ವರ್ಗದವರು ನಿಮ್ಮನ್ನು ಬಿಟ್ಟು ನಮ್ಮ ಕಡೆ ಬರಲಿದ್ದಾರೆ. ಎಲ್ಲೆಲ್ಲಿ ಅವಕಾಶ ಸಿಗುತ್ತದೊ ಅಲ್ಲೆಲ್ಲ ನೀವು ಚಕ್ರವ್ಯೂಹ ನಿರ್ಮಿಸಿಬಿಡುತ್ತೀರಿ. ನಾವು ಅದನ್ನು ಭೇದಿಸುವ ಕೆಲಸ ಮಾಡುತ್ತೇವೆ. ದೇಶದ ಬಡವರು ಕನಸನ್ನೇ ಕಾಣುವ ಹಾಗಿಲ್ಲ. ಅಂಬಾನಿ, ಅದಾನಿಗಳು ಮಾತ್ರ ಎಂದು ರಾಹುಲ್ ಹೇಳುತ್ತಿದ್ದಂತೆ ಮತ್ತೆ ಮಧ್ಯಪ್ರವೇಶಿಸಿದ ಸ್ಪೀಕರ್, ಅವರ ಹೆಸರನ್ನು ಹೇಳುವಂತಿಲ್ಲ ಎಂದು ತಕರಾರು ತೆಗೆದರು.
ಹೆಸರು ಹೇಳಬಾರದು ಎಂದರೆ 3 ಮತ್ತು 4 ಎಂದು ನಂಬರ್ ಮೂಲಕ ಸೂಚಿಸಬಹುದೇ? ಹೇಗೆ ಹೇಳಬಹುದು ಎಂದು ರಾಹುಲ್ ಪ್ರಶ್ನಿಸಿದರು.
ಆದರೆ ಸ್ಪೀಕರ್ ಅದಕ್ಕೆ ಉತ್ತರಿಸದೆ, ಸದನದ ಮರ್ಯಾದೆ ಕಾಪಾಡಿ ಎಂದರು.
ಪ್ರಧಾನಿ, ಗೃಹಮಂತ್ರಿ ಮಾತಾಡುವಾಗ ನೀವು ಈ ಮಾತು ಹೇಳುವುದಿಲ್ಲ, ನಾವು ಮಾತಾಡುವಾಗ ಮಾತ್ರ ಹೇಳುತ್ತೀರಿ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪವೆತ್ತಿದರು. ಮಾತು ಮುಂದುವರಿಸಿದ ರಾಹುಲ್, ದೇಶದ ಉದ್ಯಮವನ್ನು ನಿಯಂತ್ರಿಸುವ ಇಬ್ಬರಿದ್ದಾರೆ ಎಂದು ಹೇಳಿದರು.
ಅವರ ಬಳಿ ಏರ್ಪೋರ್ಟ್, ಟೆಲಿಕಾಂ ವ್ಯವಸ್ಥೆ, ಬಂದರು ಇವೆ, ಈಗ ರೈಲ್ವೆಯನ್ನೂ ತೆಗೆದುಕೊಳ್ಳುತ್ತಿದ್ದಾರೆ. ಅವರದೇ ಏಕಸ್ವಾಮ್ಯವಿದೆ. ಅವರ ಬಗ್ಗೆ ಹೇಳಲೇಬೇಕಾಗುತ್ತದೆ. ಹಾಗಿರುವಾಗ ಹೇಗೆ ಅವರ ಬಗ್ಗೆ ಇಲ್ಲಿ ಸೂಚಿಸುವುದು? ಎಂದು ರಾಹುಲ್ ಮತ್ತೆ ಪ್ರಶ್ನಿಸಿದರು. ಹೆಸರು ತೆಗೆದುಕೊಳ್ಳಬಾರದು ಎಂದರೆ ಅದಕ್ಕೊಂದು ವ್ಯವಸ್ಥೆ ಮಾಡಿಕೊಡಿ ಎಂದು ಸ್ಪೀಕರ್ ಬಳಿ ಕೇಳಿದರು.
ಈ ಮಾತನ್ನು ಸ್ಪೀಕರ್ ಗೆ ಸವಾಲು ಹಾಕುವ ಮೂಲಕ ಸದನದ ನಿಯಮ ಮುರಿಯಲಾಯಿತು ಎಂದು ಆಡಳಿತ ಪಕ್ಷದವರು ವ್ಯಾಖ್ಯಾನಿಸಿ ಗದ್ದಲವೆಬ್ಬಿಸಿದರು.
ದೇಶದಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದ ಜನರು ಸುಮಾರು ಶೇ.73ರಷ್ಟಿದ್ಧಾರೆ. ಅವರು ದೇಶದ ಮುಖ್ಯ ಶಕ್ತಿಯಾಗಿದ್ದಾರೆ. ಆದರೆ ಅವರಿಗೆ ಉದ್ಯಮ, ಕಾರ್ಪೊರೇಟ್ ವಲಯ, ಸರ್ಕಾರ ಎಲ್ಲಿಯೂ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ ಅವರು, ಬಜೆಟ್ ಮುಂಚಿನ ಹಲ್ವಾ ತಯಾರಿ ಕಾರ್ಯಕ್ರಮದ ಫೋಟೊ ತೋರಿಸಿ, ಅಲ್ಲಿ ಒಬ್ಬನೆ ಒಬ್ಬ ಆದಿವಾಸಿ, ದಲಿತ, ಹಿಂದುಳಿದ ವ್ಯಕ್ತಿ ಕಾಣಿಸುತ್ತಿಲ್ಲ ಎಂದರು.
ನೀವು ಹಲ್ವಾ ತಿಂದಿರಿ. ಆದರೆ ದೇಶದ ಶೇ.73ರಷ್ಟು ಮಂದಿಗೆ ಹಲ್ವಾ ಸಿಗಲೇ ಇಲ್ಲ ಎಂದರು. ಬಜೆಟ್ ಸಿದ್ಧಪಡಿಸಿದವರಲ್ಲಿ ಒಬ್ಬರಷ್ಟೇ ಅಲ್ಪಸಂಖ್ಯಾತರು, ಒಬ್ಬರು ಹಿಂದುಳಿದ ವರ್ಗವದರಿದ್ದಾರೆ. ಆದರೆ ಈ ಫೋಟೊದಲ್ಲಿ ಅವರು ಕೂಡ ಇಲ್ಲ ಎಂದರು.
ಇಡೀ ದೇಶವೇ ಕೇಳುತ್ತಿರುವ ಜಾತಿ ಜನಗಣತಿ ವಿಚಾರ ಈ ಬಜೆಟ್ ನಲ್ಲಿ ಇಲ್ಲ. ದಲಿತರು, ಆದಿವಾಸಿಗಳು, ಹಿಂದುಳಿದವರು, ಬಡ ಸಾಮಾನ್ಯ ಜಾತಿಯ ಜನರು, ಅಲ್ಪಸಂಖ್ಯಾತರು ಎಲ್ಲರೂ ಜಾತಿ ಜನಗಣತಿ ಆಗಬೇಕೆಂದು ಬಯಸುತ್ತಿದ್ದಾರೆ. ಅವರೆಲ್ಲರಿಗೂ ತಮ್ಮ ಪಾಲ್ಗೊಳ್ಳುವಿಕೆ, ತಮ್ಮ ಪಾಲು ಎಷ್ಟು ಎಂಬುದು ಗೊತ್ತಾಗಬೇಕಿದೆ. ಜಾತಿಜನಗಣತಿಯ ಕಡೆಗಣನೆ ಪದ್ಯವ್ಯೂಹದ ಮಂದಿ ಮಾಡುತ್ತಿರುವ ದೊಡ್ಡ ತಪ್ಪು ಎಂದು ರಾಹುಲ್ ಹೇಳಿದರು.
ಆ ಮಂದಿಗೆ ದೇಶದ ಸ್ವರೂಪವೇ ಅರ್ಥವಾಗುತ್ತಿಲ್ಲ. ಹಿಂಸೆ, ದ್ವೇಷ ಈ ದೇಶದ ಸ್ವಭಾವವಲ್ಲ. ಚಕ್ರವ್ಯೂಹ ಹಿಂದೂಸ್ಥಾನದ ಸ್ವಭಾವವಲ್ಲ ಎಂದು ರಾಹುಲ್ ಹೇಳಿದರು.
ಪ್ರತಿ ಧರ್ಮದಲ್ಲಿಯೂ ಚಕ್ರವ್ಯೂಹದ ವಿರುದ್ಧದ ಪ್ರತಿರಚನೆ ಇರುತ್ತದೆ. ಹಿಂದೂಧರ್ಮದಲ್ಲಿ ಚಕ್ರವ್ಯೂಹದ ವಿರುದ್ಧವಿರುವುದು ಶಿವನ ಪರಿಕಲ್ಪನೆ. ಯಾರೇ ಆಗಲಿ ಅಲ್ಲಿ ಕನಸು ಕಾಣುವುದು ಸಾಧ್ಯವಿದೆ. ಯಾವ ಧರ್ಮವೂ ಯಾರನ್ನೂ ದೂರವಿಡಲು ಹೇಳುವುದಿಲ್ಲ. ಆದರೆ ಈ ಚಕ್ರವ್ಯೂಹದಲ್ಲಿ 6 ಜನ ಮಾತ್ರ ಇದ್ದಾರೆ. ನಾವು ನರೇಗಾ, ಹಸಿರು ಕ್ರಾಂತಿ, ಸ್ವಾತಂತ್ರ್ಯ, ಸಂವಿಧಾನ ಇವೆಲ್ಲವುಗಳ ಮೂಲಕ ಚಕ್ರವ್ಯೂಹವನ್ನು ಭೇದಿಸುವ ಕೆಲಸ ಮಾಡುತ್ತೇವೆ ಎಂದರು.
ಮತ್ತೊಮ್ಮೆ ಬಿಜೆಪಿ ಹಾಗು ಸಂಘ ಪರಿವಾರವನ್ನು ಕುಟುಕಿದ ರಾಹುಲ್, ಹಿಂದೂಗಳು ಎಂದು ತಮ್ಮನ್ನು ಕರೆದುಕೊಳ್ಳುತ್ತಿರುವವರು ಹಿಂದೂ ಧರ್ಮವನ್ನೇ ಅರ್ಥ ಮಾಡಿಕೊಂಡಿಲ್ಲ ಎಂದರು. ನೀವು ಮಾಡಿಟ್ಟಿರುವ ಸಣ್ಣ ಸಣ್ಣ ಚಕ್ರವ್ಯೂಹಗಳಿಂದಾಗಿ ಕೋಟಿಗಟ್ಟಲೆ ಜನರು ನಷ್ಟ ಅನುಭವಿಸಿದ್ದಾರೆ, ಭಯಭೀತರಾಗಿದ್ಧಾರೆ. ನಾವು ಆ ಚಕ್ರವ್ಯೂಹಗಳನ್ನೆಲ್ಲ ಭೇದಿಸಲಿದ್ದೇವೆ ಎಂದು ರಾಹುಲ್ ಹೇಳಿದರು. ಅದರ ಮೊದಲ ಹೆಜ್ಜೆಯೇ ಜಾತಿ ಜನಗಣತಿ ಎಂದು ಅವರು ಹೇಳಿದರು.