ಬಿಜೆಪಿ, ಅದಾನಿಗೆ ಕಂಟಕವಾಗಿರುವ ಸಂಸದೆ ವಿರುದ್ಧ ಅಪಪ್ರಚಾರ ಅಭಿಯಾನ
► ಅದಾನಿ ಹಗರಣದಿಂದ ಗಮನ ಬೇರೆಡೆ ಸೆಳೆಯುವ ಕಸರತ್ತು ? ► ನಿಷ್ಠುರ ಪ್ರಶ್ನೆ ಕೇಳುವ ದಿಟ್ಟೆಯ ಸದ್ದಡಗಿಸುವ ಹುನ್ನಾರ ?
ಸತ್ಯವನ್ನು ಎದುರಿಸಲಾರದವರು , ಸತ್ಯವನ್ನು ಹೇಳುವಂತೆ ಆಗ್ರಹಿಸಲಾದ ಪ್ರಶ್ನೆಗಳಿಗೆ ಉತ್ತರಿಸಲಾರದವರು ಈಗ ಮತ್ತೊಂದು ಹೊಸ ಆಟ ಶುರು ಮಾಡಿರುವ ಹಾಗಿದೆ. ಸಂಸತ್ತಿನಲ್ಲಿ ಬಿಜೆಪಿ ಹಾಗೂ ಅದಾನಿ ಪಾಲಿಗೆ ಕಂಟಕವಾಗಿಬಿಟ್ಟಿರುವ ಮಹುಆ ಮೊಯಿತ್ರಾ ಎಂಬ ದಿಟ್ಟೆ, ನಿರ್ಭೀತ ಸಂಸದೆ ವಿರುದ್ಧ ದಿಢೀರನೆ ಆರೋಪಗಳು ಕೇಳಿ ಬಂದಿವೆ.
ಆರೋಪಗಳನ್ನು ಹೊರಿಸಿದವರು, ಅದಕ್ಕೆ ದನಿಗೂಡಿಸುತ್ತಿರುವವರು ಎಲ್ಲರೂ ಬಿಜೆಪಿಯವರೇ ಮತ್ತು ಮತ್ತು ಬಿಜೆಪಿಯ ಮಿತ್ರ ಬಳಗದವರೇ ಆಗಿದ್ದಾರೆ. ಮಹುಆ ಮೊಯಿತ್ರಾ ಹೇಳುವ ಕಟು ಸತ್ಯಗಳಿಗೆ, ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾರದೆ ತತ್ತರಿಸುವವರು ಈಗ ಅವರ ವಿರುದ್ಧ ಆರೋಪ ಮಾಡುತ್ತಿರುವಾಗ ಇದರ ಹಿಂದೇನಾದರೂ ಸಂಚಿದೆಯೇ ಎಂಬ ಸಂಶಯ ಬಾರದೆ ಇರಲ್ಲ.
ಬಿಜೆಪಿ ಒಂದು ದಿಕ್ಕಿನಿಂದ ಆರೋಪಗಳನ್ನು ಮಾಡುತ್ತಲೇ, ಮತ್ತೊಂದು ದಿಕ್ಕಿನಿಂದ ಅದಾನಿ ಗ್ರೂಪ್ ಮತ್ತು ಮಡಿಲ ಮಾಧ್ಯಮಗಳು ದನಿಗೂಡಿಸುತ್ತಿರುವುದು ವ್ಯವಸ್ಥಿತ ಅಪಪ್ರಚಾರ ತಂತ್ರವೇ ?. ಅದಾನಿ ವಿರುದ್ಧದ ಬೃಹತ್ ಕಲ್ಲಿದ್ದಲು ಹಗರಣ ಆರೋಪ ಚರ್ಚೆಯಲ್ಲಿರುವಾಗಲೇ ಮಹುಆ ವಿರುದ್ಧ ಇಂತಹದೊಂದು ಅಭಿಯಾನ ಪ್ರಾರಂಭವಾಯಿತೇ ?
ಹೀಗೆ ಎಲ್ಲರೂ ಒಂದಾಗಿರುವ ಈ ಯುದ್ಧದಲ್ಲಿ, ಮಹುಆ ಅವರನ್ನು ಹೇಗಾದರೂ ಮಾಡಿ ಹಣಿಯುವ, ಬಲಿಪಶುವಾಗಿಸುವ ತಂತ್ರವಂತೂ ಕಾಣಿಸುತ್ತಿದೆ. ಯಾಕೆ ಹೀಗೆ? ಅದಾನಿ ಹಗರಣದಿಂದ ದೇಶದ ಗಮನ ಬೇರೆಡೆ ಸೆಳೆಯುವ ಹುನ್ನಾರವೇ ? ಅದಾನಿಯನ್ನು ಮತ್ತೂ ರಕ್ಷಿಸಿಕೊಳ್ಳುತ್ತಲೇ ಹೋಗುವ ಯತ್ನವೆ?
ಆದರೆ, ಏನೇ ಸವಾಲು ಬಂದರೂ, ಇವೆರೆಲ್ಲರ ಎದುರು ಮಹುಆ ಮೊಯಿತ್ರಾ ಮಾತ್ರ ಅಷ್ಟೇ ದಿಟ್ಟತನದಿಂದ ಹೋರಾಟಕ್ಕೆ ಅಣಿಯಾಗಿದ್ದಾರೆ.
ಸರಣಿ ಬೃಹತ್ ಹಗರಣ ಆರೋಪಗಳನ್ನು ಎದುರಿಸುತ್ತಿರುವ , ಅದಾನಿಯಂಥ ಉದ್ಯಮಿ ಮಿತ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ವಿರುದ್ಧ ಮಹುಆ ಒಬ್ಬಂಟಿಯಾಗಿಯೇ ತಿರುಗೇಟು ನೀಡುತ್ತಿದ್ದಾರೆ.
ದೇಶವೇ ನೋಡುತ್ತ ಬಂದಿರುವ ಹಾಗೆ ಸಂಸತ್ತಿನಲ್ಲಿ ಅತ್ಯಂತ ದಿಟ್ಟತನದಿಂದ ಮಾತನಾಡುವವರು, ಅಷ್ಟೇ ಕಟುವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವವರು ಟಿಎಂಸಿ ಸಂಸದೆ ಮಹುಆ ಮೊಯಿತ್ರಾ.ಅವರು ಸಂಸತ್ತಿನಲ್ಲಿ ಭಾಷಣಕ್ಕೆ ನಿಂತರೆಂದರೆ ಸಾಕು, ಬಿಜೆಪಿಯವರ ಬೆವರಿಳಿಯಲು ಪ್ರಾರಂಭವಾಗುತ್ತದೆ. ಹೇಗಾದರೂ ಆಕೆಯನ್ನು ತಡೆಯುವ, ಆಕೆಯ ಮಾತು ಕೇಳದಂತೆ ಮಾಡುವ ಪ್ರಯತ್ನಗಳು ಒಂದೊಂದಾಗಿ ನಡೆಯುತ್ತವೆ. ಮಹುಆ ಅವರ ಸಂಸತ್ತಿನ ಒಂದೊಂದು ಭಾಷಣವೂ ದೇಶಾದ್ಯಂತ ಚರ್ಚೆಯಾಗುತ್ತದೆ. ವೈರಲ್ ಆಗುತ್ತದೆ. ಅವರ ಅದ್ಭುತ ಮಾತುಗಾರಿಕೆ, ಅವರ ನೇರ ನಿಷ್ಠುರ ಪ್ರಶ್ನೆಗಳು ಬಿಜೆಪಿಗೆ ಹಾಗು ಮೋದಿ ಸರಕಾರಕ್ಕೆ ತೀವ್ರ ಮುಜುಗರ ತರುತ್ತದೆ.
ಆದರೆ ಮಹುಆ ಅವರ ಆ ಧೈರ್ಯ ಮತ್ತು ಯಾರನ್ನೂ ಕೇರ್ ಮಾಡದ ಆಕೆಯ ಪ್ರವೃತ್ತಿಯೇ ಆಕೆಗೆ ಹೆಜ್ಜೆ ಹೆಜ್ಜೆಗೂ ಅಪಾಯಗಳನ್ನು ತರುತ್ತಿದೆಯೆ? ಅವರನ್ನು ಎಂಥದೋ ಸಂಚಿನಲ್ಲಿ ಸಿಲುಕಿಸುವ ಯತ್ನಗಳು ನಡೆದಿವೆಯೆ ಎಂಬ ಅನುಮಾನ ಈಗ ಏಳುವಂತಾಗಿದೆ.
ಅದಕ್ಕೆ ಕಾರಣ, ಅವರ ವಿರುದ್ಧ ಈಗ ಕೇಳಿಬರುತ್ತಿರುವ ಆರೋಪಗಳು. ಮಹುಆ ಮೊಯಿತ್ರಾ ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ಸಂಬಂಧ ಸ್ಪೀಕರ್ಗೆ ದೂರನ್ನು ಕೂಡ ನೀಡಲಾಗಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ಗಂಭೀರ ಆರೋಪ ಮಾಡಿದ್ದು, ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಮತ್ತು ಉಡುಗೊರೆಗಳನ್ನು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಕ್ಷಣದಿಂದಲೇ ಅವರನ್ನು ಅಮಾನತಿನಲ್ಲಿಡಬೇಕು ಎಂದು ಅಗ್ರಹಿಸಿದ್ದಾರೆ. ಮೊಯಿತ್ರಾ ಅವರ ವಿರುದ್ಧ ವಕೀಲ ಅನಂತ್ ದೇಹದ್ರಾಯ್ ಎಂಬವರು ಸಿಬಿಐಗೆ ನೀಡಿರುವ ದೂರಿನಲ್ಲಿಯ ಮಾಹಿತಿಯನ್ನು ಉಲ್ಲೇಖಿಸಿ ದುಬೆ ಈ ಆರೋಪಗಳನ್ನು ಮಾಡಿದ್ದಾರೆ.
ಟಿಎಂಸಿ ಸಂಸದೆ ಮೊಯಿತ್ರಾ ಅವರು ಸದನದಲ್ಲಿ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳನ್ನು ಉದ್ಯಮಿಯೊಬ್ಬರ ಕಂಪನಿಯ ವಿಚಾರವಾಗಿಯೇ ಕೇಳಿದ್ದು, ಇದಕ್ಕಾಗಿ ಅವರು ಲಂಚದ ರೂಪದಲ್ಲಿ ಹಣ ಮತ್ತು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಮೊಯಿತ್ರಾ ಅವರು ಉದ್ಯಮಿ ಹಿರಾನಂದಾನಿಗೆ ಲೋಕಸಭೆ ವೆಬ್‌ಸೈಟ್ನ ತಮ್ಮ ಲಾಗಿನ್ ವಿವರಗಳನ್ನೂ ನೀಡಿದ್ದರು ಎಂಬ ಆರೋಪವನ್ನೂ ದುಬೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಟೀಕಿಸಲೆಂದೇ ಮಹುಆ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ ಎಂದೂ ದುಬೆ ಆರೋಪ ಮಾಡಿದ್ದಾರೆ. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಸಂವಿಧಾನ ನೀಡಿದ ಸವಲತ್ತು ಮತ್ತು ಹಕ್ಕನ್ನು ಅವರು ಉಲ್ಲಂಘಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 120A ಪ್ರಕಾರ ಇದು ಕ್ರಿಮಿನಲ್ ಅಪರಾಧ ಎಂದು ದುಬೆ ಹೇಳಿದ್ದಾರೆ.
ಇಲ್ಲಿ, ಬಿಜೆಪಿ ಮತ್ತು ಟಿಎಂಸಿ ಸಂಸದೆ ನಡುವಿನ ಸಂಘರ್ಷದ ನಡುವೆ ಇರುವ ಈ ಉದ್ಯಮಿ ಹಿರಾನಂದಾನಿ ಯಾರು?. ದೇಶದ ಪ್ರಮುಖ ಉದ್ಯಮಿ, ರಿಯಲ್ ಎಸ್ಟೇಟ್ ಸಮೂಹವಾದ ಹಿರಾನಂದಾನಿ ಗ್ರೂಪ್‌ನ ಸಿಇಒ ದರ್ಶನ್ ಹಿರಾನಂದಾನಿ. ಅವರ ತಂದೆ ನಿರಂಜನ್ ಹಿರಾನಂದಾನಿ ಮತ್ತು ಚಿಕ್ಕಪ್ಪ ಸುರೇಂದ್ರ ಹಿರಾನಂದಾನಿ ಅವರು ಸ್ಥಾಪಿಸಿದ ಹಿರನಂದಾನಿ ಗ್ರೂಪ್ ಭಾರತದಲ್ಲಿ ವಿವಿಧ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.
ಟೌನ್‌ಶಿಪ್‌ಗಳು, ಐಟಿ ಪಾರ್ಕ್‌ಗಳು ಮತ್ತಿತರ ಮೂಲಸೌಕರ್ಯ ಯೋಜನೆಗಳು ಸೇರಿದಂತೆ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಅಭಿವೃದ್ಧಿಪಡಿಸುವಿಕೆಗೆ ಈ ಉದ್ಯಮ ಸಮೂಹ ಹೆಸರಾಗಿದೆ. ಈಗ ಹಿರಾನಂದಾನಿ ಸೂಚನೆಯ ಮೇರೆಗೇ ಮಹುವಾ ಮೊಯಿತ್ರಾ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪ ಬರುತ್ತಿರುವಂತೆ ತಕ್ಷಣ ಪ್ರತಿಕ್ರಿಯಿಸಿರುವ ಅದಾನಿ ಸಮೂಹ, ತನ್ನ ವಿರುದ್ಧ 2018ರಿಂದಲೂ ಕೆಲವು ಗುಂಪುಗಳು ಮತ್ತು ವ್ಯಕ್ತಿಗಳು ಯತ್ನಿಸುತ್ತಿವೆ ಎಂಬ ತನ್ನ ಆರೋಪವನ್ನು ಇದು ದೃಢೀಕರಿಸುತ್ತಿದೆ ಎಂದು ದನಿಗೂಡಿಸಿದೆ.
ಆದರೆ, ಸಂಸದೆಗೆ ಲಂಚ ನಿಡಲಾಗಿದೆ ಎಂಬ ಆರೋಪವನ್ನು ಹಿರಾನಂದಾನಿ ಸಮೂಹ ನಿರಾಕರಿಸಿದೆ. ಇಲ್ಲಿ ಗಮನಿಸಬೇಕಿರುವ ಇನ್ನೂ ಒಂದು ವಿಚಾರವಿದೆ. ಈಗ ಮಹುಆ ಮೊಯಿತ್ರಾ ವಿರುದ್ಧ ಆರೋಪಗಳನ್ನು ಮಾಡಿರುವ ಬಿಜೆಪಿಯ ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಮೊಯಿತ್ರಾ ಅವರು ಇತ್ತೀಚೆಗೆ ಪ್ರಶ್ನೆಗಳನ್ನು ಕೇಳಿದ್ದರು. ಮಾತ್ರವಲ್ಲ, ಚುನಾವಣಾ ಅಫಿಡವಿಟ್ನಲ್ಲಿ ದುಬೆ ಸುಳ್ಳು ಹೇಳಿದ್ದಾಗಿಯೂ ಮೊಯಿತ್ರಾ ಆರೋಪಿಸಿದ್ದರು.
ನಿಶಿಕಾಂತ್ ದುಬೆ ಈಗ ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ಆಕ್ರಮಣಕಾರಿ ಶೈಲಿಯಲ್ಲಿ ಆರೋಪ ಮಾಡುವ ಬಿಜೆಪಿಯ ಪ್ರಮುಖ ಸಂಸದರಾಗಿ ಗುರುತಿಸಲ್ಪಟ್ಟಿದ್ದಾರೆ. ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಸಂಸತ್ತಿನಲ್ಲೇ ಅವಹೇಳನಕಾರಿ ಪದಗಳನ್ನು ಬಳಸಿದಾಗ ಈ ನಿಶಿಕಾಂತ್ ದುಬೆ, ಅವಹೇಳನಕ್ಕೆ ಒಳಗಾದ ದಾನಿಶ್ ಅಲಿ ವಿರುದ್ಧವೇ ಸ್ಪೀಕರ್ ಗೆ ದೂರು ಸಲ್ಲಿಸಿದ್ದರು. ದಾನಿಶ್ ಅಲಿ ಅವರೇ ರಮೇಶ್ ಬಿಧುರಿ ಅವರು ಹಾಗೆ ಮಾತಾಡುವಂತೆ ಪ್ರಚೋದನೆ ನೀಡಿದ್ದರು ಎಂದು ಆರೋಪ ಮಾಡಿದ್ದರು.
ಮೊನ್ನೆ ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆಯನ್ನು ಬಿಜೆಪಿ ಪರವಾಗಿ ಶುರು ಮಾಡಿದ್ದೇ ಈ ನಿಶಿಕಾಂತ್ ದುಬೆ. ಪ್ರಧಾನಿ ಮೋದಿ ಹಾಗು ಗೃಹ ಸಚಿವ ಅಮಿತ್ ಶಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿಶಿಕಾಂತ್ ದುಬೆ ಅದಾನಿ ಸಮೂಹಕ್ಕೂ ಅತ್ಯಂತ ಆಪ್ತರು ಎನ್ನುತ್ತಾರೆ ಪತ್ರಕರ್ತ ಅಭಿಸಾರ ಶರ್ಮ. ಅದಾನಿಗೆ ಏನೇ ಸಮಸ್ಯೆ ಎದುರಾದರೂ ಅದರ ರಕ್ಷಣೆಗೆ ನಿಶಿಕಾಂತ್ ಮುಂದಾಗುತ್ತಾರೆ ಎಂದು ಹೇಳಿದ್ದಾರೆ ಅಭಿಸಾರ್ ಶರ್ಮ.
ಇಂತಹ ಪ್ರಭಾವೀ ಸಂಸದ ನಿಶಿಕಾಂತ್ ದುಬೆಯ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರಶ್ನೆ ಎತ್ತಿದ್ದರು ಮಹುಆ. ಜೊತೆಗೆ ಅದಾನಿ ವಿರುದ್ಧ ಇತ್ತೀಚಿಗೆ ಕೇಳಿ ಬಂದ ಕಲ್ಲಿದ್ದಲು ಆಮದು ಹಗರಣದ ಬಗ್ಗೆಯೂ ಮಹುಆ ಮಾತಾಡಿದ್ದರು. ಅದನ್ನು ಪ್ರಶ್ನಿಸಿದ್ದರು. ಇವುಗಳೇ ಒಂದು ಕಡೆಯಿಂದ ಮೊಯಿತ್ರಾ ವಿರುದ್ಧ ಅಸ್ತ್ರ ಪ್ರಯೋಗಕ್ಕೆ ಕಾರಣವಾಯಿತೆ ಎಂಬ ಪ್ರಶ್ನೆಯೂ ಏಳುತ್ತದೆ.
ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನೂ ಮೋದಿಯ ಉದ್ಯಮಿ ಮಿತ್ರ ಅದಾನಿಯನ್ನೂ ಹೈರಾಣಾಗಿಸುವಂತೆ ಪ್ರಶ್ನೆಗಳನ್ನು ಎತ್ತುತ್ತಿದ್ದ ಮಹುಆ ಮೊಯಿತ್ರಾ ಅವರನ್ನು ಹೇಗಾದರೂ ಹಣಿಯಲು ಬಿಜೆಪಿ ಕಾದುಕೊಂಡಿದ್ದುದಕ್ಕೂ, ವಕೀಲ ದೇಹದ್ರಾಯ್ ಸಿಬಿಐಗೆ ಮೊಯಿತ್ರಾ ವಿರುದ್ಧ ದೂರು ಸಲ್ಲಿಸಿದುದಕ್ಕೂ, ಅದನ್ನು ಉಲ್ಲೇಖಿಸಿ ಮೊಯಿತ್ರಾ ವಿರುದ್ಧ ಈಗ ದುಬೆ ತಿರುಗಿಬಿದ್ದುದಕ್ಕೂ, ಇಬ್ಬರು ಉದ್ಯಮಿಗಳ ಮಧ್ಯೆ ಇದ್ದಿರಬಹುದಾದ ವೈರತ್ವಕ್ಕೂ ಕೊಂಡಿಗಳು ಗೋಚರವಾಗುತ್ತಿವೆ.
ತಮ್ಮ ವಿರುದ್ಧದ ಆರೋಪಗಳನ್ನೆಲ್ಲ ನಿರಾಕರಿಸಿರುವ ಮಹುಆ ಮೊಯಿತ್ರಾ, ಅವನ್ನು ಸುಳ್ಳು, ದುರುದ್ದೇಶಪೂರ್ವಕ ಮತ್ತು ಮಾನಹಾನಿಕರ ಎಂದಿದ್ದಾರೆ. ಬಿಜೆಪಿ ಸಂಸದ ದುಬೆ ಮತ್ತು ವಕೀಲ ದೇಹದ್ರಾಯ್ ಅವರಿಗೆ ಲೀಗಲ್ ನೊಟೀಸ್ ಕಳಿಸಿದ್ದಾರೆ. ಆರೋಪಗಳ ಬಗ್ಗೆ ವರದಿ ಮಾಡಿದ್ದ 15 ಮೀಡಿಯಾ ಸಂಸ್ಥೆಗಳಿಗೂ ಅವರು ಲೀಗಲ್ ನೊಟೀಸ್ ಕಳಿಸಿದ್ದಾರೆ.
ದುಬೆ ಶೈಕ್ಷಣಿಕ ಅರ್ಹತೆಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನಿಸಿದ್ದಕ್ಕಾಗಿಯೇ ಅವರು ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಮಹುಆ ವಿರುದ್ಧ ದೇಹದ್ರಾಯ್ ವೈಯಕ್ತಿಕ ದ್ವೇಷ ಹೊಂದಿದ್ದರು ಎಂದು ನೊಟೀಸ್ ಹೆಳುತ್ತದೆ. ಮೊಯಿತ್ರಾ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರನ್ನು ಒತ್ತಾಯಿಸಲು ದೇಹದ್ರಾಯ್ ಪ್ರಯತ್ನಿಸಿದ್ದರು. ಆದರೆ ಪುರಾವೆಗಳ ಕೊರತೆಯಿಂದಾಗಿ ಯಾರಿಗೂ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ನೊಟೀಸ್‌ನಲ್ಲಿ ಹೇಳಲಾಗಿದೆ.
ಇದಾದ ಮೇಲೆಯೇ ದೇಹದ್ರಾಯ್ ಅವರು ದುಬೆಗೆ ಪತ್ರ ಕಳಿಸಿದ್ದು, ಅದರ ಸತ್ಯಾಸತ್ಯತೆ ವಿವೇಚಿಸದೆ ದುಬೆ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿರುವುದಾಗಿ ನೊಟೀಸ್ ಹೇಳಿದೆ. ಸ್ಪೀಕರ್‌ಗೆ ಬರೆದ ಪತ್ರ ಮತ್ತು ಎಲ್ಲಾ ಆರೋಪಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ನೋಟಿಸ್‌ನಲ್ಲಿ ದುಬೆ ಮತ್ತು ದೇಹಾದ್ರಾಯ್ ಅವರನ್ನು ಕೇಳಲಾಗಿದೆ. ಇದಲ್ಲದೆ, ತಮ್ಮ ಎಕ್ಸ್ ಖಾತೆಯಲ್ಲಿ ಈ ಎಲ್ಲ ಆರೋಪಗಳ ಬಗ್ಗೆ ದಿಟ್ಟತನದಿಂದಲೇ ಮಹುಆ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಸಿಬಿಐ ತನಿಖೆಗೂ ತಾವು ಸಿದ್ಧ. ಅದಕ್ಕೂ ಮೊದಲು ನಕಲಿ ಪದವೀಧರ ಮತ್ತು ಇತರ ಬಿಜೆಪಿ ದಿಗ್ಗಜರ ವಿರುದ್ಧ ಬಾಕಿ ಉಳಿದಿರುವ ಸಾಂವಿಧಾನಿಕ ಸವಲತ್ತುಗಳ ಉಲ್ಲಂಘನೆ ಪ್ರಕರಣವನ್ನು ಮೊದಲು ವಿಚಾರಣೆ ನಡೆಸಲಿ. ಬಳಿಕ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ಪೀಕರ್ ತನಿಖೆ ನಡೆಸಲಿ ಎಂದು ಮೊಯಿತ್ರಾ ತಿರುಗೇಟು ಕೊಟ್ಟಿದ್ದಾರೆ.
ಜೊತೆಗೆ, ಅದಾನಿ ಹಗರಣದಲ್ಲಿ ಇಡಿ ಮತ್ತಿತರ ತನಿಖಾ ಸಂಸ್ಥೆಗಳು ಎಫ್‌ಐಆರ್ ದಾಖಲಿಸುವುದನ್ನು ತಾವು ಕಾಯುತ್ತಿರುವುದಾಗಿಯೂ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. 13000 ಕೋಟಿಗಳ ಕಲ್ಲಿದ್ದಲು ಹಗರಣದಲ್ಲಿ ಚೀನಾದ ಪ್ರಜೆ, ಯುಎಇ ಪ್ರಜೆ ಮತ್ತು 3 ಕಡಲಾಚೆಯ ಕಂಪನಿಗಳನ್ನು ಬಳಸಿದಾಗ ರಾಷ್ಟ್ರೀಯ ಹಿತಾಸಕ್ತಿ ಎಲ್ಲಿತ್ತು ಎಂದು ಕೂಡ ಮೊಯಿತ್ರಾ ಕೇಳಿದ್ದಾರೆ.
ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಮಹುಆ ಮತ್ತು ಇತರ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲೇ ಇಲ್ಲ. ಬದಲಾಗಿ ಅದಾನಿಯನ್ನು ರಕ್ಷಿಸುವುದಕ್ಕೆಂದೇ ಏನೇನೆಲ್ಲ ಕಸರತ್ತನ್ನು ಅದು ಮಾಡುತ್ತಲೇ ಇದೆ. ಆದರೆ, ಈಗ ಮಹುಆ ವಿರುದ್ಧವೇ ಬಿಜೆಪಿ ಆರೋಪಗಳನ್ನು ಮಾಡುತ್ತಿದೆ. ಅವರನ್ನು ಸಂಕಷ್ಟದಲ್ಲಿ ಸಿಲುಕಿಸುವುದು, ಅವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದು ಬಿಜೆಪಿಯ ಉದ್ದೇಶ.
ಆದರೆ ಮಹುಆ ಅವರ ದಿಟ್ಟತನ ಕುಂದಿಲ್ಲ. ಅವರು ಅದೇ ಧೈರ್ಯದಿಂದ ಬಿಜೆಪಿಯನ್ನು ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಅನುಮಾನ ಕಾಡುವುದು ಅವರ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಯವರ ಬಗ್ಗೆ. ಮಹುಆ ಅವರ ವಿರುದ್ಧ ಬಿಜೆಪಿ ಇಷ್ಟೊಂದು ವ್ಯವಸ್ಥಿತ ಎನ್ನಬಹುದಾದ ತಂತ್ರ ರೂಪಿಸಿದಂತೆ ಕಾಣಿಸುತ್ತಿರುವಾಗ, ಮಮತಾ ಬ್ಯಾನರ್ಜಿ ಕೂಡ ಆಕೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೆ? ಅವರ ವರ್ತನೆ ನೋಡಿದರೆ ಹಾಗೆನ್ನಿಸುತ್ತದೆ.
ಇನ್ನೊಂದೆಡೆ, ಸೋಷಿಯಲ್ ಮೀಡಿಯಾದಲ್ಲಿ ಶಶಿ ತರೂರ್ ಅವರೊಂದಿಗೆ ಮಹುವಾ ರೆಸ್ಟೋರೆಂಟ್ನಲ್ಲಿರುವ, ಅಲ್ಲಿ ಅವರು ಸಿಗರೇಟ್ ಸೇದುತ್ತಿರುವಂತೆ ಮದ್ಯಪಾನ ಮಾಡುತ್ತಿರುವಂತೆ ಇರುವ ಚಿತ್ರಗಳನ್ನು ಹರಿಬಿಡಲಾಗಿದೆ. ಮಹುಆ ಪಾಶ್ಚಾತ್ಯ ಸಂಸ್ಕೃತಿಯವರು, ಅವರು ದೇಶದ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎಂದೆಲ್ಲಾ ಹಣೆಪಟ್ಟಿ ಹಚ್ಚಲು ಪ್ರಯತ್ನಿಸಲಾಗುತ್ತಿದೆ.
ಆದರೆ ಇದೆಲ್ಲದಕ್ಕೂ ಉತ್ತರಿಸಿರುವ ಮಹುಆ , ಸ್ನೇಹಿತರ ಜೊತೆ ತಮಾಷೆಗೆ ಸಿಗರೇಟ್ ಹಿಡಿದಿರುವುದಾಗಿಯೂ, ಮದ್ಯ ಸೇವಿಸುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಅವರು ಸಿಗರೇಟು ಸೇದಿದ್ದರೂ, ಮದ್ಯ ಸೇವಿಸಿದ್ದರೂ ಅದು ದೇಶದ ಕಾನೂನಿನ ಪ್ರಕಾರ ಅಪರಾಧ ಏನಲ್ಲ. ನನ್ನ ಚಿತ್ರವನ್ನು ಮಾತ್ರ ಕ್ರಾಪ್ ಮಾಡಿ ಬಿಜೆಪಿ ಹರಡಿದೆ. ಉಳಿದವರ ಚಿತ್ರಗಳನ್ನು ಬಿಜೆಪಿ ಹಂಚಿಕೊಂಡಿಲ್ಲ. ಬಂಗಾಲಿ ಮಹಿಳೆಯರು ಬದುಕನ್ನು ಆನಂದಿಸುತ್ತಾರೆ, ಸುಳ್ಳುಗಳನ್ನಲ್ಲ ಎಂದು ಮಹುಆ ಹೇಳಿದ್ದಾರೆ. ಅಂತೂ ಸದ್ಯಕ್ಕೆ ಮಹುವಾ ಬಿಜೆಪಿಯ ಆರೋಪಗಳಿಗೆ ತುತ್ತಾಗಿದ್ದಾರೆ, ಒಂದು ಹೋರಾಟವೇ ಅವರೆದುರು ಇದೆ. ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಈ ಫೈರ್ ಬ್ರ್ಯಾಂಡ್ ಸಂಸದೆ ಈಗ ಈ ಸವಾಲನ್ನು ಗೆದ್ದು ಬರಬೇಕಿದೆ.