ಮಹಿಳಾ ಮೀಸಲಾತಿ ಜಾರಿ ದೂರದ ಮಾತು; ಸದ್ಯ ಮೇಲ್ಜಾತಿ ಮಹಿಳೆಯರದ್ದೇ ಪ್ರಾತಿನಿಧ್ಯ ಹೆಚ್ಚು
ಹುಕುಮ್ ಸಿಂಗ್ ನೇತೃತ್ವದ 2001ರ ಸಾಮಾಜಿಕ ನ್ಯಾಯ ಸಮಿತಿಯು ಉತ್ತರ ಪ್ರದೇಶದಲ್ಲಿನ ಒಬಿಸಿ ಜನಸಂಖ್ಯೆಯನ್ನು ಒಟ್ಟು ಜನಸಂಖ್ಯೆಯ ಶೇ.54.05 ಎಂದು ಲೆಕ್ಕ ಹಾಕಿದೆ. ಆದರೆ, ಕಳೆದ ಮೂರು ವಿಧಾನಸಭಾ ಚುನಾವಣೆಗಳ ಜಾತಿ ಅಂಕಿಅಂಶಗಳು ತೋರಿಸುವಂತೆ, ಒಬಿಸಿ ಮಹಿಳೆಯರು ಶೇ.29 ಮಾತ್ರ ಇದ್ದಾರೆ. ಜನಸಂಖ್ಯೆಯಲ್ಲಿ ಕಡಿಮೆಯಿರುವ ಮೇಲ್ಜಾತಿಯ ಮಹಿಳೆಯರು ಶೇ.31ರಷ್ಟಿದ್ದಾರೆ.
2009ರಿಂದ ಉತ್ತರ ಪ್ರದೇಶದಲ್ಲಿ ನಡೆದ ಕಳೆದ ಆರು ಪ್ರಮುಖ ಚುನಾವಣೆಗಳಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗಿಂತಲೂ, ಮೇಲ್ವರ್ಗದ ಮಹಿಳೆಯರು, ಅದರಲ್ಲೂ ಬ್ರಾಹ್ಮಣ ಮತ್ತು ಠಾಕೂರ್ ಸಮುದಾಯದ ಮಹಿಳೆಯರು ಶಾಸಕರಾಗಿ ಮತ್ತು ಸಂಸದರಾಗಿ ಆಯ್ಕೆಯಾಗಿರುವುದೇ ಹೆಚ್ಚು.
ಉತ್ತರ ಪ್ರದೇಶ ವಿಧಾನಸಭೆ 403 ಸದಸ್ಯ ಬಲ ಹೊಂದಿದೆ. ಇದು ದೇಶದ ಅತಿದೊಡ್ಡ ವಿಧಾನಸಭೆ ಮತ್ತು ರಾಜಕೀಯವಾಗಿ ರಾಷ್ಟ್ರ ರಾಜಕೀಯದ ಮೇಲೆ ಪ್ರಭಾವದ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾಗಿದೆ. ಉತ್ತರ ಪ್ರದೇಶವು ಲೋಕಸಭೆಗೆ ಅತಿ ಹೆಚ್ಚು, ಅಂದರೆ 80 ಸಂಸದರನ್ನು ಕಳುಹಿಸುವ ರಾಜ್ಯವಾಗಿದೆ.
ಶೇ.33ರ ಮಹಿಳಾ ಮೀಸಲಾತಿಯೊಳಗೆ ಒಬಿಸಿ ಮಹಿಳೆಯರನ್ನು ಒಳಪಡಿಸದಿರುವುದರ ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ‘ದಿ ವೈರ್’, 2012ರಿಂದ ರಾಜ್ಯದಲ್ಲಿ ಚುನಾಯಿತರಾದ ಎಲ್ಲಾ ಮಹಿಳಾ ಶಾಸಕರ ಜಾತಿ ಹಿನ್ನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿದೆ ಮತ್ತು 2009, 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾಯಿತರಾದ ಎಲ್ಲ ಮಹಿಳಾ ಸಂಸದರ ಜಾತಿಯನ್ನು ಗುರುತಿಸಿದೆ. ಮಹಿಳಾ ಶಾಸಕರ ಜಾತಿಯ ವಿಶ್ಲೇಷಣೆಗಾಗಿ, 2012, 2017 ಮತ್ತು 2022ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು ಕಾಲಕಾಲಕ್ಕೆ ನಡೆದ ಉಪಚುನಾವಣೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಪರಿಗಣಿಸಲಾಗಿದೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಚುನಾಯಿತರಾದ ಮಹಿಳೆಯರ ಸಂಖ್ಯೆ 2012-2017ರ ಅವಧಿಯಲ್ಲಿ 40 ಇದ್ದದ್ದು 2017-2022ರಲ್ಲಿ 46ಕ್ಕೆ ಹೆಚ್ಚಿತು. 2022ರಿಂದ ನಂತರದ ಅವಧಿಯಲ್ಲಿ 48ಕ್ಕೆ ಏರಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ 2012ರಲ್ಲಿ 35, 2017ರಲ್ಲಿ 42 ಹಾಗೂ 2022ರಲ್ಲಿ 47 ಮಹಿಳೆಯರು ಆಯ್ಕೆಯಾಗಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಇತರರು ಆಯ್ಕೆಯಾದರು.
2012ರಿಂದ ಚುನಾಯಿತರಾದ ಒಟ್ಟು 134 ಮಹಿಳಾ ಅಭ್ಯರ್ಥಿಗಳಲ್ಲಿ 46 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು. ಅವರೆಲ್ಲ ಗೆದ್ದಿದ್ದು ಮೀಸಲು ಕ್ಷೇತ್ರಗಳಿಂದ. ಮೇಲ್ಜಾತಿಯಿಂದ 42 ಶಾಸಕಿಯರು ಆಯ್ಕೆಯಾದರೆ, 39 ಮಂದಿ ಒಬಿಸಿ ಸಮುದಾಯದ ಶಾಸಕಿಯರು. 2012ರಿಂದ ಏಳು ಮುಸ್ಲಿಮ್ ಶಾಸಕಿಯರು ಕೂಡ ಆಯ್ಕೆಯಾಗಿದ್ದಾರೆ.
2012ರಿಂದ ಶಾಸಕರಾಗಿ ಚುನಾಯಿತರಾದ ಮಹಿಳೆಯರ ನಿಜವಾದ ಸಂಖ್ಯೆ 107ನ್ನು ಪರಿಗಣಿಸಿದರೂ, ಒಬಿಸಿಗಳಿಗಿಂತ (31) ಮೇಲ್ಜಾತಿಯ ಮಹಿಳೆಯರೇ ಹೆಚ್ಚು (32) ಇದ್ದಾರೆ. ಕಡಿಮೆ ಜನಸಂಖ್ಯೆಯಲ್ಲಿದ್ದೂ ಅಧಿಕಾರವನ್ನು ಅವರೇ ಹೆಚ್ಚು ಅನುಭವಿಸುತ್ತಿರುವುದು ಅಸಮಾನ ಪ್ರಾತಿನಿಧ್ಯವನ್ನು ತೋರಿಸುತ್ತದೆ.
2012ರಿಂದ 84 ಮಹಿಳಾ ಶಾಸಕರು ಒಮ್ಮೆ ಚುನಾಯಿತರಾಗಿದ್ದರೆ, 19 ಮಂದಿ ಎರಡು ಬಾರಿ ಆಯ್ಕೆಯಾದವರು ಮತ್ತು ನಾಲ್ವರು ಮೂರು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಚುನಾಯಿತರಾದ 19 ಮಹಿಳಾ ಶಾಸಕರ ಪೈಕಿ ಒಬಿಸಿ ಮತ್ತು ಮೇಲ್ಜಾತಿಯ ಸಮುದಾಯದಿಂದ ತಲಾ ಆರು ಮಂದಿಯಿದ್ದಾರೆ. ದಲಿತರು ಏಳು ಮಂದಿ. ಮೂರು ಬಾರಿ ಆಯ್ಕೆಯಾದ ಶಾಸಕರಲ್ಲಿ ಒಬ್ಬರು ಒಬಿಸಿ, ಒಬ್ಬರು ದಲಿತ ಮತ್ತು ಇಬ್ಬರು ಬ್ರಾಹ್ಮಣರು.
ನರೇಂದ್ರ ಮೋದಿ ಸರಕಾರವು ಪರಿಚಯಿಸಿದ ಶೇ.33ರ ಮಹಿಳಾ ಮೀಸಲಾತಿ ಮಸೂದೆಯೊಳಗೆ ಒಬಿಸಿ ಮಹಿಳೆಯರಿಗೆ ಇರುವ ಕೋಟಾವನ್ನು ಸೇರಿಸಿಲ್ಲ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಇದನ್ನು ಆಕ್ಷೇಪಿಸಿವೆ. ಮುಸ್ಲಿಮ್ ಮಹಿಳೆಯರಿಗೂ ಇದೇ ರೀತಿಯ ಕೋಟಾ ಇರಬೇಕೆಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಒಬಿಸಿ ಮತ್ತು ಮುಸ್ಲಿಮ್ ಮಹಿಳೆಯರಿಗೆ ನಿಗದಿಪಡಿಸಲಾದ ಕೋಟಾ ಇಲ್ಲದಿದ್ದರೆ, ಶ್ರೇಣೀಕೃತ, ಜಾತಿ ಪೀಡಿತ ಸಮಾಜದಲ್ಲಿ, ನಿರ್ದಿಷ್ಟವಾಗಿ ಈಗಾಗಲೇ ಮಹಿಳಾ ಪ್ರಾತಿನಿಧ್ಯ ತೀರಾ ಕಡಿಮೆಯಿರುವ ಹಿಂದುಳಿದ ಮತ್ತು ಅಂಚಿನಲ್ಲಿರುವ ಜಾತಿಗಳು ಮತ್ತು ಸಮುದಾಯಗಳಲ್ಲಿ ಮಸೂದೆಯ ಉದ್ದೇಶವೇ ಅಪೂರ್ಣವಾಗಲಿದೆ ಎಂಬುದು ವಿರೋಧ ಪಕ್ಷಗಳ ಕಳವಳ. ಹೊಸ ಮಸೂದೆಯು ಸಾಂವಿಧಾನಿಕವಾಗಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಿಟ್ಟಿರುವ ಸ್ಥಾನಗಳಲ್ಲಿ ಆ ಸಮುದಾಯಗಳ ಮಹಿಳೆಯರಿಗೆ ಮೂರನೇ ಒಂದು ಭಾಗದ ಒಳಮೀಸಲಾತಿಯನ್ನು ಒದಗಿಸುತ್ತದೆ. ಆದರೆ, ಒಬಿಸಿ ಅಥವಾ ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿ ಇಲ್ಲವಾಗಿದೆ.
ಒಬಿಸಿ ಮಹಿಳೆಯರಿಗೆ ನಿಗದಿಪಡಿಸಲಾಗಿರುವ ಒಳಮೀಸಲಾತಿಯನ್ನು ಒದಗಿಸುವ ಇಂಥ ಬೇಡಿಕೆಯನ್ನು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರದ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಎತ್ತಿದ್ದವು. ಈ ಹಿಂದೆಯೂ ಅಲ್ಲಿ ಇಂತಹ ಪ್ರಾತಿನಿಧ್ಯವನ್ನು ಒದಗಿಸಿಲ್ಲ ಎಂಬ ಕಾರಣದಿಂದಲೇ ಸಮಾಜವಾದಿ ಮಂಡಲ್ ಕಾಲದ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ, ಪ್ರಮುಖ ಸಮಾಜವಾದಿ ನಾಯಕರಾದ ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್ ಮತ್ತು ಶರದ್ ಯಾದವ್ ಅವರು ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಮರಿಗೆ ಮಹಿಳಾ ಮೀಸಲಾತಿಯೊಳಗೆ ವ್ಯಾಖ್ಯಾನಿಸಲಾದ ಒಳಮೀಸಲಾತಿ ನೀಡದೆ, ಸಾಕ್ಷರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬಂಡವಾಳದ ವಿಷಯದಲ್ಲಿ ಹಿಂದುಳಿದಿರುವ ಅಂಚಿನಲ್ಲಿರುವ ಮಹಿಳೆಯರಿಗೆ ಅಧಿಕಾರ ನೀಡುವ ಬದಲು ಈಗಾಗಲೇ ಸವಲತ್ತು ಪಡೆದ ನಗರ ಪ್ರದೇಶದ ಮಹಿಳೆಯರಿಗೇ ಮಹಿಳಾ ಮೀಸಲಾತಿ ಮಸೂದೆ ಅವಕಾಶ ಒದಗಿಸಿದೆ ಎಂದು ವಾದಿಸಿದ್ದರು..
ಲೋಕಸಭೆಯ ಮಟ್ಟದಲ್ಲಿಯೂ, ಉಪಚುನಾವಣೆಗಳನ್ನು ಹೊರತುಪಡಿಸಿ, 2009, 2014 ಮತ್ತು 2019ರಲ್ಲಿ ನಡೆದ ಕೊನೆಯ ಮೂರೂ ಚುನಾವಣೆಗಳಲ್ಲಿ ಒಬಿಸಿ ಮಹಿಳೆಯರು ಮತ್ತು ದಲಿತ ಮಹಿಳೆಯರಿಗಿಂತ ಮೇಲ್ಜಾತಿ ಮಹಿಳೆಯರೇ ಹೆಚ್ಚಿನ ಪ್ರಾತಿನಿಧ್ಯ ಹೊಂದಿದ್ದರು. 2009ರಲ್ಲಿ 11 ಮಹಿಳಾ ಸಂಸದರು ಉತ್ತರ ಪ್ರದೇಶದಲ್ಲಿ ಚುನಾಯಿತರಾದರು. ಅದರಲ್ಲಿ ಆರು ಮಹಿಳೆಯರು ಮೇಲ್ಜಾತಿಯವರಾದರೆ, ಇಬ್ಬರು ಮುಸ್ಲಿಮ್, ಇಬ್ಬರು ದಲಿತ ಮತ್ತು ಒಬ್ಬರು ಒಬಿಸಿ ಸಮುದಾಯದ ಮಹಿಳೆಯರಿದ್ದರು. 2014ರಲ್ಲಿ 13 ಮಹಿಳಾ ಸಂಸದರು ಚುನಾಯಿತರಾಗಿದ್ದರು. ಅವರಲ್ಲಿ ತಲಾ ಐವರು ದಲಿತ ಮತ್ತು ಒಬಿಸಿ ಸಮುದಾಯಗಳ ಮಹಿಳೆಯರಾದರೆ, ಮೂವರು ಮೇಲ್ಜಾತಿಯ ಮಹಿಳೆಯರು. 2019ರಲ್ಲಿ ಚುನಾಯಿತರಾದ 11 ಮಹಿಳಾ ಸಂಸದರಲ್ಲಿ ತಲಾ ಐವರು ಒಬಿಸಿ ಮತ್ತು ಮೇಲ್ಜಾತಿಯವರಾದರೆ, ಒಬ್ಬರು ದಲಿತ ಸಮುದಾಯದವರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಒಬಿಸಿಗೆ ಸ್ಥಾನಗಳನ್ನು ಮೀಸಲಿಟ್ಟಿಲ್ಲ.
ವಿವಾಹಿತ ಮಹಿಳಾ ಸಂಸದರ ಜಾತಿಯನ್ನು ನಿಖರವಾಗಿ ಗುರುತಿಸುವುದು ನಮ್ಮಲ್ಲಿನ ಪಿತೃಪ್ರಧಾನ ಸಮಾಜದಲ್ಲಿ ಕಗ್ಗಂಟಾಗಿರುವುದರಿಂದ, ಜನನ ಹಿನ್ನೆಲೆಗಿಂತ ಹೆಚ್ಚಾಗಿ ಮದುವೆಯ ನಂತರದ ಉಪನಾಮ ಮತ್ತು ಜಾತಿ ಗುರುತನ್ನು ಇಲ್ಲಿ ಪರಿಗಣಿಸಲಾಗಿದೆ. ಉದಾಹರಣೆಗೆ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಕ್ಷತ್ರಿಯ ಕುಟುಂಬದಲ್ಲಿ ಜನಿಸಿದರೂ, ಅವರು ಪತಿ ಅಖಿಲೇಶ್ ಅವರ ಒಬಿಸಿ ಸಮುದಾಯದ ಯಾದವ್ ಉಪನಾಮವನ್ನು ಬಳಸುತ್ತಾರೆ. ಆದ್ದರಿಂದ ಅವರನ್ನು ಒಬಿಸಿ ಎಂದು ಪರಿಗಣಿಸಲಾಗಿದೆ.
ಸಮಾಜವಾದಿ ಪಕ್ಷ 2012ರಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. 2017 ಮತ್ತು 2022ರ ಚುನಾವಣೆಗಳಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನಗಳೊಂದಿಗೆ ಗೆದ್ದಿದೆ. ಅಖಿಲೇಶ್ ಯಾದವ್ 2012ರ ಚುನಾವಣೆಯ ಸಮಯದಿಂದ 2017ರ ಮಾರ್ಚ್‌ವರೆಗೆ ಅಧಿಕಾರದಲ್ಲಿದ್ದಾಗ, 13 ಒಬಿಸಿ ಮಹಿಳೆಯರು, 13 ದಲಿತ ಮಹಿಳೆಯರು, 11 ಮೇಲ್ಜಾತಿ ಮಹಿಳೆಯರು ಮತ್ತು ಮೂವರು ಮುಸ್ಲಿಮ್ ಮಹಿಳೆಯರು ಶಾಸಕರಾಗಿ ಆಯ್ಕೆಯಾದರು ಎಂದು ಸರಕಾರಿ ದಾಖಲೆಗಳು ತೋರಿಸುತ್ತವೆ.
ಆದಿತ್ಯನಾಥ್ ಮೊದಲ ಅಧಿಕಾರಾವಧಿಯಲ್ಲಿ 2017 ಮಾರ್ಚ್‌ನಿಂದ 2022ರವರೆಗೆ 13 ಒಬಿಸಿ ಮಹಿಳೆಯರು, 12 ದಲಿತ ಮಹಿಳೆಯರು, 20 ಮೇಲ್ಜಾತಿ ಮಹಿಳೆಯರು ಮತ್ತು ಒಬ್ಬರು ಮುಸ್ಲಿಮ್ ಮಹಿಳೆ ಶಾಸಕರಾಗಿ ಆಯ್ಕೆಯಾಗಿದ್ದರು. ಆದಿತ್ಯನಾಥ್ ಎರಡನೇ ಅವಧಿಯಲ್ಲಿ 13 ಒಬಿಸಿ ಮಹಿಳೆಯರು, 21 ದಲಿತ ಮಹಿಳೆಯರು, 11 ಮೇಲ್ಜಾತಿ ಮಹಿಳೆಯರು ಮತ್ತು ಮೂವರು ಮುಸ್ಲಿಮ್ ಮಹಿಳೆಯರು ಚುನಾಯಿತರಾಗಿದ್ದರು.
ಜಾತಿ ಜನಗಣತಿ ಹೊಸದಾಗಿ ನಡೆಯದೇ ಇರುವುದರಿಂದ ಈಗಿನ ಒಬಿಸಿ ಮತ್ತು ಮೇಲ್ಜಾತಿ ಜನಸಂಖ್ಯೆಯ ನಿಖರವಾದ ಮಾಹಿತಿ ಇಲ್ಲವಾಗಿದೆ.
ಆದರೆ 1931ರ ಜಾತಿ ಆಧಾರಿತ ಸಮೀಕ್ಷೆ ಮತ್ತು ನಂತರ ವಿವಿಧ ಸರಕಾರಿ ಆಯೋಗಗಳು ಪ್ರಕಟಿಸಿದ ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಒಬಿಸಿ ಸಮುದಾಯದ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.40ಕ್ಕಿಂತ ಹೆಚ್ಚಿದೆ. ಹುಕುಮ್ ಸಿಂಗ್ ನೇತೃತ್ವದ 2001ರ ಸಾಮಾಜಿಕ ನ್ಯಾಯ ಸಮಿತಿಯು ಉತ್ತರ ಪ್ರದೇಶದಲ್ಲಿನ ಒಬಿಸಿ ಜನಸಂಖ್ಯೆಯನ್ನು ಒಟ್ಟು ಜನಸಂಖ್ಯೆಯ ಶೇ.54.05 ಎಂದು ಲೆಕ್ಕ ಹಾಕಿದೆ. ಅಧಿಕಾರದಲ್ಲಿರುವ ಮೇಲ್ಜಾತಿ ಅಭ್ಯರ್ಥಿಗಳು ಅನುಭವಿಸುತ್ತಿರುವ ಹೆಚ್ಚಿನ ಪ್ರಾತಿನಿಧ್ಯವನ್ನು ತಿಳಿಯಲು ಒಬಿಸಿ ಜನಸಂಖ್ಯೆಯ ಅಂದಾಜು ಮುಖ್ಯವಾಗಿದೆ. 2011ರ ಜನಗಣತಿಯ ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶದ ಜನಸಂಖ್ಯೆಯ ಸುಮಾರು ಐದನೇ ಒಂದರಷ್ಟು (ಶೇ.19.5) ಮುಸ್ಲಿಮರು ಮತ್ತು ಶೇ.21.5ರಷ್ಟು ಪರಿಶಿಷ್ಟ ಜಾತಿಯವರಿದ್ದಾರೆ.
ಕಳೆದ ಮೂರು ವಿಧಾನಸಭಾ ಚುನಾವಣೆಗಳ ಜಾತಿ ಅಂಕಿಅಂಶಗಳು ತೋರಿಸುವಂತೆ, ವಿಧಾನಸಭೆಯಲ್ಲಿ ಚುನಾಯಿತರಾದ ಮಹಿಳೆಯರಲ್ಲಿ ಮುಸ್ಲಿಮ್ ಮಹಿಳೆಯರು ಕೇವಲ ಶೇ.5ರಷ್ಟಿದ್ದರೆ, ಒಬಿಸಿ ಮಹಿಳೆಯರು ಶೇ.29 ಮತ್ತು ಮೇಲ್ಜಾತಿ ಮಹಿಳೆಯರು ಶೇ.31ರಷ್ಟು. ಇನ್ನು ಪರಿಶಿಷ್ಟ ಜಾತಿ ಮಹಿಳೆಯರ ಪಾಲು ಶೇ.34 ಆಗಿದ್ದು, ಅವರೆಲ್ಲ ಆಯ್ಕೆಯಾದ ಸ್ಥಾನಗಳು ಆ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಾಗಿವೆ.
ಮೇಲ್ಜಾತಿಗಳಿಂದ 2012, 2017 ಮತ್ತು 2022ರಲ್ಲಿ ಚುನಾಯಿತರಾದ ಹೆಚ್ಚಿನ ಮಹಿಳಾ ಶಾಸಕರು ಠಾಕೂರ್ ಮತ್ತು ರಜಪೂತ ಸಮುದಾಯಗಳಿಗೆ ಸೇರಿದವರು (21). ಆನಂತರದ ಸ್ಥಾನದಲ್ಲಿ ಬ್ರಾಹ್ಮಣರು (16), ಬನಿಯಾ (3), ಭೂಮಿಹಾರ್ (1) ಮತ್ತು ಕಾಯಸ್ಥ (1) ಸಮುದಾಯದವರಿದ್ದಾರೆ.
52 ಸದಸ್ಯರ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ಪ್ರಸ್ತುತ ನಾಲ್ವರು ಮಹಿಳಾ ಸಚಿವರಿದ್ದಾರೆ. ಮೂವರು ಬೇಬಿ ರಾಣಿ ಮೌರ್ಯ, ಗುಲಾಬ್ ದೇವಿ ಮತ್ತು ವಿಜಯ್ ಲಕ್ಷ್ಮಿ ಗೌತಮ್-ದಲಿತ ಸಮುದಾಯದಿಂದ ಬಂದವರಾಗಿದ್ದರೆ, ಒಬ್ಬರು (ರಜನಿ ತಿವಾರಿ) ಬ್ರಾಹ್ಮಣ ಸಮುದಾಯದವರು. ಬೇಬಿ ರಾಣಿ ಮೌರ್ಯ ಪ್ರಸ್ತುತ ಸರಕಾರದ ಏಕೈಕ ಮಹಿಳಾ ಕ್ಯಾಬಿನೆಟ್ ಸಚಿವೆ.
ಆದಿತ್ಯನಾಥ್ ಅವಧಿಯ ಎರಡು ಸರಕಾರಗಳಲ್ಲಿನ ಸಚಿವ ಸಂಪುಟಗಳನ್ನು - 2017 ಮತ್ತು 2022 ಗಮನಿಸಿದರೆ, ಮೇಲ್ಜಾತಿಗಳು ಅಸಮಾನ ಪ್ರಾತಿನಿಧ್ಯವನ್ನು ಅನುಭವಿಸುವುದನ್ನು ಮುಂದುವರಿಸಿವೆ. ಎರಡನೇ ಅವಧಿಯಲ್ಲಿ ಒಬಿಸಿ ಸಮುದಾಯದ ಪಾಲು ಸುಧಾರಿಸಿದೆ.
ಈಗಿನಂತೆ, ಉತ್ತರ ಪ್ರದೇಶದಲ್ಲಿನ 52 ಸಚಿವರುಗಳಲ್ಲಿ, ಒಬಿಸಿ ಸಮುದಾಯ ಮತ್ತು ಮೇಲ್ಜಾತಿಯವರು ತಲಾ 21 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅಂದರೆ ಈ ಪ್ರಮಾಣ ತಲಾ ಶೇ.40.38ರಷ್ಟು. ಒಂಭತ್ತು ಮಂತ್ರಿಗಳೊಂದಿಗೆ ದಲಿತರ ಪ್ರಮಾಣ ಶೇ.17.3ರಷ್ಟು. ಮುಸ್ಲಿಮ್ ಸಮುದಾಯದ ಒಬ್ಬರು ಸಚಿವರು ಮಾತ್ರ ಇದ್ದಾರೆ. ಸೆಪ್ಟಂಬರ್ 2021ರಲ್ಲಿ, ಮೊದಲ ಆದಿತ್ಯನಾಥ್ ಸರಕಾರದ ಸಂಪುಟ 60 ಸಚಿವರನ್ನು ಹೊಂದಿದ್ದಾಗ, ಅತಿ ಹೆಚ್ಚಿನ ಶೇಕಡಾವಾರು ಮೇಲ್ಜಾತಿ ಪ್ರಾತಿನಿಧ್ಯವನ್ನು ಹೊಂದಿತ್ತು. 60 ಮಂತ್ರಿಗಳಲ್ಲಿ ಮೇಲ್ಜಾತಿಯ 27 (ಶೇ.45), ಒಬಿಸಿಯ 23 (ಶೇ.38.3) ಮತ್ತು ದಲಿತ ಸಮುದಾಯದ 9 (ಶೇ.15) ಮಂತ್ರಿಗಳಿದ್ದರು. ಆಗಲೂ ಒಬ್ಬರೇ ಮುಸ್ಲಿಮ್ ಸಚಿವರಿದ್ದರು.
ಆದಿತ್ಯನಾಥ್ ಎರಡನೇ ಅವಧಿಯ ಸರಕಾರದಲ್ಲಿ ಒಬಿಸಿಗಳಿಗೆ ಅಧಿಕಾರದಲ್ಲಿ ಬಿಜೆಪಿ ನೀಡಿದ ಹೆಚ್ಚಿನ ಪ್ರಾತಿನಿಧ್ಯವನ್ನು, ಉತ್ತರ ಪ್ರದೇಶದಲ್ಲಿ ಅದರ ಪ್ರಮುಖ ಪ್ರತಿಸ್ಪರ್ಧಿ ಅಖಿಲೇಶ್ ಯಾದವ್ ಅವರ ರಾಜಕಾರಣವನ್ನು ಅಳವಡಿಸಿಕೊಂಡ ಬಗೆಯಾಗಿ ನೋಡಬಹುದು. ಒಬಿಸಿ ಮತ್ತು ದಲಿತ ಸಮುದಾಯದ ಮುಖಗಳು ಮತ್ತು ವಿಚಾರಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ತಂತ್ರಗಾರಿಕೆಯನ್ನು ಬಹಿರಂಗವಾಗಿಯೇ ಪ್ರತಿಪಾದಿಸಿದ್ದವರು ಅಖಿಲೇಶ್ ಯಾದವ್.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಹುಜನ ರಾಜಕಾರಣದ ಐಕಾನ್ ಕಾನ್ಷಿರಾಮ್ ಅವರ ನಿಲುವನ್ನು ಅನುಸರಿಸುತ್ತ, ಸಂಖ್ಯೆ ಇರುವವರಿಗೆ ಪಾಲು ಇದೆ ಎಂದು ಘೋಷಿಸುತ್ತಿರುವುದು, ಕಾಂಗ್ರೆಸ್ ಕೂಡ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಸಂಪೂರ್ಣವಾಗಿ ಸ್ವೀಕರಿಸಿರುವುದನ್ನು ಸೂಚಿಸುತ್ತಿದೆ.
ವಾಸ್ತವವಾಗಿ, ಮಹಿಳಾ ಮೀಸಲಾತಿಯಲ್ಲಿ ಒಬಿಸಿ ಮಹಿಳೆಯರಿಗೆ ನಿಗದಿಯಾಗಿರುವ ಒಳಮೀಸಲಾತಿಯನ್ನು ಸೇರಿಸದಿರುವುದು ಮತ್ತು ಮಸೂದೆ ಜಾರಿಯಾಗುವುದರ ಬಗ್ಗೆ ಇರುವ ಅನಿಶ್ಚಿತತೆ, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ 120 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಮತ್ತದರ ಮಂಡಲ್ ರಾಜಕೀಯದ ಮಿತ್ರಪಕ್ಷಗಳಿಗೆ ಸಾಮಾಜಿಕ ನ್ಯಾಯ ರಾಜಕಾರಣಕ್ಕೆ ಸಾಮಾನ್ಯ ನೆಲೆಯನ್ನು ಒದಗಿಸಿದೆ. ಪ್ರಶ್ನೆಯೆಂದರೆ, 2024ರ ಲೋಕಸಭಾ ಚುನಾವಣೆಗೆ ಹೋಗುತ್ತಿರುವಾಗ ಅವರು ಸಂಸತ್ತಿನ ಹೊರಗೆ ಮತ್ತು ಜನರ ಬಳಿ ವಾಸ್ತವದ ಬಗ್ಗೆ ಹೇಳಬಲ್ಲರೆ? ಜಾತಿ ಗಣತಿಯು ಇನ್ನೂ ನಡೆಯದೇ ಇರುವಾಗ, ಸದ್ಯಕ್ಕೆ ದೇಶದಲ್ಲಿ ಎಷ್ಟು ಒಬಿಸಿ ಮತ್ತು ಮಹಿಳಾ ಸಂಸದರು ಮತ್ತು ಶಾಸಕರಿದ್ದಾರೆ ಎಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸ್ಪಷ್ಟಪಡಿಸಬಲ್ಲವೆ?
(ಕೃಪೆ:thewire.in)