ಬಿಜೆಪಿ ಹಾಗು ಮೋದಿ ವಿರುದ್ಧ ವಿಭಿನ್ನವಾಗಿ ಹೋರಾಡುವ ಸುಳಿವು ನೀಡಿದ ವಿಪಕ್ಷ ಮಹಾಮೈತ್ರಿ I.N.D.I.A.

Update: 2023-07-25 17:17 GMT
Editor : musaveer | By : ಆರ್. ಜೀವಿ

Photo : ಮೋದಿ | PTI

ನರೇಂದ್ರ ಮೋದಿ ಹಾಗು ಬಿಜೆಪಿ ಕೂಟದ ವಿರುದ್ಧದ ಪ್ರತಿಪಕ್ಷಗಳ ಒಗ್ಗಟ್ಟು ಮೋದಿ ಮತ್ತು INDIA ನಡುವಿನ ಹೋರಾಟವಾಗಿ ರೂಪುಗೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆ ರೂಪಿಸುತ್ತಿರುವ ಪ್ರತಿಪಕ್ಷಗಳು ಬೆಂಗ್ಳೂರಿನ ಸಭೆ ಬಳಿಕ ತಮ್ಮ ಮೈತ್ರಿಕೂಟಕ್ಕೆ INDIA ಎಂದು ನಾಮಕರಣ ಮಾಡಿವೆ. ಈಗ ಆ ಹೆಸರಿಗೆ ಜೀತೇಗಾ ಭಾರತ್ ಎಂಬ ಅಡಿ ಬರಹವನ್ನೂ ಸೇರಿಸಲಾಗಿದೆ.

INDIA ಎಂದರೆ, Indian National Developmental Inclusive Alliance ಎಂಬ ಹೆಸರಿನೊಂದಿಗೆ ಪ್ರತಿಪಕ್ಷಗಳ ಕೂಟ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ಈಗ ತೊಡೆ ತಟ್ಟಿದೆ. ಅಲ್ಲಿಗೆ ಈ ವಿಪಕ್ಷ ಮಹಾ ಮೈತ್ರಿ ವಿಭಿನ್ನವಾಗಿ, ವಿಶಿಷ್ಟವಾಗಿ ಮೋದಿ ಸವಾಲನ್ನು ಎದುರಿಸಲಿದೆ ಎಂಬುದು ಖಚಿತವಾಗಿದೆ. ಕಾಂಗ್ರೆಸ್ ಸೇರಿದಂತೆ 26 ಪ್ರತಿಪಕ್ಷಗಳ ಎರಡನೇ ಸಭೆ ಸೋಮವಾರ ಹಾಗು ಮಂಗಳವಾರ ಬೆಂಗಳೂರಿನಲ್ಲಿ ನಡೆಯಿತು. ಸೋನಿಯಾ ಗಾಂಧಿ ಸೇರಿದಂತೆ ಎಲ್ಲ 26 ಪಕ್ಷಗಳ ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ಭಾರತ ಗೆಲ್ಲುತ್ತದೆ, ಬಿಜೆಪಿ ಸೋಲುತ್ತದೆ ಎಂಬ ಭರವಸೆ ವ್ಯಕ್ತವಾಗಿದೆ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿಯು, ಆರ್ಜೆಡಿ, ಜೆಎಂಎಂ, ಎನ್ಸಿಪಿ, ಶಿವಸೇನಾ ಉದ್ಧವ್ ಠಾಕ್ರೆ ಬಣ, ಎಸ್ಪಿ, ರಾಷ್ಟ್ರೀಯ ಲೋಕದಳ, ಅಪ್ನಾ ದಳ(ಕಮೆರಾವಾಡಿ), ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ, ಸಿಪಿಎಂ, ಸಿಪಿಐ(ಎಂಎಲ್), ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ, ಕೆಎಂಡಿಕೆ, ಎಂಎಂಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್), ಇವು ಹೊಸ INDIA ಮೈತ್ರಿಕೂಟದ 26 ಪಕ್ಷಗಳಾಗಿವೆ.

ಅಂದ ಹಾಗೆ ಈ ಇಂಡಿಯಾ ಅನ್ನೋ ಹೆಸರನ್ನು ಮಾರ್ಚ್ ಒಂದರಂದು ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರತಿಪಕ್ಷಗಳ ಮಹಾಮೈತ್ರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದರು ಎನ್ನಲಾಗಿದೆ. ಆ ನಂತರ ಅದಕ್ಕೆ ಸೂಕ್ತ ಕಾರಣ ನೀಡಬೇಕೆಂದು ಮಮತಾ ಬ್ಯಾನರ್ಜಿ ಕೇಳಿದ್ದರು. ಅದಕ್ಕೆ ಇದು ಇಂಡಿಯಾ ಹಾಗು ಬಿಜೆಪಿ ನಡುವಿನ ಸಮರ ಎಂದು ರಾಹುಲ್ ಕೊಟ್ಟ ಕಾರಣ ಮತ್ತು ವಿವರಣೆ ಮಮತಾ ಸಹಿತ ಎಲ್ಲರಿಗೂ ಇಷ್ಟವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸಿದ್ಧಾಂತದ ವಿರುದ್ಧದ ಹೋರಾಟವಾಗಿ ಪ್ರತಿಪಕ್ಷಗಳ ಒಗ್ಗಟ್ಟು ಮುಂದುವರಿಯಲಿರುವುದರ ಸುಳಿವು ಬೆಂಗಳೂರು ಸಭೆಯಲ್ಲಿ ಸಿಕ್ಕಿದೆ. ಸಭೆಯಲ್ಲಿ 26 ಪಕ್ಷಗಳು ಒಟ್ಟಾಗಿ ತೆಗೆದುಕೊಂಡ, ಸಾಮೂಹಿಕ ಸಂಕಲ್ಪ ಎಂಬ ಹೆಸರಿನ ನಿರ್ಣಯಗಳೇನು ಎಂಬುದನ್ನು ಮೊದಲು ನೋಡೋಣ.

ಸಂವಿಧಾನದಲ್ಲಿ ಪ್ರತಿಪಾದಿತವಾಗಿರುವ ಪರಿಕಲ್ಪನೆಯ ಭಾರತವನ್ನು ರಕ್ಷಿಸುವ ಸಂಕಲ್ಪ.

ಗಣರಾಜ್ಯದ ಮೇಲಿನ ಬಿಜೆಪಿಯ ವ್ಯವಸ್ಥಿತ ಗಂಭೀರ ದಾಳಿ, ಸಂವಿಧಾನದ ಮೂಲ ಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವುಂಟಾಗಿರುವುದರ ಬಗ್ಗೆ ಪ್ರಸ್ತಾಪ, ಮತ್ತದರ ವಿರುದ್ಧ ಹೋರಾಡುವ ನಿರ್ಧಾರ.

ಮಣಿಪುರದಲ್ಲಿನ ಮಾನವೀಯ ದುರಂತ ಮತ್ತದರ ಬಗೆಗಿನ ಪ್ರಧಾನಿಯ ಆಘಾತಕಾರಿ ಮೌನದ ಬಗ್ಗೆ ಕಳವಳ ಮತ್ತು ಶಾಂತಿ ಮರಳಿಸಬೇಕೆಂಬ ಆಗ್ರಹ.

ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಎದುರಿಸುವ ನಿರ್ಧಾರ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಎಲ್ಲಾ ಸಾಂವಿಧಾನಿಕ ಮಾನದಂಡಗಳನ್ನು ಮೀರುತ್ತಿರುವುದರ ಬಗ್ಗೆ ಪ್ರಸ್ತಾಪ.

ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ವಿರೋಧ.

ಬಿಜೆಪಿಯೇತರ ಆಡಳಿತದ ರಾಜ್ಯಗಳ ಕಾನೂನುಬದ್ಧ ಅಗತ್ಯಗಳು, ಅವಶ್ಯಕತೆಗಳು ಮತ್ತು ಹಕ್ಕುಗಳನ್ನು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವುದರ ಪ್ರಸ್ತಾಪ.

ನಿರಂತರವಾಗಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಮತ್ತು ನಿರುದ್ಯೋಗದ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಸಂಕಲ್ಪ. ದೇಶದ ಆಸ್ತಿಯನ್ನು ಶ್ರೀಮಂತರಿಗೆ ಮಾರಾಟ ಮಾಡುತ್ತಿರುವ ಮೋದಿ ಸರ್ಕಾರದ ನಡೆಗೆ ವಿರೋಧ.

ಪ್ರಬಲ ಸಾರ್ವಜನಿಕ ವಲಯದ ಜೊತೆಗೆ ಸ್ಪರ್ಧಾತ್ಮಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ವಲಯದೊಂದಿಗೆ ನ್ಯಾಯಯುತ ಆರ್ಥಿಕತೆಯ ನಿರ್ಮಾಣದ ಇಂಗಿತ. ಉದ್ಯಮದ ಮನೋಭಾವ ಬೆಳೆಸುವುದು, ರೈತ ಮತ್ತು ರೈತ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಹಂಬಲ. ಅಲ್ಪಸಂಖ್ಯಾತರ ಮೇಲಿನ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಟ.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಸಮುದಾಯಗಳಿಗೆ ನ್ಯಾಯ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಕಾಶ್ಮೀರಿ ಪಂಡಿತರ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯುವ ಸಂಕಲ್ಪ ಮತ್ತು ಇದರ ಮೊದಲ ಹಂತವಾಗಿ ಜಾತಿ ಗಣತಿಯ ಜಾರಿಯ ಇಂಗಿತ.

ಸಹ ಭಾರತೀಯರನ್ನು ಗುರಿಯಾಗಿಸುವ, ಕಿರುಕುಳ ನೀಡುವ ಮತ್ತು ನಿಗ್ರಹಿಸುವ ಬಿಜೆಪಿಯ ವ್ಯವಸ್ಥಿತ ಪಿತೂರಿಯ ವಿರುದ್ಧ ಹೋರಾಟ. ದ್ವೇಷದ ಪ್ರಚಾರ ಆಡಳಿತ ಪಕ್ಷವನ್ನು ಮತ್ತು ಅದರ ಒಡೆಯುವ ನೀತಿಯನ್ನು ವಿರೋಧಿಸುವ ಎಲ್ಲರ ವಿರುದ್ಧ ಹಿಂಸಾಚಾರಕ್ಕೆ ಕಾರಣವಾಗಿದ್ದು, ಈ ದಾಳಿಗಳು ಸಾಂವಿಧಾನಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸುವುದಲ್ಲದೆ, ಭಾರತ ಗಣರಾಜ್ಯದ ಮೂಲ ಮೌಲ್ಯಗಳನ್ನು ನಾಶಪಡಿಸುತ್ತಿರುವುದರ ಪ್ರಸ್ತಾಪ.

ದೇಶಕ್ಕೆ ಪರ್ಯಾಯ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಸೂಚಿಯನ್ನು ರೂಪಿಸುವ ನಿರ್ಧಾರ. ಹೆಚ್ಚು ಸಮಾಲೋಚನೆಯಿಂದ ಕೂಡಿದ, ಪ್ರಜಾಸತ್ತಾತ್ಮಕ ಮತ್ತು ಸಹಭಾಗಿತ್ವ ಇರುವ ಆಡಳಿತದ ಭರವಸೆ.

ಹೀಗೆ ಅತ್ಯಂತ ಘನ ಉದ್ದೇಶಗಳು ಮತ್ತು, ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಅಟ್ಟಹಾಸಕ್ಕೆ ಕೊನೆ ಹಾಡುವ ದೃಢತೆ ಈ ಸಾಮೂಹಿಕ ಸಂಕಲ್ಪದಲ್ಲಿದೆ.

ಇದಕ್ಕೆ ಅನುಗುಣವಾಗಿ ನಾಯಕರೆಲ್ಲರೂ ಮಾತನಾಡಿದ್ದು, ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ತಕ್ಕಮಟ್ಟಿಗೆ ಅವರೆಲ್ಲರೂ ಬದಿಗಿಟ್ಟಿದ್ದಾರೆ ಎಂಬ ಭರವಸೆಯೂ ಈ ಸಭೆಯಲ್ಲಿ ಮೂಡಿದೆ. ಬಿಜೆಪಿಯ ಕೈಯಿಂದ ಮತ್ತು ಮೋದಿಯ ಕೈಯಿಂದ ದೇಶವನ್ನು ರಕ್ಷಿಸುವ, ದೇಶದ ಜನಹಿತ ಕಾಯುವ ಸಂಕಲ್ಪ ಪ್ರತಿಪಕ್ಷ ಮೈತ್ರಿಕೂಟದ ಬಹುದೊಡ್ಡ ಚಾಲನಾ ಶಕ್ತಿಯಾಗಿ ಒಗ್ಗಟ್ಟನ್ನು ಮುನ್ನಡೆಸಲಿದೆ ಎಂಬ ನಂಬಿಕೆಯೂ ಹೊಮ್ಮಿದೆ. ಈ ನಡುವೆ ಸಂಚಾಲಕರ ಆಯ್ಕೆ ವಿಚಾರದಲ್ಲಿ ಸಹಮತ ಮೂಡಿಲ್ಲ ಎಂಬ ಸುದ್ದಿಯೂ ಬಂದಿದೆ.

ದೇಶದ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಾಂವಿಧಾನಿಕ ಸಂಸ್ಥೆಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ರತಿಪಕ್ಷಗಳ ಒಕ್ಕೂಟ ಹೊಂದಿರುವ ಸ್ಪಷ್ಟತೆ ಬಹಳ ಮುಖ್ಯವಾದುದಾಗಿದೆ. ಅಲ್ಪಸಂಖ್ಯಾತರು, ದಲಿತರು, ದಮನಿತರು, ಮಹಿಳೆಯರ ಪರವಾದ ದನಿಯಾಗಿ ನಿಲ್ಲುವ ಅದರ ದೃಢತೆ ಕೂಡ ಅದರ ಬಲವಾಗಲಿದೆ. ಈ ನಿಟ್ಟಿನಲ್ಲಿ ಜಾತಿ ಗಣತಿ ಜಾರಿಯ ನಿರ್ಧಾರ ಕೂಡ ಪ್ರತಿಪಕ್ಷಗಳ ಎದುರಿನ ಸ್ಪಷ್ಟತೆಯನ್ನು ಕಾಣಿಸಿದೆ. ಜಾತಿ ಗಣತಿ, ಉಪಜಾತಿ, ಸಮುದಾಯಗಳ ನಿಖರ ಚಿತ್ರ ಕೊಡಲಿರುವುದರಿಂದ ದೇಶದ ಜಾತಿ ಪರಿಕಲ್ಪನೆಯ ಚಿತ್ರವನ್ನೇ ಬದಲಿಸಲಿದೆ. ಮತ್ತದು ರಾಜಕೀಯವಾಗಿ ಉಂಟುಮಾಡಲಿರುವ ಪರಿಣಾಮಗಳು ಕೂಡ ಅತ್ಯಂತ ಕುತೂಹಲಕಾರಿ.

ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯವೆರಡನ್ನೂ ತೂಗಿಸಿಕೊಂಡು ಹೋಗುವ ಔದ್ಯಮಿಕವಾಗಿ ಮಹತ್ವದ ನಿಲುವು ಹಾಗೆಯೆ ಕೃಷಿ ಕುರಿತ ಆಲೋಚನೆಗಳು ಕೂಡ ಹೊಸ ದಿಕ್ಕಿನೆಡೆಗೆ ಕಣ್ಣಿಟ್ಟಿವೆ.

ಬಹುಶಃ ಇವೆಲ್ಲವೂ, ಬರೀ ಭಾವನೆಗಳ ಮೇಲೆ ಆಟವಾಡುವ ಬಿಜೆಪಿಯ ಬೇರಿಗೆ ಕೈಹಾಕುವಷ್ಟು ಶಕ್ತಿಯುತವಾದ ಸಂಕಲ್ಪಗಳು. ಅವುಗಳ ಕುರಿತ ಬದ್ಧತೆಯೊಂದಿಗೆ ಕೂಡಿ ನಡೆಯುವ ಗಟ್ಟಿತನ ಮಾತ್ರ ಪ್ರತಿಪಕ್ಷಗಳಿಗೆ ಈಗ ಬೇಕಿದೆ. ಪ್ರತಿಪಕ್ಷಗಳ ಒಕ್ಕೂಟದ ಬಗೆಗಿನ ಭಯ ಬಿಜೆಪಿಯನ್ನು ಒಳಗೊಳಗೇ ಕಾಡಿದೆ ಎಂಬುದಕ್ಕೆ ಅದು ಮಂಗಳವಾರ ನಡೆಸಿದ ಎನ್ಡಿಎ ಸಭೆಯೇ ಸಾಕ್ಷಿ. ಪ್ರತಿಪಕ್ಷಗಳು ವ್ಯಂಗ್ಯವಾಡಿದಂತೆ ಈವರೆಗೆ ನೆನಪಿರದ ಮೈತ್ರಿಪಕ್ಷಗಳು ಈಗ ಮೋದಿಗೆ, ಬಿಜೆಪಿಗೆ ದಿಢೀರನೆ ನೆನಪಾಗಿವೆ.

ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ಮುಗಿದ ಬೆನ್ನಲ್ಲೇ ದೆಹಲಿಯಲ್ಲಿ ಎನ್ಡಿಎ ಸಭೆ ಶುರುವಾಗಿತ್ತು. ಒಟ್ಟು 38 ಪಕ್ಷಗಳು ಸಭೆಗೆ ಹಾಜರಾಗಿದ್ದವು. ಸಭೆಯಲ್ಲಿ ಮೋದಿ ಎನ್‌ಡಿಎ ಕೂಟವನ್ನು ಭಾರತ್‌ ಎಂದು ಬಣ್ಣಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಶೇ.50 ರಷ್ಟು ಮತ ಪಡೆಯಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳು :

ಬಿಜೆಪಿ, ಶಿವಸೇನೆ (ಶಿಂಧೆ), ಎನ್‌ಸಿಪಿ (ಅಜಿತ್‌ ಪವಾರ್‌), ಆರ್‌ಎಲ್‌ಎಸ್‌ಪಿ, ಎಐಎಡಿಎಂಕೆ, ಅಪ್ನಾದಳ (ಸೋನೆಯ್‌ಲಾಲ್‌), ಎನ್‌ಪಿಪಿ, ಎನ್‌ಡಿಪಿಪಿ, ಎಜೆಎಸ್‌ಯು, ಎಸ್‌ಕೆಎಂ, ಎಂಎನ್‌ಎಫ್‌, ಐಪಿಎಫ್‌ಟಿ, ಎನ್‌ಪಿಎಫ್‌, ಆರ್‌ಪಿಐ (ಅಠಾವಳೆ), ಎಜಿಪಿ, ಪಿಎಂಕೆ, ತಮಿಳ್‌ ಮಾನಿಲಾ ಕಾಂಗ್ರೆಸ್‌, ಯುಪಿಪಿಎಲ್‌, ಎಸ್‌ಬಿಎಸ್‌ಪಿ, ಎಸ್‌ಎಡಿ (ಸಂಯುಕ್ತ), ಎಂಜಿಪಿ, ಜನನಾಯಕ ಜನತಾ ಪಕ್ಷ, ಪ್ರಹಾರ್‌ ಜನಶಕ್ತಿ,ರಾಷ್ಟ್ರೀಯ ಸಮಾಜ ಪಕ್ಷ, ಜನ ಸುರಾಜ್ಯ ಶಕ್ತಿ, ಕುಕಿ ಪೀಪಲ್ಸ್‌ ಒಕ್ಕೂಟ, ಯುಡಿಪಿ, ಎಚ್‌ಪಿಡಿಪಿ, ನಿಶಾದ್‌ ಪಕ್ಷ, ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌, ಹಿಂದೂಸ್ತಾನಿ ಅವಾಮ್‌ ಮೋರ್ಚಾ, ಜನಸೇನಾ, ಹರಿಯಾಣ ಲೋಕಹಿತ ಪಕ್ಷ, ಭಾರತೀಯ ಧರ್ಮ ಜನಸೇನಾ, ಕೇರಳ ಕಾಮರಾಜ್‌ ಕಾಂಗ್ರೆಸ್‌, ಪುತಿಯಾ ತಮಿಳಗಂ, ಲೋಕಜನ ಶಕ್ತಿ (ಆರ್‌), ಗೋರ್ಖಾ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌.

38 ಪಕ್ಷಗಳು ಎನ್ಡಿಎ ಸೇರಿರುವುದು ಇ,ಡಿ ದಾಳಿಯ ಭೀತಿಯಿಂದ ಎಂದು ಎಎಪಿ ಈಗಾಗಲೆ ಕುಟುಕಿದೆ. ಎನ್ಡಿಎ ಮೈತ್ರಿ ಪಕ್ಷಗಳ ಬಗ್ಗೆ ನೆನಪಿರದ ಮೋದಿ ನಮ್ಮ ಒಗ್ಗಟ್ಟು ನೋಡಿ ಸಭೆ ಕರೆದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಎನ್ಡಿಎ ಸಭೆಯಲ್ಲಿ ಮೋದಿ, ಪ್ರತಿಪಕ್ಷಗಳ ಮೈತ್ರಿಕೂಟ ತನ್ನನ್ನು INDIA ಎಂದು ಕರೆದುಕೊಂಡಿರುವುದಕ್ಕೆ ಪ್ರತಿಯಾಗಿ, ಎನ್ಡಿಎ ಎಂದರೇನೆಂದು ಹೇಳಿರುವುದು ವರದಿಯಾಗಿದೆ. NDA ಎಂಬುದು New India, Developed Nation ಮತ್ತು Aspirations of People ಎಂದು ಅವರು ಸಭೆಯಲ್ಲಿ ಹೇಳಿದ್ದಾರೆ.

ಪ್ರತಿಪಕ್ಷ ಒಕ್ಕೂಟ ಹೆಸರು ಬದಲಿಸಿಕೊಂಡ ಮಾತ್ರಕ್ಕೆ ಗುಣ ಬದಲಾಗುವುದಿಲ್ಲ ಎಂದೂ ಟೀಕಿಸಿದ್ದಾರೆ. ಅಚ್ಚರಿಯೆಂದರೆ, ಅವರು ಎನ್ಡಿಎ ರೂಪಿಸಿದವರ ಬಗ್ಗೆ ನೆನೆಯುತ್ತ ವಾಜಪೇಯಿಯವರ ಜೊತೆ ಅಡ್ವಾಣಿಯನ್ನೂ ನೆನಪಿಸಿಕೊಂಡಿರುವುದು. ಇದೆಲ್ಲದರ ನಡುವೆ, ಹಿಂದೆ ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಸಭೆಗೆ ಗೈರಾಗಿರುವುದು ವರದಿಯಾಗಿದೆ.

ಇದೇ ವೇಳೆ ಬಿಜೆಪಿ ಜೊತೆ ಸದ್ಯ ಸ್ನೇಹದಿಂದಿರುವ ದೇವೇಗೌಡ ನೇತೃತ್ವದ ಜೆಡಿಎಸ್, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ, ಬಿಜೆಡಿ, ಬಿಆರ್‌ಎಸ್‌, ಬಿಎಸ್‌ಪಿ,ಎಐಎಂಐಎಂ, ಅಕಾಲಿದಳ (ಬಾದಲ್‌), ಬಿಡಿಎಫ್‌, ಗೋವಾ ಫಾರ್ವರ್ಡ್ ಪಾರ್ಟಿ, ಜನತಾ ಕಾಂಗ್ರೆಸ್‌ (ಜೋಗಿ) , ಡೆಮಾಕ್ರಟಿಕ್‌ ಪ್ರೊಗ್ರೆಸ್ಸೀವ್‌ ಆಜಾದ್‌ ಪಾರ್ಟಿ, ಎಂಎನ್‌ಎಸ್‌ ಮತ್ತು ಬಿಹಾರದಲ್ಲಿ ಸಣ್ಣ ಪಕ್ಷ ಸೇರಿದಂತೆ ಕೆಲವು ಪಕ್ಷಗಳಿಗೆ ಆಹ್ವಾನ ನೀಡಲಾಗಿಲ್ಲ ಎನ್ನಲಾಗಿದೆ.

ಇದೇನೇ ಇದ್ದರೂ, ಎನ್ಡಿಎ ಮೈತ್ರಿ ಪಕ್ಷಗಳ ಸಭೆ ಮೂಲಕ ಹೊಸ ಆಟಕ್ಕೆ ಮೋದಿ ನಾಂದಿ ಹಾಡಿರುವುದಂತೂ ಹೌದು. ಇದು ಪ್ರತಿಪಕ್ಷಗಳ ಮೈತ್ರಿಯೊಳಗೆ ಅಳುಕು ಮೂಡಿಸುವ ಮತ್ತೊಂದು ರಾಜಕೀಯ ಅಸ್ತ್ರವೂ ಹೌದು.

ಎದುರಾಳಿಯ ಇಂಥ ತಂತ್ರಗಾರಿಕೆಯ ಎದುರು ಎಡವದೆ ಪ್ರತಿಪಕ್ಷಗಳು ಗಟ್ಟಿಯಾಗಿ ನಿಲ್ಲಬೇಕಿರುವ ಹೊತ್ತು ಇದು ಎಂದು ಮಾತ್ರ ಸದ್ಯಕ್ಕೆ ಹೇಳಬಹುದು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಆರ್. ಜೀವಿ

contributor

Similar News