ಕಾಂಗ್ರೆಸ್ ಎದುರಿನ ಅಗ್ನಿಪರೀಕ್ಷೆ ಮತ್ತು ದಾಟಲು ಬೇಕಿರುವ ತೀಕ್ಷ್ಣ ದೃಷ್ಟಿಕೋನ
ಪೂರ್ವನಿಯೋಜಿತ ಗೆಲುವು ಕಾಂಗ್ರೆಸ್‌ನ ಆಂತರಿಕ ದೌರ್ಬಲ್ಯಗಳಿಗೆ ದೀರ್ಘಾವಧಿಯ ಪರಿಹಾರವಲ್ಲ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ವ್ಯಕ್ತಿಯಾಗಿದ್ದರೆ, ‘ಭಾರತ್ ಜೋಡೊ’ ಯಾತ್ರೆಯ ವೇಳೆ ಅವರು ಕಂಡ ಮತ್ತು ಪ್ರತಿಪಾದಿಸಿದಂಥ ವಿಚಾರಗಳು ಅವರ ದೃಷ್ಟಿಕೋನವನ್ನು ಇನ್ನಷ್ಟು ತೀಕ್ಷ್ಣಗೊಳಿಸಬೇಕಿದೆ.
ಚುನಾವಣೆಯ ಪ್ರಕ್ರಿಯೆ ಮತ್ತು ಫಲಿತಾಂಶ ಎರಡೂ ಶಾಸಕಾಂಗಗಳಲ್ಲಿನ ಪಕ್ಷಗಳ ಬಲಾಬಲ ಮತ್ತು ಅಧಿಕಾರದ ಇರುವಿಕೆ ಅಥವಾ ಕಳೆದುಕೊಳ್ಳುವಿಕೆಯನ್ನು ಹೊರತುಪಡಿಸಿ ಸಾಂಸ್ಥಿಕ ದೃಢತೆ ಮತ್ತು ಪಕ್ಷಗಳ ಸಂದರ್ಭಾನುಸಾರ ಬದಲಾವಣೆಯನ್ನು ಬಿಂಬಿಸುತ್ತವೆ. ಅವು ರಾಜಕೀಯ ನಾಯಕತ್ವದ ಬಗೆಗಿನ ಸಹಿಷ್ಣುತೆ ಮತ್ತು ಹೊಸದನ್ನು ಬಯಸುವ ಜನರ ಮನೋಗತ ಎರಡನ್ನೂ ಸಮಾನವಾಗಿಯೇ ತೋರಿಸುತ್ತವೆ.
ಈ ದೃಷ್ಟಿಕೋನದಿಂದ, ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಕಳೆದ ಒಂಭತ್ತು ವರ್ಷಗಳಿಂದ ಅಗ್ನಿಪರೀಕ್ಷೆ ಎದುರಿಸುತ್ತಲೇ ಇದ್ದಾರೆ. ಮೋದಿ-ಶಾ ಜೋಡಿಯ ಬಿಜೆಪಿ ವಿರುದ್ಧ ಸೀಮಿತ ಯಶಸ್ಸಿನೊಂದಿಗೆ ಮುನ್ನುಗ್ಗುವ ಯತ್ನದಲ್ಲಿರುವ ಅವರಿಗೆ, ಛತ್ತೀಸ್‌ಗಡ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳು ನಿಜವಾಗಿಯೂ ಬಹು ಮುಖ್ಯವಾದವುಗಳಾಗಿವೆ.
ಈ ಹಿಂದೆ 2019ರಲ್ಲಿ ಆಪರೇಷನ್ ಕಮಲದ ಪರಿಣಾಮವಾಗಿ ಕರ್ನಾಟಕದಲ್ಲಿ ಸೋತಿದ್ದ ಕಾಂಗ್ರೆಸ್ ಕಳೆದ ವಿಧಾನಸಭೆಯಲ್ಲಿ ಬಹುಮತದೊಂದಿಗೆ ಗೆದ್ದದ್ದು ಅದರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತ್ತು. ಸ್ಥಳೀಯ ನಾಯಕತ್ವ, ಮಲ್ಲಿಕಾರ್ಜುನ ಖರ್ಗೆ ಅವರ ಪ್ರಬುದ್ಧ ನಿರ್ವಹಣೆ ಮತ್ತು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಪ್ರಭಾವ ಆ ಗೆಲುವಿಗೆ ಕಾರಣವಾಯಿತು.
ಇವತ್ತಿನ ರಾಜಕೀಯ ಸಂಕಥನದಲ್ಲಿ ಮೋದಿಯ ಆರಾಧನೆ, ಹಿಂದುತ್ವ ಮತ್ತು ಆರ್ಥಿಕ ಉಚಿತ ಕೊಡುಗೆಗಳಾದ ವಿದ್ಯುತ್, ಬಡವರಿಗೆ ಆಹಾರ ಧಾನ್ಯಗಳು, ಬಡ ಮಹಿಳೆಯರಿಗೆ ನಗದು ವರ್ಗಾವಣೆ, ಸೈಕಲ್ ಮತ್ತು ಲ್ಯಾಪ್‌ಟಾಪ್‌ಗಳು, ಹಳೆಯ ಪಿಂಚಣಿಯ ಪುನರುಜ್ಜೀವನ ಇವು ಪ್ರಾಬಲ್ಯ ಸಾಧಿಸಿದೆ. ಯೋಜನೆ, ಸಾಲ ಮನ್ನಾ, ಸಬ್ಸಿಡಿ ರಸಗೊಬ್ಬರ ಮತ್ತು ರೈತರಿಗೆ ಹೆಚ್ಚಿದ ಕನಿಷ್ಠ ಬೆಂಬಲ ಬೆಲೆ, ಬಿಹಾರದಲ್ಲಿ ಜಾತಿ ಗಣತಿ ಮತ್ತು ಉದ್ಯೋಗ ಕೋಟಾಗಳ ಮೂಲಕ ಇದಕ್ಕೆ ಹೊಸ ಆಯಾಮದ ಸೇರ್ಪಡೆಯೂ ಆಗಿದೆ.
ನೆಹರೂ ಮತ್ತು ಗಾಂಧಿ ಕುಟುಂಬಕ್ಕೆ ಹೊರತಾಗಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷರಾಗಿಸುವ ಮೂಲಕ ಅತಿ ಹಳೆಯ ಪಕ್ಷ ಕಾಂಗ್ರೆಸ್ ತನ್ನ ಕುರಿತು ಇದ್ದ ಸಾರ್ವಜನಿಕ ಗ್ರಹಿಕೆಯನ್ನು ಬದಲಿಸಿದೆ. 2019ರಲ್ಲಿ ರಾಹುಲ್ ಗಾಂಧಿಯವರು ಹುದ್ದೆಯನ್ನು ಬಿಟ್ಟುಕೊಟ್ಟಿದ್ದರಿಂದ ಉಂಟಾದ ಅನಿಶ್ಚಿತತೆ ಇದರೊಂದಿಗೆ ಕೊನೆಗೊಂಡಿತು. ಈ ನಡುವೆ ಸೋನಿಯಾ ಗಾಂಧಿಯವರು ಹಂಗಾಮಿ ಅಧ್ಯಕ್ಷರಾಗಿದ್ದರು. ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಖರ್ಗೆಯವರ ಸಂಘಟನಾ ಕೌಶಲ್ಯ ಕಾಣಿಸಿತು. ಆದರೆ ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಪಕ್ಷವನ್ನು ಪುನರ್ ಸಂಘಟಿಸುವ ದೊಡ್ಡ ಕೆಲಸಕ್ಕೆ ಅಷ್ಟೇ ದೈತ್ಯ ಹೆಜ್ಜೆಗಳ ಅಗತ್ಯವಿದೆ. ಈಗಂತೂ ಚುನಾವಣೆಗಳಿರುವ ರಾಜ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಅವರು ದೇಶಾದ್ಯಂತ ಪಕ್ಷದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ.
ರಾಹುಲ್ ಗಾಂಧಿಯವರನ್ನು ನಾಯಕನನ್ನಾಗಿ ಬಿಂಬಿಸಲಾಗುತ್ತಿರುವುದ ರಿಂದ, ಮೇಲ್ಪಂಕ್ತಿಯಲ್ಲಿ ಇತರರಿಗೆ ಕಡಿಮೆ ಅವಕಾಶವಿದೆ. ಪಕ್ಷದ ಅಧಿಕೃತ ವೆಬ್‌ಸೈಟ್‌ನಲ್ಲಿ ಖರ್ಗೆಯವರಿಗಿಂತ ಮೊದಲು ಮೂವರು ಗಾಂಧಿಗಳಾದ ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಅವರ ಚಿತ್ರಗಳಿವೆ.
ಕಾಂಗ್ರೆಸ್ ಐದು ಸಮಸ್ಯೆಗಳ ಬಗ್ಗೆ ಎತ್ತಿಹೇಳುತ್ತ ಬಂದಿದೆ. ದೇಶದ ರೈತರು, ವಿದೇಶಿ ನೀತಿ, ನಿರುದ್ಯೋಗ, ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ. ಚುನಾವಣೆ ಎದುರಿಸಿದ ಪಂಚರಾಜ್ಯಗಳ ಪ್ರಣಾಳಿಕೆಗಳು ಆನ್‌ಲೈನ್‌ನಲ್ಲಿ ಕಾಣಿಸುತ್ತಿಲ್ಲ. ಏನೇ ಆಗಲಿ, ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಗಳು ದೂರದೃಷ್ಟಿ ಹೊಂದಿರುವ ಪಕ್ಷ ಎಂಬುದನ್ನು ಬಿಂಬಿಸಲಾರದವು. ಇದು ಜನಪ್ರಿಯತೆಗೆ ಒತ್ತುಕೊಟ್ಟು, ಸಮಸ್ಯೆ ಎದುರಿಸುವ ಕಸರತ್ತಾಗಿದೆ. ಅತ್ಯಂತ ಸವಾಲಿನ ರಾಜ್ಯವಾದ ರಾಜಸ್ಥಾನದಲ್ಲಿ ಕುಟುಂಬದ ಯಜಮಾನಿಗೆ ನಗದು ವರ್ಗಾವಣೆ, ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳು, ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪನೆ ಮುಂತಾದ ಭರವಸೆಗಳನ್ನು ಅದು ನೀಡಿದೆ. ಛತ್ತೀಸ್‌ಗಡದಲ್ಲಿ ಜಾತಿ ಗಣತಿ, ರೈತರ ಸಾಲ ಮನ್ನಾ, ಗ್ಯಾಸ್ ಸಿಲಿಂಡರ್‌ಗಳ ಮೇಲೆ 500 ರೂ. ಸಬ್ಸಿಡಿ, ಸ್ನಾತಕೋತ್ತರ ಹಂತದವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು ಇತರ ಸಬ್ಸಿಡಿಗಳ ಭರವಸೆ ನೀಡಿದೆ. ಇಂತಹ ಜನಪ್ರಿಯ ಕೊಡುಗೆಗಳು ಮಧ್ಯಪ್ರದೇಶದ ಪ್ರಣಾಳಿಕೆಯಲ್ಲಿಯೂ ಇವೆ.
ಸ್ಥಳೀಯವಾಗಿ ಸ್ವಲ್ಪ ಭಿನ್ನತೆಗಳೊಂದಿಗೆ, ತೆಲಂಗಾಣ ಮತ್ತು ಮಿಜೋರಾಂ ಪ್ರಣಾಳಿಕೆಗಳು ಕೂಡ ಜನಪರತೆಯಿಂದ ತುಂಬಿವೆ. ಬಡ ಹೆಣ್ಣುಮಕ್ಕಳ ಮದುವೆಗೆ 10 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ತೆಲಂಗಾಣದಲ್ಲಿ ಭರವಸೆ ನೀಡಿದೆ. ಮಿಜೋರಾಂನಲ್ಲಿ 15 ಲಕ್ಷ ರೂ. ವರೆಗೆ ಆರೋಗ್ಯ ವಿಮಾ ರಕ್ಷಣೆಯ ಭರವಸೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ.
ರಾಜ್ಯ ನಾಯಕರು ಖರ್ಗೆ ಅವರೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಿದ ಯಾವುದೇ ಪ್ರಣಾಳಿಕೆಗಳು ರಾಹುಲ್ ಗಾಂಧಿಯವರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2004ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ಅವರು, ಈ ಹಿಂದೆ ಸೋತಿದ್ದ ಅಮೇಠಿ ಕ್ಷೇತ್ರವನ್ನು ಬಿಟ್ಟು 2019ರಲ್ಲಿ ಕೇರಳದಿಂದ ಸ್ಪರ್ಧಿಸಿದ್ದರು. 2019ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಠಾತ್ತನೆ ರಾಜೀನಾಮೆ ನೀಡಿದರು. ಭಾರತ್ ಜೋಡೊ ಯಾತ್ರೆ ಅವರ ರಾಜಕೀಯ ಬದುಕಿನಲ್ಲಿ ಒಂದು ಮಹತ್ವದ ನಡೆ. ಆದರೆ ಪರಿಣಿತರು ಹೇಳುವ ಪ್ರಕಾರ, ಅದು ಸೀಮಿತ ಯಶಸ್ಸನ್ನು ಹೊಂದಿದೆ ಮತ್ತು ಪಕ್ಷ ಸಂಘಟನೆಯ ಮೇಲೆ ಕಡಿಮೆ ಪರಿಣಾಮ ಬೀರಿದೆ. ಭಾರತ್ ಜೋಡೊ ಯಾತ್ರೆ ಮೂಲಕ ನಿಜವಾಗಿಯೂ ರಾಹುಲ್ ಪ್ರಭಾವ ಹೆಚ್ಚಿದೆಯೇ ಎಂಬುದನ್ನು ಮುಂಬರುವ ಚುನಾವಣಾ ಫಲಿತಾಂಶಗಳು ತೋರಿಸಲಿವೆ.
2004ರಿಂದ ಬಿಜೆಪಿಯ ಮಾಧ್ಯಮ ಸೆಲ್ ಭಾರೀ ಬೆಲೆ ತೆತ್ತು ರಾಹುಲ್ ಅವರ ವಿರುದ್ಧ ಮಾಡಿದ ಅಪಪ್ರಚಾರದಿಂದ ಅಂಟಿಕೊಂಡಿದ್ದ ‘ಪಪ್ಪು’ ಎಂಬ ಹಣೆಪಟ್ಟಿ ಮಾತ್ರ ಕಳಚಿಬಿದ್ದಿದೆ. ಆದರೆ ಪರ್ಯಾಯ ರಾಷ್ಟ್ರೀಯ ನಾಯಕರಾಗಿ ಅವರನ್ನು ಜನತೆ ಸ್ವೀಕರಿಸುತ್ತಾರೆಯೇ ಎಂಬುದು ಇನ್ನೂ ಖಚಿತವಾಗಬೇಕಿದೆ. ಇತ್ತೀಚೆಗೆ ಕಾಂಗ್ರೆಸ್, ದೇಶದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಬಗ್ಗೆ ಸಮಗ್ರ ಡೇಟಾವನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ರಾಹುಲ್ ಅವರ ಭಾಷಣಗಳು ವಿರಳವಾಗಿ ಅವನ್ನು ಪ್ರತಿಬಿಂಬಿಸುತ್ತವೆ. ಮೋದಿಯವರ ಹಿಂದುತ್ವವನ್ನು ಅನುಸರಿಸಿ ರಾಹುಲ್ ಮತ್ತವರ ಪಕ್ಷದ ನಾಯಕರು ದೇವಸ್ಥಾನಗಳಿಗೆ ಹೋಗುತ್ತಾರೆ.
ಇತ್ತೀಚೆಗೆ ಅವರು ಅದಾನಿ-ಮೋದಿ ಸಂಬಂಧದ ಮೇಲಿನ ದಾಳಿಗೆ ಹೊರತಾಗಿ, ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ. ಚುನಾವಣೆಯಿರುವ ರಾಜ್ಯಗಳಲ್ಲಿ ಬಿಹಾರದ ಜಾತಿ ಗಣತಿಯನ್ನು ಅನುಕರಿಸಲು ಮುಂದಾಗಿದ್ದಾರೆ. ಈ ಪ್ರಕ್ರಿಯೆಯನ್ನು ಸಮಾಜದ ವಾಸ್ತವ ಎಂದು ವಿವರಿಸುವ ಅವರು ಒಬಿಸಿ ಮತಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದಾರೆ. ಕೇಂದ್ರ ಸರಕಾರದ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಲ್ಲಿ ಶೇ.0.5ಕ್ಕಿಂತ ಕಡಿಮೆ ಒಬಿಸಿ ಪ್ರಾತಿನಿಧ್ಯವಿದೆ ಎಂದು ಅವರು ಸ್ಪಷ್ಟವಾಗಿ ಎತ್ತಿ ತೋರಿಸಿದ್ದಾರೆ. ಕಾಂಗ್ರೆಸ್ ಆಯ್ಕೆಯಾದರೆ ಇಂತಹ ಎಲ್ಲ ದೋಷಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಆದರೂ ಅವರು ಶಿಕ್ಷಣ, ಉದ್ಯೋಗ, ಗವರ್ನರ್ ಅಂತಹ ಸಂಸ್ಥೆಗಳ ದುರುಪಯೋಗ ಮತ್ತು ಹೆಚ್ಚು ರಾಜಕೀಯಗೊಳಿಸಿದ ಪೊಲೀಸ್ ಮತ್ತು ನಾಗರಿಕ ಸೇವೆಯ ಸುಧಾರಣೆಯ ಕುರಿತು ತಮ್ಮ ಪಕ್ಷದ ನೀತಿ, ದೃಷ್ಟಿಕೋನ ಏನೆಂಬುದನ್ನು ವಿವರಿಸಬೇಕಾಗಿದೆ. ರಾಷ್ಟ್ರೀಯ ನಾಯಕರಾಗಿ, ವಿದೇಶಾಂಗ ನೀತಿಯ ಬಗ್ಗೆ ಅವರ ದೃಷ್ಟಿಕೋನವು ಸ್ಪಷ್ಟವಾದ ಅಭಿವ್ಯಕ್ತಿಯನ್ನು ಹೊಂದಿರಬೇಕಾಗಿದೆ. ನಿಸ್ಸಂಶಯವಾಗಿ, ಅವರು ಹೆಚ್ಚು ಗಮನ ಸೆಳೆಯುತ್ತಿದ್ದರೂ, ಹೆಚ್ಚು ಹೆಚ್ಚಾಗಿ ಸಾರ್ವಜನಿಕವಾಗಿ ಸ್ವೀಕೃತ ನಾಯಕ ಎನ್ನಿಸತೊಡಗಿದ್ದರೂ, ಈ ವಿಚಾರಗಳಲ್ಲಿ ಅವರ ಸಲಹೆಗಾರರು ಗಮನ ಹರಿಸಬೇಕಿದೆ.
ಬಿಜೆಪಿಯೊಳಗಿನ ಆಂತರಿಕ ವಿರೋಧಾಭಾಸಗಳು, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಭ್ರಷ್ಟಾಚಾರ ಕುರಿತ ಮಾಧ್ಯಮ ವರದಿಗಳು ಕಾಣಿಸಿವೆ. ಇದು ಕನಿಷ್ಠ ಮೂರು ರಾಜ್ಯಗಳನ್ನು ಗೆಲ್ಲಲು ಕಾಂಗ್ರೆಸ್‌ಗೆ ನೆರವಾಗಲಿದೆ ಎಂದೂ ಹೇಳಲಾಗುತ್ತಿದೆ. ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿಯೂ ಭ್ರಷ್ಟಾಚಾರದ ಆರೋಪ ಎದುರಿಸಿದೆ. ಇದು ಕೂಡ ಕಾಂಗ್ರೆಸ್‌ಗೆ ನೆರವಾಗಬಹುದು. ಆದರೂ, ಪೂರ್ವನಿಯೋಜಿತ ಗೆಲುವು ಕಾಂಗ್ರೆಸ್‌ನ ಆಂತರಿಕ ದೌರ್ಬಲ್ಯಗಳಿಗೆ ದೀರ್ಘಾವಧಿಯ ಪರಿಹಾರವಲ್ಲ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ವ್ಯಕ್ತಿಯಾಗಿದ್ದರೆ, ‘ಭಾರತ್ ಜೋಡೊ’ ಯಾತ್ರೆಯ ವೇಳೆ ಅವರು ಕಂಡ ಮತ್ತು ಪ್ರತಿಪಾದಿಸಿದಂಥ ವಿಚಾರಗಳು ಅವರ ದೃಷ್ಟಿಕೋನವನ್ನು ಇನ್ನಷ್ಟು ತೀಕ್ಷ್ಣಗೊಳಿಸಬೇಕಿದೆ.
(ಕೃಪೆ:thewire.in)