ದೇಶಾದ್ಯಂತ ಸ್ಮಾರ್ಟ್ ಸಿಟಿ ಮಾಡುವವರು ಕ್ಯಾಪಿಟಲ್ ಸಿಟಿಯನ್ನು ಏನು ಮಾಡಿದ್ದಾರೆ ?

Update: 2023-07-18 04:01 GMT
Editor : Safwan | By : ಆರ್. ಜೀವಿ

ಯಮುನಾ ನದಿಯ ಮುನಿಸು ದಿಲ್ಲಿಯನ್ನು ಅಕ್ಷರಶಃ ಮುಳುಗಿಸಿಬಿಟ್ಟಿದೆ. ಸಹನೆ ಮೀರಿದ ಯಮುನೆ ದಿಲ್ಲಿಯೊಳಗೇ ನುಗ್ಗಿದೆ. ದಿಲ್ಲಿಯ ಮಂದಿಗೆ ಯಮುನೆಯ ಉಗ್ರ ಸ್ವರೂಪದ ದರ್ಶನವಾಗುತ್ತಿದೆ. ರಾಷ್ಟ್ರ ರಾಜಧಾನಿಯೇ ಮುಳುಗಿರುವ ಸ್ಥಿತಿ ಇದು. ದೆಹಲಿಯಲ್ಲೇ ಹೀಗಾದರೆ ಇತರ ಪ್ರದೇಶಗಳ ಪಾಡೇನು ಎಂಬ ಪ್ರಶ್ನೆಯೂ ಎದ್ದಿದೆ. ಕೇವಲ ಒಂದು ತಿಂಗಳ ಮಳೆ, ಅಭಿವೃದ್ಧಿಯ ಬೊಗಳೆ ರಾಜಕಾರಣವನ್ನು ಕೊಚ್ಚಿಕೊಂಡು ಹೋಗುತ್ತಿದೆ.

ಗುರುವಾರ ಬೆಳಗ್ಗಿನ ಹೊತ್ತಿಗೆ 208.48 ಮೀಟರ್ಗೆ ಏರಿದ್ದ ಯಮುನೆ, ಅಪಾಯ ಮಟ್ಟ ದಾಟಿ ಮೂರು ಮೀಟರ್ ಹೆಚ್ಚಾಗಿದ್ದು ವರದಿಯಾಗಿತ್ತು. ಮಾತ್ರವಲ್ಲದೆ ಇನ್ನೂ ಏರುವ ಅಪಾಯವಿರುವ ಬಗ್ಗೆ ವರದಿಗಳಿದ್ದವು. ಇದರೊಂದಿಗೆ ಯಮುನಾ ನೀರಿನ ಮಟ್ಟ 45 ವರ್ಷಗಳ ಹಿಂದಿನ ದಾಖಲೆ ಮುರಿದಿದೆ. 1978ರ ಸೆಪ್ಟೆಂಬರ್ 6ರಂದು ಯಮುನಾ ನದಿ ನೀರಿನ ಮಟ್ಟ 207 ಮೀಟರ್‌ ಮುಟ್ಟಿತ್ತು.

ಇಷ್ಟು ವರ್ಷಗಳ ಅವಧಿಯಲ್ಲಿ ಯಾರಿಗೂ ಯಮುನೆಯ ನೆನಪಾಗಲೇ ಇಲ್ಲ. ಅದರ ಹರಿವಿನ ಪ್ರದೇಶವನ್ನು ಎಗ್ಗಿಲ್ಲದೆ ಅತಿಕ್ರಮಿಸುವಾಗ ಯಾರಿಗೂ ಏನೇನೂ ಅನ್ನಿಸಲೇ ಇಲ್ಲ. ಯಮುನೆಯ ಜಾಗ ಅತಿಕ್ರಮಿಸಿ ಕಟ್ಟಲಾದ ಮನೆಗಳಿಗೆಲ್ಲ ಈಗ ಯಮುನೆಯ ನೀರು ನುಗ್ಗಿದೆ. ನದಿ ತಾನು ಹರಿಯುತ್ತಿದ್ದ ಪಾತ್ರವನ್ನು ಎಂದಿಗೂ ಮರೆಯೋದಿಲ್ಲ ಎಂಬ ಮಾತೊಂದು ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗ್ತಾ ಇದೆ. ಇದು ಸತ್ಯ ಎಂದಾದರೆ ದೇಶದ ಅಷ್ಟೂ ನಗರಗಳ ಗತಿ ಏನಾಗಬಹುದು ಎಂದು ಯೋಚಿಸಿದರೇ ಮೈ ಜುಮ್ಮೆನ್ನುತ್ತದೆ.

ದೆಹಲಿ ಮಾತ್ರವಲ್ಲ, ಉತ್ತರಾಖಂಡ, ಪಂಜಾಬ್, ಹರಿಯಾಣ, ಯುಪಿ, ಬಿಹಾರ ಮತ್ತು ಅಸ್ಸಾಂಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ.

ಈ ಪ್ರದೇಶಗಳಲ್ಲಿ ಪ್ರವಾಹ ಭಾರಿ ಹಾನಿಯನ್ನುಂಟು ಮಾಡಿದೆ. ಆದರೆ ಟಿವಿ ಚಾನೆಲ್‌ಗಳಲ್ಲಿ ದೆಹಲಿಯನ್ನು ಮಾತ್ರ ತೋರಿಸಲಾಗುತ್ತಿದೆ. ದೆಹಲಿ ಸರ್ಕಾರದ ಮಂದಿಗೂ ಯಮುನೆಯ ಪ್ರವಾಹದ ಬಿಸಿ ತಟ್ಟದೆ ಇಲ್ಲ. ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅವರ ಸಂಪುಟ ಸಹದ್ಯೋಗಿಗಳು, ಹಿರಿಯ ಅಧಿಕಾರಿಗಳಿರುವ ದೆಹಲಿ ಸಚಿವಾಲಯದ ಗೃಹ ಕಚೇರಿಗಳು ಕೂಡ ಜಲಾವೃತಗೊಂಡವು. ಅಲ್ಲೇ ಹೀಗಾದರೆ ಜನಸಾಮಾನ್ಯರ, ಬಡವರ ಗತಿ ಏನಾಗಿರಬಹುದು ?

ಇನ್ನೊಂದೆಡೆ, ನಗರದ ತಗ್ಗು ಪ್ರದೇಶಗಳ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಗುರುವಾರ ರಾತ್ರಿ ಹೊತ್ತಿನ ವರದಿಗಳ ಪ್ರಕಾರ, 24 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ದೆಹಲಿ ಸರ್ಕಾರ ಮಾಹಿತಿ ನೀಡಿದೆ. 21,092 ಜನರು ಟೆಂಟ್, ಶೆಲ್ಟರ್ಗಳಲ್ಲಿ ವಾಸಿಸುತ್ತಿದ್ದು, ಎನ್‌ಡಿಆರ್‌ಎಫ್‌ನ 12 ತಂಡಗಳು 1,022 ಜನರನ್ನು ರಕ್ಷಿಸಿವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಯಮುನಾ ನದಿಯ ಮೇಲ್ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಆಗಿರುವ ಭಾರಿ ಮಳೆಯಿಂದಾಗಿ ಯಮುನಾ ನದಿಯ ಕೆಳಹರಿವು ಹೆಚ್ಚಿದೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡಲಾಗುತ್ತಿದೆ. ಹತ್ನಿಕುಂಡ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ದಿಲ್ಲಿ ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಒತ್ತುವರಿ ಹಾಗೂ ಹೂಳು ತುಂಬುವಿಕೆ. ಇದಕ್ಕೂ ಮುನ್ನ ನೀರು ಹರಿಯಲು ಸಾಕಷ್ಟು ವಿಶಾಲ ಸ್ಥಳಾವಕಾಶವಿತ್ತು. ಈಗ ಬಹಳ ಕಿರಿದಾದ ಜಾಗವಷ್ಟೇ ಉಳಿದಿದೆ.

ಇನ್ನೊಂದೆಡೆ, ನದಿಯ ಜಲಾನಯನ ಪ್ರದೇಶಗಳಲ್ಲಿ ಅಂದರೆ ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಇನ್ನೂ ಭಾರೀ ಮಳೆಯ ನಿರೀಕ್ಷೆಯಿದ್ದು, ಅದರ ಫಲವಾಗಿ ದೆಹಲಿಯಲ್ಲಿನ ಪ್ರವಾಹ ಸ್ಥಿತಿ ಕೂಡ ಮುಂದುವರಿಯಬಹುದು ಎನ್ನಲಾಗಿದೆ. ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿರುವುದು ಕೂಡ ಯಮುನೆ ಉಗ್ರ ಸ್ವರೂಪ ತಾಳಲು ಕಾರಣ. ಯಮುನಾ ನದಿಯ ತಳಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವುದು ಇಷ್ಟೆಲ್ಲ ಸಮಸ್ಯೆಗೆ ಮುಖ್ಯ ಕಾರಣ. ಅಲ್ಲದೆ ಅತಿಕ್ರಮಣಗಳ ಪಾಲೂ ಇದರಲ್ಲಿ ಸಾಕಷ್ಟಿದೆ.

ವಜಿರಾಬಾದ್‌ನಿಂದ ಓಖ್ಲಾದ 22 ಕಿಮೀ ನದಿ ಮಾರ್ಗದಲ್ಲಿ 20ಕ್ಕೂ ಹೆಚ್ಚು ಸೇತುವೆಗಳು ನೀರಿನ ಹರಿವಿಗೆ ತಡೆ ಒಡ್ಡುತ್ತವೆ. ಇದರಿಂದ ನದಿ ತಳಭಾಗದಲ್ಲಿ ಹೂಳು ಸಂಗ್ರಹವಾಗುತ್ತದೆ ಹಾಗೂ ನದಿಯ ನಡುವೆ ಅಸಂಖ್ಯ ಮರಳುದಿಬ್ಬಗಳು ರಚನೆಯಾಗುತ್ತವೆ ಎಂದು ಹೇಳಲಾಗುತ್ತದೆ. ದಿಲ್ಲಿಯ ಸಿವಿಲ್ ಲೇನ್ಸ್ ಪ್ರದೇಶದ ರಿಂಗ್‌ ರೋಡ್ ಸಂಪೂರ್ಣ ಜಲಾವೃತವಾಗಿದೆ. ಕಾಶ್ಮೀರಿ ಗೇಟ್ ಐ ಎಸ್‌ ಬಿ ಟಿ ಗೆ 'ಮಜ್ನು ಕಾ ಟಿಲಾ' ಸಂಪರ್ಕಿಸುವ ಮಾರ್ಗ ಮುಚ್ಚಿಹೋಗಿದೆ. ಈ ಸ್ಥಳ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ಹಾಗೂ ದಿಲ್ಲಿ ವಿಧಾನಸಭೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ.

ನೀರಿನ ಮಟ್ಟ ಏರಿಕೆಯೊಂದಿಗೆ ಮೂರು ಜಲ ಶುದ್ಧೀಕರಣ ಘಟಕಗಳನ್ನು ಮುಚ್ಚುವಂತಾಗಿದೆ. ಇದರಿಂದ ರಾಜಧಾನಿಯಲ್ಲಿ ಕುಡಿಯುವ ನೀತಿನ ತತ್ವಾರದ ಭೀತಿ ಎದುರಾಗಿದೆ. ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಕೇಜ್ರಿವಾಲ್ ಗುರುವಾರ ಬೆಳಗ್ಗೆ ಆದೇಶ ಹೊರಡಿಸಿದ್ದಾರೆ. ನದಿಯ ದಡದಲ್ಲಿರುವ ನಗರದ ಹಲವಾರು ಭಾಗಗಳು, ಮುಖ್ಯವಾಗಿ ಮಠದ ಮಾರುಕಟ್ಟೆ, ಯಮುನಾ ಬಜಾರ್, ಗೀತಾ ಘಾಟ್ ಮತ್ತು 'ಮಜ್ನು ಕಾ ಟಿಲ್ಲಾ'ದಿಂದ ವಜೀರಾಬಾದ್‌ವರೆಗಿನ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿರುವ ಬಗ್ಗೆ ವರದಿಗಳಿದ್ದವು.

ಇದು ದೇಶದ ರಾಜಧಾನಿಯ ಸ್ಥಿತಿ. ಯಮುನಾ ನದಿಯಲ್ಲಿ ತುಂಬಿರುವ ಹೂಳು ಬರೀ ಯಂತ್ರಗಳನ್ನು ಬಳಸಿ ಬಗೆಹರಿಸುವಂಥದ್ದಲ್ಲ. ಯಮುನೆಯ ಜಾಗವನ್ನು ದೆಹಲಿ ಅತಿಕ್ರಮಿಸಿಕೊಂಡಿರುವ ಪರಿಣಾಮವೇ ಈಗ ಎದುರಾಗಿರೋ ಈ ಸ್ಥಿತಿ. ದೇಶದ ರಾಜಧಾನಿ ದೆಹಲಿ ಹೀಗೆ ಮುಳುಗಿದ್ದರೆ, ದೇಶದ ಪ್ರಧಾನಿ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ.

"ದೇಶ್ ಮೆ ಕ್ಯಾ ಚಲ್ ರಹಾ ಹೈ... " ಎಂದು ಅಲ್ಲಿಂದಲೇ ಕೇಳಿದರೊ, ಅಥವಾ ಮರಳಿ ಬಂದು ವಿಮಾನದಿಂದ ಇಳಿಯುತ್ತಿದ್ದಂತೆ ಕೇಳುತ್ತಾರೊ ಗೊತ್ತಿಲ್ಲ. ಎಲ್ಲಿಂದ ಕೇಳಿದರೂ ಅವರ ಕಿವಿಗೆ ಹಿತವಾಗುವ ಉತ್ತರವನ್ನಷ್ಟೇ ಅವರು ಕೇಳಲು ಬಯಸುತ್ತಾರೆ. ಹಾಗಾಗಿ ಅದನ್ನೇ ಅವರ ಪಕ್ಷದ ನಾಯಕರು ಅವರಿಗೆ ಹೇಳುತ್ತಾರೆ.

ದೇಶಾದ್ಯಂತ ಸ್ಮಾರ್ಟ್ ಸಿಟಿ ಮಾಡಲು ಹೊರಟಿರುವ ಸರಕಾರ ಸ್ಮಾರ್ಟ್ ರಾಜಧಾನಿ ಮಾಡಿಲ್ಲ ಏಕೆ ? ಒಂದು ವರ್ಷ ಭಾರೀ ಮಳೆ ಬಂದು ದಿಲ್ಲಿಯ ಆಡಳಿತ ಕೇಂದ್ರಗಳೇ ಜಲಾವೃತವಾಗುತ್ತವೆ ಅಂದ್ರೆ ಅದ್ಯಾವ ರೀತಿಯ ಪ್ಲ್ಯಾನಿಂಗ್ ಮಾಡಿದ್ದಾರೆ ? ಇಂತಹ ಮಳೆ ಬಂದ್ರೆ ಏನಾಗಬಹುದು ಎಂದು ಒಮ್ಮೆಯೂ ಯೋಚಿಸಿಯೇ ಇಲ್ವಾ ?

ಮೋದಿ ಸರಕಾರ ಬಂದಾಗ ಗಂಗಾ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸುವ ಉದ್ದೇಶದಿಂದ ನಮಾಮಿ ಗಂಗೆ ಎಂಬ ಯೋಜನೆಯನ್ನೇ ಘೋಷಿಸಲಾಯಿತು. ಅದಕ್ಕಾಗಿ ಸಚಿವರು, ಪ್ರತ್ಯೇಕ ಇಲಾಖೆಯನ್ನೇ ಮಾಡಲಾಯಿತು. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಯಿತು. ಅದರಲ್ಲಿ ಸಾಕಷ್ಟು ಯಶಸ್ಸೂ ಸಿಕ್ಕಿದೆ ಎಂದು ಹೇಳುತ್ತವೆ ಸರಕಾರಿ ಮೂಲಗಳು. ಹಾಗಾದರೆ ಗಂಗೆಯಷ್ಟೇ ಪವಿತ್ರ ಯಮುನಾ ನದಿ ಬಗ್ಗೆ ಗಮನ ಹರಿಸಿಲ್ಲವೇ ? ಅದರ ಹೂಳೆತ್ತುವ ಕೆಲಸ ಯಾಕೆ ನಡೆದಿಲ್ಲ ? ನದಿ ಪಾತ್ರದ ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಬುಲ್ಡೋಜರ್ ಖ್ಯಾತಿಯ ಪಕ್ಷದ ಸರಕಾರದಿಂದ ಯಾಕೆ ನಡೆಯಲಿಲ್ಲ ?

" ದಿಲ್ಲಿವಾಸಿಗಳೇ ಎದ್ದೇಳಿ. ದಿಲ್ಲಿ ಗಟಾರವಾಗಿದೆ. ಇದು ನಾವು ತೆರಬೇಕಾದ ಬೆಲೆ " ಅಂತ ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ನ ಕೆಳಗೆ ಜನರು ಗಂಭೀರವಾಗಿಯೇ ಗೌತಮ್ ಗೆ ಕ್ಲಾಸ್ ಮಾಡಿದ್ದಾರೆ. ಈ ಬಿಜೆಪಿ ಸಂಸದರು ಯಾರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ ? ಏನಂತ ಎಚ್ಚರಿಕೆ ಕೊಡ್ತಾ ಇದ್ದಾರೆ ? ದಿಲ್ಲಿಯಲ್ಲಿ ಅತಿಕ್ರಮಣ ಆಗಿದ್ದರೆ ಅದನ್ನು ತೆಗೆಯೋ ಅಧಿಕಾರ ಇರೋದು ಯಾರ ಬಳಿ ? ಸಂಸದರಾಗಿ ಗಂಭೀರ್ ಏನಾದರೂ ಆ ನಿಟ್ಟಿನಲ್ಲಿ ಮಾಡಿದ್ದಾರಾ ? ಇದೆಲ್ಲ ಏನೇ ಇರಲಿ, ಯಮುನೆಯಂಥ ಪ್ರಾಕೃತಿಕ ಅಸಹನೆಗಳು ಸರ್ಕಾರಗಳಿಗೆ ಅರ್ಥವಾಗುವುದೇ ಇಲ್ಲ ಎಂಬುದೇ ಕಳವಳಕಾರಿ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಆರ್. ಜೀವಿ

contributor

Similar News