ಜಮ್ಮುಕಾಶ್ಮೀರ ಚುನಾವಣಾ ಫಲಿತಾಂಶ: ನೂತನ ವಿಧಾನಸಭೆಯು ಯಾವ ಅಧಿಕಾರಗಳನ್ನು ಹೊಂದಿರಲಿದೆ?

Update: 2024-10-08 11:20 GMT

Photo: PTI

ಹೊಸದಿಲ್ಲಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಮಂಗಳವಾರ ನಡೆದಿದ್ದು, ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವು ಮೇಲುಗೈ ಸಾಧಿಸಿದೆ. ಆಗಸ್ಟ್ 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಇದು ಮೊದಲ ಚುನಾವಣೆ ಆಗಿದ್ದು,ನೂತನ ವಿಧಾನಸಭೆಯು ಹಿಂದಿನ ವಿಧಾನಸಭೆಗಳಿಗಿಂತ ಗಣನೀಯವಾಗಿ ಭಿನ್ನವಾಗಿರಲಿದೆ.

ಆಗಸ್ಟ್ 2019ರ ಸಾಂವಿಧಾನಿಕ ಬದಲಾವಣೆಗಳು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಿತ್ತುಕೊಂಡಿವೆ, ಹೀಗಾಗಿ ನೂತನ ವಿಧಾನಸಭೆಯು ಕೇಂದ್ರಾಡಳಿತ ಪ್ರದೇಶಕ್ಕೆ ಆಗಿರುತ್ತದೆ,ರಾಜ್ಯಕ್ಕಲ್ಲ.

ಜಮ್ಮು-ಕಾಶ್ಮೀರದ ನೂತನ ವಿಧಾನಸಭೆಯು ಯಾವ ಅಧಿಕಾರಗಳನ್ನು ಹೊಂದಿರಲಿದೆ?

ಜಮ್ಮು-ಕಾಶ್ಮೀರ ಪುನರ್‌ಸಂಘಟನೆ ಕಾಯ್ದೆ, 2019 ಶಾಸಕಾಂಗವಿಲ್ಲದ ಲಡಾಖ್ ಮತ್ತು ಶಾಸಕಾಂಗವನ್ನು ಹೊಂದಿರುವ ಜಮ್ಮು-ಕಾಶ್ಮೀರ; ಹೀಗೆ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಿದೆ.

ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ಸಂವಿಧಾನದ ವಿಧಿ 239ರಡಿ ಪ್ರತಿ ಕೇಂದ್ರಾಡಳಿತ ಪ್ರದೇಶದ ಆಡಳಿತವನ್ನು ರಾಷ್ಟ್ರಪತಿಗಳು ತಮಗೆ ಸೂಕ್ತ ಕಂಡಂತೆ ಆಡಳಿತಾಧಿಕಾರಿಯ ಮೂಲಕ ನಡೆಸುತ್ತಾರೆ.

2019ರ ಕಾಯ್ದೆಯ 13ನೇ ವಿಧಿ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ಸಂಬಂಧಿಸಿದ ಸಂವಿಧಾನದ 239ಎ ವಿಧಿಯು ಪುದುಚೇರಿಯೊಂದಿಗೆ ಜಮ್ಮು-ಕಾಶ್ಮೀರಕ್ಕೂ ಅನ್ವಯಿಸುತ್ತದೆ ಎಂದು ಹೇಳುತ್ತದೆ.

ಶಾಸಕಾಂಗವನ್ನು ಹೊಂದಿರುವ ದಿಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಸಂವಿಧಾನದಲ್ಲಿ 239 ಎಎ ವಿಧಿಯಡಿ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ. ರಾಷ್ಟ್ರ ರಾಜಧಾನಿಯಾಗಿ ದಿಲ್ಲಿಯು ವಿಶಿಷ್ಟ ಸಾಂವಿಧಾನಿಕ ಸ್ಥಾನಮಾನವನ್ನು ಹೊಂದಿದ್ದು, ಇದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೆಚ್ಚಿನ ದಾವೆಗಳ ವಿಷಯವಾಗಿದೆ.

ಸರ್ವೋಚ್ಚ ನ್ಯಾಯಾಲಯವು ತನ್ನ 2018 ಮತ್ತು 2023ರ ತೀರ್ಪುಗಳಲ್ಲಿ ದಿಲ್ಲಿಯ ಶಾಸಕಾಂಗದ ಅಧಿಕಾರವನ್ನು ಎತ್ತಿ ಹಿಡಿದಿದ್ದರೂ,ಇತ್ತೀಚಿನ ವರ್ಷಗಳಲ್ಲಿ ಉಪರಾಜ್ಯಪಾಲರು ಮತ್ತು ದಿಲ್ಲಿ ಸರಕಾರದ ನಡುವೆ ರಾಜಕೀಯ ಪ್ರೇರಿತ ಕಚ್ಚಾಟಗಳು ಕಂಡು ಬಂದಿವೆ. ದಿಲ್ಲಿ ಪ್ರಕರಣದಲ್ಲಿ ಭೂಮಿ,ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೋಲಿಸ್ ಇವುಗಳ ಮೇಲೆ ಉಪ ರಾಜ್ಯಪಾಲರು ಅಧಿಕಾರವನ್ನು ಹೊಂದಿದ್ದಾರೆ. ಆದರೂ ‘ಸೇವೆಗಳು’ ಅಥವಾ ‘ಅಧಿಕಾರಶಾಹಿ’ ಮೇಲಿನ ನಿಯಂತ್ರಣ ರಾಜ್ಯ ಮತ್ತು ಕೇಂದ್ರದ ನಡುವೆ ವಿವಾದದ ವಿಷಯವಾಗಿದೆ. ಉಪರಾಜ್ಯಪಾಲರು ತನ್ನ ಅಧಿಕಾರದಲ್ಲಿರುವ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ಸ್ವಂತಂತ್ರ ವಿವೇಚನೆಯನ್ನು ಚಲಾಯಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದ ಬಳಿಕ ಕೇಂದ್ರವು 2023ರಲ್ಲಿ ಅಧಿಕಾರಶಾಹಿಯನ್ನು ಉಪರಾಜ್ಯಪಾಲರ ನಿಯಂತ್ರಣದಲ್ಲಿ ಸೇರಿಸಿ ಶಾಸನವನ್ನು ತಂದಿತ್ತು.ಇದು ಕೂಡ ನ್ಯಾಯಾಲಯದಲ್ಲಿ ಈಗ ಪ್ರಶ್ನಿಸಲ್ಪಟ್ಟಿದೆ. ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ) ಕೂಡ ರಾಜ್ಯ ಮತ್ತು ಕೇಂದ್ರದ ನಡುವೆ ವಿವಾದದ ವಿಷಯವಾಗಿದೆ.

2019ರ ಜಮ್ಮು-ಕಾಶ್ಮೀರ ಪುನರ್‌ಸಂಘಟನೆ ಕಾಯ್ದೆಯು ಸಂಪೂರ್ಣ ವಿಭಿನ್ನ ಸನ್ನಿವೇಶವನ್ನು ಸೃಷ್ಟಿಸಿದ್ದು,ರಾಜ್ಯ ವಿಧಾನಸಭೆಗೆ ಹೋಲಿಸಿದರೆ ಉಪರಾಜ್ಯಪಾಲರು ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಇಲ್ಲಿಯೂ ಉಪರಾಜ್ಯಪಾಲರು ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೋಲಿಸ್ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದು, ಇದರಲ್ಲಿ ರಾಜ್ಯ ಸರಕಾರವು ಹಸ್ತಕ್ಷೇಪ ಮಾಡುವಂತಿಲ್ಲ. ಅಲ್ಲದೆ ಹಣಕಾಸು ಮಸೂದೆಗಳ ವಿಶೇಷ ನಿಬಂಧನೆಗಳೊಂದಿಗೆ ವ್ಯವಹರಿಸುವ ಕಾಯ್ದೆಯ ಕಲಂ 36ರಂತೆ ಯಾವುದೇ ಮಸೂದೆ ಅಥವಾ ತಿದ್ದುಪಡಿಯನ್ನು ಉಪರಾಜ್ಯಪಾಲರಿಂದ ಶಿಫಾರಸು ಪಡೆಯದೆ ವಿಧಾನಸಭೆಯಲ್ಲಿ ಮಂಡಿಸುವಂತಿಲ್ಲ. ವಾಸ್ತವದಲ್ಲಿ ಪ್ರತಿಯೊಂದು ನೀತಿ ನಿರ್ಧಾರವು ಕೇಂದ್ರಾಡಳಿತ ಪ್ರದೇಶಕ್ಕೆ ಹಣಕಾಸು ಬಾಧ್ಯತೆಯನ್ನು ಸೃಷ್ಟಿಸುವುದರಿಂದ ಇದು ವ್ಯಾಪಕ ಪರಿಣಾಮಗಳನ್ನು ಹೊಂದಿದೆ.

2019ರ ಕಾಯ್ದೆಯು ಜಮ್ಮು-ಕಾಶ್ಮೀರ ಉಪರಾಜ್ಯಪಾಲರ ಅಧಿಕಾರಗಳನ್ನು ನಿರ್ದಿಷ್ಟ ಪಡಿಸಿದೆ. ಇದರ ಪ್ರಕಾರ ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೋಲಿಸ್ ಜೊತೆ ಅಧಿಕಾರಶಾಹಿ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕ ಕೂಡ ಉಪರಾಜ್ಯಪಾಲರ ನಿಯಂತ್ರಣದಲ್ಲಿರುತ್ತವೆ.

ಉಪರಾಜ್ಯಪಾಲರ ವಿವೇಚನಾಧಿಕಾರಕ್ಕೆ ಒಳಪಟ್ಟ ಯಾವುದೇ ವಿಷಯದಲ್ಲಿ ಅವರ ನಿರ್ಧಾರವು ಅಂತಿಮವಾಗಿರುತ್ತದೆ ಎಂದೂ ಕಾಯ್ದೆಯು ಹೇಳುತ್ತದೆ.

ಚುನಾವಣೆಗಳಿಗೆ ಮೊದಲು ಸರಣಿ ಆಡಳಿತಾತ್ಮಕ ಬದಲಾವಣೆಗಳು ಉಪರಾಜ್ಯಪಾಲರ ಅಧಿಕಾರಗಳನ್ನು ವಿಸ್ತರಿಸಿವೆ. ಅಡ್ವೊಕೇಟ್ ಜನರಲ್ ಮತ್ತು ಕಾನೂನು ಅಧಿಕಾರಿಗಳನ್ನು ನೇಮಕಗೊಳಿಸುವ ಹಾಗೂ ಕಾನೂನು ಕ್ರಮಗಳು ಮತ್ತು ಮಂಜೂರಾತಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಗಳನ್ನು ಅವರಿಗೆ ನೀಡಲಾಗಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News