ಮಹಿಳಾ ಮೀಸಲು: ಸಾಮಾಜಿಕ ನ್ಯಾಯದ ಅಗತ್ಯ ಮತ್ತು ಅನಿವಾರ್ಯ

Update: 2023-09-22 09:46 GMT

-ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. ೩೩ರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯನ್ನು ಕರ್ನಾಟಕದ ಎಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಮಂಡಿಸಲಾಗಿತ್ತು. ಈಗ ಸರಿಸುಮಾರು ಮೂರು ದಶಕಗಳ ನಂತರ ಈ ಮಸೂದೆಗೆ ಅಂಗೀಕಾರ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಸರ್ವಾನುಮತದ ಅಂಗೀಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮನವಿಯನ್ನು ಮಾಡಿದ್ದಾರೆ. ೨೦೨೪ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಎಲ್ಲಾ ಪಕ್ಷಗಳು ಈ ವಿಚಾರವಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿವೆ. ಕೆಲವು ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದರೆ ಮತ್ತೆ ಕೆಲವು ವಿರೋಧ ಪಕ್ಷಗಳು ಷರತ್ತುಬದ್ಧ ಬೆಂಬಲವನ್ನು ಘೋಷಿಸಿವೆ. ಈ ಮಸೂದೆಯು ಪುರುಷ ಪ್ರಧಾನ ಸಮಾಜದ ಗಂಡಾಳ್ವಿಕೆಯನ್ನು ಮೆಟ್ಟಿ ನಿಲ್ಲಲು ಮಹಿಳೆಯರಿಗೆ ದೊರಕಬಹುದಾದ ರಾಜಕೀಯ ಅಧಿಕಾರದ ಬಲ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ನಡುವೆ ಕೆಲವು ಬಹುಮುಖ್ಯವಾದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿವೆ.

ಭಾರತದಂತಹ ಬಹುತ್ವವುಳ್ಳ ದೇಶದಲ್ಲಿ ಜಾತಿ, ವರ್ಗ, ಲಿಂಗ ಮತ್ತು ಪ್ರಾದೇಶಿಕ ಅಸಮಾನತೆಗಳು ಸಾಮಾನ್ಯ ಸಂಗತಿಗಳು. ಪ್ರಾತಿನಿಧ್ಯದ ವಿಷಯ ಬಂದಾಗ ಇವುಗಳೇ ಪ್ರಧಾನ ಪಾತ್ರ ವಹಿಸುತ್ತವೆ. ಜಾತಿ ವ್ಯವಸ್ಥೆಯ ಅಸಮಾನತೆ, ದಮನ ದಬ್ಬಾಳಿಕೆಗಳು ಕ್ರೂರವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಆದಾರಿತ ಮಹಿಳಾ ಮೀಸಲಾತಿ ಅಗತ್ಯ ಮತ್ತು ಅನಿವಾರ್ಯ. ಭಾರತೀಯ ಸಮಾಜದಲ್ಲಿ ಜಾತಿ ಜನಾಂಗ ಧರ್ಮ ಮತ್ತು ಲಿಂಗದ ಆಧಾರದ ಎಲ್ಲ ಬಗೆಯ ತರತಮಗಳನ್ನು ಕೊನೆಗೊಳಿಸುವುದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಮಹಿಳಾ ಮೀಸಲಾತಿಯಂತಹ ಮಹತ್ವದ ಮಸೂದೆಯನ್ನು ಜಾರಿಗೆ ತರುವಾಗ ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಭಾರತೀಯ ಮಹಿಳೆಯರ ಸಬಲೀಕರಣದ ಹೆಜ್ಜೆಗುರುತುಗಳಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು.

ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವಾಗತಿಸಿರುವ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಇತರ ಹಿಂದುಳಿದ ಮಹಿಳೆಯರಿಗೂ ಮೀಸಲಾತಿ ನೀಡದಿದ್ದರೆ ಅನ್ಯಾಯವಾಗುತ್ತದೆ ಎಂದಿದ್ದಾರೆ. ೨೦೦೬ರಲ್ಲಿಯೇ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. ೫೦ರಷ್ಟು ಮೀಸಲಾತಿ ನೀಡಿದ ಮೊದಲ ರಾಜ್ಯ ಬಿಹಾರ. ಈಗಲೂ ಸಮಾಜವಾದಿ ಪಕ್ಷವು ಖರ್ಗೆ ಅವರ ಅಭಿಪ್ರಾಯವನ್ನು ಪುನರುಚ್ಚರಿಸಿದೆ. ಬಿಎಸ್‌ಪಿಯ ಮಾಯಾವತಿಯವರೂ ಎಸ್.ಸಿ. ಎಸ್.ಟಿ. ಇತರ ಒಬಿಸಿ ವರ್ಗಗಳಿಗೆ ಮೀಸಲಾತಿಯನ್ನು ಖಚಿತಪಡಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಮಹಿಳಾ ಮೀಸಲಾತಿಯ ವಿಷಯದಲ್ಲಿ ಪರಿಶಿಷ್ಟ ಜಾತಿ/ವರ್ಗ, ಇತರ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಮಹಿಳೆಯರಿಗೆ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿದಾಗ ಮಾತ್ರ ನ್ಯಾಯವನ್ನು ಒದಗಿಸಿದಂತಾಗುತ್ತದೆ. ಇದುವೇ ಸಾಮಾಜಿಕ ನ್ಯಾಯ. ಇಲ್ಲದೇ ಹೋದರೆ ಪ್ರಬಲ ಜಾತಿಗಳು ದಬ್ಬಾಳಿಕೆಯಿಂದ ಎಲ್ಲಾ ಅವಕಾಶಗಳನ್ನು ಕಿತ್ತುಕೊಂಡು ಮತ್ತಷ್ಟು ಅಸಮಾನತೆಯನ್ನು ಉಂಟು ಮಾಡುತ್ತವೆ. ರಾಜಕೀಯ, ಆರ್ಥಿಕ ಅವಕಾಶಗಳು ಸಾಮಾಜಿಕ ಅಸಮಾನತೆಗಳನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಲ್ಲವು. ಈ ನಿಟ್ಟಿನಲ್ಲಿ ರಾಜಕೀಯ ಅಧಿಕಾರದ ವಿಕೇಂದ್ರೀಕರಣವು ದಮನಿತ ಮಹಿಳೆಯರಿಗೆ ಆತ್ಮಸ್ಥೈರ್ಯವನ್ನು ತಂದುಕೊಡುತ್ತದೆ.

ಈ ಮಸೂದೆಯ ಮೂಲಕ ಆಳುವ ಪಕ್ಷ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ತನ್ನ ಎದುರಾಳಿಗಳನ್ನು ಎದುರಿಸಲು ಗುರಾಣಿಯಾಗಿ ಬಳಸುವುದು ಬಹುತೇಕ ಖಚಿತ. ಆದರೆ ವಾಸ್ತವವಾಗಿ ಮೀಸಲಾತಿಯನ್ನು ಸೈದ್ಧಾಂತಿಕವಾಗಿ ವಿರೋಧಿಸಿಕೊಂಡು ಬಂದ ಕೋಮುವಾದಿ ಪಕ್ಷ ಮತ್ತು ಅದರ ಬೆಂಬಲಿಗರ ಪ್ರತಿಕ್ರಿಯೆಗಳು ಈಗ ಭಿನ್ನವಾಗಿರಲಿವೆ. ವಾಸ್ತವವಾಗಿ ಮೀಸಲಾತಿ ವಿರೋಧಿಗಳು ಮೀಸಲಾತಿಯ ಮಾತನಾಡಿದಾಗ ಅನೇಕ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ. ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರಕಾರವು ಎಲ್ಲ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡುವ ಧಾವಂತವನ್ನು ತೋರಿತು. ಹಾಗೆ ನೋಡಿದರೆ ಕರ್ನಾಟಕದ ಪ್ರಬಲ ಸಮುದಾಯಗಳೇ ಮೀಸಲಾತಿಯ ಹೆಚ್ಚಳವನ್ನು ಕುರಿತು ಅಬ್ಬರಿಸಿದವು. ಮಂಕಾಗಿದ್ದು ನಿಜವಾಗಿ ಅಸಮಾನತೆಗೆ ಒಳಗಾಗಿದ್ದ ಸಮುದಾಯಗಳು. ಧ್ವನಿ ಇಲ್ಲದ ಅನೇಕ ಬುಡಕಟ್ಟು ಅಲೆಮಾರಿ ಸಮುದಾಯಗಳು ಈ ಅಬ್ಬರದ ನಡುವೆ ಮಂಕಾದವು. ಅದೂ ಚುನಾವಣೆಯ ಹೊಸ್ತಿಲಲ್ಲಿ ನಡೆದ ಈ ತಂತ್ರಗಾರಿಕೆಯು ಕರ್ನಾಟಕದಲ್ಲಿ ಬಿಜೆಪಿಯ ಕೈ ಹಿಡಿಯಲಿಲ್ಲ. ಈಗಲೂ ಕೇಂದ್ರದಲ್ಲಿ ಬಿಜೆಪಿ ಸರಕಾರವು ಮಹಿಳಾ ಮೀಸಲು ಮಸೂದೆಯನ್ನು ೨೦೨೪ರ ಚುನಾವಣೆಯ ತಂತ್ರಗಾರಿಕೆಯಾಗಿ ಬಳಸುವುದಾದರೆ ಅದಕ್ಕೂ ಮೊದಲು ಇತ್ತೀಚಿನ ಕರ್ನಾಟಕದ ಚುನಾವಣೆಯನ್ನು ಗಮನಿಸಬೇಕಿದೆ. ಈ ಮಸೂದೆಗೆ ಈಗ ಅಂಗೀಕಾರ ನೀಡಿದರೂ ಎಲ್ಲ ಪ್ರಕ್ರಿಯೆಗಳು ಮುಗಿಯಲು ಕನಿಷ್ಠ ಐದು ವರ್ಷಗಳು ಬೇಕಾಗುತ್ತವೆ. ಅಂದರೆ ಯಾವ ತೊಂದರೆಗಳೂ ಇಲ್ಲದೆ ಮಂಡನೆಯಾದರೆ ೨೦೨೯ರ ಚುನಾವಣೆಗೆ ಇದನ್ನು ನಿರೀಕ್ಷೆ ಮಾಡಬಹುದು. ಹೀಗಿರುವಾಗ ಸರಿಸುಮಾರು ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕೇಂದ್ರ ಬಿಜೆಪಿ ಸರಕಾರವು ಚುನಾವಣೆಗೆ ನಾಲ್ಕೈದು ತಿಂಗಳುಗಳಿರುವ ಈ ಸಂದರ್ಭದಲ್ಲಿ ಈ ಮಸೂದೆಯ ಕುರಿತು ಒಲವು ತೋರಿಸುತ್ತಿರುವುದು ರಾಜಕೀಯ ಲಾಭದ ತಂತ್ರಗಾರಿಕೆಯನ್ನು ತೋರಿಸುತ್ತದೆ. ಮಹಿಳೆಯರು ಒಂದು ಪಕ್ಷದ ಅಧಿಕಾರಕ್ಕಾಗಿ ಬಳಕೆಯಾಗುವ ವಸ್ತುಗಳಾಗಬಾರದು. ಈ ಎಲ್ಲ ರಾಜಕೀಯ ಹಿತಾಸಕ್ತಿಗಳ ಆಚೆಗೆ ಈ ಮಸೂದೆಯು ಪ್ರಭುತ್ವದ ಗಂಡಾಳ್ವಿಕೆಯ ಹಿಡಿತವನ್ನು ಸಡಿಲಗೊಳಿಸುತ್ತದೆ. ಅಷ್ಟೇ ಅಲ್ಲದೆ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ನಿಂತು ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News