ಮಹಿಳಾ ಮೀಸಲಾತಿ: ತಿದ್ದುಪಡಿ ಅಂಗೀಕಾರ, ಮುಂದೇನು?

ಮಸೂದೆಗೆ ಪರ -ವಿರೋಧ ಇದ್ದೇ ಇತ್ತು. ರಾಜಕೀಯ ಪಕ್ಷಗಳು ಸ್ವಾಭಾವಿಕವಾಗಿ ಪಿತೃ ಪ್ರಭುತ್ವವನ್ನು ಹೊಂದಿರುವುದರಿಂದ ಮಹಿಳೆಯರ ಸ್ಥಿತಿಯನ್ನು ಉತ್ತಮಗೊಳಿಸುವುದು ಅತ್ಯವಶ್ಯಕ ಎಂದು ಪ್ರತಿಪಾದಿಸುವವರ ವಾದವಾಗಿದೆ. ಹಾಗೆಯೇ, ಮಹಿಳೆಯರಿಗೆ ಮೀಸಲಾತಿ ನೀಡುವ ಕಲ್ಪನೆಯು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಮಹಿಳೆಯರ ಹಿತಾಸಕ್ತಿಗಳನ್ನು ಇತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ತರಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬುದು ಪ್ರತಿರೋಧಿಗಳ ವಾದ.

Update: 2023-09-25 06:45 GMT

photo: PTI

‘ಎಲ್ಲಿ ಸ್ತ್ರೀಯರಿಗೆ ಗೌರವ-ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ -ಪೂಜೆಗಳು ನಿಷ್ಪಲವಾಗುತ್ತವೆ!’

ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಗೌರವದಿಂದ ನಡೆಸಿ ಕೊಳ್ಳಬೇಕೆಂಬ ಈ ವಾಕ್ಯಗಳು ಮನುಸ್ಮತಿಯಲ್ಲಿವೆ. ಮನುಸ್ಮತಿಯ ಕಾಲದ ಬಗ್ಗೆ ಇಲ್ಲಿ ಚರ್ಚೆ ಅಪ್ರಸ್ತುತ. ಮನುಸ್ಮತಿಯಲ್ಲಿ ಹೇಳಿರುವ ವಾಕ್ಯಗಳನುಸಾರ ಭಾರತೀಯ ಸ್ತ್ರೀಯರ ನೆಲೆ- ಹಿನ್ನೆಲೆಯನ್ನು ಗಮನಿಸಿದಾಗ ಈ ನಿಟ್ಟಿನಲ್ಲಿ ಸಿಗುವ ಉತ್ತರ ಮಾತ್ರ ನಕಾರಾತ್ಮಕವಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ತರುಣದಲ್ಲೇ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳಿಗಾಗಿ ಧ್ವನಿಯೆತ್ತಿದ ಮಹಾನ್ ವ್ಯಕ್ತಿ. ಹಿಂದೂ ಸಂಹಿತೆ ಮಸೂದೆಯಲ್ಲಿ ಮಹಿಳೆಯರ ಉನ್ನತಿಗಾಗಿ ಹಲವಾರು ಅಂಶಗಳನ್ನು ಸೇರಿಸಿ ಅದನ್ನು ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಳ್ಳಬೇಕೆಂಬ ಉದ್ದೇಶ ಹೊಂದಿದ್ದರು. ಸನಾತನ ವೈದಿಕ ಧರ್ಮದೊಡನೆ ಅದನ್ನು ತಳಕು ಹಾಕಿ ವಿರೋಧಿಸಲಾಯಿತು. ವಿರೋಧಿಸಿದವರು ಪ್ರಮುಖ ಧುರೀಣರೇ ಆಗಿದ್ದರು ಎಂಬುದು ದುಃಖ ತರುವ ಸಂಗತಿ. ಮಸೂದೆಯನ್ನು ಮತಕ್ಕೆ ಹಾಕಿದಾಗ 28/ 23ರ ಅಂತರದಲ್ಲಿ ತಿರಸ್ಕಾರಗೊಳ್ಳುವುದು.ಇದರಿಂದ ಅತಿಯಾಗಿ ನೊಂದ ಅಂಬೇಡ್ಕರ್ ಅಳುವವರಿಲ್ಲದೆ, ಶೋಕಿಸುವವರಿಲ್ಲದೆ ಹಿಂದೂ ಸಂಹಿತೆ ಮಸೂದೆ ಕೊಲೆಯಾಯಿತು ಎಂದೇ ಪ್ರತಿಕ್ರಿಯಿಸಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರ ನಡೆದರು. ಇದೊಂದು ನಿದರ್ಶನ ಭಾರತದ ಗಂಡಾಳ್ವಿಕೆಯಲ್ಲಿ ಹೆಣ್ಣು ಮಕ್ಕಳಿಗೆ ಸಿಗುತ್ತಿದ್ದ ಗೌರವದ ಸಂಕೇತವಷ್ಟೆ. ‘ಹೇಳುವುದು ಪುರಾಣ, ತಿನ್ನುವುದು ಬದನೆಕಾಯಿ’ಎಂಬ ಗಾದೆಗೆ ಇದೊಂದು ದೃಷ್ಟಾಂತ.

ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಹಿಳೆಗೆ ಪ್ರಜಾಪ್ರತಿನಿಧಿ ಸಭೆಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕೆಂಬ ಇದ್ದ ಉದ್ದೇಶ ಕುರಿತು ತಿಳಿಯಬೇಕೆಂದರೆ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಬೇಕು. ಅದು ನಮ್ಮನ್ನು ಬ್ರಿಟಿಷ್ ವಸಾಹತು ಕಾಲಘಟ್ಟಕ್ಕೆ ಕೊಂಡೊಯ್ಯುತ್ತದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿಯ ವಿಷಯವನ್ನು ಭಾರತೀಯ ರಾಷ್ಟ್ರೀಯ ಚಳವಳಿಯ ನಂತರ ಗುರುತಿಸಬಹುದು.1931ರಲ್ಲಿ ಬ್ರಿಟಿಷ್ ಪ್ರಧಾನಿಗೆ, ಪತ್ರ ಮುಖೇನ, ಹೊಸ ಸಂವಿಧಾನದಲ್ಲಿ ಮಹಿಳೆಯರ ಸ್ಥಾನಮಾನಗಳ ಬಗ್ಗೆ ಜಂಟಿಯಾಗಿ ಹೊರಡಿಸಿದ ಜ್ಞಾಪಕ ಪತ್ರವನ್ನು, ಮಹಿಳಾ ಸಂಸ್ಥೆಗಳ ಪ್ರಮುಖ ನಾಯಕಿಯರಾದ ಬೇಗಂ ಶಾ ನವಾಝ್ ಮತ್ತು ಸರೋಜಿನಿ ನಾಯ್ಡು ಸಲ್ಲಿಸಿದರು. ಪತ್ರದಲ್ಲಿನ ಅಂಶಗಳು ಮಹಿಳಾ ಮೀಸಲಾತಿಗೆ ವಿರೋಧವಿದ್ದವು.

ಮಹಿಳಾ ಮೀಸಲಾತಿ ಕುರಿತು ಸಂವಿಧಾನ ಸಭೆಯಲ್ಲಿ ಚರ್ಚೆಗೆ ಬಂದರೂ ಸಹ ಅನಗತ್ಯ ವಿಷಯವೆಂದು ಅದು ತಿರಸ್ಕರಿಸಲ್ಪಡುವುದು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಗುಂಪುಗಳಿಗೂ ಪ್ರಾತಿನಿಧ್ಯ ಸಿಗುವುದು ಎಂಬ ನಂಬಿಕೆ ಇತ್ತು. ಆದರೆ ದಿನಗಳೆದಂತೆ ಅದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗ ತೊಡಗಿತು. ಅದರ ಪರಿಣಾಮ ಮಹಿಳಾ ಮೀಸಲಾತಿ ನೀತಿ ಚರ್ಚೆಗೆ ಬಂದಿತು. 1971ರಲ್ಲಿ ಸ್ಥಾಪಿಸಲಾದ, ‘ಭಾರತದಲ್ಲಿ ಮಹಿಳೆಯರ ಸ್ಥಿತಿ’ ಅರಿಯಲು ಇದ್ದ ಸಮಿತಿಯು ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿತು. ಅದರಂತೆ,ಸಮಿತಿಯೊಳ ಗಿನ ಬಹುಪಾಲು ಮಂದಿ ಶಾಸಕಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ನೀಡುವುದನ್ನು ವಿರೋಧಿಸಿದರೂ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ಮಾತ್ರ ಬೆಂಬಲಿಸಿದರು.

‘ಮಹಿಳೆಯರಿಗಾಗಿ ರಾಷ್ಟ್ರೀಯ ದೃಷ್ಟಿಕೋನ’ ಯೋಜನೆಯು 1988 ರಲ್ಲಿ ಮಹಿಳೆಯರಿಗೆ ಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ಮೀಸಲಾತಿಯನ್ನು ಒದಗಿಸಬೇಕೆಂದು ಶಿಫಾರಸು ಮಾಡಿತ್ತು. ಈ ಶಿಫಾರಸುಗಳೇ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಿಗೆ ಐತಿಹಾಸಿಕ ದಾರಿ ಮಾಡಿಕೊಟ್ಟವು. ತಿದ್ದುಪಡಿಯ ಆದೇಶದಂತೆ ಎಲ್ಲಾ ರಾಜ್ಯ ಸರಕಾರಗಳು ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿಡ ಬೇಕಾಯಿತು.ಮೀಸಲು ಸ್ಥಾನಗಳ ಒಳಗೆ ಮತ್ತೆ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರ ಮೀಸಲಾತಿಗೆ ಒಳಪಟ್ಟವು.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡ ಮಾಡಿದ ನಂತರ ಮುಂದಿನ ಹಂತವೇ ಲೋಕಸಭೆ ಮತ್ತು ವಿಧಾನಸಭೆಗಳು.ಆದರೆ ಅದು ಅಷ್ಟು ಸುಲಭದ್ದಾಗಿರದೆ ಅದು ಕಷ್ಟದ ಕದನವಾಗಿತ್ತು.ಮಹಿಳಾ ಮೀಸಲಾತಿ ಮಸೂದೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಪ್ರಸ್ತಾಪಿಸಲಾಗಿತ್ತು. ಮೊದಲ ಬಾರಿಗೆ ಲೋಕಸಭೆಯಲ್ಲಿ 81ನೇ ತಿದ್ದುಪಡಿ ಮಸೂದೆಯನ್ನು ಸೆಪ್ಟಂಬರ್ 1996ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರವು ಮಂಡಿಸಿತು. ಆದರೆ ಮಸೂದೆಯು ಸದನದ ಅಂಗೀಕಾರವನ್ನು ಪಡೆಯಲು ವಿಫಲವಾಯಿತು. ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಯಿತು. ಸಮಿತಿಯು ಡಿಸೆಂಬರ್ 1996 ರಂದು ವರದಿಯನ್ನೇನೊ ಸಲ್ಲಿಸಿತು;ಅಷ್ಟರಲ್ಲಿ ಲೋಕಸಭೆ ವಿಸರ್ಜನೆಗೊಂಡು ಮಸೂದೆ ವ್ಯರ್ಥವಾಯಿತು.

12ನೇ ಲೋಕಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ ಡಿ ಎ ಸರಕಾರ 1998ರಲ್ಲಿ ಮಸೂದೆಯನ್ನು ಮರು ಮಂಡಿಸಿತು. ತಕ್ಷಣವೇ ರಾಷ್ಟ್ರೀಯ ಜನತಾದಳದ ಸಂಸದರೊಬ್ಬರು ಸದನದ ಬಾವಿಗೆ ನುಗ್ಗಿ ಮಸೂದೆಯನ್ನು ಕಿತ್ತುಕೊಂಡು ಚೂರು ಚೂರಾಗಿ ಹರಿದು ಬಿಸಾಡಿದರು. ಅವರ ಉದ್ದೇಶವೆಂದರೆ-ಹಿಂದುಳಿದ ವರ್ಗಗಳ ಮಹಿಳೆಗೆ ಮೀಸಲಾತಿ ಇಲ್ಲದ ಮಸೂದೆಯನ್ನು ಮಂಡಿಸ ಬಾರದೆಂಬುದಾಗಿತ್ತು. ಹಕ್ಕೊತ್ತಾಯ ಸಾಮಾಜಿಕ ನ್ಯಾಯ ತತ್ವಕ್ಕೆ ಅನುಗುಣವಾಗಿಯೇ ಇತ್ತು. ಈ ನಿಮಿತ್ತ ಮಸೂದೆ ಅಂಗೀಕಾರಗೊಳ್ಳುವಲ್ಲಿ ನಿರೀಕ್ಷಿತ ಸಂಸದರ ಬೆಂಬಲ ಸಿಗದೆ ಮತ್ತೆ ನಿರರ್ಥಕಗೊಂಡಿತು. ಮಸೂದೆಯನ್ನು ಮತ್ತೆ 1999, 2002 ಮತ್ತು 2003 ರಲ್ಲಿ ಮರು ಮಂಡಿಸಲಾಯಿತು. ಕಾಂಗ್ರೆಸ್, ಬಿಜೆಪಿ ಮತ್ತು ಎಡ ಪಕ್ಷಗಳು ಬೆಂಬಲಿಸಿದರೂ ಮಸೂದೆಗೆ ಬಹುಮತ ಸಿಗದೇ ಬಿದ್ದು ಹೋಯಿತು.

ಮಾರ್ಚ್ 9, 2010ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿ 186-1ರ ಬಹುಮತದಲ್ಲಿ ಅಂಗೀಕಾರವಾಯಿತು. ಇಷ್ಟಾದರೂ ಮಸೂದೆಯನ್ನು ಲೋಕಸಭೆಯ ಪರಿಗಣನೆಗಾಗಿ ಮಂಡಿಸಲಿಲ್ಲವಾದ್ದರಿಂದ 15ನೇ ಲೋಕಸಭೆ ವಿಸರ್ಜನೆಗೊಳ್ಳಲಾಗಿ ಮಸೂದೆ ಕೂಡ ಕೈ ಬಿಟ್ಟು ಹೋಯಿತು. ಅಂದು ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ ಮತ್ತು ಸಮಾಜವಾದಿ ಪಕ್ಷಗಳು ಏರಿದ ಧ್ವನಿಯಲ್ಲಿ ಮಸೂದೆಯನ್ನು ವಿರೋಧಿಸಿದ್ದುದೆ ಪ್ರಬಲ ಕಾರಣ. ಅವರ ಒತ್ತಾಯವೆಂದರೆ ಹಿಂದುಳಿದ ವರ್ಗಗಳ ಮಹಿಳೆಯರನ್ನು ಮೀಸಲಾತಿಗಾಗಿ ಪರಿಗಣಿಸುವುದಾಗಿತ್ತು. ಸಂಯುಕ್ತ ಜನತಾದಳದ ಮುಖಂಡ ಶರದ್ ಯಾದವ್ ಅವರು ಗ್ರಾಮೀಣ ಮಹಿಳೆಯರು ಯಾವುದೇ ಕಾರಣದಿಂದ ಸುಶಿಕ್ಷಿತ ನಗರ ಮಹಿಳೆಯರೊಡನೆ ಸ್ಪರ್ಧಿಸಲಾರರು ಎಂಬ ವಾದ ಮುಂದಿಟ್ಟು ಹೋರಾಟಕ್ಕಿಳಿದರು. ಹೀಗಾಗಿ ಮಸೂದೆ ಮೂಲೆ ಗುಂಪಾಯಿತು. 2014 ಮತ್ತು 2019ರಲ್ಲಿ ಭಾಜಪವು ತನ್ನ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿತ್ತು. ಆದರೂ ಈ ತನಕ ಆ ವಿಷಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ರಾಜಕೀಯವೋ ಅಥವಾ ಎಂಥದ್ದೋ ಕಾರಣಕ್ಕಾಗಿ ಈಗ ಮುಂದೆ ಬಂದು ಅದರಲ್ಲಿ ಯಶಸ್ವಿಯಾಗಿದೆ ಕೂಡ. ಅದನ್ನು ನಾರಿ ಶಕ್ತಿ ವಂದನ ಅಧಿನಿಯಮ ಎಂದು ಕರೆದಿದೆ.

ಮಸೂದೆಗೆ ಪರ -ವಿರೋಧ ಇದ್ದೇ ಇತ್ತು. ರಾಜಕೀಯ ಪಕ್ಷಗಳು ಸ್ವಾಭಾವಿಕವಾಗಿ ಪಿತೃ ಪ್ರಭುತ್ವವನ್ನು ಹೊಂದಿರುವುದರಿಂದ ಮಹಿಳೆಯರ ಸ್ಥಿತಿಯನ್ನು ಉತ್ತಮಗೊಳಿಸುವುದು ಅತ್ಯವಶ್ಯಕ ಎಂದು ಪ್ರತಿಪಾದಿಸುವವರ ವಾದವಾಗಿದೆ. ಹಾಗೆಯೇ, ಮಹಿಳೆಯರಿಗೆ ಮೀಸಲಾತಿ ನೀಡುವ ಕಲ್ಪನೆಯು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ. ಮಹಿಳೆಯರ ಹಿತಾಸಕ್ತಿಗಳನ್ನು ಇತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ತರಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬುದು ಪ್ರತಿರೋಧಿಗಳ ವಾದ.

ಸದ್ಯ ವಾದ- ಪ್ರತಿವಾದ ಏನೇ ಇರಲಿ, ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಭಾಜಪ ಸರಕಾರವು ಅಧಿಕಾರಕ್ಕೆ ಬಂದ 9 ವರ್ಷಗಳ ನಂತರ, ನಿಗೂಢವಾಗಿ ಮತ್ತು ಯಾವ ಮುನ್ಸೂಚನೆಯನ್ನೂ ನೀಡದೆ, ವಿಶೇಷ ಸಂಸತ್ ಸಭೆ ಕರೆಯುವುದರ ಮೂಲಕ ತನ್ನೊಳಗೇ ಬೈತಿಟ್ಟ ಕಾರ್ಯಸೂಚಿ ಮಸೂದೆಯನ್ನು ಸೆಪ್ಟಂಬರ್ 20, 2023ರಂದು ಲೋಕಸಭೆಯಲ್ಲಿ, ಸೆಪ್ಟಂಬರ್ 21ರಂದು ರಾಜ್ಯಸಭೆಯಲ್ಲಿ ಕ್ರಮವಾಗಿ ಮಂಡಿಸಿ ಒಪ್ಪಿಗೆ ಪಡೆದು ಕೊಂಡಿದೆ. ಇಡೀ ದಿನ ನಡೆದ ಚರ್ಚೆಯ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬಿರುಸಿನ ವಾಗ್ವಾದ ನಡೆದು ಎರಡು ಕಡೆಯವರು ಮೀಸಲು ಮಸೂದೆ ಅಂಗೀಕಾರದ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದರು ಎಂಬುದು ಸುಳ್ಳೇನಲ್ಲ!

ಚರ್ಚಾ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಮಾತನಾಡಿದ ಎಲ್ಲರೂ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ಇರಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇವರೇ ಅಧಿಕಾರದಲ್ಲಿದ್ದ ಸಮಯದಲ್ಲಿ ಈ ಕುರಿತು ಸೊಲ್ಲೆತ್ತದಿದ್ದದ್ದು ಆ ಪಕ್ಷದ ರಾಜಕೀಯ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ. ಇದನ್ನೊಂದು ತಾರ್ಕಿಕ ಅಂತ್ಯಕ್ಕಾದರೂ ಕಾಂಗ್ರೆಸ್ ಕೊಂಡೊಯ್ಯಬಹುದಾಗಿತ್ತು. ಆ ಅವಕಾಶವನ್ನೂ ಅದು ಕಳೆದುಕೊಂಡಿದೆ.

ಮಸೂದೆ ಸಂಸತ್ತಿನ ಉಭಯ ಸದನದಲ್ಲಿ ಅಂಗೀಕೃತವಾಗಿದ್ದರೂ, ಮಹಿಳೆಯರು ಮೀಸಲಾತಿ ಪಡೆದು ಲೋಕಸಭೆಗೆ ಪ್ರವೇಶಿಸಲು ಅವರು 2029ರ ಚುನಾವಣೆವರೆಗೂ ಕಾಯಲೇ ಬೇಕು. ಈ ವಿಳಂಬಕ್ಕೆ ಸರಕಾರ ಕೊಡುವ ಕಾರಣ, ದಶವಾರ್ಷಿಕ ಜನಗಣತಿಯಾಗಿ ಕ್ಷೇತ್ರಗಳ ಮರು ವಿಂಗಡಣೆಯಾದ ನಂತರವಷ್ಟೇ ಮೀಸಲಾತಿ ಜಾರಿಗೆ ಬರುತ್ತದೆ ಎಂಬುದು. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಮೀಸಲಾತಿ ಕೊಡಲು ಅಂಥ ಕಷ್ಟವೇನಿಲ್ಲ.ಆದರೂ ಸರಕಾರ ವಿಳಂಬಕ್ಕೆ ನೀಡುತ್ತಿರುವ ನೆಪವನ್ನು ಒಪ್ಪಲು ಸಾಧ್ಯವಿಲ್ಲ. ಮಸೂದೆಯನ್ನು ಬೆಂಬಲಿಸಿದ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಈ ಕುರಿತು ಅಪಸ್ವರವೆತ್ತಿವೆ. ಆದರೆ ಸರಕಾರ ಮಾತ್ರ ತನ್ನ ಕಿವಿಗಳನ್ನು ಕಿವುಡಾಗಿಸಿಕೊಂಡಿರುವ ಮರ್ಮ ಏನೆಂಬುದು ತಿಳಿದಿಲ್ಲ. ಸರಕಾರದ ಈ ನಡೆಯಿಂದ ಕಂಡು ಬರುವುದೆಂದರೆ, ಮೀಸಲಾತಿಯನ್ನು ಅದು ಜಾರಿಗೆ ಕೊಡುವ ಉದ್ದೇಶವನ್ನು ಹೊಂದಿಲ್ಲ,ಇದೆಲ್ಲಾ ಮುಂಬರುವ ಲೋಕಸಭಾ ಚುನಾವಣೆಯ ಗಿಮಿಕ್ಸ್ ಎನ್ನುತ್ತಿದ್ದಾರೆ ಕೆಲ ರಾಜನೀತಜ್ಞರು. ವಾರ್ತಾಭಾರತಿ ಪತ್ರಿಕೆಯ ಇತ್ತೀಚಿನ ಸಂಪಾದಕೀಯದಲ್ಲಿ ಹೇಳಿರುವಂತೆ ‘ಬಾಳೆಎಲೆ ಮಾತ್ರ, ಊಟವಿಲ್ಲ’ ಎಂಬ ನುಡಿಗಟ್ಟುಗಳು ಕಿವಿಯಲ್ಲಿ ನಿನದಿಸುತ್ತಿವೆ!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಕೆ. ಎನ್. ಲಿಂಗಪ್ಪ

contributor

Similar News