ಪ್ರಧಾನಿ ಮೋದಿ ಆಡಳಿತದ 10 ವರ್ಷಗಳಲ್ಲಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆದಿದೆ : ಸಿಎಂ ಸಿದ್ದರಾಮಯ್ಯ
ಯಾದಗಿರಿ : ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಜಾತಿ , ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆದಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯ್ಕ್ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
"ಭಾರತೀಯರನ್ನು ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರ ಹೆಸರಿನಲ್ಲಿ ವಿಭಜಿಸಿ ಬೆಂಕಿ ಹಚ್ಚುವ ಬಿಜೆಪಿ ಕೃತ್ಯದ ವಿರುದ್ಧ, ಸಮಾಜವನ್ನು ಮಾನವೀಯವಾಗಿ ಬೆಸೆಯುವ ಕೆಲಸಕ್ಕೆ ರಾಹುಲ್ ಗಾಂಧಿ ಮುಂದಾದರು. ದೇಶದ ಐಕ್ಯತೆ ಮರು ಸ್ಥಾಪಿಸಲು, ಸಾರ್ವಭೌತ್ವವನ್ನು ಕಾಪಾಡಲು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಮಣಿಪುರದಿಂದ ಮುಂಬೈವರೆಗೆ ಪಾದಯಾತ್ರೆ ಮಾಡಿದರು. ಸಮಾಜ ಬೆಸೆಯುವ ಕೆಲಸ ಮಾಡಿದರು. ಭಾರತ್ ಜೋಡೋ ಹೆಸರಿನಲ್ಲಿ ದೇಶದ ಜನರನ್ನು ಪ್ರೀತಿ ವಿಶ್ವಾಸದಿಂದ ಒಗ್ಗೂಡಿಸುವ ಪ್ರಯತ್ನ ಮಾಡಿದರು" ಎಂದು ಶ್ಲಾಘಿಸಿದರು.
ನರೇಂದ್ರ ಮೋದಿ ಹತಾಶರಾಗಿದ್ದಾರೆ
ನರೇಂದ್ರ ಮೋದಿಯವರಿಗೆ ದೇಶದಲ್ಲಿ ನಡೆದಿರುವ 2 ಹಂತದ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ. ಎ ಗೆ ಕಡಿಮೆ ಸ್ಥಾನಗಳು ಬರಲಿದೆ ಎನ್ನುವುದು ನರೇಂದ್ರ ಮೋದಿಯವರಿಗೆ ಸ್ಪಷ್ಟವಾಗಿ ಗೊತ್ತಾಗಿ ಹತಾಶರಾಗಿದ್ದಾರೆ. ಅದಕ್ಕೇ ಕರ್ನಾಟಕಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾ, ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಕರ್ನಾಟಕದ ಖಜಾನೆ ಖಾಲಿಯಾಗಿದ್ದು, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಾರೆ ಎಂದರು.
ಗ್ಯಾರಂಟಿ ಗಳಿಂದ ಖಜಾನೆ ಖಾಲಿಯಾಗಿಲ್ಲ
ಗ್ಯಾರಂಟಿ ಯೋಜನೆ ಜಾರಿಯಾದ ನಂತರ ಖಜಾನೆ ಖಾಲಿಯಾಗಿಲ್ಲ. ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ. ಪ್ರಧಾನಿ ಗ್ಯಾರಂಟಿ ಬಗ್ಗೆ, ಗ್ಯಾರಂಟಿ ಯೋಜನೆಗಳ ಐದೂವರೆ ಕೋಟಿ ಫಲಾನುಭವಿಗಳನ್ನು ಅಪಹಾಸ್ಯ ಮಾಡಿ ಲಘುವಾಗಿ ಮಾತನಾಡಿದ್ದಾರೆ. ಮೊದಲೇ ಲೆಕ್ಕ ಹಾಕಿಯೇ ನಾವು ಘೋಷಣೆಗಳನ್ನು ಮಾಡಿದ್ದೇವೆ. ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗಾಗಿ 56000 ಕೋಟಿ ರೂಪಾಯಿ ವ್ಯಯವಾಗುತ್ತಿದ್ದು. ಈ ಬಾರಿ ಬಜೆಟ್ ನಲ್ಲಿ 52009 ರೂಪಾಯಿಗಳನ್ನು ಮೀಸಲಿರಿಸಿ ನಾವು ನುಡಿದಂತೆ ನಡೆದಿದ್ದೇವೆ. ಮೋದಿ ಭರವಸೆ ನೀಡಿದ್ದರಲ್ಲಿ ಎಷ್ಟನ್ನು ಈಡೇರಿಸಿದ್ದಾರೆ, ಹತ್ತು ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಜನರ ಮುಂದಿಡಬೇಕೆ ಹೊರತು ಜನರ ಮುಂದೆ ಸುಳ್ಳು ಹೇಳುವುದನ್ನು ಬಿಡಬೇಕು. ಈ ಸುಳ್ಳುಗಳಿಗೆ ಜನ ಬಿಜೆಪಿಗೆ ತಕ್ಕ ಪಾಠವನ್ನು ಚುನಾವಣೆಯಲ್ಲಿ ಕಲಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ವಿರೋಧಿ
ಮೀಸಲಾತಿ ಪರವಾಗಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ . ಬಿಜೆಪಿಯವರು ಎಲ್ಲ ಕಾಲದಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯ ವಿರೋಧವಾಗಿ ಕೆಲಸ ಮಾಡಿದ್ದಾರೆ. ಗ್ರಾಮಪಂಚಾಯತಿ, ನಗರಸಭೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿಯವರು ವಿರೋಧಿಸಿದ್ದರು. ಬಿಜೆಪಿಯ ರಾಮ ಜೋಯಿಸ್ ಅವರು ಈ ಮೀಸಲಾತಿ ನೀಡಿಕೆಯನ್ನು ಸಂವಿಧಾನ ಬಾಹಿರ ಎಂದು ನ್ಯಾಯಾಲಯದಲ್ಲೇ ವಾದಿಸಿದ್ದ ಸಂಗತಿಯನ್ನು ಸ್ಮರಿಸಿದರು.
ಮುಸಲ್ಮಾನರಿಗೆ ಮೀಸಲಾತಿಯನ್ನು ಕಳೆದ 30 ವರ್ಷಗಳಿಂದ ನೀಡಲಾಗುತ್ತಿದೆ. ದಲಿತರಿಗೆ, ಹಿಂದುಳಿದವರಿಗೆ ನೀಡಲಾದ ಮೀಸಲಾತಿಯನ್ನು ರದ್ದುಪಡಿಸಿ ಮುಸಲ್ಮಾನರಿಗೆ ಕಾಂಗ್ರೆಸ್ ನೀಡಲಿದೆ ಎಂದು ಮೋದಿ ನಿರಂತರವಾಗಿ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ. ಈ ಸುಳ್ಳನ್ನು ನಂಬಬಾರದು ಎಂದು ಮನವಿ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಾಸಕ ಚನ್ನಾರೆಡ್ಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.