ಯಾದಗಿರಿ | ಬಸವಣ್ಣ ಮೂರ್ತಿಗೆ ಅಪಮಾನ ಪ್ರಕರಣ: ಆರೋಪಿಗಳ ಗಡಿಪಾರಿಗೆ ಸಜ್ಜನ್ ಆಗ್ರಹ
Update: 2025-01-15 15:48 GMT
ಯಾದಗಿರಿ : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಅಪಮಾನ ಮಾಡಿರುವ ಕಿಡಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಸುರಪುರ ತಾಲೂಕು ವೀರಶೈವ-ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ಡಾ.ಸುರೇಶ ಸಜ್ಜನ್ ಅವರು ಹೇಳಿದರು.
ಕೆಲವು ಕಿಡಿಗೇಡಿಗಳು ಬಸವೇಶ್ವರ ಕೈ ಮುರಿದು ಅವಮಾನಿಸಿದರಲ್ಲದೆ ಧ್ವಜದ ಕಂಬ ಕಿತ್ತೆಸೆಯಲು ಮುಂದಾಗಿದ್ದು, ಈಗಾಗಲೇ ಭಾಲ್ಕಿ ತಾಲೂಕಿನ ಆ ಗ್ರಾಮದ ಗ್ರಾಮಸ್ಥರು ಹಾಗೂ ವೀರಶೈವ ಸಮಾಜದ ಮುಖಂಡರು, ಯುವಕರು, ಬಸವ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.
ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ, ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಒಂದು ವೇಳೆ ಆರೋಪಿಗಳನ್ನು ಬಂದಿಸದಿದ್ದಲ್ಲಿ ತಾಲೂಕು ವೀರಶೈವ-ಲಿಂಗಾಯತ ಸಮಾಜ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.