ಯಾದಗಿರಿ | ಟಂಟಂ ವಾಹನ ಪಲ್ಟಿ: ಮಗು ಮೃತ್ಯು, ನಾಲ್ವರಿಗೆ ಗಾಯ

ಯಾದಗಿರಿ: ಟಂಟಂ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ 3 ವರ್ಷದ ಮಗುವೊಂದು ಮೃತಪಟ್ಟ, ನಾಲ್ವರು ಗಾಯಗೊಂಡ ಘಟನೆ ಬಂದಳ್ಳಿ ಗ್ರಾಮದ ಕೆರೆಯ ಹತ್ತಿರ ಬುಧವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ನಡೆದಿದೆ.
ಮೃತ ಮಗುವನ್ನು ದೇವಿಂದ್ರಪ್ಪ ಹತ್ತಿಕುಣಿ ಎಂಬವರ 3 ವರ್ಷದ ಪುತ್ರ ಆದಿ ಎಂದು ಗುರುತಿಸಲಾಗಿದೆ.
ದೇವಿಂದ್ರಪ್ಪ ಹತ್ತಿಕುಣಿ ತನ್ನ ಟಂಟಂನಲ್ಲಿ ಪತ್ನಿ ಕಾವೇರಿ, ಪುತ್ರ ಆದಿ ಹಾಗೂ ಸಾಬಣ್ಣ ನೀಲಹಳ್ಳಿ, ಅಂಜಮ್ಮ, ಪ್ರಕಾಶ, ಬಸವರಾಜ ಎಂಬವರೊಂದಿಗೆ ಯಾದಗಿರಿಯಿಂದ ಹತ್ತಿಕುಣಿ ಗ್ರಾಮಕ್ಕೆ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 11 ಗಂಟೆ ಸುಮಾರಿಗೆ ಟಂಟಂಗೆ ಬಂದಳ್ಳಿ ಗ್ರಾಮದ ಕೆರೆಯ ಹತ್ತಿರ ತಲುಪಿದಾಗ ನಾಯಿವೊಂದು ಹಠಾತ್ ಅಡ್ಡ ಬಂದಿದೆ. ಈ ವೇಳೆ ಚಾಲಕ ಏಕಾಏಕಿ ಬ್ರೆಕ್ ಹಾಕಿದ್ದರಿಂದ ಟಂಟಂ ಉರುಳಿಬಿದ್ದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದೆ.
ಉಳಿದ ನಾಲ್ವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.