ಯಾದಗಿರಿ | ದೇವರ ದಾಸಿಮಯ್ಯ ಅವರು ಜಾತಿರಹಿತ ಸಮಾಜಕ್ಕೆ ಮುನ್ನುಡಿ ಬರೆದವರು ; ಹೆಚ್ಚುವರಿ ಡಿಸಿ ಕೋಟೆಪ್ಪಗೋಳ್

ಯಾದಗಿರಿ : ಹನ್ನೊಂದನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯ 179 ವಚನಗಳನ್ನು ಬರೆಯುವ ಮೂಲಕ ವೈಚಾರಿಕತೆ ಮತ್ತು ಜಾತಿರಹಿತ ಸಮಾಜಕ್ಕೆ ಮುನ್ನುಡಿ ಬರೆದ ಮಹಾನ್ ವ್ಯಕ್ತಿಗಳೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಯಂತ್ಯೋತ್ಸವ ಸಮಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಈಗಿನ ಹುಣಸಗಿ ತಾಲೂಕಿನ ಮುದನೂರಿನವರು ಎಂಬ ಅಪ್ಪಟ್ಟ ಹೆಮ್ಮೆ ನಮಗೆ, ಬಸವಪೂರ್ವ ಯುಗದ ವಚನಕಾರ ದಾಸಿಮಯ್ಯ ಅವರಿಂದಾಗಿಯೇ ಇಂದು ಈ ಊರು ಹೆಚ್ಚು ಪ್ರಸಿದ್ಧಿ ಪಡೆದಿದೆ. ನಮ್ಮ ಗಿರಿಜಿಲ್ಲೆಗೆ ಸಿಕ್ಕ ಮುಕುಟ ಎಂದು ಬಣ್ಣಿಸಿದರು. ಧರ್ಮ-ನೀತಿ, ಆಚಾರ-ವಿಚಾರ, ನಡೆ- ನುಡಿ, ಸಾಮರಸ್ಯದಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದ್ದ ದಾಸಿಮಯ್ಯ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಧರ್ಮ, ಆಧ್ಯಾತ್ಮ, ಶಿಕ್ಷಣ, ಆರ್ಥಿಕ, ಮತ್ತು ಸಾಮಾಜಿಕ ಹಕ್ಕುಗಳಿಂದ ವಂಚಿತರಾಗಬಾರದೆಂಬ ನಿಲುವು ಹೊಂದಿದ್ದ ಗಟ್ಟಿ ವಚನಕಾರರಾಗಿದ್ದರೆಂದು ಕೋಟೆಪ್ಪಗೋಳ್ ಬಣ್ಣಿಸಿದರು.
ಜ್ಯೋತಿಲತಾ ತಡಿಬಿಡಿಮಠ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಜಿಲ್ಲಾ ನೌಕರರ ಒಕ್ಕೂಟದ ಅಧ್ಯಕ್ಷ ವೀರಸಂಗಪ್ಪ ಹಾವೇರಿ, ಜಿಲ್ಲಾ ಗೌರವ ಅಧ್ಯಕ್ಷ ಬಸವರಾಜ ಎಮ್ ಹುನಗುಂದ, ಕುಮಾರ ಸ್ವಾಮಿ, ಸುಧಾರಾಣಿ ಸೇರಿದಂತೆ ಇತರರಿದ್ದರು.