ಯಾದಗಿರಿ: ಬಸ್ ಡಿಪೋ ಮುಂದೆ ಡಿಎಸ್‌ಎಸ್ ಕ್ರಾಂತಿಕಾರಿ ಬಣ ಪ್ರತಿಭಟನೆ

ಸುರಪುರ: ಕಲಬುರಗಿ, ಬೀದರ್ ಮತ್ತಿತರೆ ಕಡೆಗಳಿಂದ ರಾತ್ರಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಹೋಗುವ ಬಸ್‌ಗಳು ಸುರಪುರ ಬಸ್ ನಿಲ್ದಾಣಕ್ಕೆ ಆಗಮಿಸದೆ, ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಮೂಲಕ ಬೈಪಾಸ್ ಹೋಗುತ್ತವೆ. ಇದರಿಂದ ರಾತ್ರಿ ಸುರಪುರಕ್ಕೆ ಬರುವವರಿಗೆ ತೊಂದರೆಯಾಗುತ್ತಿದ್ದು, ನಗರದ ಬಸ್ ನಿಲ್ದಾಣಕ್ಕೆ ಎಲ್ಲಾ ಬಸ್‌ಗಳು ಕಡ್ಡಾಯವಾಗಿ ಬರಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.
ನಗರದ ಬಸ್ ಡಿಪೋ ಮುಂದೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾತ್ರಿ ಕಲಬುರ್ಗಿಯಿಂದ ಸುರಪುರಕ್ಕೆ ಬರುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ. ಮಹಿಳೆಯರು ರಾತ್ರಿ ವೇಳೆಯಲ್ಲಿ ಬೈಪಾಸ್‌ಲ್ಲಿ ಇಳಿಸಿ ಹೋಗುವುದರಿಂದ ಏನಾದರು ಅನಾಹುತ ಸಂಭವಿಸಿದರೆ ಅದಕ್ಕೆ ಇಲಾಖೆಯೇ ಹೊಣೆಯಾಗಲಿದೆ. ಆದ್ದರಿಂದ ಎಲ್ಲಾ ಬಸ್‌ಗಳು ನಗರದ ಬಸ್ ನಿಲ್ದಾಣಕ್ಕೆ ಬರಬೇಕು. ತಾಲೂಕಿನಾದ್ಯಂತ ಇರುವ ಎಲ್ಲಾ ಗ್ರಾಮೀಣ ಬಸ್ ನಿಲ್ದಾಣಗಳನ್ನು ಖಾಸಗಿಯವರು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ ಇದನ್ನು ತಡೆಯಬೇಕು. ಸುರಪುರದಿಂದ ಕಲಬುರ್ಗಿಗೆ ಹೋಗಿ ಬರಲು ಸಗರನಾಡು ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಎಪ್ರಿಲ್ 22 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರೋಫೆಸರ್ ಮಾನು ಗುರಿಕಾರ, ಹಿರಿಯ ಹೋರಾಟಗಾರ ಚಂದ್ರಶೇಖರ ಹಸನಾಪುರ ಮಾತನಾಡಿದರು. ನಂತರ ಡಿಪೋ ಮ್ಯಾನೆಜರ್‌ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸುರಪುರ ಠಾಣೆಯ ಪಿ.ಐ ಆನಂದ ವಾಘಮೊಡೆ, ಮುಖಂಡರಾದ ಮಾನಪ್ಪ ಬಿಜಾಸಪುರ,ಮೂರ್ತಿ ಬೊಮ್ಮನಹಳ್ಳಿ, ವೀರಭದ್ರಪ್ಪ ತಳವಾರಗೇರ,ತಾ.ಸಂಚಾಲಕ ಬಸವರಾಜ ದೊಡ್ಮನಿ,ಬಸವರಾಜ ಬಡಿಗೇರ, ರಾಮಣ್ಣ ಶೆಳ್ಳಗಿ, ಪರಮಣ್ಣ ಕಕ್ಕೇರಾ,ರವಿಚಂದ್ರ ಬೊಮ್ಮನಹಳ್ಳಿ,ಖಾಜಾಹುಸೇನ ಗುಡಗುಂಟಿ,ಮಲ್ಲಿಕಾರ್ಜುನ ಶೆಳ್ಳಗಿ,ಮಲ್ಲಪ್ಪ ಬಡಿಗೇರ,ಪರಶುರಾಮ ಬೈಲಕುಂಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.