ಯಾದಗಿರಿ | ಡಾ.ಬಾಬು ಜಗಜೀವನರಾಮ್‌ ಅವರು ವಿಶ್ವ ಕಂಡ ಅಪರೂಪದ ನಾಯಕರು: ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ

Update: 2025-04-05 19:51 IST
Photo of Program
  • whatsapp icon

ಯಾದಗಿರಿ : ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್‌ ಅವರು ವಿಶ್ವ ಕಂಡ ಅಪರೂಪದ ನಾಯಕರಾಗಿದ್ದಾರೆ ಎಂದು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

ನಗರದ ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವರಾಮ್ ಅವರ 118ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು.

ದೇಶಕ್ಕೆ ಆಹಾರ ಕೊರತೆಯಾದಾಗ ಹಸಿರು ಕ್ರಾಂತಿ ಮೂಲಕ ವಿವಿಧ ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬಡಜನರ ಆಹಾರದ ಸಮಸ್ಯೆ ನಿವಾರಣೆ ಮಾಡಿದ ಮಹಾನ್ ಚೇತನ ಹಾಗೂ ನಾಯಕರಾಗಿದ್ದಾರೆ ಎಂದು ಹೇಳಿದರು.

ದೇಶದ ಉಪಪ್ರಧಾನಿಯಾಗಿ ಡಾ.ಬಾಬು ಜಗಜೀವನರಾಂ ಅವರು ಅನೇಕ ದೊಡ್ಡ,ದೊಡ್ಡ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಶೋಷಿತ ವರ್ಗದಲ್ಲಿ ಜನಿಸಿದ್ದರೂ, ಸರ್ವ ಜನಾಂಗದ ಅಭಿವೃದ್ಧಿ ಬಯಸಿದ್ದ ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಇದ್ದವು ಎಂದು ಹೇಳಿದರು.

ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಾವು ಉನ್ನತಿಹೊಂದಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲಿ ಎಂಬ ಉದ್ದೇಶದೊಂದಿಗೆ ಇಂತಹ ಮಹಾನ್ ಚೇತನರ ಮೂರ್ತಿ ಸ್ಥಾಪನೆಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.

ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದಲೇ ಇಂದು ವಿವಿಧ ವರ್ಗಗಳ ಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಿದೆ ಎಂದು ಹೇಳಿದರು. ಜಯಂತಿ ಆಚರಣೆ ಉದ್ದೇಶವೇ ಶ್ರೇಷ್ಠ ವ್ಯಕ್ತಿಗಳು ಸದಾ ಕಾಲ ನೆನಪಿನಲ್ಲಿ ಇರಲಿ ಮತ್ತು ಇಂದಿನ ಪೀಳಿಗೆಗೆ ಅವರ ಇತಿಹಾಸ ಗೊತ್ತಾಗಲಿ ಎಂಬ ಉದ್ದೇಶ ಹೊಂದಿದೆ ಎಂದು ಸಚಿವ ದರ್ಶನಾಪುರ ಅವರು ಹೇಳಿದರು.

ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿದ್ದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಮಾತನಾಡಿ, ಡಾ.ಬಾಬು ಜೀವನ ರಾಂ ಅವರು ಶೋಷಿತ ಸಮಾಜದ ಆಶಾಕಿರಣವಾಗಿದ್ದಾರೆ ಎಂದರು.

ಗುರುಮಠಕಲ್ ಸರಕಾರಿ ಪದವಿ ಮಹಾವಿದ್ಯಾಲಯ ಉಪನ್ಯಾಸಕ ಡಾ.ಎಸ್.ಎಸ್ ನಾಯಕ್ ಅವರು ವಿಶೇಷ ಉಪನ್ಯಾಸ ನೀಡಿ ಡಾ.ಬಾಬು ಜಗಜೀವನರಾಂ ಅವರ ಜೀವನ ಸಾಧನೆ ಕುರಿತು ವಿವರಿಸಿದರು.

ವೇದಿಕೆ‌ಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಚನ್ನಬಸಪ್ಪ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ , ಯುಡಾ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಡಾ.ಬಾಬು ಜಗಜೀವನರಾಂ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ನಿಂಗಪ್ಪ ಹತ್ತಿಮನಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿ, ಗಣ್ಯರಿಗೆ ಸನ್ಮಾನಿಸಲಾಯಿತು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಕುಮಾರ , ಸಾಗರ , ಸಂಜನಾ ಅವರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಮಾಜಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ಸಾಹಿತ್ಯ ಕ್ಷೇತ್ರದ ಡಾ.ಸಿ.ಆರ್.ಕಂಬಾರ ಶೆಟ್ಟಿಕೇರಾ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎಸ್.ಹೆಚ್.ಮುದ್ನಾಳ, ಸಮಾಜ ಸೇವೆ ಅರುಣಕುಮಾರ ಎಸ್.ಮುಂಡ್ರಿಕೇರಿ, ಮಾಧ್ಯಮ ಕ್ಷೇತ್ರ ವೆಂಕಟೇಶ್ ಎಚ್.ಆಲೂರು, ಶಾಂತಪ್ಪ ಗುತ್ತೇದಾರ ಅವರನ್ನು ಸನ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News