ಯಾದಗಿರಿ | ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆ ಖಂಡನೀಯ : ಸುದರ್ಶನ್ ನಾಯಕ

ಯಾದಗಿರಿ : ಮೈಸೂರಿನಲ್ಲಿ ರಾಜ್ಯ ಬಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿರುವ ಜನಾಕ್ರೋಶ ಹೋರಾಟದಲ್ಲಿ ಬಿಜೆಪಿಯ ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹಾಗೂ ಶ್ರೀರಾಮಲು ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದುಗಳ ಮೇಲೆ ದೌರ್ಜನ್ಯ ಮತ್ತು ಹತ್ಯೆಗಳು ನಡೆಯುತ್ತಿವೆ ಎಂದು ಹೇಳಿಕೆ ನೀಡಿದ್ದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಬ್ಲಾಕ್ ಅಧ್ಯಕ್ಷರಾದ ಸುದರ್ಶನ ನಾಯಕ ಹೇಳಿದರು.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಕರ್ನಾಟಕ ಸರ್ಕಾರದ ವಿರುದ್ದ ಯಾವುದೇ ಆರೋಪಗಳು ಸಿಗದೆ ಇದ್ದಾಗ ಹಿಂದು ಮತ್ತು ಮುಸ್ಲಿಂ ಎಂಬಾ ಬೇದಭಾವ ಮಾಡಿ ಜನರ ಮದ್ಯೆ ಸಾಮರಸ್ಯ ಹಾಳುಮಾಡಲು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ನ ಬಹುತೇಕ ನಾಯಕರುಗಳು ತಾವುಗಳು ನಡೆಸುವ ಪ್ರತಿಭಟನೆ ಯಾತ್ರೆಗಳಲ್ಲಿ ಹಿಂದುಗಳಿಗೆ ಅನ್ಯಾಯ ಆಗುತ್ತಿದೆ. ಹಿಂದುಗಳ ಮಾರಣ ಹೋಮಾ ನಡೆಯುತ್ತಿದೆ ಎಂಬ ಹುಚ್ಚು ಭ್ರಮೆ ಸೃಷ್ಟಿ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದ ಜನತೆ ಎಲ್ಲಾವನ್ನು ಗಮನಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಬಡವರ ಪರವಾಗಿದೆ. ನುಡಿದಂತೆ ನಡೆಯುತ್ತಿದೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ತಲುಪಿಸುತ್ತಿದೆ, ಇದನ್ನು ಅರಗಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೇವಲ ಹಿಂದು ಮುಸ್ಲಿಂ ಎಂಬ ಕೋಮು ಭಾವನೆ ಬಿತ್ತುತ್ತಿದ್ದಾರೆ. ಜನರಿಗೆ ಪ್ರಜ್ಞೆ ಇದೆ. ಇವರ ಸುಳ್ಳುಗಳನ್ನು ಜನರು ನಂಬುವುದಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.