ಯಾದಗಿರಿ | ಎ.16, 17 ರಂದು ಸಿಇಟಿ ಪರೀಕ್ಷೆ

ಯಾದಗಿರಿ : ವೃತ್ತಿಪರ ಕೋರ್ಸ್ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎ.16 ಮತ್ತು 17 ರಂದು ಎರಡು ದಿನ ರಾಜ್ಯದಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, ಜಿಲ್ಲೆಯ ಪರೀಕ್ಷಾ ಕೇಂದ್ರದ ಸುತ್ತ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸೂಚಿಸಿದರು.
ಶನಿವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಸಂಬಂಧ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದ ಅವರು, ಪರೀಕ್ಷೆಗೆ ಯಾದಗಿರಿ ನಗರದಲ್ಲಿ 9 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಒಟ್ಟಾರೆ 3,917 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಣಿ ಮಾಡಿಕೊಂಡಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸುವಂತೆ ಮತ್ತು ಯಾವುದೇ ರೀತಿಯ ನಕಲು ಮಾಡಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪ್ರತಿ ಪರೀಕ್ಷೆ ಕೇಂದ್ರಕ್ಕೆ ವೀಕ್ಷಕರು, ರೂಟ್ ಅಧಿಕಾರಿಗಳನ್ನು ಮತ್ತು ರಹಸ್ಯ ಸಾಮಗ್ರಿಗಳ ಸಾಗಾಟಕ್ಕೆ ಅಧಿಕಾರಿಗಳನ್ನು ನಿಯೋಜಿಸಬೇಕು. ಕೊಠಡಿ ಮೇಲ್ವಿಚಾರಕರು ಪ್ರತಿ ಅಭ್ಯರ್ಥಿಯ ಪ್ರವೇಶಾತಿ ಪತ್ರ ಮತ್ತು ಗುರುತಿನ ಚೀಟಿ ಸರಿಯಾಗಿ ತಪಾಸಣೆ ಮಾಡಬೇಕು. ಕೊಠಡಿಯಲ್ಲಿ ನಕಲು ನಡೆದಲ್ಲಿ ಅದಕ್ಕೆ ಮೇಲ್ವಿಚಾರಕರೆ ಹೊಣೆಗಾರರಾರು. ಮೇಲ್ವಿಚಾರಕರು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದರು.
ಪರೀಕ್ಷೆ ನಡೆಯುವ ಮುನ್ನವೆ ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಇರುವುದನ್ನು ಕೇಂದ್ರದ ಮುಖ್ಯಸ್ಥರು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಹತ್ತಿರದ ಪೊಲೀಸ್ ಠಾಣೆಯಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸೂಚಿಸಲಾಯಿತು.
ಮೊಬೈಲ್ ಬ್ಯಾನ್ :
ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್ ಸಾಧನಗಳು, ಕೈಗಡಿಯಾರ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ ಪ್ರತಿ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಸಹ ಜಾರಿಗೊಳಿಸಿದೆ ಎಂದು ಡಿಸಿ ಅವರು ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚೆನ್ನಬಸಪ್ಪ ಕುಳಗೇರಿ, ಜಿಲ್ಲಾ ಖಜಾನೆ ಉಪನಿರ್ದೇಶಕ ಮಾಳಿಂಗರಾಯ, ಡಿವೈಎಸ್ಪಿ ಅರುಣಕುಮಾರ್ ಸೇರಿದಂತೆ ತಾಲೂಕಿನ ತಹಶೀಲ್ದಾರರು,. ಬಿಇಓಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.