ಯಾದಗಿರಿ | ಪಂಚ ಗ್ಯಾರಂಟಿಗಳು ಸಕಾಲಕ್ಕೆ ಮುಟ್ಟುತ್ತಿವೆ : ಶ್ರೇಣಿಕ ಕುಮಾರ

ಯಾದಗಿರಿ : ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳು ಸಕಾಲಕ್ಕೆ ಜನರಿಗೆ ತಲುಪುತ್ತಿವೆ. ಸಂಬಂಧಪಟ್ಟ ಐದು ಇಲಾಖೆ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆ ನೊಡೆಲ್ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೇಣಿಕ ಕುಮಾರ ಹೇಳಿದ್ದಾರೆ.
ಗುರುವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನಿಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಕ್ತಿ ಯೋಜನೆಯಡಿ ಕಳೆದ 2023 ಜೂನ್ ತಿಂಗಳಿಂದ ಪ್ರಸ್ತಕ ಸಾಲಿನ ಫೆ. 16 ರವರೆಗೂ ಕೆಕೆಆರ್ ಟಿಸಿ ಯಾದಗಿರಿ ವಿಭಾಗದಿಂದ ಸಂಚರಿಸಿದ ಬಸ್ ಗಳಲ್ಲಿ ಒಟ್ಟು 4,30,54,001 ಕೋಟಿ ಮಹಿಳೆಯರು ಪ್ರಯಾಣ ಮಾಡಲಾಗಿದ್ದು, ಇಲ್ಲಿಯವರೆಗೂ 145.04 ಕೋಟಿ ರೂ. ಆದಾಯವಾಗಿದೆ ಎಂದು ಧೋಖಾ ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಆಹಾರಧ್ಯಾನದ ಜೊತೆಗೆ ಜಿಲ್ಲೆಯಲ್ಲಿರುವ ಎಎವೈ, ಬಿಪಿಎಲ್ ಪಡಿತರ ಕಾರ್ಡಿನ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ 5 ಕೆಜಿ ಅಕ್ಕಿಯ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತಿದೆ. ಎಎವೈ, ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ 2,62,111 ಮತ್ತು ಫಲಾನುಭವಿಗಳ ಸಂಖ್ಯೆ 9,94,908 ಹೊಂದಿದ್ದು, ವಿವಿಧ ಕಾರಣದಿಂದ ಹಣ ವರ್ಗಾವಣೆ ಆಗದೆ ಬಾಕಿ ಇರುವ ಪಡಿತರ ಚೀಟಿಗಳ ಸಂಖ್ಯೆ 25,460 ಇಷ್ಟು ಇದೆ ಎಂದ ಅವರು, 2024 ಅಕ್ಟೋಬರ್ ತಿಂಗಳಿಂದ ಇಲ್ಲಿಯವರೆಗೂ ಈ ಯೋಜನೆ ಫಲಾನುಭವಿಗಳಿಗೆ ಸಹಾಯಧನ ಬಂದಿಲ್ಲ ಎಂದು ಹೇಳಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಒಟ್ಟು 2,04,825 ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ಗೃಹ ಲಕ್ಷ್ಮೀ ಯೋಜನೆಯಡಿ ಕಳೆದ ಅಕ್ಟೋಬರ್ ತಿಂಗಳವರೆಗೂ 2,55,982 ಫಲಾನುಭವಿಗಳು ನೊಂದಣಿ ಮಾಡಿಸಿದ್ದು, ಈಗಾಗಲೇ 2,49,104 ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಅಧ್ಯಕ್ಷ ಶ್ರೇಣಿಕಕುಮಾರ ಧೋಕಾ ತಿಳಿಸಿದರು.
ಅದರಂತೆಯೇ ಯುವನಿಧಿ ಯೋಜನೆಯಡಿ ಕಳೆದ 2024 ಡಿಸೆಂಬರ್ ನಿಂದ 2025 ಫೆ.18ರವರೆಗೆ 7,378 ಫಲಾನುಭವಿಗಳು ನೊಂದಣಿ ಮಾಡಿದ್ದು, ಪದವಿ ಮುಗಿಸಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪ್ರಚಾರ ಮಾಡುತ್ತಿದ್ದಾರೆಂದು ಅವರು ಹೇಳಿದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ಹಣಮಂತ ಕಾನಳ್ಳಿ, ರಮೇಶ ದೊರಿ, ಬಸವರಾಜ ಬಿಳ್ಹಾರ್, ಹಳ್ಳಪ್ಪ ಹವಲ್ದಾರ್ , ನೊಡೆಲ್ ಅಧಿಕಾರಿ ವಿಜಯಕುಮಾರ ಸೇರಿದಂತೆಯೇ ಈ ಐದು ಯೋಜನೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.